More

    ವಿದ್ಯಾರ್ಥಿಗಳ ಆಕ್ರೋಶಕ್ಕೆ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ 2 ತಾಸು ಸಂಚಾರ ಅಸ್ತವ್ಯಸ್ತ

    ಆಯನೂರು: ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಒತ್ತಾಯಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗುರುವಾರ ಏಕಾಏಕಿ ಬಸ್‌ಗಳ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ, ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ 2 ತಾಸಿಗೂ ಅಧಿಕ ಸಮಯ ಸಂಚಾರ ದಟ್ಟಣೆ ಉಂಟಾಗಿತ್ತು.

    ಆಯನೂರು ಬರುವ ಮೊದಲೇ ಬಸ್‌ಗಳು ತುಂಬಿರುತ್ತವೆ. ಇದರಿಂದ ಪ್ರಾಥಮಿಕ ಶಾಲೆಗಳ ಮಕ್ಕಳು ಬಸ್ ಹತ್ತಲಾಗದೆ ಪರದಾಟ ನಡೆಸುವಂತಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಬಸ್‌ಗಳ ನಿಲುಗಡೆ, ಹೆಚ್ಚುವರಿ ಬಸ್‌ಗಾಗಿ ವಿಭಾಗಿಯ ಕಚೇರಿ ಹಾಗೂ ಶಾಸಕರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
    ಸುತ್ತಮುತ್ತಲಿನ ಹಳ್ಳಿಗಳಿಗೆ ಆಯನೂರು ಕೇಂದ್ರಸ್ಥಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಬಸ್‌ಗಳು ವಿದ್ಯಾರ್ಥಿಗಳು ಕೈ ಮಾಡಿದರು ನಿಲ್ಲಿಸದೆ ಹೋಗುತ್ತಿರುವುದು ಹೆಚ್ಚಾಗಿದೆ. ಇದರಿಂದ ಪಾಸ್ ಮಾಡಿಸಿದ್ದರೂ ವಿದ್ಯಾರ್ಥಿಗಳು ಖಾಸಗಿ ಬಸ್‌ನಲ್ಲಿ ಸಂಚರಿಸಬೇಕಾದ ಅನಿವಾರ್ಯತೆಯಿದೆ. ಅನೇಕ ವೇಳೆ ಸೂಕ್ತ ಕಾಲಕ್ಕೆ ಪರೀಕ್ಷೆಗಳಿಗೆ ತೆರಳಲು ಆಗುತ್ತಿಲ್ಲ. ಶಕ್ತಿ ಯೋಜನೆಯಿಂದ ಸಾಗರ ಹಾಗೂ ಹೊಸನಗರ ಕಡೆಯಿಂದ ಬರುವ ಬಸ್‌ಗಳು ತುಂಬಿ ತುಳುಕುತ್ತಿರುತ್ತವೆ. ಶಕ್ತಿ ಯೋಜನೆ ಆರಂಭ ಆದ ಬಳಿಕ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಆಗುತ್ತಿಲ್ಲ ಎಂದು ದೂರಿದರು.
    ಈ ಭಾಗದಲ್ಲಿ ನಿತ್ಯ ಬೆಳಗ್ಗೆ 6ರಿಂದ 10ರವರೆಗೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಬಸ್‌ಗಳ ನಿಲುಗಡೆ ಮಾಡದೇ ಹೋಗುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ. ಸರಿಯಾದ ಸಮಯಕ್ಕೆ ತರಗತಿಗೆ ತಲುಪಲು ಆಗುತ್ತಿಲ್ಲ. ತರಗತಿಯಿಂದ ಹೊರಗಡೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆಯನೂರಿನಿಂದಲೇ ಹೊಸ ಬಸ್ ಸೇವೆ ಆರಂಭಿಸಬೇಕು. ಮೊದಲಿನಂತೆ ಮೇಲ್ಗಡೆ ನಿಲ್ದಾಣದಲ್ಲಿ ನಿಲ್ಲಿಸಬೇಕು ಎಂದು ಪಟ್ಟು ಹಿಡಿದು ಕೂತರು.
    2 ತಾಸು ಸಂಚಾರ ಅಸ್ತವ್ಯಸ್ತ: ವಿದ್ಯಾರ್ಥಿಗಳು ಏಕಾಏಕಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು 2 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ನಾಲ್ಕು ಮಾರ್ಗದಿಂದ ನೂರಾರು ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಕೊನೆಗೂ ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು. ಸಂಚಾರ ವ್ಯವಸ್ಥೆ ಸುಗಮಗೊಳಿಸುವಷ್ಟರಲ್ಲಿ ಹೈರಾಣಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts