More

    ಮೇ-ಜೂನ್​ನಲ್ಲಿ ಜಿಪಂ-ತಾಪಂ ಚುನಾವಣೆ?: ಕ್ಷೇತ್ರ ಪುನರ್ ವಿಂಗಡಣೆ ಮಾರ್ಗಸೂಚಿಗೆ ಸರ್ಕಾರದ ಒಪ್ಪಿಗೆ ಬಾಕಿ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಯಾವಾಗ ನಡೆಯಬಹುದೆಂಬ ಕುತೂಹಲಕ್ಕೆ ಸಣ್ಣದೊಂದು ಸುಳಿವು ಸಿಕ್ಕಿದೆ. ಕ್ಷೇತ್ರ ಪುನರ್ ವಿಂಗಡಣೆಗಾಗಿ ರಚಿತಗೊಂಡಿದ್ದ ‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ’ ತನ್ನ ಚಟುವಟಿಕೆ ಚುರುಕುಗೊಳಿಸಿದ್ದು, ತನಗೆ ವಹಿಸಿದ ಜವಾಬ್ದಾರಿಯ ಅರ್ಧಪಾಲು ಕೆಲಸ ಮುಗಿಸಿದೆ. ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ, ಮಾರ್ಚ್​ನಲ್ಲಿ ಆಯೋಗ ಅಂತಿಮ ವರದಿ ಸಿದ್ಧಪಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಲಿದೆ. ಆ ತಿಂಗಳ ಅಂತ್ಯಕ್ಕೆ ವರದಿ ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸುವ ಗುರಿಹಾಕಿಕೊಂಡಿದೆ. ಅಂದರೆ ಮೇ-ಜೂನ್ ವೇಳೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಅವಕಾಶವಾಗುವ ಸಾಧ್ಯತೆ ಇದೆ.

    2021ರ ಮೇ- ಜೂನ್​ನಲ್ಲಿ ಜಿಪಂ, ತಾಪಂಗಳ ಅವಧಿ ಮುಕ್ತಾಯವಾಗಿತ್ತು. ಈ ನಡುವೆ ರಾಜ್ಯ ಚುನಾವಣೆ ಆಯೋಗ ತಾನು ಕೊಟ್ಟ ಮಾರ್ಗಸೂಚಿ ಪ್ರಕಾರ ಸಿದ್ಧಪಡಿಸಿದ್ದ ಪುನರ್ ವಿಂಡಣೆ ನಕ್ಷೆಯನ್ನು 2021ರ ಫೆಬ್ರವರಿಯಲ್ಲಿ ಜಿಲ್ಲಾಡಳಿತಗಳಿಂದ ಸ್ವೀಕರಿಸಿತ್ತು. ಆ ಪ್ರಕಾರ 110 ಜಿಲ್ಲೆ ಪಂಚಾಯಿತಿ ಕ್ಷೇತ್ರಗಳು ಹೆಚ್ಚಾದರೆ 630 ತಾಲೂಕು ಪಂಚಾಯಿತಿ ಕ್ಷೇತ್ರ ಕಡಿಮೆಯಾಗಿತ್ತು. ಆಯೋಗವು ನೀಡಿದ ಮಾರ್ಗಸೂಚಿ ಪ್ರಕಾರ ಪ್ರತಿ ತಾಪಂ ಕ್ಷೇತ್ರಗಳ ಜನಸಂಖ್ಯೆಯನ್ನು 10 ಸಾವಿರದಿಂದ 12,500ಕ್ಕೆ ಹೆಚ್ಚಿಸಿದ್ದರೆ, ಜಿಪಂ ಕ್ಷೇತ್ರದ ಜನಸಂಖ್ಯೆಯನ್ನು 40 ಸಾವಿರದಿಂದ 35 ಸಾವಿರಕ್ಕೆ ಇಳಿಸಿತ್ತು.

    ಆಯೋಗದ ಮಾರ್ಗಸೂಚಿ ಪ್ರಕಾರ, ಜಿಲ್ಲಾಡಳಿಗಳು ಮಾಡಿದ್ದ ಕ್ಷೇತ್ರದ ಗಡಿಗುರುತನ್ನು ರಾಜಕೀಯ ಪಕ್ಷಗಳು ಒಪ್ಪಲಿಲ್ಲ, ತಗಾದೆ ತೆಗೆದವು. ದೊಡ್ಡ ಪ್ರಮಾಣದಲ್ಲಿ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಕಾನೂನು ತಿದ್ದುಪಡಿ ಮಾಡಿ, ಕ್ಷೇತ್ರ ಪುನರ್ ವಿಂಗಡಣೆ ಅಧಿಕಾರವನ್ನು ರಾಜ್ಯ ಚುನಾವಣೆ ಆಯೋಗದಿಂದ ಹಿಂಪಡೆದು ಹೊಸದಾಗಿ ಆಯೋಗ ರಚಿಸಿತ್ತು. ಸರ್ಕಾರದ ನಿವೃತ್ತ ಅಪರ ಮುಖ್ಯಕಾರ್ಯದರ್ಶಿ ಎಂ.ಲಕ್ಷಿ್ಮೕನಾರಾಯಣ ಅಧ್ಯಕ್ಷತೆಯಲ್ಲಿ ನಿವೃತ್ತ ಕಾರ್ಯದರ್ಶಿ ಎಸ್.ಎಸ್.ಪಟ್ಟಣ ಶೆಟ್ಟಿ, ಆರ್​ಡಿಪಿಆರ್ ತಜ್ಞ ಎಸ್.ಆರ್.ರಾಮಪ್ರಿಯ ಮತ್ತು ಪಂಚಾಯತ್​ರಾಜ್ ಇಲಾಖೆ ಆಯುಕ್ತರನ್ನು ಸದಸ್ಯರನ್ನಾಗಿ ಮಾಡಿ ಆಯೋಗ ರಚಿಸಿತು.

    ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಆಯೋಗದ ಅಧ್ಯಕ್ಷ ಎಂ.ಲಕ್ಷಿ್ಮೕನಾರಾಯಣ, ರಾಜಕೀಯ ಪಕ್ಷಗಳ ಜತೆ ಸಭೆ ಮಾಡಿದ್ದು ಅವರ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಲಾಗಿದೆ. ವೆಸ್​ಬೈಟ್ ಮೂಲಕ ಪ್ರತಿ ನಿಲುವು ನಿರ್ಧಾರವನ್ನು ಸಾರ್ವಜನಿಕರ ಮುಕ್ತ ಅವಗಾಹನೆಗೆ ಇಡಲಾಗಿದೆ. ಆಕ್ಷೇಪಣೆಗಳನ್ನು ವಿಚಾರಣೆ ಮಾಡಲಾಗುತ್ತಿದೆ ಎಂದರು. ಪ್ರಸ್ತುತ ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ಗೈಡ್​ಲೈನ್ ಸಿದ್ಧಪಡಿಸಿದ್ದು, ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಗಿದೆ. ಅಲ್ಲಿಂದ ಒಪ್ಪಿಗೆಯಾಗಿ ಬಂದ ಕೂಡಲೇ ಜಿಲ್ಲೆಗಳಿಗೆ ಕಳಿಸಲಾಗುತ್ತದೆ. ಹಾಗೆಯೇ ಈಗಾಗಲೆ ಪ್ರತಿ ಜಿಲ್ಲೆಯ ಗ್ರಾಮೀಣ ವ್ಯಾಪ್ತಿಯ ಜನಸಂಖ್ಯೆಯ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ತಡ ಮಾಡದೆ ಎಲ್ಲ ಚಟುವಟಿಕೆಯನ್ನು ಚುರುಕಿನಿಂದ ನಡೆಸಲಾಗುತ್ತಿದೆ ಎಂದು ವಿವರಿಸಿದರು.

    ಮಾರ್ಚ್ ಅಂತ್ಯದೊಳಗೆ ವರದಿ ಸಿದ್ಧವಾಗಲಿದೆ. ಗ್ರಾಮೀಣ ಭಾಗದ ಜನಸಂಖ್ಯೆ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರಕ್ಕೆ ಮಾರ್ಗಸೂಚಿ ಸಿದ್ಧಪಡಿಸಿ ಒಪ್ಪಿಗೆಗಾಗಿ ಕಳಿಸಲಾಗಿದೆ.

    | ಎಂ.ಲಕ್ಷ್ಮೀನಾರಾಯಣ, ಸೀಮಾ ನಿರ್ಣಯ ಆಯೋಗದ ಅಧ್ಯಕ್ಷ

    ಆಯೋಗ ಈವರೆಗೆ ಮಾಡಿದ್ದು

    1. ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಸಲಹೆ ಆಲಿಕೆ

    2. ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ

    3. ಕ್ಷೇತ್ರ ಪುನರ್ವಿಂಗಡಣೆ ಹೇಗೆ ಮಾಡಬೇಕೆಂಬ ಗೈಡ್​ಲೈನ್ ತಯಾರಿ

    4. ಕ್ಷೇತ್ರ ಪುನರ್ವಿಂಗಡಣೆ ಸಂಬಂಧ ಆಕ್ಷೇಪಣೆಗಳ ವಿಚಾರಣೆ

    5. ಗ್ರಾಮಾಂತರ ಪ್ರದೇಶದ ಜನಸಂಖ್ಯೆ ಮಾಹಿತಿ ಸಂಗ್ರಹ ಪ್ರಕ್ರಿಯೆ

    ಜವಾಬ್ದಾರಿ ಏನು?: ಪಂಚಾಯತ್​ರಾಜ್ ಸಂಸ್ಥೆಗಳಾದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣಾ ಕ್ಷೇತ್ರಗಳ ಸೀಮಾ ಮಿತಿ ಯನ್ನು ಗುರುತಿಸುವ ಸಂಬಂಧ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳಲು ಅನುವಾಗುವಂತೆ ಶಿಫಾರಸು ವರದಿ ಯನ್ನು ಸಿದ್ಧಪಡಿಸಿ, ಸಲ್ಲಿಸಲಿದೆ.

    ಹಾಲಿ ಸ್ಥಿತಿಗತಿ: ತಾಪಂ- 229 (3273 ಕ್ಷೇತ್ರಗಳು); ಜಿಪಂ- 31 (1390 ಕ್ಷೇತ್ರಗಳು)

    ಆಕ್ಷೇಪಣೆ ಸಲ್ಲಿಕೆಗೆ 4 ವಾರ ಕಾಲಾವಕಾಶ

    ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು, ಕರ್ನಾಟಕ ಪಂಚಾಯತ್​ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಪ್ರಶ್ನಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೊರ್ಟ್ 4 ವಾರಗಳ ಕಾಲಾವಕಾಶ ನೀಡಿದೆ.

    ಕರ್ನಾಟಕ ಪಂಚಾಯತ್ ರಾಜ್ ಹಾಗೂ ಗ್ರಾಮ ಸ್ವರಾಜ್ (ತಿದ್ದುಪಡಿ) ಕಾಯ್ದೆ- 2021 ಜಾರಿಗೆ ಸೆ.18ರಂದು ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು.

    ಸರ್ಕಾರದ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು 4 ವಾರ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಕಳೆದ ವಿಚಾರಣೆ ವೇಳೆಯೇ ಕಾಲಾವಕಾಶ ನೀಡಲಾಗಿದೆಯಲ್ಲವೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಅರ್ಜಿಯಲ್ಲಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಲಾಗಿದೆ. ಈ ಬಗ್ಗೆ ವಿವರವಾದ ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ವಕೀಲರು ತಿಳಿಸಿದರು. ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದಿಸಿ, ಚುನಾವಣೆ ನಡೆಸಲು ಆಯೋಗ ಎಲ್ಲ ಕ್ರಮ ಕೈಗೊಂಡ ನಂತರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದ, ಇಷ್ಟು ದಿನ ನಡೆಸಿಕೊಂಡಿದ್ದ ಎಲ್ಲ ಸಿದ್ಧತೆಗಳೂ ವ್ಯರ್ಥವಾಗಲಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ವಾದ-ಪ್ರತಿವಾದ ಆಲಿಸಿದ ಪೀಠ, ಸರ್ಕಾರ ಮೊದಲು ಆಕ್ಷೇಪಣೆ ಸಲ್ಲಿಸಲಿ. ಆನಂತರ ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಫೆ.14ಕ್ಕೆ ಮುಂದೂಡಿತು.

    ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts