More

    ಮಾತ್ರೆ ಮುಕ್ತ ಜೀವನಕ್ಕೆ ಪಾರಂಪರಿಕ ವೈದ್ಯ ಪದ್ಧತಿ ಸಹಕಾರಿ

    ಚಿಕ್ಕಮಗಳೂರು: ಮಾತ್ರೆ ಮುಕ್ತ ಜೀವನ ಶೈಲಿಗೆ ಪ್ರಾಚೀನ, ಪಾರಂಪರಿಕ ವೈದ್ಯ ಪದ್ದತಿ ಸಹಕಾರಿ ಎಂದು ಬೆಂಗಳೂರಿನ ಪ್ರಸಿದ್ಧ ಪ್ರಾಕೃತಿಕ ಯೋಗ ಚಿಂತಕಿ ಹಾಗೂ ಮುದ್ರ ತಜ್ಞೆ ಡಾ. ಲತಾ ಶೇಖರ್ ಹೇಳಿದರು.
    ನಗರದಲ್ಲಿ ಆಯೋಜಿಸಿದ್ದ ಉಚಿತ ಪ್ರಾಚೀನ ಪಾರಂಪರಿಕ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದು ಯಾವುದೇ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ರಾಸಾಯನಿಕ ಯುಕ್ತ ಮಾತ್ರೆ ಹಾಗೂ ಶಸ್ತ್ರ ಚಿಕಿತ್ಸೆ ಪರಿಹಾರ ಎಂಬ ಕುರುಡು ನಂಬಿಕೆ ಸರಿಯಲ್ಲ. ಮಾತ್ರೆಗಳ ಬಳಕೆಯಿಂದ ಜನಸಾಮಾನ್ಯರು ಹತ್ತಾರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಕಳೆದು ಹೋಗುತ್ತಿರುವ ಪ್ರಾಚೀನ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಮನೋ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಆರೋಗ್ಯ ಸಮಸ್ಯೆಗಳಿಂದ ಸುಲಭವಾಗಿ ಹೊರ ಬರಬಹುದು ಎಂದು ಹೇಳಿದರು.
    ಧನ್ವಂತರಿ ವೈದ್ಯ ಡಾ.ಸುಧೀರ್ ಮಾತನಾಡಿ, ಕಾಯಿಲೆ ಎಂದರೆ ಕೇವಲ ಔಷಧಗಳಿಗೆ ಸೀಮಿತವಲ್ಲ. ಬದಲಾಗಿ ನಮ್ಮ ದೇಹ ಮತ್ತು ಮನಸ್ಸನ್ನು ಸನ್ನದ್ಧಗೊಳಿಸಿ ಧನಾತ್ಮಕ ಚಿಂತನೆಗಳಿಂದ ಋಣಾತ್ಮಕ ಚಿಂತನೆಗಳನ್ನು ಹೊರಹಾಕಿ ತಾವೇ ಸ್ವತಃ ಚಿಕಿತ್ಸೆ ರೂಢಿಸಿಕೊಳ್ಳುವುದೇ ನಿಜವಾದ ಚಿಕಿತ್ಸಾ ಪದ್ದತಿ. ಸಾವಿರಾರು ಕಡೆ ಅಲೆದಾಡುವ ಬದಲು ಸರಿಯಾದ ಮಾರ್ಗದಲ್ಲಿ ಪ್ರಾಚೀನ ಪಾರಂಪರಿಕ ಚಿಕಿತ್ಸಾ ಪದ್ದತಿಯಿಂದ ತಮ್ಮ ಉತ್ತಮ ಆರೋಗ್ಯ ಪಡೆಯಬಹುದು ಎಂದರು.
    ಲಯನ್ಸ್ ಅಧ್ಯಕ್ಷ ಜಿ.ರಮೇಶ್ ಮಾತನಾಡಿ, ಸೇವಾ ಚಟುವಟಿಕೆಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಲಯನ್ಸ್ ಕ್ಲಬ್ ಲಯನ್ಸ್ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ವರ್ಷದಲ್ಲಿ ಅತಿ ಹೆಚ್ಚು ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಇದು 5ನೇ ಆರೋಗ್ಯ ಸೇವೆ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
    ಲಯನ್ಸ್ ಕ್ಲಬ್ ಕಾರ್ಯದಶಿ ಟಿ.ನಾರಾಯಣಸ್ವಾಮಿ, ಲಯನ್ಸ್ ಕ್ಲಬ್ ಕೋ ಆರ್ಡಿನೇಟರ್ ಬಿ. ಎನ್.ವೆಂಕಟೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts