More

    ಗೆಲುವಿನ ಪುನರಾರಂಭಕ್ಕೆ ಆರ್‌ಸಿಬಿ ರೆಡಿ, ಇಂದು ಕೆಕೆಆರ್ ಸವಾಲು

    ಅಬುಧಾಬಿ: ಬಯೋಬಬಲ್‌ಗೆ ಕರೊನಾ ವೈರಸ್ ಪ್ರವೇಶಿಸುವುದಕ್ಕೆ ಮುನ್ನ ನಡೆದ ಐಪಿಎಲ್ 14ನೇ ಆವೃತ್ತಿಯ ಮೊದಲ ಭಾಗದಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ 2ನೇ ಭಾಗದಲ್ಲಿ ಮತ್ತಷ್ಟು ಉತ್ತಮ ಆಟವಾಡುವ ಮೂಲಕ ಪ್ರಶಸ್ತಿಯತ್ತ ಮುನ್ನುಗ್ಗಲು ಸಜ್ಜಾಗಿದೆ. ವಿರಾಟ್ ಕೊಹ್ಲಿ ಬಳಗ 2 ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು ಸೋಮವಾರ ಎದುರಿಸಲಿದ್ದು, ಗೆಲುವಿನ ಪುನರಾರಂಭದ ಹಂಬಲದಲ್ಲಿದೆ. ಮತ್ತೊಂದೆಡೆ ಟೂರ್ನಿಯ ಮೊದಲ ಭಾಗದಲ್ಲಿ ನೀರಸ ನಿರ್ವಹಣೆ ತೋರಿದ್ದ ಕೆಕೆಆರ್, ಅರಬ್ ನಾಡಿನಲ್ಲಿ ಪುಟಿದೇಳುವ ತವಕದಲ್ಲಿದೆ.

    ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ಆರ್‌ಸಿಬಿ 5 ಜಯ, 2 ಸೋಲು ಕಂಡಿದ್ದರೆ, ಕೆಕೆಆರ್ ಇದಕ್ಕೆ ವ್ಯತರಿಕ್ತವೆಂಬಂತೆ 2 ಜಯ, 5 ಸೋಲು ಅನುಭವಿಸಿದೆ. ಆರ್‌ಸಿಬಿ ಪ್ಲೇಆಫ್​ಗೆ ಬಹುತೇಕ ಸನಿಹದಲ್ಲೇ ಇದ್ದರೆ, ಕೆಕೆಆರ್ ತಂಡದ ಹಾದಿ ಕಠಿಣ ಸವಾಲಿನದ್ದಾಗಿದೆ. ಟೂರ್ನಿ ಇತಿಹಾಸದ ಒಟ್ಟಾರೆ ದಾಖಲೆ ಕೆಕೆಆರ್ ಪರವಾಗಿದ್ದರೂ, ಭಾರತದಲ್ಲಿ ನಡೆದ ಮೊದಲ ಭಾಗದ ಟೂರ್ನಿಯಲ್ಲಿ ಗೆದ್ದ ಬಲ ಆರ್‌ಸಿಬಿ ತಂಡಕ್ಕಿದೆ.

    ವಿರಾಟ್ ಕೊಹ್ಲಿ ಕೆಲ ದಿನಗಳ ಹಿಂದಷ್ಟೇ ಭಾರತ ಟಿ20 ತಂಡದ ನಾಯಕತ್ವ ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಚುಟುಕು ಕ್ರಿಕೆಟ್ ನಾಯಕತ್ವದ ಕೊನೇ ಟೂರ್ನಿಯಾಗಿರುವ ಮುಂಬರುವ ಟಿ20 ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ಅವರಿಗೆ ಈ ಟೂರ್ನಿ ಮಹತ್ವದ್ದಾಗಿದೆ.

    ಟೂರ್ನಿಯ ಮೊದಲ ಭಾಗಕ್ಕಿಂತ ಗರಿಷ್ಠ 5 ಬದಲಾವಣೆ ಕಂಡಿರುವ ಆರ್‌ಸಿಬಿ ತಂಡಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್-ಎಬಿ ಡಿವಿಲಿಯರ್ಸ್‌ರಂಥ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಬಲವಿದೆ. ನಾಯಕ ಕೊಹ್ಲಿ ಜತೆಗೆ ಕನ್ನಡಿಗ ದೇವದತ್ ಪಡಿಕಲ್ ಉತ್ತಮ ಆರಂಭವನ್ನೂ ಒದಗಿಸುತ್ತ ಬಂದಿದ್ದಾರೆ. ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್, ಕೈಲ್ ಜೇಮಿಸನ್ ಮತ್ತು ಮೊಹಮದ್ ಸಿರಾಜ್ ಮಿಂಚಿದ್ದಾರೆ. ಟಿ20 ವಿಶ್ವಕಪ್ ತಂಡದಿಂದ ಕಡೆಗಣಿಸಲ್ಪಟ್ಟಿರುವ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಆಯ್ಕೆಗಾರರಿಗೆ ಸೂಕ್ತ ಉತ್ತರ ನೀಡುವ ಛಲದಲ್ಲಿರುವುದು ಆರ್‌ಸಿಬಿಗೆ ಪ್ಲಸ್ ಆಗಬಹುದು. ಶ್ರೀಲಂಕಾದ ಆಲ್ರೌಂಡರ್ ವಾನಿಂದು ಹಸರಂಗ ಮತ್ತು ವೇಗಿ ದುಶ್ಮಂತ ಚಮೀರ ಸೇರ್ಪಡೆಯೂ ಆರ್‌ಸಿಬಿ ಬಲ ಹೆಚ್ಚಿಸುವ ನಿರೀಕ್ಷೆ ಇದೆ. ಇವರಿಬ್ಬರು ಯುಎಇಯಲ್ಲಿ ಈ ಹಿಂದೆ ಸಾಕಷ್ಟು ಪಂದ್ಯ ಆಡಿದ ಅನುಭವ ಹೊಂದಿದ್ದಾರೆ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಂಭಾವ್ಯ ತಂಡಗಳು:

    ಆರ್‌ಸಿಬಿ: ದೇವದತ್ ಪಡಿಕಲ್, ವಿರಾಟ್ ಕೊಹ್ಲಿ (ನಾಯಕ), ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್‌, ಶಾಬಾಜ್ ಅಹ್ಮದ್, ಕೈಲ್ ಜೇಮಿಸನ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮದ್ ಸಿರಾಜ್, ಯಜುವೇಂದ್ರ ಚಾಹಲ್.

    ಕೆಕೆಆರ್: ಶುಭಮಾನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇವೊಯಿನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಆಂಡ್ರೆ ರಸೆಲ್, ಸುನೀಲ್ ನಾರಾಯಣ್, ಪ್ರಸಿದ್ಧಕೃಷ್ಣ, ಶಿವಂ ಮಾವಿ, ಲಾಕಿ ರ್ಗ್ಯುಸನ್, ವರುಣ್ ಚಕ್ರವರ್ತಿ.

    ಮುಖಾಮುಖಿ: 27
    ಆರ್‌ಸಿಬಿ: 13
    ಕೆಕೆಆರ್: 14

    ಮೊದಲ ಸೆಣಸಾಟ
    ಟೂರ್ನಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ಏಪ್ರಿಲ್ 18ರಂದು ಚೆನ್ನೈನಲ್ಲಿ ನಡೆದಿತ್ತು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ (78) ಮತ್ತು ಎಬಿ ಡಿವಿಲಿಯರ್ಸ್‌ (76*) ಜೋಡಿಯ ಭರ್ಜರಿ ಆಟದಿಂದ 4 ವಿಕೆಟ್‌ಗೆ 204 ರನ್ ಪೇರಿಸಿತ್ತು. ಪ್ರತಿಯಾಗಿ ಕೆಕೆಆರ್ 8 ವಿಕೆಟ್‌ಗೆ 166 ರನ್ ಗಳಿಸಲಷ್ಟೇ ಶಕ್ತವಾಗಿ 38 ರನ್‌ಗಳಿಂದ ಶರಣಾಗಿತ್ತು. ಕೈಲ್ ಜೇಮಿಸನ್ 3 ವಿಕೆಟ್ ಕಬಳಿಸಿ ಮಿಂಚಿದ್ದರು.

    ತಿಳಿನೀಲಿ ಜೆರ್ಸಿಯಲ್ಲಿ ಕಣಕ್ಕೆ
    ಆರ್‌ಸಿಬಿ ತಂಡ ತನ್ನ ಎಂದಿನ ಕೆಂಪು-ಕಪ್ಪು ಸಮವಸಕ್ಕೆ ಬದಲಾಗಿ ತಿಳಿನೀಲಿ ಬಣ್ಣದ ಸಮವಸದೊಂದಿಗೆ ಈ ಪಂದ್ಯ ಆಡಲಿದೆ. ಪಿಪಿಇ ಕಿಟ್‌ನಂಥ ಬಣ್ಣದ ಈ ಜೆರ್ಸಿಯೊಂದಿಗೆ ಆರ್‌ಸಿಬಿ ತಂಡ ಕರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಲಿದೆ. ಇದಲ್ಲದೆ ಪಂದ್ಯದ ಬಳಿಕ ಎಲ್ಲ ಆಟಗಾರರ ಜೆರ್ಸಿಯನ್ನು ಹರಾಜು ಹಾಕಲಾಗುತ್ತದೆ ಮತ್ತು ಇದರಿಂದ ಬಂದ ಹಣವನ್ನು ಭಾರತದಲ್ಲಿ ಬಡವರಿಗೆ ಉಚಿತ ಕೋವಿಡ್-19 ಲಸಿಕೆ ನೀಡಲು ವಿನಿಯೋಗಿಸಲಾಗುತ್ತದೆ. ಆರ್‌ಸಿಬಿ ಈ ಹಿಂದಿನ ಆವೃತ್ತಿಗಳಲ್ಲಿ 1 ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ಸಂಕಷ್ಟದ ಸಮಯದಲ್ಲಿ ದಿಟ್ಟವಾಗಿ ವೈದ್ಯಕೀಯ ಸೇವೆ ಸಲ್ಲಿಸಿದವರಿಗೆ ಆರ್‌ಸಿಬಿ ನೀಲಿ ಜೆರ್ಸಿಯ ಪಂದ್ಯದ ಮೂಲಕ ಧನ್ಯವಾದ ಹೇಳಲಿದೆ.

    ಪಿಚ್ ರಿಪೋರ್ಟ್
    ಅಬುಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನ ಪಿಚ್ ವೇಗಿ ಮತ್ತು ಸ್ಪಿನ್ನರ್‌ಗಳಿಗೆ ನೆರವು ನೀಡುವ ಗುಣವನ್ನು ಹೊಂದಿದೆ. ಈ ಮೈದಾನದ ಐಪಿಎಲ್ ಪಂದ್ಯಗಳಲ್ಲಿ 170 ರನ್ ಸರಾಸರಿ ಮೊತ್ತವಾಗಿದೆ.

    ಹೊಸ ಆಟಗಾರರ ಸೇರ್ಪಡೆ ತಂಡದ ಬಲ ಹೆಚ್ಚಿಸಿದೆ. ಹಸರಂಗ, ಚಮೀರ ನಮಗೆ ಉಪಯುಕ್ತ ಆಟಗಾರರಾಗಬಲ್ಲರು. ಟೂರ್ನಿಯ ಮೊದಲ ಭಾಗದಲ್ಲಿ ಉತ್ತಮ ಆರಂಭ ಕಂಡಿದ್ದೆವು. ಅದು ತಂಡಕ್ಕೆ ಸಾಕಷ್ಟು ಆತ್ಮವಿಶ್ವಾಸ ತುಂಬಿದೆ. ನಮ್ಮ ಉತ್ತಮ ನಿರ್ವಹಣೆ ಮುಂದುವರಿಯಲಿದೆ.
    ವಿರಾಟ್ ಕೊಹ್ಲಿ, ಆರ್‌ಸಿಬಿ ನಾಯಕ

    200: ವಿರಾಟ್ ಕೊಹ್ಲಿ ಈ ಪಂದ್ಯದೊಂದಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 200 ಪಂದ್ಯ ಆಡಿದ ಸಾಧನೆ ಮಾಡಲಿದ್ದಾರೆ.

    ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟಿದ್ದಕ್ಕೆ ಆಯ್ಕೆಗಾರರಿಗೆ ಚಾಹಲ್ ಟಾಂಗ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts