More

    ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಲ್ಲ ಟೂಲ್ಸ್, ಸ್ಟೆಪ್ನಿ !

    ನವೀನ್ ಬಿಲ್ಗುಣಿ ಶಿವಮೊಗ್ಗ
    ರಾಜ್ಯಾದ್ಯಂತ ರಸ್ತೆಗಿಳಿಯುವ ಸಾವಿರಾರು ಕೆಎಸ್‌ಆರ್‌ಟಿಸಿ, ಎನ್‌ಡಬ್ಲುೃಕೆಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿಯ ಬಹುತೇಕ ಬಸ್‌ಗಳಲ್ಲಿ ಟೂಲ್ಸ್(ಉಪಕರಣಗಳು), ಸ್ಪೇರ್ ಟಯರ್(ಹೆಚ್ಚುವರಿ ಚಕ್ರ)ಗಳೇ ಇಲ್ಲ. ತಾಂತ್ರಿಕ ಸಮಸ್ಯೆ ಅಥವಾ ಟಯರ್ ಪಂಕ್ಚರ್ ಆಗಿ ಮಾರ್ಗಮಧ್ಯೆ ಬಸ್ ನಿಂತರೆ ಪ್ರಯಾಣಿಕರಿಗೆ ಪೀಕಲಾಟ ತಪ್ಪಿದ್ದಲ್ಲ.

    ಇದು ರಾಜ್ಯದ ನಾಲ್ಕು ನಿಗಮಗಳ ಬಸ್‌ಗಳು ಪ್ರತಿನಿತ್ಯ ಪ್ರಯಾಣಿಕರಿಗೆ ನೀಡುವ ಗ್ಯಾರಂಟಿ. ರಾಜ್ಯದಲ್ಲಿ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ 24 ಸಾವಿರಕ್ಕೂ ಅಧಿಕ ಬಸ್‌ಗಳಿದ್ದು 240 ಘಟಕಗಳ ಮೂಲಕ ಪ್ರತಿನಿತ್ಯ ಕಾರ್ಯಾಚರಣೆ ನಡೆಸುತ್ತಿವೆ. ಆದರೆ ರಸ್ತೆಗೆ ಇಳಿಯುವ ಕೆಲ ಬಸ್‌ಗಳು ಸುರಕ್ಷಿತವಾಗಿ ಪ್ರಯಾಣಿಕರನ್ನು ನಿಗದಿತ ಸ್ಥಳಗಳಿಗೆ ತಲುಪಿಸುತ್ತವೆ ಎಂಬ ಭರವಸೆಯೇ ಇಲ್ಲ ಎಂಬಂತಾಗಿದೆ.
    ಪ್ರತಿದಿನ ಸರ್ಕಾರಿ ಬಸ್‌ಗಳಲ್ಲಿ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಬಳಿಕ ಅದು ಮತ್ತಷ್ಟು ಹೆಚ್ಚಾಗಿದ್ದು ಪ್ರಯಾಣಿಕರನ್ನು ಹೊತ್ತೊಯ್ಯುವ ಬಸ್‌ಗಳು ಪ್ರತಿನಿತ್ಯವೂ ಒಂದಿಲ್ಲೊಂದು ಸಮಸ್ಯೆಗಳಿಂದ ಮಾರ್ಗಮಧ್ಯೆ ನಿಲ್ಲುತ್ತಿವೆ. ಒಮ್ಮೆ ತಾಂತ್ರಿಕ ಸಮಸ್ಯೆ ಬಂದು ಬಸ್ ನಿಂತರೆ ಅದನ್ನು ರಿಪೇರಿ ಮಾಡುವುದಕ್ಕೆ ಆಯಾ ನಿಗಮ ಅಥವಾ ಘಟಕಗಳಿಂದ ತಾಂತ್ರಿಕ ಪರಿಣತರೇ ಬರಬೇಕು. ಟಯರ್ ಪಂಕ್ಚರ್ ಆದರೆ ಅದನ್ನು ಬದಲಿಸಲು ಬಸ್‌ಗಳಲ್ಲಿ ಕನಿಷ್ಠ ಸ್ಪೇರ್ ಟಯರ್‌ಗಳಿಲ್ಲ. ಹಾಗಾಗಿ ಪ್ರಯಾಣಿಕರು ಅನಿವಾರ್ಯವಾಗಿ ಗಂಟೆಗಟ್ಟಲೆ ಕಾದು ಬೇರೊಂದು ಬಸ್ ಬರುವವರೆಗೆ ಕಾಯುವುದು ಅನಿವಾರ್ಯವಾಗುತ್ತಿದೆ.
    ಪ್ರಯಾಣಿಕರಿಗೆ ಭೀತಿ: ನಾಲ್ಕು ನಿಗಮ ವ್ಯಾಪ್ತಿಯಲ್ಲಿ ರಸ್ತೆ ಇಳಿಯುವ ಅರ್ಧಕ್ಕರ್ಧ ಬಸ್‌ಗಳು ಗುಜರಿ ಸೇರಬೇಕಾಗಿದ್ದವೇ ಇವೆ. ಲಾಕಿಂಗ್ ಡೋರ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನುಳಿದ ಬಸ್‌ಗಳಲ್ಲಿ ಡೋರ್‌ಗಳ ಲಾಕ್ ವ್ಯವಸ್ಥೆಯೇ ಸರಿ ಇಲ್ಲ. ಇಂತಹ ಸಂದರ್ಭಗಳಲ್ಲಿ ಬಸ್‌ನಿಂದ ಬಿದ್ದು ಹಲವರು ಗಾಯಗೊಂಡಿದ್ದಾರೆ. ಕೆಲವರು ಮೃತಪಟ್ಟಿದ್ದು ಉಂಟು. ಈ ಬಗ್ಗೆ ಚಾಲಕರು ಮತ್ತು ನಿರ್ವಾಹಕರನ್ನು ಪ್ರಶ್ನಿಸಿದರೆ ಡೋರ್ ಲಾಕ್ ಹಾಳಾಗಿದೆ. ಬಸ್‌ಗಳಲ್ಲಿ ಟೂಲ್ಸ್‌ಗಳೇ ಇಲ್ಲ. ನಾವೇನು ಮಾಡುವುದು ಎಂದು ಅಸಹಾಯಕತೆ ತೋರುತ್ತಿದ್ದಾರೆ.
    ಶಕ್ತಿ ಯೋಜನೆ ಬಳಿಕ ಹೆಚ್ಚಿದ ಆತಂಕ: ರಾಜ್ಯದಲ್ಲಿ ಶಕ್ತಿ ಯೋಜನೆ ಬಳಿಕ ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿದೆ. ಶಕ್ತಿ ಯೋಜನೆಗೂ ಮುನ್ನ ಪ್ರತಿದಿನ ಸರಾಸರಿ 80 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ಬಳಿಕ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ವೇಗದೂತಗಳನ್ನು ಹೊರತುಪಡಿಸಿ ನಗರ ಸಾರಿಗೆ ಮತ್ತು ಸಾಮಾನ್ಯ ಸಾರಿಗೆ ಬಸ್‌ಗಳ ಸಂಖ್ಯೆ ಕಡಿಮೆ ಇದ್ದು ವಿಶೇಷವಾಗಿ ಮಹಿಳೆಯರ ಓಡಾಟ ಹೆಚ್ಚಾಗಿರುವ ಕಾರಣ ಹಲವು ಮಾರ್ಗಗಳಲ್ಲಿ ಸರ್ಕಾರಿ ಬಸ್‌ಗಳು ತುಂಬಿ ತುಳುಕುತ್ತಿವೆ. ಮಾರ್ಗಮಧ್ಯೆ ಬಸ್ ಕೆಟ್ಟು ನಿಂತರೆ ಪ್ರಯಾಣಿಕರು ಪರದಾಟ ನಡೆಸುವಂತಾಗುತ್ತಿದೆ. ಹಿಂದಿನಿಂದ ಬರುವ ಬಸ್‌ಗಳು ಪ್ರಯಾಣಿಕರಿಂದ ಭರ್ತಿ ಆಗಿರುವ ಕಾರಣ ನರಕಯಾತನೆ ಅನುಭವಿಸುವುದು ಗ್ಯಾರಂಟಿ.
    ಡಕೋಟಾ ಬಸ್‌ಗಳ ಓಡಾಟ: ಸಾರಿಗೆ ವ್ಯವಸ್ಥೆಯಲ್ಲಿ 9 ಲಕ್ಷ ಕಿಮೀ ಓಡಿದ ಬಸ್‌ಗಳನ್ನು ಗುಜರಿಗೆ ಕಳಿಸಬೇಕೆಂಬ ನಿಯಮವಿದೆ. ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಬೇಕಿದ್ದರೂ ನಾಲ್ಕು ನಿಗಮಗಳಲ್ಲಿ ಡಕೋಟಾ ಬಸ್‌ಗಳ ಓಡಾಟ ಎಂದಿನಂತೆ ಮುಂದುವರಿಸಿದೆ. ಫಿಟ್ ಇಲ್ಲದ ಬಸ್‌ಗಳ ಓಡಾಟದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅನಾಹುತಗಳು ಸಂಭವಿಸುವ ಮುನ್ನ ನಿಗಮ ಎಚ್ಚೆತ್ತುಕೊಳ್ಳದೆ ಪ್ರಯಾಣಿಕರ ಜೀವದ ಜತೆ ಆಟವಾಡುತ್ತಿದೆ. ಡಕೋಟಾ ಬಸ್‌ಗಳು ರಸ್ತೆಗೆ ಇಳಿಯುತ್ತಿದ್ದು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ.

    ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಲ್ಲ ಟೂಲ್ಸ್, ಸ್ಟೆಪ್ನಿ !
    ಶಿವಮೊಗ್ಗ ತಾಲೂಕು ಆಯನೂರು ಸಮೀಪ ಟಯರ್ ಪಂಕ್ಚರ್ ಆಗಿರುವುದು.

    ನಿಗಮಗಳಲ್ಲಿರುವ ಬಸ್‌ಗಳು ?
    ಕೆಎಸ್‌ಆರ್‌ಟಿಸಿ-8,116
    ಬಿಎಂಟಿಸಿ-6,688
    ಎನ್‌ಡಬ್ಲುೃಕೆಆರ್‌ಟಿಸಿ-4,858
    ಕೆಕೆಆರ್‌ಟಿಸಿ-4,327

    ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಯಾವುದೇ ಟೂಲ್ಸ್‌ಗಳಿಲ್ಲ. ಪಂಕ್ಚರ್ ಆದರೆ ಟಯರ್ ಬದಲಿಸಲು ಹೆಚ್ಚುವರಿ ಟಯರ್ ವ್ಯವಸ್ಥೆ ಇಲ್ಲ. ಎಲ್ಲೇ ಕೆಟ್ಟು ನಿಂತರೂ ಅಥವಾ ಪಂಕ್ಚರ್ ಬದಲಿ ಬಸ್ ವ್ಯವಸ್ಥೆ ಮಾಡಬೇಕಿದೆ ಅಥವಾ ಹಿಂಬದಿ ಬರುವ ಆಯಾ ಮಾರ್ಗದ ಬಸ್‌ಗಳಿಗೆ ಜನರನ್ನು ಹತ್ತಿಸಬೇಕಿದೆ. ಇದು ಪ್ರಯಾಣಿಕರಿಗೆ ತೊಂದರೆಯಾದರೆ ಸಿಬ್ಬಂದಿಗೂ ಕಿರಿಕಿರಿ ತಪ್ಪಿದ್ದಲ್ಲ.
    ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ

    ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳ ವ್ಯಾಪ್ತಿಯ ಎಲ್ಲ ಬಸ್‌ಗಳಲ್ಲೂ ಟೂಲ್ಸ್‌ಗಳು ಮತ್ತು ಸ್ಟೆಪ್ನಿ (ಹೆಚ್ಚುವರಿ ಟಯರ್)ಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಯಾವ ಮಾರ್ಗಗಳ ಬಸ್‌ಗಳಲ್ಲಿ ಅದನ್ನು ವ್ಯವಸ್ಥೆ ಮಾಡಿಕೊಂಡಿಲ್ಲ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
    ಅನ್ಬುಕುಮಾರ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts