More

    ಇಂದು ದುಬೈನಲ್ಲಿ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ಕಿಂಗ್ಸ್ ಕಾದಾಟ

    ದುಬೈ: ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ಮುಖಾಮುಖಿಯೊಂದಿಗೆ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗಕ್ಕೆ ಅರಬ್ ನಾಡಿನಲ್ಲಿ ಭಾನುವಾರ ಚಾಲನೆ ಲಭಿಸಲಿದೆ. ಗೆಲುವಿನ ಪುನರಾರಂಭವನ್ನು ಕಾಣಲು ರೋಹಿತ್ ಶರ್ಮ ಮತ್ತು ಎಂಎಸ್ ಧೋನಿ ಬಳಗ ಪೈಪೋಟಿ ನಡೆಸಲಿವೆ.

    ಡೆಲ್ಲಿ-ಪಂಜಾಬ್ ತಂಡಗಳಷ್ಟೇ ಟೂರ್ನಿಯ ಮೊದಲ ಭಾಗದಲ್ಲಿ 2 ಸಲವೂ ಮುಖಾಮುಖಿ ಆಗಿದ್ದು, ಉಳಿದೆಲ್ಲ ತಂಡಗಳ 2ನೇ ಮುಖಾಮುಖಿ ಯುಎಇ ಚರಣದಲ್ಲೇ ನಡೆಯಲಿವೆ. ಇದರ ಜತೆಗೆ ಪ್ಲೇಆ್ ಲೆಕ್ಕಾಚಾರಗಳಿಂದಲೂ ಟೂರ್ನಿಯ 2ನೇ ಭಾಗ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಕೆಲ ಆಟಗಾರರ ಗೈರು ಮತ್ತು ಸೇರ್ಪಡೆಯಿಂದ 2ನೇ ಭಾಗದ ಟೂರ್ನಿಗೆ ಕೆಲ ತಂಡಗಳ ಬಲಾಬಲದ ಬದಲಾಗಿದ್ದರೂ, ಮುಂಬೈ-ಚೆನ್ನೈ ತಂಡಗಳಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಮೊದಲ ಭಾಗದಲ್ಲಿ ಆಡಿದ ಬಹುತೇಕ ತಂಡಗಳೇ ಉಳಿದುಕೊಂಡಿವೆ. ಆದರೆ ಪಿಚ್ ಮತ್ತು ವಾತಾವರಣ ಈಗ ಸಂಪೂರ್ಣ ಬದಲಾಗಿದ್ದು, ಅದಕ್ಕೆ ತಕ್ಕಂತೆ ಆಡಬೇಕಾದ ಅಗತ್ಯವಿದೆ.

    ಮುಂಬೈ ತಂಡ ಕಳೆದ ವರ್ಷ ಯುಎಇಯಲ್ಲೇ ಪ್ರಶಸ್ತಿ ಗೆದ್ದ ಬಲ ಹೊಂದಿದ್ದರೆ, ಸಿಎಸ್‌ಕೆ ತಂಡ ಕಳೆದ ವರ್ಷ ಮೊದಲ ಬಾರಿಗೆ ಪ್ಲೇಆಫ್​ಗೇರಲು ವಿಫಲವಾಗಿತ್ತಲ್ಲದೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದಲ್ಲದೆ ಟೂರ್ನಿಯ ಮೊದಲ ಭಾಗದಲ್ಲಿ ಗೆದ್ದ ಬಲವೂ ಮುಂಬೈ ತಂಡಕ್ಕಿದೆ. ಹೀಗಾಗಿ ಚೆನ್ನೈ ತಂಡ ಯಾವ ರೀತಿಯಲ್ಲಿ ಪುಟಿದೇಳಲಿದೆ ಮತ್ತು ಸೇಡು ತೀರಿಸಿಕೊಳ್ಳಲಿದೆ ಎಂಬ ಕುತೂಹಲವಿದೆ.

    ಮುಖಾಮುಖಿ: 31
    ಚೆನ್ನೈ: 12
    ಮುಂಬೈ: 19

    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಂಭಾವ್ಯ ತಂಡಗಳು:
    ಚೆನ್ನೈ: ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಸುರೇಶ್ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ, ಎಂಎಸ್ ಧೋನಿ (ನಾಯಕ), ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಇಮ್ರಾನ್ ತಾಹಿರ್, ಲುಂಗಿ ಎನ್‌ಗಿಡಿ/ಜೋಶ್ ಹ್ಯಾಸಲ್‌ವುಡ್.
    ಮುಂಬೈ: ಕ್ವಿಂಟನ್ ಡಿಕಾಕ್, ರೋಹಿತ್ ಶರ್ಮ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಆಡಂ ಮಿಲ್ನೆ/ನಾಥನ್ ಕೌಲ್ಟರ್ ನಿಲ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ, ರಾಹುಲ್ ಚಹರ್.

    ಮೊದಲ ಮುಖಾಮುಖಿಯಲ್ಲಿ ಏನಾಗಿತ್ತು?
    ಟೂರ್ನಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ದೆಹಲಿಯಲ್ಲಿ ಮೇ 1ರಂದು ನಡೆದಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ, ಪ್ಲೆಸಿಸ್ (50), ಮೊಯಿನ್ ಅಲಿ (58), ಅಂಬಟಿ ರಾಯುಡು (72) ಅರ್ಧಶತಕದಿಂದ 4 ವಿಕೆಟ್‌ಗೆ 218 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ ತಂಡ ಡಿಕಾಕ್-ರೋಹಿತ್ ಮೊದಲ ವಿಕೆಟ್‌ಗೆ 71 ರನ್ ಪೇರಿಸಿದ ಬಳಿಕ 10 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕೈರಾನ್ ಪೊಲ್ಲಾರ್ಡ್ (87 ರನ್, 34 ಎಸೆತ, 6 ಬೌಂಡರಿ, 8 ಸಿಕ್ಸರ್) ಏಕಾಂಗಿ ಹೋರಾಟ ತೋರಿ ಮುಂಬೈಗೆ ಕೊನೇ ಎಸೆತದಲ್ಲಿ 4 ವಿಕೆಟ್ ಗೆಲುವು ತಂದುಕೊಟ್ಟಿದ್ದರು. ಎನ್‌ಗಿಡಿ ಎಸೆದ ಕೊನೇ ಓವರ್‌ನಲ್ಲಿ ಅಗತ್ಯವಿದ್ದ 16 ರನ್‌ಗಳನ್ನೂ ಪೊಲ್ಲಾರ್ಡ್ ಒಬ್ಬರೇ ಸಿಡಿಸಿದರು. ಕೊನೇ 10 ಓವರ್‌ಗಳಲ್ಲಿ ಮುಂಬೈ 138 ರನ್ ಕಸಿದಿತ್ತು.

    ಭಾರತ ಟಿ20 ತಂಡದ ಉಪನಾಯಕತ್ವಕ್ಕೆ ತ್ರಿಕೋನ ಸ್ಪರ್ಧೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts