More

    ಚುನಾವಣಾ ಅಕ್ರಮ ಪತ್ತೆ ವೇಳೆ ಎಚ್ಚರಿಕೆವಹಿಸಿ: ಡಿಸಿ ಸುಂದರೇಶ ಬಾಬು

    ಕೊಪ್ಪಳ: ಚುನಾವಣಾ ಅಪರಾಧ ಪತ್ತೆಯಲ್ಲಿ ಎಚ್ಚರಿಕೆವಹಿಸಬೇಕು. ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಜಾಗ್ರತೆಯಿಂದ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚಿಸಿದರು.


    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಭಾನುವಾರ ಚುನಾವಣಾ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಚುನಾವಣಾ ಅಪರಾಧ ಪತ್ತೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


    ಚುನಾವಣಾ ಆಯೋಗ ಪ್ರತಿಯೊಂದು ಕಾರ್ಯಸೂಚಿ ನೀಡಿದೆ. ನಿಮ್ಮ ಅಧಿಕಾರ ವ್ಯಾಪ್ತಿ, ಇರುವ ನಿಯಮಗಳು, ನಿರ್ದೇಶನಗಳ ಬಗ್ಗೆ ಅಧ್ಯಯನ ಮಾಡಬೇಕು. ಕಾಲಕಾಲಕ್ಕೆ ಪರಿಷ್ಕರಣೆ ಆದ ನಿಯಮಗಳ ಬಗ್ಗೆ ತಿಳಿಯಬೇಕು. ಗೊಂದಲಗಳಿದ್ದಲ್ಲಿ ಕೇಳಿ ಪರಿಹರಿಸಿಕೊಳ್ಳುವಂತೆ ತಿಳಿಸಿದರು.


    ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಮತದಾರರಿಗೆ ಆಮಿಷ ಒಡ್ಡುವುದು, ಚುನಾವಣಾ ಅಕ್ರಮ ಎಸಗುವಿಕೆ ಸಂಬಂಧ ದೂರು ದಾಖಲಿಸುವಾಗ ಗೊಂದಲ ಮೂಡಿದರೆ ಮೇಲಧಿಕಾರಿಗಳನ್ನು ಸಂಪರ್ಕಿಸಬೇಕು. ಕಾನೂನು ಸಲಹೆಗಾರರ ನೆರವು ಪಡೆದು ಸರಿಯಾದ ರೀತಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.


    ಎಸ್ಪಿ ಯಶೋದಾ ವಂಟಗೋಡಿ ಮಾತನಾಡಿ, ಚುನಾವಣಾ ಅಧಿಕಾರಿಗಳು ದೂರು ನೀಡುವಾಗ ಸಂಬಂಧಿಸಿದ ವ್ಯಕ್ತಿಗಳು, ಅವರ ಮಾಹಿತಿ, ಘಟನೆ ವಿವರಗಳನ್ನು ಸರಿಯಾಗಿ ಬರೆದು ನೀಡಬೇಕು. ಇದರಿಂದ ಪ್ರಕರಣ ದಾಖಲಿಸಲು ಅನುಕೂಲವಾಗಲಿದೆ ಎಂದರು.


    ಹಿರಿಯ ಕಾನೂನು ಸಲಹೆಗಾರ ಮಹೇಶ ವೈದ್ಯ, ಚುನಾವಣಾ ಸಂದರ್ಭದಲ್ಲಿ ಹಣ-ಹೆಂಡ ಹಂಚಿಕೆ, ಮತದಾರರಿಗೆ ತೋರುವ ಆಮಿಷಗಳು, ಕಾನೂನು ಬಾಹಿರ ಚಟುವಟಿಕೆ ನಿಗ್ರಹಿಸುವ ನಿಟ್ಟಿನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕಾನೂನು ಜಾಗೃತಿ ಮೂಡಿಸಿದರು. ಚುನಾವಣಾ ಅಪರಾಧಕ್ಕೆ ಸಂಬಂಧಿಸಿದಂತೆ ಚುನಾವಣಾ ಪೂರ್ವ, ಚುನಾವಣಾ ಸಮಯ ಮತ್ತು ಚುನಾವಣೆ ನಂತರವೂ ಪ್ರಕರಣ ದಾಖಲಿಸಲು ಅವಕಾಶವಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟರು.


    ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಜಿಪಂ ಮುಖ್ಯ ಯೋಜನಾಧಿಕಾರಿ ಮಂಜುನಾಥ, ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಅಮಿನ್ ಅತ್ತಾರ, ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು, ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು ಮತ್ತು ಎಲ್ಲ ವಿಡಿಯೋ ಸರ್ವಲೆನ್ಸ್ ಟೀಮ್ ಮುಖ್ಯಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts