More

    ರಾಜ್ಯದಲ್ಲಿ ನಾಳೆ ಕೋವಿಡ್ ಲಸಿಕಾ ಮೇಳ; ದಾಸ್ತಾನು ಖಾಲಿ ಮಾಡುವ ಗುರಿ

    ಬೆಂಗಳೂರು: ಕೋವಿಡ್ ಲಸಿಕೆ ದಾಸ್ತಾನು ಖಾಲಿ ಮಾಡುವ ಸಲುವಾಗಿ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಹತ್ತು ದಿನಗಳ ಅಂತರದಲ್ಲಿ ಮತ್ತೊಂದು (ಜ. 31ರಂದು) ಲಸಿಕಾ ಮೇಳ ಹಮ್ಮಿಕೊಂಡಿದೆ.
    ರಾಜ್ಯದಲ್ಲಿ ಒಂದು ಲಕ್ಷ ಡೋಸ್ ಕೋವ್ಯಾಕ್ಸಿನ್ ಲಭ್ಯವಿದ್ದು, ಜ. 31ಕ್ಕೆ ಅವಧಿ ಮುಗಿಯಲಿದೆ. ಉಳಿದಂತೆ 2.5 ಲಕ್ಷ ಡೋಸ್ ಕೋವಿಶೀಲ್ಡ್ ಲಭ್ಯವಿದೆ. ಕಳೆದ ಜ.21ರಂದು ನಡೆದ ಮೇಳದಲ್ಲಿ 2.2 ಲಕ್ಷ ಲಸಿಕೆ ವಿತರಣೆ ಮಾಡಲಾಗಿತ್ತು. ಜ.31ರಂದು ನಡೆಯಲಿರುವ ಮೇಳದಲ್ಲಿ ನಿಗದಿತ ಗುರಿಯಂತೆ ಶೇ. 50 ಮುನ್ನೆಚ್ಚರಿಕೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಜ್ಜಾಗಿದೆ.

    ಮೇಳದ ಸಮಯದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗುವುದು. ರಾಜ್ಯದಲ್ಲಿ ಸದ್ಯ ಶೇ. 22 ಮಾತ್ರವೇ ಮುನ್ನೆಚ್ಚರಿಕೆ ಡೋಸ್ ಪಡೆದುಕೊಂಡಿದ್ದಾರೆ. ಹಾಗಾಗಿ ಇರುವ ದಾಸ್ತಾನು ಖಾಲಿಯಾದ ನಂತರವಷ್ಟೇ ಹೊಸ ದಾಸ್ತಾನು ಸಂಗ್ರಹಣೆಗೆ ಕ್ರಮ ವಹಿಸಲಾಗುವುದು ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ರಾಜ್ಯ ನಿರ್ದೇಶಕ ನವೀನ್ ಭಟ್ ತಿಳಿಸಿದ್ದಾರೆ.

    ಮೇಳದ ಅವಲಂಬನೆ: ದೀರ್ಘಾವಧಿಯ ಬೇಡಿಕೆ ನಂತರ, ಕೇಂದ್ರ ಸರ್ಕಾರವು ಜನವರಿ 15 ರಂದು ರಾಜ್ಯಕ್ಕೆ ಎಂಟು ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಬಿಡುಗಡೆ ಮಾಡಿತ್ತು. ಇದು ಈಗಾಗಲೇ ಕೆಲವೇ ದಿನಗಳಲ್ಲಿ ಅವಧಿ ಮುಗಿಯುವ ಹಂತದಲ್ಲಿದೆ. ಹಾಗಾಗಿ ದಾಸ್ತಾನು ಖಾಲಿ ಮಾಡಲು ಲಸಿಕೆ ಮೇಳವನ್ನು ಸಂಪೂರ್ಣವಾಗಿ ಅವಲಂಬಿಸಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಖಾಸಗಿಯಲ್ಲಿ ಬೇಡಿಕೆ ಇಲ್ಲ: ಸರ್ಕಾರವು ಮುನ್ನೆಚ್ಚರಿಕೆ ಡೋಸ್ ಉಚಿತವಾಗಿ ನೀಡಲು ನಿರ್ಧರಿಸಿದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮುನ್ನೆಚ್ಚರಿಕೆ ಡೋಸ್‌ಗಳ ಬೇಡಿಕೆ ಬಹುತೇಕ ಕ್ಷೀಣಿಸಿದೆ. ಇದರಿಂದ ಲಸಿಕೆ ವ್ಯರ್ಥವಾಗಲಿದೆ ಎಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

    ಇಂಟ್ರಾನಾಸಲ್‌ಗೂ ತಪ್ಪಿದ ಬೇಡಿಕೆ: ಗಣರಾಜ್ಯೋತ್ಸವ ದಿನದಂದು ದೇಶದಲ್ಲಿ ವಿಶ್ವದ ಮೊದಲ ಇಂಟ್ರಾನಾಸಲ್ ಲಸಿಕೆಯನ್ನು ಬಿಡುಗಡೆ ಮಾಡಿತು. ಆದರೆ ರಾಜ್ಯದಲ್ಲಿ ಸದ್ಯ ಈಗಾಗಲೇ ಲಭ್ಯವಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಿಗೇ ಬೇಡಿಕೆ ಇಲ್ಲ. ಜೊತೆಗೆ ಕೋವಿಡ್ ಸೋಂಕು ಬಹುತೇಕ ತಗ್ಗಿರುವುದರಿಂದ ಹೊಸ ಲಸಿಕೆ ಪಡೆಯಲು ಆಸಕ್ತಿ ವಹಿಸುವವರ ಸಂಖ್ಯೆ ತೀರಾ ವರಳ. ಅಲ್ಲದೆ ಸ್ಪುಟ್ನಿಕ್ ವಿ ಕೆಲವು ಆಯ್ದ ಖಾಸಗಿ ಆಸ್ಪತ್ರೆಗಳು ಮಾತ್ರವೇ ನಿರ್ವಹಿಸುತ್ತವೆ. ಇದೂ ತನ್ನ ಬೇಡಿಕೆಯನ್ನು ತೀವ್ರವಾಗಿ ಕಳೆದುಕೊಳ್ಳುತ್ತಿದೆ.

    ಇನ್ನು ಇಂಟ್ರಾನಾಸಲ್ ಮೂಗಿನ ಮೂಲಕ ನೀಡುವುದರಿಂದ ಡೋಸ್ ತೆಗೆದುಕೊಳ್ಳುವಾಗ ಸೀನುವಿಕೆಯಂತಹ ಪ್ರಾಯೋಗಿಕ ಸಮಸ್ಯೆಗಳು ಉಂಟಾಗುತ್ತವೆ. ಈ ಲಸಿಕೆ ನೀಡಲು ಸಿಬ್ಬಂದಿಗೆ ಸೀಮಿತ ತರಬೇತಿಯ ಅಗತ್ಯವಿದೆ. ಹಾಗಾಗಿ ಇಂಟ್ರಾನಾಸಲ್ ಲಸಿಕೆ ಖರೀದಿ ಕುರಿತು ರಾಜ್ಯ ಸರ್ಕಾರ ಸದ್ಯ ಉತ್ಸುಕವಾಗಿಲ್ಲ. ಲಸಿಕೆಯ ಪರಿಣಾಮಕಾರಿ ಬೇಡಿಕೆ ಆಧರಿಸಿ ಮುಂದಿನ ದಿನದಲ್ಲಿ ಲಸಿಕೆ ಖರೀದಿ ಬಗ್ಗೆ ನಿರ್ಧರಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಚಿಕಿತ್ಸೆಗೆಂದು ದಾಖಲಾದವಳ ಎರಡೂ ಕಿಡ್ನಿ ಕದ್ರು; ‘ನೀನಿನ್ನು ಇದ್ರೂ ಅಷ್ಟೇ, ಸತ್ರೂ ಅಷ್ಟೇ’ ಅಂತ ಪತ್ನಿ 3 ಮಕ್ಕಳ ಬಿಟ್ಟುಹೋದ ಪತಿ!

    14 ವರ್ಷದ ಹುಡುಗಿಗೆ ಹೃದಯಾಘಾತ; ಸಾವಿಗೂ ಕಾರಣವಾಗಬಹುದು ಡಿಯೊಡರೆಂಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts