More

    ಶಿಕ್ಷಕರ ವರ್ಗಾವಣೆ ಆದೇಶ ತಡೆ ಹಿಡಿಯಿರಿ

    ಸಿರವಾರ: ಸಿರವಾರ ಮತ್ತು ಮಾನ್ವಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ಬಹುತೇಕ ಶಿಕ್ಷಕರು ಇತ್ತೀಚಿಗೆ ಬೇರೆಡೆ ವರ್ಗಾವಣೆ ಆಗಿರುವುದರಿಂದ ಈ ತಾಲೂಕುಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕು. ಕಾಯಂ ಶಿಕ್ಷಕರ ನೇಮಕ ಆಗುವವರೆಗೂ ವರ್ಗಾವಣೆ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ತಹಸೀಲ್ ಕಚೇರಿ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

    ಸಿರವಾರ ಮತ್ತು ಮಾನ್ವಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 48,725 ವಿದ್ಯಾರ್ಥಿಗಳಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ 1568 ಹಾಗೂ ಪ್ರೌಢಶಾಲೆಗಳಲ್ಲಿ 462 ಶಿಕ್ಷಕರು ಇರಬೇಕು. ಆದರೆ, ಪ್ರಾಥಮಿಕ ಶಾಲೆಗಳ 351 ಶಿಕ್ಷಕರು ವರ್ಗಾವಣೆಯಾಗಿದ್ದು, ಬೇರೆ ಕಡೆಯಿಂದ ಈ ತಾಲೂಕುಗಳಿಗೆ ಕೇವಲ 78 ಶಿಕ್ಷಕರು ಬಂದಿದ್ದಾರೆ. 947 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

    ಪ್ರೌಢಶಾಲೆಗಳಲ್ಲಿ 462 ಕಾಯಂ ಶಿಕ್ಷಕರು ಇರಬೇಕು. 61 ಶಿಕ್ಷಕರು ವರ್ಗಾವಣೆಗೊಂಡಿದ್ದು, 24 ಶಿಕ್ಷಕರು ಬಂದಿದ್ದಾರೆ. 204 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎರಡು ಹಂತದಲ್ಲಿ 737 ಮತ್ತು 163 ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಆಯುಕ್ತ ಆದೇಶ ಹೊರಡಿಸಿದ್ದಾರೆ.

    ಶಿಕ್ಷಕರ ನೇಮಕ ಆಗುವವರೆಗೆ ಶಿಕ್ಷಕರನ್ನು ವರ್ಗಾವಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕು. ವರ್ಗಾವಣೆ ಆದೇಶ ಹಿಂಪಡೆದು ಶಿಕ್ಷಕರು ಅವರ ಮೂಲ ಶಾಲೆಗಳಿಗೆ ತೆರಳಿ ಬೋಧಿಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು. ಬಿಇಒ ಚಂದ್ರಶೇಖರ ದೊಡ್ಡಮನಿ ಆಗಮಿಸಿ ಚರ್ಚಿಸಿದರು. ಡಿಡಿಪಿಐ ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಕಾರಣ ಡಿಡಿಪಿಐ ಸುರೇಶ ಹುಗ್ಗಿ ಆಗಮಿಸಿ ವರ್ಗಾವಣೆ ಆದೇಶವನ್ನು ತಾತ್ಕಾಲಿಕ ತಡೆ ಹಿಡಿವಂತೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಲಿಖಿತವಾಗಿ ಭರವಸೆ ನೀಡಿದರು.

    ಪ್ರಮುಖರಾದ ರಾಘವೇಂದ್ರ ಖಾಜನಗೌಡ, ಶಾಂತಪ್ಪ ಪಿತಗಲ್, ಕುಮಾರ ಭಜಂತ್ರಿ, ಮೇಶಾಕ್ ದೊಡ್ಡಮನಿ, ನಾಗರಾಜ ಬೊಮ್ಮನಾಳ, ಗುರುದೇವ ನಾಯಕ ಜಕ್ಕಲದಿನ್ನಿ, ಡೇವಿಡ್, ಶಂಕರ್ ಮರಾಟ, ಪ್ರಕಾಶ, ಚನ್ನಬಸವ ಮರಾಟ, ವೆಂಕಟೇಶ ದೇವತಗಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts