More

    ರಟ್ಟಿಹಳ್ಳಿಯಿಂದ ಹಾವೇರಿಗೆ ಟ್ರ್ಯಾಕ್ಟರ್ ರ‍್ಯಾಲಿ

    ರಟ್ಟಿಹಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜ. 26ರಂದು ಹಾವೇರಿಯ ಪ್ರಮುಖ ಬೀದಿಗಳಲ್ಲಿ ಟ್ರಾ್ಯಕ್ಟರ್ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶಂಕರಗೌಡ ಶಿರಗಂಬಿ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿ, ಕಳೆದ 55 ದಿವಸಗಳಿಂದ ದೆಹಲಿಯಲ್ಲಿ ರೈತರು ಚಳಿ-ಮಳೆ ಲೆಕ್ಕಿಸಿದೇ ಕಾಯ್ದೆ ವಿರೋಧಿಸಿ ಚಳವಳಿ ನಡೆಸುತ್ತಿದ್ದಾರೆ. ರೈತರ ಸಮಸ್ಯೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ರೈತರ ಹೋರಾಟ ಬೆಂಬಲಿಸಿ ಪಟ್ಟಣದ ಭಗತ್​ಸಿಂಗ್ ವೃತ್ತದಲ್ಲಿ ಅಂದು ಬೆಳಗ್ಗೆ 8 ಗಂಟೆಗೆ ಸುಮಾರು 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮೂಲಕ ಹೊರಟು ಹಾವೇರಿಗೆ ತಲುಪಿ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಲಾಗುವುದು. ಸಿದ್ದಪ್ಪ ಸರ್ಕಲ್​ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ ರೈತರು, ತಜ್ಞರು, ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಸರ್ಕಾರ ಕೂಡಲೆ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದರು.

    ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 1 ಕೋಟಿ 10 ಲಕ್ಷ ಕ್ವಿಂಟಾಲ್ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ. ಕ್ವಿಂಟಾಲ್​ಗೆ ಕೇವಲ 1200 ರೂ. ದರವಿದ್ದು, ಕೃಷಿ ಸಚಿವ ಬಿ.ಸಿ. ಪಾಟೀಲ ಮೆಕ್ಕೆಜೋಳ ಖರೀದಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. 105 ಉತ್ಪನ್ನಗಳಿಗೆ ಮಕ್ಕೆಜೋಳ ಅವಶ್ಯವಿರುತ್ತದೆ. ಸರ್ಕಾರ ಕೂಡಲೆ ಬೆಳೆ ಖರೀದಿಸಬೇಕು ಎಂದು ಆಗ್ರಹಿಸಿದರು.

    ಸಂಘಟನೆಯ ಬಸನಗೌಡ ಗಂಗಪ್ಪಳವರ, ಶಂಭಣ್ಣ ಮುತ್ತಗಿ, ಪ್ರಶಾಂತ ದ್ಯಾವಕ್ಕಳವರ, ಫಯಾಜಸಾಬ ದೊಡ್ಮನಿ, ಪ್ರಶಾಂತ ಲಮಾಣಿ, ಕರಬಸಪ್ಪ ಬಸಾಪುರ, ಮಂಜನಗೌಡ ಸಣ್ಣಗೌಡ್ರ, ಮಲ್ಲನಗೌಡ ಮಾಳಗಿ, ಮಹೇಂದ್ರಪ್ಪ ತಳವಾರ, ಪ್ರಭು ಮುದಿಯಪ್ಪನವರ, ಜಗದೀಶ ಶಿರಗಂಬಿ, ಮಲ್ಲೇಶಪ್ಪ ಸಿದ್ದಗೇರಿ, ಇತರರು ಉಪಸ್ಥಿತರಿದ್ದರು.

    ರಾಣೆಬೆನ್ನೂರಲ್ಲೂ ರ‍್ಯಾಲಿ

    ಜ. 26ರಂದು ಬೆಂಗಳೂರು ಹಾಗೂ ದೆಹಲಿಯಲ್ಲಿ ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪರೇಡ್​ಗೆ ಬೆಂಬಲ ಸೂಚಿಸಿ ರಾಣೆಬೆನ್ನೂರ ನಗರದಲ್ಲೂ ಟ್ರ್ಯಾಕ್ಟರ್ ಪರೇಡ್ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26ರಂದು ಬೆಳಗ್ಗೆ 10ಕ್ಕೆ ನಗರದ ಮಾಗೋಡ ಕ್ರಾಸ್​ನ ಆರ್.ಟಿ.ಎಸ್. ಕಾಲೇಜ್​ನ ಬಳಿಯಿಂದ ಮಿನಿ ವಿಧಾನಸೌಧದವರೆಗೂ 101 ಟ್ರ್ಯಾಕ್ಟರ್​ಗಳ ಪರೇಡ್ ನಡೆಸಲಾಗುವುದು ಎಂದರು.

    ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ ಸೇರಿ ಜಿಲ್ಲೆಯ ಎಲ್ಲ ರೈತರು ಪಾಲ್ಗೊಳ್ಳಲಿದ್ದಾರೆ. ಅಂದು ಸ್ವತಃ ಜಿಲ್ಲಾಧಿಕಾರಿ ಬಂದು ಮನವಿ ತೆಗೆದುಕೊಳ್ಳಬೇಕು. ಇಲ್ಲವಾದರೆ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಪ್ರಮುಖರಾದ ಚಂದ್ರಣ್ಣ ಬೇಡರ, ಹನುಮಂತಪ್ಪ ಕಬ್ಬಾರ, ಭೀಮೇಶ ಮಾಕನೂರ, ಸುರೇಶ ಜಡಮಲಿ, ಬಸವರಾಜ ಕೊಂಗಿ, ರಾಜು ಓಲೇಕಾರ, ಮಾರುತಿ ದೊಡ್ಡಮನಿ, ದಿಳ್ಳೆಪ್ಪ ಸತ್ಯಪ್ಪನವರ, ಗಣೇಶ ಬೀರಾಳ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts