More

    ಕಾವ್ಯಲೋಕದ ಧ್ರುವತಾರೆ; ಇಂದು ಬೇಂದ್ರೆ ಅವರ 125ನೇ ಜನ್ಮದಿನ

    ಕಾವ್ಯಲೋಕದ ಧ್ರುವತಾರೆ; ಇಂದು ಬೇಂದ್ರೆ ಅವರ 125ನೇ ಜನ್ಮದಿನದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡ ಸಾಹಿತ್ಯದ ಮೇರು ಕವಿಗಳಲ್ಲೊಬ್ಬರು. ಭಾಷಾ ವೈವಿಧ್ಯದ ವಿಭಿನ್ನ ಕಾವ್ಯದ ಮೂಲಕ ಸಾಹಿತ್ಯ ಲೋಕದಲ್ಲಿ ವಿಶೇಷ ಗೌರವ ಪಡೆದವರು. ಇಂದು (ಜ.31)ಅವರ 125ನೇ ಜನ್ಮದಿನ. ಈ ಸಂದರ್ಭದಲ್ಲಿ ವರಕವಿಗೆ ನುಡಿಗೌರವ.

    ವರಕವಿ ದ.ರಾ.ಬೇಂದ್ರೆ ಕನ್ನಡ ನವೋದಯ ಕಾವ್ಯ ‘ಭಾವಗೀತ’ ಪ್ರಕಾರದ ಧ್ರುವತಾರೆ. ಅವರು 31.1.1896ರಲ್ಲಿ ಧಾರವಾಡದಲ್ಲಿ ಜನಿಸಿದರು. ತಂದೆ ರಾಮಚಂದ್ರ ಬೇಂದ್ರೆ, ತಾಯಿ ಅಂಬವ್ವ (ಅಂಬಿಕೆ). ಅವರು ವೇದ ಪಾರಂಗತ ಚಿತ್ಪಾವನ ಬ್ರಾಹ್ಮಣರು. ಅವರ ಮಾತೃಭಾಷೆ ಮರಾಠಿ. ಅವರು ತಮ್ಮ ‘ಬೇಂದ್ರೆ’ ಎಂಬ ಹೆಸರಿನ ಮೂಲದ ಬಗ್ಗೆ ‘ಬೇಂದ್ರೆ ಅಂದರೆ ನಾವು ಕೊಂಕಣದಿಂದ ಬಂದಿದ್ದೇವೆ. ವೇದ ಹೇಳುವವರು ‘ವೇದ್ರೆ’ ಆದರು. ಬರುಬರುತ್ತ ವೇದ್ರೆ, ವೇಂದ್ರೆ ಆದರು. ಆಮೇಲೆ ವೇಂದ್ರೆ ಬೇಂದ್ರೆ ಆದರು’ ಎಂದು ಹೇಳಿಕೊಂಡಿದ್ದಾರೆ.

    ಬಡತನದ ಬಾಳು ಸಾಗಿಸಲು ಖಾನಾವಳಿ ನಡೆಸುತ್ತಿದ್ದ ಗಟ್ಟಿ ಜೀವ ಅಜ್ಜಿ ಗೋದೂಬಾಯಿಯ ಮಮತೆಯಲ್ಲಿ ಬೇಂದ್ರೆ ಬೆಳೆದರು. ಅವರ 11ನೇ ವಯಸ್ಸಿನಲ್ಲಿ ತಂದೆ ತೀರಿಹೋದರು. ಅವರ ಬಾಲ್ಯ ಸ್ತ್ರೀಪೋಷಿತವಾಗಿತ್ತು. ಧಾರವಾಡದ ಜಾನಪದ ಮತ್ತು ಭಕ್ತ ಪರಂಪರೆಯಲ್ಲಿ ಒಂದಾಗಿ ಬೆಳೆದ ಅವರಿಗೆ ಜನಪದ ಬದುಕು ಮತ್ತು ಭಾಷೆ ಒಂದು ಬುದ್ಧಿಪೂರ್ವಕ ಕಾವ್ಯ ಪ್ರಯೋಗವಾಗಿರಲಿಲ್ಲ. ಅದು ಸಹಜ ಸ್ಪೂರ್ತಿಯ ಜೀವಲಹರಿಯಾಗಿತ್ತು. ಅವರು ವಾಸಿಸುತ್ತಿದ್ದ ಕಾಮನಕಟ್ಟೆಯಲ್ಲಿ ಸಾಹಿತ್ಯಿಕ, ರಾಷ್ಟ್ರೀಯ ಮತ್ತು ಸಂಸ್ಕೃತಿ ಚಿಂತನೆಯ ಆಲೂರು ವೆಂಕಟರಾವ್, ಗರಗ ಸಿದ್ಧಲಿಂಗಪ್ಪ, ಕಡಪಾ ರಾಘವೇಂದ್ರರಾವ್ ಮುಂತಾದವರಿದ್ದರು. ಅವರಿಗೆ ಶಾಲೆಯಲ್ಲಿ ಶಾಂತಕವಿ, ಹುಯಿಲಗೋಳ ನಾರಾಯಣರಾಯರು ಮತ್ತು ಕಟ್ಟಿ ಮಧ್ವಾಚಾರ್ಯರಂತಹ ಕವಿ, ಸಾಹಿತಿಗಳು ಶಿಕ್ಷಕರಾಗಿದ್ದರು. ಅದರಿಂದ ಅವರಲ್ಲಿ ಸಾಹಿತ್ಯ, ಸಂಸ್ಕೃತಿ, ರಾಷ್ಟ್ರೀಯತೆ, ಕನ್ನಡ ಭಾಷಾಭಿಮಾನ ಸಹಜವಾಗಿ ಜೀವದ್ರವ್ಯವಾದವು. ಅವು ಅವರನ್ನು ರಾಷ್ಟ್ರಪ್ರೇಮಿಯಾಗಿ ರೂಪಿಸಿದವು.

    ಬೇಂದ್ರೆಯವರು ಮೆಟ್ರಿಕ್ ಪರೀಕ್ಷೆ ಮುಗಿಸಿ ಬಂದ ಸಂಜೆ ತಮ್ಮ ಕುಟುಂಬದ ಆಧಾರವಾಗಿದ್ದ ಅಜ್ಜಿಯನ್ನು ಕಳೆದುಕೊಂಡರು. ತಾಯಿ ಮತ್ತು ಮಕ್ಕಳು ದಿಕ್ಕು ತಪ್ಪಿದರು. ಆದರೆ ದೈವ ದೊಡ್ಡದು. ಅವರ ಚಿಕ್ಕಪ್ಪ ಬಂಡೋಪಂತ ಬೇಂದ್ರೆ ಪುಣೆಯಲ್ಲಿ ಉತ್ತಮ ಕೆಲಸದಲ್ಲಿ ದ್ದರು. ಅವರು ವಿಶಾಲ ಹೃದಯಿಗಳು. ಬೇಂದ್ರೆ ಪುಣೆಗೆ ಹೋಗಿ 1914ರಿಂದ 1918ರವರೆಗೆ ಫರ್ಗ್ಯುಸನ್ ಕಾಲೇಜಿನಲ್ಲಿ ಬಿ.ಎ. ಕಲಿತರು. ಬೇಂದ್ರೆಯವರು ಚಿಕ್ಕಂದಿನಲ್ಲಿ ಕಂಠಪಾಠ ಮಾಡಿದ್ದ ‘ಗಂಗಾಲಹರಿ’, ಲಕ್ಷ್ಮೀಶನ ನಾದ ಮಾಧುರ್ಯ ಮತ್ತು ಸರ್ವಜ್ಞನ ಬಿಚ್ಚುನುಡಿಗೆ ಪಕ್ಕಾಗಿದ್ದರು. ಪುಣೆಯ ವಾಸ್ತವ್ಯದಲ್ಲಿ ಕಾಳಿದಾಸನ ‘ಶಾಕುಂತಲ’, ಶಂಕರಾಚಾರ್ಯರ ‘ಸೌಂದರ್ಯಲಹರಿ’, ಜ್ಞಾನೇಶ್ವರರ ‘ಜ್ಞಾನೇಶ್ವರಿ’ ಅಭ್ಯಾಸ ಮಾಡಿದರು. ಶೇಕ್ಸ್​ಪಿಯರ್, ಶೆಲ್ಲಿ, ಕೀಟ್ಸ್, ಎಮರ್ಸನ್, ಮೆಟರ್​ಲಿಂಕರ ಆಂಗ್ಲ ಸಾಹಿತ್ಯವನ್ನು ಅಧ್ಯಯನ ಮಾಡಿದರು. 1917ರ ಮೇ ತಿಂಗಳ ಆರ್ಯ ಪತ್ರಿಕೆಯಲ್ಲಿ ಶ್ರೀ ಅರವಿಂದರು ಕೀಟ್ಸ್ ಕವಿಯ ಕಾವ್ಯ ವಿಮರ್ಶೆ ಮಾಡುತ್ತ, ಸೌಂದರ್ಯದ ನಾಲ್ಕು ನೆಲೆಗಳನ್ನು ಮುಟ್ಟಿದರೆ ಪೂರ್ಣತೆ ಬರುತ್ತದೆ ಎಂದಿದ್ದರು. ಪ್ರತಿಯೊಂದು ನುಡಿಯಲ್ಲಿ ಒಂದೊಂದು ನೆಲೆ, ನಾಲ್ಕು ನುಡಿಯಲ್ಲಿ ನಾಲ್ಕು ನೆಲೆ. ಅದನ್ನು ಬೇಂದ್ರೆಯವರು ನಾಲ್ಕು ಬಗೆಯ ತಿಳಿವಳಿಕೆ ಎಂದು ಅರ್ಥಮಾಡಿಕೊಂಡರು. ಅದನ್ನು ಚತುಮುಖ ಸೌಂದರ್ಯ ಎಂಬುದಾಗಿ ಸಿದ್ಧಪಡಿಸಿದರು.

    1. Sensuous Beauty- ಐಂದ್ರಯಿಕ ಸೌಂದರ್ಯ

    2. Imaginative Beauty- ಕಾಲ್ಪನಿಕ ಸೌಂದರ್ಯ

    3. Intellectual Beauty- ಬೌದ್ಧಿಕ ಸೌಂದರ್ಯ

    4. Ideal Beauty- ಆದರ್ಶ ಸೌಂದರ್ಯ

    ಬೇಂದ್ರೆಯವರು ಚತುಮುಖ ಸೌಂದರ್ಯ ಸಿದ್ಧಾಂತದಿಂದ ‘ಚಂದ್ರ’, ‘ಗಂಡುಸು ಹೆಂಗುಸಿಗೆ’, ‘ಚತುಮುಖ ಸೌಂದರ್ಯ’ ಮತ್ತು ‘ಹಂಪೀ-ವಿಜಯನಗರ ದರ್ಶನ’ ಎಂಬ ಕವನಗಳನ್ನು ರಚಿಸಿದರು. ಅವರ ಬಹುಪಾಲು ಕವನಗಳಲ್ಲಿ ಈ ಸಿದ್ಧಾಂತದ ಪ್ರಕಾಶವಿದೆ.

    ಅವರು 1918ರಲ್ಲಿ ಬಿ.ಎ. ಪಾಸು ಮಾಡಿದಾಗ ತಹಸೀಲ್ದಾರ್ ಕೆಲಸ ಸಿಗುತ್ತಿತ್ತು. ಆದರೆ ಬ್ರಿಟಿಷರ ಅಡಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಅವರು ತೀರ್ವನಿಸಿದರು. ಈ ನಾಡಿನ ವಿದ್ಯಾರ್ಥಿಗಳಲ್ಲಿ ವಿದ್ಯೆ, ವಿವೇಚನೆ, ಸಾಹಿತ್ಯಪ್ರೀತಿ, ಸಂಸ್ಕೃತಿ, ಹೋರಾಟ ಮನೋಭಾವವನ್ನುಂಟು ಮಾಡಲು ಶಾಲಾ ಶಿಕ್ಷಕರಾದರು. ದೇಶವು ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಹೊಂದಬೇಕು ಎಂದು ಹಂಬಲಿಸಿ ವಿದ್ಯಾರ್ಥಿಗಳನ್ನು, ಯುವಜನರನ್ನು ತಮ್ಮ ಕಾವ್ಯದಿಂದ ಜಾಗೃತಗೊಳಿಸಿದರು. ಆದರ್ಶ ವ್ಯಕ್ತಿಯಾಗಿ ಬಡತನದಲ್ಲಿ ಜೀವನ ನಡೆಸಿದರು.

    ಬೇಂದ್ರೆಯವರು 1919ರಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು. ಲಕ್ಷ್ಮೀಬಾಯಿಯವರು ‘ಸಖೀಗೀತ’ ಕಾವ್ಯದ ನಾಯಕಿಯಾಗಿ ಬೇಂದ್ರೆಯವರ ‘ನನಗೂ ನಿನಗೂ ಅಂಟಿದ ನಂಟಿನ | ಕೊನೆಬಲ್ಲವರಾರು ಕಾಮಾಕ್ಷಿಯೇ!’ ಎಂಬ ತಾತ್ವಿಕ ಚಿಂತನೆಗೆ ಕಾರಣರಾದರು. ಅವರ ದಾಂಪತ್ಯದ ಫಲವಾದ ಒಂಬತ್ತು ಮಕ್ಕಳಲ್ಲಿ ಉಳಿದವರು ಪುತ್ರರಾದ ಪಾಂಡುರಂಗ ಮತ್ತು ವಾಮನ ಹಾಗೂ ಪುತ್ರಿ ಮಂಗಳ. ಇಂದು ಮಂಗಳ ಮಾತ್ರ ಉಳಿದಿದ್ದು ಮಹಾರಾಷ್ಟ್ರದ ಔರಂಗಾಬಾದಿನಲ್ಲಿದ್ದಾರೆ. ಕಳೆದುಕೊಂಡ ಮಕ್ಕಳನ್ನು ಕುರಿತು ಬೇಂದ್ರೆಯವರು ರಚಿಸಿದ ‘ಹಾಡುಪಾಡು’ ‘ಕರುಳಿನ ವಚನಗಳು’ ಹಾಗೂ ಹಲವಾರು ಕವನಗಳು ಮನುಜನ ವಾತ್ಸಲ್ಯ ಅರಳಿದ ಲೋಕಗೀತಗಳಾಗಿವೆ.

    ***

    ಬೇಂದ್ರೆಯವರು ಕವಿ ರವೀಂದ್ರನಾಥ ಟ್ಯಾಗೋರ್, ಯೋಗಿ ಶ್ರೀ ಅರವಿಂದ, ಐರಿಫ್ ಕವಿ ಜಾರ್ಜ್​ರಸಲ್ (H.D), ಖಲೀಲ್ ಗಿಬ್ರಾನ್​ರನ್ನು ತನ್ನ ನಾಲ್ವರು ಗುರುಗಳೆಂದು ಕರೆದುಕೊಂಡಿದ್ದಾರೆ. ಮೊದಲ ಇಬ್ಬರು ಗುರುಗಳನ್ನು ಕುರಿತು ಹೀಗೆ ಹೇಳಿದ್ದಾರೆ.

    ‘ಅರಿವೆಂಬ ರವಿಯು ಮೂಡಲು ಗುರುವೆಂಬಾತ್ಮಾರವಿಂದ ವರಳಿತು ನನ್ನೋಳ್’ ‘ಗಾಂಧೀ, ಟ್ಯಾಗೋರ್, ಅರವಿಂದ- ಇವರು ದೊಡ್ಡ ಮನಸ್ಸಿನ ಮಹಾತ್ಮರು. ಗಾಂಧಿ ಬಯಲು, ರವೀಂದ್ರ ನಾಟಕರಂಗ, ಅರವಿಂದ ಸಮಾಧಿ- ಇವು ಸಾಧನ ಸೋಪಾನದ ತಪ್ಪಲು’ (ಸಾಹಿತ್ಯದ ವಿರಾಟ ಸ್ವರೂಪ-ಪು.121)

    1919ರ ‘ಸ್ವಧರ್ಮ’ ಪತ್ರಿಕೆಯಲ್ಲಿ ಪ್ರಕಟವಾದ ಬೇಂದೆ್ರಯವರ ‘ಬೆಳಗು’ ಕವನ ನೂತನ ಛಂದಃ ಪ್ರಯೋಗದಿಂದ ಕೂಡಿ ಹೊಸ ಕಾವ್ಯದ ಉದಯವನ್ನು ಕನ್ನಡದಲ್ಲಿ ಉಂಟುಮಾಡಿತು. ಆ ಹೊಸತು ಜನಕ್ಕೆ ಮೆಚ್ಚುಗೆ ಆಗುವುದೋ ಇಲ್ಲವೋ ಎಂದು ‘ಸದಾನಂದ ಜಂಗಮ’ ಎಂಬ ಕಾವ್ಯನಾಮದಲ್ಲಿ ಅದನ್ನು ಬರೆದಿದ್ದರು. ನಂತರ ಅವರು ‘ತುತೂರಿ’ ಮತ್ತು ‘ಸರಸ್ವತಿ’ ಕವನಗಳಲ್ಲಿಯ ‘ಅಂಬಿಕಾತನಯದತ್ತ’ ರಾಗಿಯೇ ಕನ್ನಡದಲ್ಲಿ ಮೆರೆದರು. ‘ಜೀವನವು ರಸಮಯ’ಎಂಬ ದೀಕ್ಷೆ ಕೊಡಲು ಅಂಬಿಕಾತನಯ ಹೆಣಗಾಡುತ್ತಾನೆ. ‘ಬೇಂದ್ರೆ ಪ್ರಕೃತಿಯಲ್ಲಿ’ ಎಂಬ ಅವರ ನುಡಿಯಲ್ಲಿ ವ್ಯಕ್ತಿ, ಬೇಂದ್ರೆ, ಕವಿ ಅಂಬಿಕಾತನಯನಿಂದ ಮಾಗಿ ಹದಗೊಂಡಿದ್ದರ ಸೂಕ್ಷ್ಮತೆ ಇದೆ.

    ಹದಾ ಒಳಗ ಇಲ್ದ ತಮ್ಮಾ!/ಪದ ಹೊರಗ ಬರೂದಿಲ್ಲಾ/ ಕದಾ ತೆರ್ಯೊದಿಲ್ಲಾ ಅಂತಃಕರಣಾ/ (ಮರ್ಯಾದೆ)

    ಬೇಂದ್ರೆಯವರದು ಸ್ವತಂತ್ರ ಪ್ರವೃತ್ತಿಯ, ನಿಷ್ಠುರ ಜೀವನಶೈಲಿ ಯಾಗಿತ್ತು. ಹಾಗಾಗಿ ಅವರು ಹಲವಾರು ಶಾಲೆಗಳಲ್ಲಿ ತಾತ್ಕಾಲಿಕವಾಗಿ ದುಡಿಯಬೇಕಾಯಿತು. 1923ರಲ್ಲಿ ಅವರು ‘ಗೆಳೆಯರ ಗುಂಪು’ ಕಟ್ಟಿ ಸಾಹಿತ್ಯ ಸೃಷ್ಟಿ, ಸಾಹಿತ್ಯ ಪ್ರಸಾರ ಮಾಡಿದರು. ‘ಜಯಕರ್ನಾಟಕ’ ಪತ್ರಿಕೆ ಸಂಪಾದಕರಾಗಿ ಸಾಹಿತ್ಯಾಸಕ್ತಿಯನ್ನು ಕನ್ನಡಿಗರಲ್ಲಿ ಬೆಳೆಸಿ ದರು. 1925ರಲ್ಲಿ ‘ಗೆಳೆಯರ ಗುಂಪು’ ನಾಡಹಬ್ಬವನ್ನು ಆಚರಿಸಿ ಅದರ ನಾಂದಿ ಹಾಡಿತು. ಅದು ‘ಅಖಂಡ ಕರ್ನಾಟಕ ಕಲ್ಪನೆ’ ಕನ್ನಡಿಗರಲ್ಲಿ ಮೂಡುವಂತೆ ಮಾಡಿತು. ಅವರು ಸಾಹಿತ್ಯದ ಆದರ್ಶದಡಿಯಲ್ಲಿ ವೈಯಕ್ತಿಕ ಸಂಸಾರದ ಸುಖ-ದುಃಖಕ್ಕೆ ಜಾಣಕಿವುಡಾದರು.

    1922ರಲ್ಲಿ ಅವರ ‘ಕೃಷ್ಣಾಕುಮಾರಿ’ ಷಟ್ಟದಿ ಕಾವ್ಯ ಪ್ರಕಟವಾಯಿತು. 1932ರಲ್ಲಿ ಅವರ ಪ್ರಥಮ ಕವನ ಸಂಕಲನ ‘ಗರಿ’ಯನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಕಟಿಸಿದರು. ಆ ಸಂಗ್ರಹದೊಳಗಿನ ಸ್ವಾತಂತ್ರ ್ಯ ಸ್ಪೂರ್ತಿಯ ‘ನರಬಲಿ’ ಕವನ ಅವರನ್ನು ಜೈಲಿಗೆ ಕಳಿಸಿತು. ಬ್ರಿಟಿಷ್ ಸರ್ಕಾರ ಅವರನ್ನು ಮೂರು ತಿಂಗಳು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿಯೂ, ಒಂಬತ್ತು ತಿಂಗಳು ಧಾರವಾಡ ಹತ್ತಿರ ಮುಗದ ಎಂಬ ಹಳ್ಳಿಯಲ್ಲಿ ನಜರ್​ಬಂಧಿ ಶಿಕ್ಷೆಯಲ್ಲಿಯೂ ಇಟ್ಟಿತು. 1933ರಲ್ಲಿ ಬಿಡುಗಡೆಯಾದಾಗ ಯಾರೂ ಕೆಲಸಕ್ಕೆ ತೆಗೆದುಕೊಳ್ಳಬಾರದೆಂದು ಸರ್ಕಾರದ ಆದೇಶವಿದ್ದ ಕಾರಣ ಎಂ.ಎ. ಅಭ್ಯಾಸಕ್ಕಾಗಿ ಪುಣೆಗೆ ಹೋದರು. 1935ರಲ್ಲಿ ಎಂ.ಎ. ಪಾಸಾದರು. ಆದರೆ ವಿಧಿಯ ಆಟದಂತೆ ಆಶ್ರಯದಾತ ಚಿಕ್ಕಪ್ಪನನ್ನು ಕಳೆದುಕೊಂಡರು.

    1936ರಿಂದ 1944ರವರೆಗೆ ಸ್ಥಿರವಾದ ನೌಕರಿ ಇಲ್ಲದೆ ಅಲೆ ದಾಡಿದರು. ಆ ಅವಧಿಯಲ್ಲಿ ವಿಶಾಲಹೃದಯಿ ಮಾಸ್ತಿಯವರು ಬೇಂದ್ರೆಯವರನ್ನು ತಮ್ಮನಂತೆ ನೋಡಿ ಕೊಂಡರು. ಬೇಂದ್ರೆಯವರನ್ನು ‘ಜೀವನ’ ಪತ್ರಿಕೆಯ ಸಂಪಾದಕ ರನ್ನಾಗಿ ನೇಮಿಸಿದರು. ಆ ಸಂಕೀರ್ಣ ಮನಸ್ಥಿತಿ ಯಲ್ಲಿ ‘ಮೂರ್ತಿ ಮತ್ತು ಕಾಮ ಕಸ್ತೂರಿ’ (1934), ಸಖೀಗೀತ(1937), ಉಯ್ಯಾಲೆ(1938), ನಾದಲೀಲೆ(1938) ಕವನ ಸಂಕಲನಗಳು ಹಾಗೂ ಕಾಳಿದಾಸನ ಮೇಘದೂತಮ್ ಕನ್ನಡ ಅನುವಾದ ‘ಕನ್ನಡ ಮೇಘದೂತ’(1938) ರಚಿಸಿ ದರು. ಆ ಅವಧಿಯ ಕಾವ್ಯವೆಲ್ಲವೂ ಅತಿ ಸ್ವಾಭಾವಿಕವಾಗಿ ಕವಿ ಜೀವನದಿಂದ ಹಸಿಹಸಿಯಾಗಿ ಹೊಮ್ಮಿಬಂದ ಚಿಗುರಿನಂತಿವೆ. ಅವರು ಕಾಯಂ ಕೆಲಸವಾಗಿ 1944 ರಿಂದ 1956ರವರೆಗೆ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ದುಡಿದರು. ಅವರು ‘ಈ ಕಾಲ ನನ್ನ ಜೀವನದಲ್ಲಿ ಒಂದು ಬಗೆಯ ಸುಖ-ದುಃಖದ ಉತ್ಕಟತೆಯ ಕಾಲ.1944ರಲ್ಲಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಒಬ್ಬ ಹಿರಿಯ ಮಗ ರಾಮಚಂದ್ರನನ್ನು, ಮನೆಗೆ ಮುದ್ದಾಗಿದ್ದ ಆನಂದ ಎಂಬ ಚಿಕ್ಕಮಗನನ್ನೂ ಎಂಟೇದಿನಗಳ ಅಂತರದಲ್ಲಿ ಕಳೆದುಕೊಂಡೆ’ (ಸಾಹಿತ್ಯದ ವಿರಾಟ ಸ್ವರೂಪ- ಪುಟ 83) ಎಂದು ದುಃಖಿಸಿದ್ದಾರೆ. ಅದು ‘ಹಾಡು-ಪಾಡು’ ಕಾವ್ಯವಾಗಿದೆ. ಇದು, ‘ಸಖೀಗೀತ’, ‘ಬಾಲ್ಯಕಾಂಡ’ ಅವರ ಆತ್ಮಕಥನವಾಗಿ ಕಾವ್ಯ ಲಹರಿಯಲ್ಲಿ ಪ್ರಕಟಗೊಂಡಿವೆ.

    ಬೇಂದ್ರೆಯವರ ಜೀವನಾನುಭವವೇ ಕಾವ್ಯವಾಗಿ ಹರಿದು 1427 ಕ್ಕೂ ಹೆಚ್ಚು ಕವನಗಳಲ್ಲಿ ಅವು ಸಹೃದಯರ ಆಪ್ತ ದೀಪ್ತಿಯಾಗಿವೆ. ‘ರಸವೆ ಜನನ/ವಿರಸ ಮರಣ/ಸಮರಸವೇ ಜೀವನ’.

    ‘ದುಃಖದ ಬೇನೆ ತಿನ್ನದೆ, ಸುಖವನ್ನು ಪಡೆದವರಿಲ್ಲ’ ‘ದುಃಖ ಸುಲಿದು ಸುಖವುಣ್ಣಬೇಕು’./ ಹುಸಿನಗುತ ಬಂದೇವ ನಸುನಗುತ ಬಾಳೋಣ/ ತುಸುನಗುತ ತೆರಳೋಣ,/ ಬಡನೂರು ವರುಷಾನ ಹರುಷಾದಿ ಕಳೆಯೋಣ/ ಯಾಕಾರೆ ಕೆರಳೋಣ!’ (ಗರಿ)

    ಅವರು 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. 1959ರಲ್ಲಿ ‘ಅರಳು ಮರಳು’ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1974ರಲ್ಲಿ ‘ನಾಕುತಂತಿ’ ಕವನ ಸಂಗ್ರಹಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ‘ನಾಕುತಂತಿ’ಯಲ್ಲಿರುವ ‘ನಾನು’ ಅಹಂ, ‘ನೀನು’ ದೇಹ, ‘ತಾನು’ ಆತ್ಮ, ‘ಆನು’ ಪರಮಾತ್ಮ. ‘ನಾನು’ ಮತ್ತು ‘ನೀನು’ವನ್ನು ವರ್ಜಿಸಿಕೊಂಡು, ‘ತಾನು’ ಎಂಬ ಆತ್ಮನಿಂದ ‘ಆನು’ ಎಂಬ ಪರಮಾತ್ಮನನ್ನು ಕಾಣುವುದೇ ‘ನಾಕುತಂತಿ’. ಅದು ಕನ್ನಡದ ‘ನಾಕುತಂತಿ’. ವಿಶ್ವದ ನೆಲೆಗೆ ಕೊಂಡೊಯ್ಯುವ ಶಾಂತಿಸಾಧಕ ಮಂತ್ರ. ಅದು ‘ಅಂಬಿಕಾತನಯದತ್ತ’ನ ತಪಸ್ಸಿನ ಫಲ.

    ‘ನಾನು’, ನೀನು’/ ‘ಆ ನು’ ‘ತಾನು’/ ನಾಕೇ ನಾಕು ತಂತಿ.

    ಸೊಲ್ಲಿಸಿದರು,/ ನಿಲ್ಲಿಸಿದರು./ ಓಂ ದಂತಿ!

    (ಲೇಖಕರು ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts