More

    ಮಾನವ ಸರಪಳಿ ನಿರ್ಮಿಸಿ ಬಸ್‌ಗಳನ್ನು ಟೋಲ್ ದಾಟಿಸಿದ ಸಾರ್ವಜನಿಕರು

    ಉಳ್ಳಾಲ: ಟೋಲ್‌ಗೇಟ್ ಶುಲ್ಕ ಏರಿಕೆಗೆ ವಿರೋಧ, ಬಸ್ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿ ಹೋಗುವ ಪ್ರವೃತ್ತಿ, ಟೋಲ್‌ಗೇಟ್ ಸಿಬ್ಬಂದಿ ದುರ್ವರ್ತನೆ ವಿರುದ್ಧ ಬುಧವಾರ ಸಾರ್ವಜನಿಕರೇ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟಿಸಿ, ಖಾಸಗಿ ಬಸ್‌ಗಳನ್ನು ಟೋಲ್‌ಗೇಟ್ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಂಗಳೂರಿನಿಂದ ತಲಪಾಡಿಗೆ 35 ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದು, ಟೋಲ್‌ಗೇಟ್‌ನಲ್ಲಿ ಶುಲ್ಕ ಏರಿಕೆ ವಿರೋಧಿಸಿ ಹಲವು ಬಾರಿ ಮಾತುಕತೆ ನಡೆದು ವಿಫಲವಾದ ಹಿನ್ನೆಲೆಯಲ್ಲಿ ಬಸ್‌ಗಳು ಟೋಲ್‌ಗೇಟ್ ದಾಟದೆ ಅರ್ಧದಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದವು. ಇದರಿಂದಾಗಿ ಪ್ರಯಾಣಿಕರು ಒಂದು ಕಿಲೋ ಮೀಟರ್ ನಡೆಯಬೇಕಿದ್ದು, ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ನಿರ್ಲಕ್ಷೃ ತಾಳಿತ್ತು. ಈ ನಡುವೆಯೂ ನಾಲ್ಕು ಬಸ್‌ಗಳು ಶುಲ್ಕ ಕಟ್ಟಿ ಟೋಲ್‌ಗೇಟ್ ದಾಟುತ್ತಿದ್ದವು. 31 ಬಸ್ ಮಾಲೀಕರ ನೀತಿ ಖಂಡಿಸಿ, ಟೋಲ್‌ಗೇಟ್ ಹಠಮಾರಿ ಧೋರಣೆ ವಿರುದ್ಧ ಸ್ಥಳೀಯರು ಮಾನವ ಸರಪಳಿ ನಿರ್ಮಿಸಿ ಟೋಲ್‌ಗೇಟ್‌ನಲ್ಲಿ ಶುಲ್ಕ ಇಲ್ಲದೆಯೇ ಬಸ್‌ಗಳನ್ನು ದಾಟಿಸಿದರು.
    ಈ ಸಂದರ್ಭ ಟೋಲ್ ಸಿಬ್ಬಂದಿ ಬಸ್‌ಗಳು ಶುಲ್ಕ ಪಾವತಿಸಬೇಕೆಂದು ಪಟ್ಟು ಹಿಡಿದ ಪರಿಣಾಮ ಬಸ್‌ಗಳ ಸಹಿತ ಇತರ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಇದರಿಂದ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಸಂಕಷ್ಟಕ್ಕೀಡಾದರು. ಬಗ್ಗೆ ಮಾಹಿತಿ ಪಡೆದ ಉಳ್ಳಾಲ ನಿರೀಕ್ಷಕ ಸಂದೀಪ್ ಸ್ಥಳಕ್ಕೆ ಆಗಮಿಸಿ, ಟೋಲ್ ಸಿಬ್ಬಂದಿ ಜತೆ ಮಾತುಕತೆ ನಡೆಸಿ ಒಂದು ದಿನದ ಮಟ್ಟಿಗೆ ಶುಲ್ಕರಹಿತ ಸಂಚಾರಕ್ಕೆ ಅವಕಾಶ ದೊರಕಿಸಿದರು.

    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ್ ನಾಯ್ಕ ತಲಪಾಡಿ, ತಾಪಂ ಸದಸ್ಯರಾದ ಸುರೇಖಾ ಚಂದ್ರಹಾಸ್, ಅಬೂಬಕ್ಕರ್ ಸಿದ್ದೀಕ್ ಕೊಳಂಗರೆ, ಗ್ರಾಪಂ ಸದಸ್ಯ ವೈಭವ್ ಶೆಟ್ಟಿ, ಮುಖಂಡರಾದ ವಿನ್ನು ಶೆಟ್ಟಿ, ಗೋಪಾಲ್ ತಚ್ಚಣಿ, ವಾಣಿ ಪೂಜಾರಿ, ಅನಿಲ್ ದಾಸ್, ಸಿದ್ದೀಕ್ ತಲಪಾಡಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts