More

    ಸಾಂಪ್ರದಾಯಿಕ ಸಾಗುವಳಿ ಜಾಗೃತಿ

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಜೆಸಿಐ ಬಂಟ್ವಾಳ ಈ ಬಾರಿ ಕೃಷಿ ಕಾಯಕಕ್ಕೆ ಮುಂದಡಿ ಇಟ್ಟಿದೆ. ಐದು ಎಕರೆಗಿಂತ ಅಧಿಕ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡಲು ಜೆಸಿಐ ಬಂಟ್ವಾಳದ ಯುವ ತಂಡ ತೀರ್ಮಾನಿಸಿದ್ದು ಅಮ್ಟಾಡಿ ಗ್ರಾಮದ ಏರ್ಯ ಬೀಡುವಿನ ವಿಶಾಲ ಗದ್ದೆಯಲ್ಲಿ ಉಳುಮೆ ಕಾರ್ಯ ಪೂರ್ಣಗೊಳಿಸಿದೆ.

    ಜೆಸಿಐ ಬಂಟ್ವಾಳ ನಿಕಟಪೂರ್ವ ಅಧ್ಯಕ್ಷ ಸದಾನಂದ ಬಂಗೇರ ನೇತೃತ್ವದಲ್ಲಿ ಘಟಕದ ಸದಸ್ಯರು ಸಾಗುವಳಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಹಾಗೂ ಸಾವಯವ ಕೃಷಿಗೆ ಆದ್ಯತೆ ನೀಡಲಾಗುತ್ತಿದ್ದು, ಸದಸ್ಯ ಗಣೇಶ್ ಕುಲಾಲ್ ಮೊಡಂಕಾಪು ಕೆಲವು ದಿನಗಳಿಂದ ಗದ್ದೆ ಸುತ್ತ ಬೆಳೆದಿರುವ ಹುಲ್ಲು, ಪೊದೆಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಟಿ ಸಂದರ್ಭ ಕಂಡೊಡು ಸಾಗೊಳಿ ಪರ್ಬ ಎಂಬ ಕಾರ್ಯಕ್ರಮದ ಮೂಲಕ ಯುವ ಸಮುದಾಯಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಸಾಗುವಳಿ ಕಾರ್ಯದ ಬಗ್ಗೆ ಮಾಹಿತಿ ಹಾಗೂ ಪ್ರಾಯೋಗಿಕ ತರಬೇತಿ ನೀಡುವ ಕಾರ್ಯವೂ ನಡೆಯಲಿದೆ.

    ಜೆಸಿಐ ಅಧ್ಯಕ್ಷ ಉಮೇಶ್ ಆರ್.ಮೂಲ್ಯ, ಕಾರ್ಯದರ್ಶಿ ರೋಷನ್ ರೈ, ಕೋಶಾಧಿಕಾರಿ ರವೀಣ ಕುಲಾಲ್, ಸದಸ್ಯ ಕಿಶೋರ್ ಆಚಾರ್ಯ, ಜೇಸಿರೆಟ್ ವಿಭಾಗ ಅಧ್ಯಕ್ಷೆ ವಿದ್ಯಾ ಉಮೇಶ್, ಸದಸ್ಯೆ ರೂಪಾ ಸದಾನಂದ ಗದ್ದೆ ಸ್ವಚ್ಛತಾ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದಾರೆ.

    ಜೆಸಿಐ ಕೃಷಿ ಕಾರ್ಯದ ಸಂಯೋಜಕ ಸದಾನಂದ ಬಂಗೇರ ಮೂಲತಃ ಕೃಷಿಕರಾಗಿದ್ದು ಏಳು ವರ್ಷಗಳಿಂದ ಏರ್ಯಬೀಡುವಿನ ಒಂದು ಎಕರೆ ಗದ್ದೆಯಲ್ಲಿ ಕೃಷಿ ಕೆಲಸ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಜೆಸಿಐ ಬಂಟ್ವಾಳ ಮೂಲಕ ಐದು ಎಕರೆ ಗದ್ದೆಯಲ್ಲಿ ಸಾಗುವಳಿ ಮಾಡುವ ಮೂಲಕ ಹಸಿರು ನಳನಳಿಸುವಂತೆ ಮಾಡುವ ಗುರಿ ಹೊಂದಿದ್ದಾರೆ.

    ಮುಂಚೂಣಿ ಘಟಕ: 12 ವರ್ಷಗಳ ಹಿಂದೆ ಸ್ಥಾಪನೆಯಾದ ಜೆಸಿಐ ಬಂಟ್ವಾಳ ವಿನೂತನ ಕಾರ್ಯಕ್ರಮಗಳ ಮೂಲಕ ವಲಯ 15ರ ಪ್ರತಿಷ್ಠಿತ ಘಟಕವಾಗಿ ಗುರುತಿಸಿಕೊಂಡಿದೆ. ಶ್ರಮದಾನ, ಬಡ ಕುಟುಂಬಗಳ ಮನೆ ದುರಸ್ತಿ, ವಿದ್ಯಾರ್ಥಿಗಳಿಗೆ ಹಾಗೂ ಯುವ ಸಮುದಾಯಕ್ಕೆ ತರಬೇತಿ ಮೊದಲಾದ ಕಾರ್ಯಕ್ರಮಗಳ ಮೂಲಕ ಸಮುದಾಯದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಉಮೇಶ್ ಆರ್.ಮೂಲ್ಯ ಅಧ್ಯಕ್ಷತೆಯಲ್ಲಿ ಲಾಕ್‌ಡೌನ್ ಸಂಕಷ್ಟದಲ್ಲೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿದೆ.

    ಜೆಸಿಐ ಯುವಕರ ತಂಡ ಈ ವರ್ಷ ಐದು ಎಕರೆ ಜಮೀನಿನಲ್ಲಿ ಭತ್ತದ ಬೇಸಾಯ ಮಾಡಲಿದೆ. ಸಾಧ್ಯವಾದಷ್ಟು ಸಾಂಪ್ರದಾಯಿಕ ವಿಧಾನ ಹಾಗೂ ಸಾವಯವ ಗೊಬ್ಬರ ಬಳಸಿ ಸಾಗುವಳಿ ಮಾಡುತ್ತೇವೆ.
    -ಸದಾನಂದ ಬಂಗೇರ
    ನಿಕಟಪೂರ್ವ ಅಧ್ಯಕ್ಷರು, ಜೆಸಿಐ ಬಂಟ್ವಾಳ

    ಜೆಸಿಐ ಬಂಟ್ವಾಳ ಸದಸ್ಯರು ಇದೇ ಮೊದಲ ಬಾರಿ ಬೇಸಾಯ ಕಾರ್ಯ ಮಾಡಲು ಮುಂದಾಗಿದ್ದೇವೆ. ಸ್ವತಃ ಕೃಷಿ ಮಾಡುವುದರ ಜತೆಗೆ ಇತರ ಯುವಕರಿಗೆ, ಮಕ್ಕಳಿಗೆ ಪ್ರೇರಣೆ ನೀಡಿ, ನಮ್ಮ ಕೃಷಿ ಸಂಸ್ಕೃತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಯೋನ್ಮುಖರಾಗಿದ್ದೇವೆ.
    -ಉಮೇಶ್ ಆರ್.ಮೂಲ್ಯ
    ಅಧ್ಯಕ್ಷ, ಜೆಸಿಐ ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts