More

    ಸ್ಥಾಯಿ ಸಮಿತಿ ಚುನಾವಣೆ ಇಂದು; 4ನೇ ಬಾರಿಯಾದರೂ ನಡೆಯುವ ವಿಶ್ವಾಸ, ಬಿಬಿಎಂಪಿ ಸುತ್ತ ನಿಷೇಧಾಜ್ಞೆ

    ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ಶನಿವಾರ (ಜ. 18) ನಿಗದಿಯಾಗಿದೆ. ಮೂರು ಬಾರಿ ಮುಂದೂಡಿಕೆಯಾಗಿದ್ದ ಪ್ರಕ್ರಿಯೆ ನಾಲ್ಕನೇ ಬಾರಿ ನಡೆಯುವ ಲಕ್ಷಣ ಗೋಚರಿಸಿದೆ.

    4 ತಿಂಗಳಿಂದ ಖಾಲಿಯಿರುವ ಸ್ಥಾನಗಳಿಗೆ ವಿವಿಧ ಕಾರಣಗಳಿಂದ ಚುನಾವಣೆ ನಡೆದಿಲ್ಲ. ಶನಿವಾರ ಬೆಳಗ್ಗೆ 11.30ಕ್ಕೆ ಚುನಾವಣೆ ನಿಗದಿಯಾಗಿ ರುವುದರಿಂದ ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿವೆ.

    ಬೆಳಗ್ಗೆ 8ರಿಂದ 9.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ನಂತರ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್ ನೇತೃತ್ವದಲ್ಲಿ ಕೆಂಪೇಗೌಡ ಪೌರಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಪಾಲಿಕೆ ಕೇಂದ್ರ ಕಚೇರಿ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಮೇಯರ್ ಚುನಾವಣೆ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಿಗದಿಯಾಗಿತ್ತು. ಆದರೆ, ಸ್ಥಾಯಿ ಸಮಿತಿ ಸದಸ್ಯರ ಅಧಿಕಾರಾವಧಿ ಮುಗಿದಿಲ್ಲ ಎಂಬ ಕಾರಣಕ್ಕೆ ಕೆಲ ಸ್ಥಾಯಿ ಸಮಿತಿ ಸದಸ್ಯರು ಚುನಾವಣೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಚುನಾವಣೆಗೆ ತಡೆ ನೀಡಿತ್ತು. ಅವಧಿ ಮುಗಿದ ಬಳಿಕ ಅ.1ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಕೋರಂ ಕೊರತೆಯಿಂದ ಮುಂದೂಡಲಾಗಿತ್ತು. ವಿಧಾನಸಭೆ ಉಪಚುನಾವಣೆ ನೆಪವೊಡ್ಡಿ ಡಿ.4ರ ಚುನಾವಣೆಯಿಂದ ಹಾಗೂ ಡಿ.30ಕ್ಕೆ ನಿಗದಿಯಾಗಿದ್ದ ಚುನಾವಣೆಗೆ ಪೇಜಾವರ ಶ್ರೀ ವಿಶ್ವೇಶತೀರ್ಥರ ನಿಧನದ ನೆಪ ಹೇಳಿ ಹೊರಗುಳಿಯಲಾಯಿತು. ಯಾವುದೇ ಪಕ್ಷದ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣಕ್ಕೆ ಚುನಾವಣೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿತ್ತು.

    ಯಾವ್ಯಾವ ಸದಸ್ಯರನ್ನು ಸ್ಥಾಯಿ ಸಮಿತಿಗಳ ಚುನಾವಣೆಗೆ ಕಣಕ್ಕಿಳಿಸಬೇಕು, ಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂಬುದು ನಿರ್ಧಾರವಾಗಿದೆ. ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಿದ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರಿಗೆ ಯಾವ ಸ್ಥಾಯಿ ಸಮಿತಿಗಳಲ್ಲಿ ಸ್ಥಾನ ನೀಡಬೇಕೆಂಬ ಬಗ್ಗೆ ರ್ಚಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಹಾಗಾಗಿ ಶನಿವಾರ ಬೆಳಗ್ಗೆ ನಮ್ಮ ಪಕ್ಷದ ಸದಸ್ಯರು ಎಲ್ಲ ಸ್ಥಾಯಿ ಸಮಿತಿಗಳಿಗೂ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಆಡಳಿತ ಪಕ್ಷದ ನಾಯಕ ಮುನೇಂದ್ರಕುಮಾರ್ ತಿಳಿಸಿದ್ದಾರೆ.

    ತಡೆ ನೀಡಲು ನಕಾರ

    ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಶನಿವಾರ ನಡೆಯಲಿರುವ ಚುನಾವಣೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಚುನಾವಣೆ ಮುಂದೂಡುವಂತೆ ಕೋರಿ ಹಾಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಇಮ್ರಾನ್ ಪಾಷಾ, ಹಾಗೂ ಸೌಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ, ಸ್ಥಾಯಿ ಸಮಿತಿ

    ಚುನಾವಣೆಗೆ ತಡೆ ನೀಡಲು ನಿರಾಕರಿಸಿತು.ಇದೇ ವೇಳೆ, 18 ಪಾಲಿಕೆ ಸದಸ್ಯರ ಅನರ್ಹತೆ ದೂರು ಬಾಕಿ ಇರುವ ಹಿನ್ನೆಲೆಯಲ್ಲಿ ಆ ಸದಸ್ಯರು ಗೌಪ್ಯ ಮತದಾನ ಮಾಡಲು ಬಯಸಿದರೆ ವ್ಯವಸ್ಥೆ ಕಲ್ಪಿಸಬೇಕು. ಮತ ಎಣಿಕೆ ಮಾಡಿ ಫಲಿತಾಂಶವನ್ನು ಪ್ರಕಟಿಸಬಹುದು, ಆದರೆ ಅವರ ಮತಗಳನ್ನು ಮತ್ತೆ ಮತಪೆಟ್ಟಿಗೆಗೆ ಹಾಕಿ ಕೋರ್ಟ್​ಗೆ ಸಲ್ಲಿಸಬೇಕು ಎಂದು ಆದೇಶಿ ಸಿತು. ಬಿಬಿಎಂಪಿ ಪ್ರಾದೇಶಿಕ ಆಯುಕ್ತರು ಹಾಗೂ 18 ಸದಸ್ಯರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts