More

    ಕರೊನಾಗೆ ಹೆದರಲ್ಲ ಒಲಿಂಪಿಕ್ಸ್, ಆರೋಗ್ಯ ತುರ್ತು ಪರಿಸ್ಥಿತಿಯಲ್ಲಾದರೂ ನಡೆದೇ ನಡೆಯುತ್ತೆ!

    ಟೋಕಿಯೊ: ಜಗತ್ತಿನ ಎಲ್ಲೆಡೆ ಕರೊನಾ ಮಹಾಮಾರಿ ಕಾಡುತ್ತಿರುವ ನಡುವೆಯೂ ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಮಯದಲ್ಲಿ ಒಲಿಂಪಿಕ್ಸ್ ನಡೆಯಬಾರದು ಎಂದು ಆತಿಥೇಯ ಜಪಾನ್‌ನಲ್ಲಿ ಶೇ. 70ರಷ್ಟು ಜನರು ಅಭಿಪ್ರಾಯ ಹೊಂದಿದ್ದಾರೆ ಎಂದು ಸಮೀಕ್ಷೆಗಳಿಂದಲೂ ತಿಳಿದುಬಂದಿದೆ. ಆದರೆ ಏನೇ ಆಗಲಿ ಟೋಕಿಯೊ ಒಲಿಂಪಿಕ್ಸ್ ಇನ್ನೆರಡು ತಿಂಗಳಲ್ಲಿ ನಿಗದಿಯಂತೆಯೇ ಶುರುವಾಗಲಿದೆ. ಕರೊನಾದಿಂದಾಗಿ ಟೋಕಿಯೊ ನಗರದಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇದ್ದರೂ ಒಲಿಂಪಿಕ್ಸ್ ನಡೆದೇ ನಡೆಯುತ್ತದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಸಿ) ಉಪಾಧ್ಯಕ್ಷ ಜಾನ್ ಕೋಟ್ಸ್ ಹೇಳಿದ್ದಾರೆ.

    ಹಾಲಿ ವೇಳಾಪಟ್ಟಿಯ ಪ್ರಕಾರ ಟೋಕಿಯೊ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ರವರೆಗೆ ನಡೆಯಲಿದೆ. ಕಳೆದ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ಸ್, ಕರೊನಾ ಭೀತಿಯಿಂದಾಗಿ ಮುಂದೂಡಿಕೆಯಾಗಿತ್ತು. ಒಲಿಂಪಿಕ್ಸ್ ಮುಂದೂಡುವಂತೆ ಜಪಾನ್‌ನ ವೈದ್ಯಕೀಯ ತಜ್ಞರು ಸಲಹೆ ನೀಡಿದ್ದರೂ, ನಾವು ಕ್ರೀಡಾಕೂಟವನ್ನು ಯೋಜನೆಯಂತೆಯೇ ನಡೆಸುತ್ತೇವೆ. ಕೂಟ ನಡೆಸಲು ಬೇಕಾದ ಸೂಕ್ತ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ಅಂಗೀಕರಿಸಿದೆ. ಆರೋಗ್ಯಕರ ಕ್ರೀಡಾಕೂಟವನ್ನೇ ನಾವು ಸಂಘಟಿಸಲಿದ್ದೇವೆ ಎಂದು ಆಸ್ಟ್ರೇಲಿಯಾ ಮೂಲದ ಜಾನ್ ಕೋಟ್ಸ್, ಆತಿಥೇಯ ಟೋಕಿಯೊ ಸಂಘಟನಾ ಸಮಿತಿಯ ಜತೆಗೆ ವರ್ಚುವಲ್ ಸಭೆ ನಡೆಸಿದ ಬಳಿಕ ಹೇಳಿದ್ದಾರೆ.

    ಇದನ್ನೂ ಓದಿ: ರಾಹುಲ್ ಗಾಂಧಿಗೆ ಬಾಕ್ಸಿಂಗ್ ಕಲಿಸಿದ್ದ ಕೋಚ್ ಇನ್ನಿಲ್ಲ

    ಒಲಿಂಪಿಕ್ಸ್‌ನಲ್ಲಿ ಸುಮಾರು 11 ಸಾವಿರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಟೋಕಿಯೊ ಒಲಿಂಪಿಕ್ ಗ್ರಾಮದ ಶೇ. 80ರಷ್ಟು ಮಂದಿಗೆ ಲಸಿಕೆ ಹಾಕಲಾಗುವುದು. ಕೂಟದಲ್ಲಿ ಭಾಗವಹಿಸುವವರನ್ನು ಸಾರ್ವಜನಿಕರಿಂದ ಸಂಪೂರ್ಣ ದೂರವಿಡಲಾಗುವುದು. ಒಲಿಂಪಿಕ್ಸ್ ನಡೆಯುವ ಬಗ್ಗೆ ಐಒಸಿ ಯಾವುದೇ ಅನುಮಾನ ಇಟ್ಟುಕೊಂಡಿಲ್ಲ ಎಂದು ಕೋಟ್ಸ್ ಹೇಳಿದ್ದಾರೆ.

    ಟೋಕಿಯೊ ಒಲಿಂಪಿಕ್ಸ್‌ಗಾಗಿ ಆತಿಥೇಯ ಜಪಾನ್ ಇದುವರೆಗೆ 1.12 ಲಕ್ಷ ಕೋಟಿ ರೂಪಾಯಿ (15.4 ಶತಕೋಟಿ ಡಾಲರ್) ಖರ್ಚು ಮಾಡಿದೆ. ಆದರೆ ಸರ್ಕಾರದ ಲೆಕ್ಕಪತ್ರಗಳ ಪ್ರಕಾರ ನಿಜವಾದ ಖರ್ಚು ಇದಕ್ಕಿಂತಲೂ ಸಾಕಷ್ಟು ಅಧಿಕವಾಗಿದೆ. ಕೂಟದ ಒಟ್ಟಾರೆ ಆದಾಯದಲ್ಲಿ ಶೇ. 75ರಷ್ಟು ಪಾಲು ಕ್ರೀಡಾಸ್ಪರ್ಧೆಗಳ ಟಿವಿ ನೇರಪ್ರಸಾರ ಹಕ್ಕಿನಿಂದ ಬರುವ ಲೆಕ್ಕಾಚಾರವನ್ನು ಐಒಸಿ ಹೊಂದಿದೆ.

    ಜಪಾನ್‌ನಲ್ಲಿ ಸದ್ಯ ಒಸಾಕಾ ಮತ್ತು ಇತರ ಕೆಲ ಪ್ರಾಂತ್ಯಗಳು ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿವೆ. ಮೇ 31ರವರೆಗೂ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು, ಇದು ವಿಸ್ತರಣೆಯಾಗುವ ಸಾಧ್ಯತೆಯೂ ಇದೆ. ಕರೊನಾ ಭೀತಿಯಿಂದಾಗಿ ಈ ತಿಂಗಳು ಟೋಕಿಯೊ ಪ್ರಯಾಣವನ್ನು ರದ್ದುಗೊಳಿಸಿದ್ದ ಐಒಸಿ ಅಧ್ಯಕ್ಷ ಥಾಮಸ್ ಬಾಷ್ ಇನ್ನು ಜುಲೈ 12ರಂದು ತೆರಳುವ ನಿರೀಕ್ಷೆ ಇದೆ.

    ಭಾರತ ಪರ ದೀರ್ಘಕಾಲ ಆಡಲು ಸಾಧ್ಯವಾಗದ ಬಗ್ಗೆ ಕಾರಣ ವಿವರಿಸಿದ ರಾಬಿನ್ ಉತ್ತಪ್ಪ

    ಐಪಿಎಲ್​ನಿಂದ ಹೊರಹೋಗಲು ನಿರ್ಧರಿಸಿದ್ದರಂತೆ ಆರ್​ಸಿಬಿ ಸ್ಪಿನ್ನರ್​ ಯಜುವೇಂದ್ರ ಚಾಹಲ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts