More

    ತಂಬಾಕು ಕೊನೆಗಾಣಿಸೀತು ಬದುಕು

    ಬೆಳಗಾವಿ: ಕೋವಿಡ್-19 ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಅದೇ ಇಲಾಖೆಯ ಅಂಗವಾಗಿರುವ ‘ತಂಬಾಕು ನಿಯಂತ್ರಣ ಕೋಶ’ ಮಾತ್ರ ಕರ್ತವ್ಯ ಮರೆತು ಕೇವಲ ಜಾಗೃತಿಗೆ ಸೀಮಿತಗೊಂಡಿದೆ. ಈ ಕೋಶದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವೈದ್ಯಕೀಯ ಸೇನಾನಿಗಳು ಸದ್ಯ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವ ಅಧಿಕಾರ ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗೆ (ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ) ಇದೆ. ರಾಜ್ಯಾದ್ಯಂತ ಯಾವುದೇ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಈ ಮೂರೂ ಇಲಾಖೆ ದಂಡ ವಿಧಿಸಿದ್ದು ಮಾತ್ರ ತೀರ ಕಡಿಮೆ.

    ಕರೊನಾ ವೈರಸ್ ಕೆಮ್ಮು, ಸೀನು ಹಾಗೂ ಸೋಂಕಿತರ ಎಂಜಲಿನಿಂದಲೂ ಹರಡುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಆರೋಗ್ಯ ಇಲಾಖೆ ಈಗಾಗಲೇ ನಿಷೇಧಿಸಿದೆ. ನೂತನ ಕಾನೂನು ಜಾರಿಯಾದಾಗಿನಿಂದ ಲಾಕ್‌ಡೌನ್ ಸಡಿಲಿಕೆ ಆಗುವವರೆಗೂ ನಿಯಮ ಉಲ್ಲಂಘಿಸಿದವರ ವಿರುದ್ಧ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಹಾಗೂ ಗದಗ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೊಲೀಸರೇ ದಂಡ ವಿಧಿಸಿದ್ದಾರೆ.

    ಅವರದ್ದೇ ಕರ್ತವ್ಯ: ಲಾಕ್‌ಡೌನ್ ಸಡಿಲಿಕೆಯಿಂದ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಅಪರಾಧ ತಡೆ ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವತ್ತ ಪೊಲೀಸರು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲೆಂದೆರಲ್ಲಿ ಉಗಿಯುವವರ ವಿರುದ್ಧ ಪಾಲಿಕೆ ಹಾಗೂ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳೇ ಕಾನೂನು ಕ್ರಮ ಜರುಗಿಸಬೇಕು. ಗಮನಕ್ಕೆ ಬಂದರೆ ನಾವೂ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್.

    ಅನುಷ್ಠಾನ ಅಷ್ಟಕ್ಕಷ್ಟೇ!: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿ ದವರ ವಿರುದ್ಧ ಐಪಿಸಿ ಸೆಕ್ಷನ್ 188, 268, 269, 270ರ ಅನ್ವಯ 6 ತಿಂಗಳು ಸಾದಾ ಸಜೆಯಿಂದ ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಈವರೆಗೂ ರಾಜ್ಯದ ಯಾವುದೇ ಜಿಲ್ಲೆಯಲ್ಲಿಯೂ ಕಾನೂನು ಕ್ರಮ ಕೈಗೊಂಡ ಕುರಿತು ವರದಿಯಾಗಿಲ್ಲ.

    ಆಯಾ ಜಿಲ್ಲೆಯಲ್ಲಿರುವ ತಂಬಾಕು ನಿಯಂತ್ರಣ ಕೋಶವು (ಕೋಟ್ಪಾ) ಅನುಷ್ಠಾನದ ಹೊಣೆ ಹೊತ್ತಿದೆ. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 2-3 ತಿಂಗಳಿನಿಂದ ಇಂತಹ ಪ್ರಕರಣಗಳ ವಿರುದ್ಧ ಕ್ರಮ ಜರುಗಿಸಿರುವ ಬಗ್ಗೆ ನಮಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ ಬೆಳಗಾವಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು.

    ಶಂಕಿತರ ಎಂಜಲು ಹರಿಯುವ ನೀರಲ್ಲಿ?

    ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಮನೆ ಅಂಗಳ ದಲ್ಲಿ ಉಗಿದರೆ ಅದು ಮಳೆ ನೀರಿನೊಂದಿಗೆ ಸೇರಿ ರಸ್ತೆ ಮೂಲಕ ನದಿ, ಹಳ್ಳ-ಕೊಳ್ಳ ಸೇರುವ ಸಾಧ್ಯತೆ ಇದೆ. ರಸ್ತೆ ಮೇಲೆ ಸಂಚರಿಸುವ ಪಾದಚಾರಿಗಳು, ಬೈಕ್ ಹಾಗೂ ಇನ್ನಿತರ ವಾಹನಗಳಿಗೆ ಅದೇ ವೈರಾಣು ಇರುವ ನೀರು ತಗುಲಿ ವೈರಸ್ ಬರಬಹುದೆಂದು ವೈದ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗಿಯುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ನಿಯಮ ಉಲ್ಲಂಘಿಸುವವರು ಬಹುತೇಕರುಬಡವರಾಗಿರುತ್ತಾರೆ. ಹೀಗಾಗಿ, ದಂಡ ವಿಧಿಸಿಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

    ನಾವು ಸ್ವಯಂ ಪ್ರೇರಣೆಯಿಂದ ರಸ್ತೆಯ ಮೇಲೆ ಉಗಿಯುವುದನ್ನು ನಿಲ್ಲಿಸಿದ್ದೇವೆ. ಲಾಕ್‌ಡೌನ್ ಇದ್ದಾಗ ತಂಬಾಕು ಉತ್ಪನ್ನ, ಸಿಗರೇಟ್ ಹಾಗೂ ಪಾನ್‌ಮಸಾಲಾ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಆಗ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಅದು ಇಂದಿಗೂ ಮುಂದುವರಿದಿದೆ. ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು.
    | ಈರಣ್ಣ ಬಡಿಗೇರ , ಷರೀಪಸಾಬ್ ನಧಾಪ್, ಸಾರ್ವಜನಿಕರು

    ಎರಡು ಮೂರು ತಿಂಗಳಿಂದ ಯಾವುದೇ ದಾಳಿ ಅಥವಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ನಾನು ಸದ್ಯ ಕರೊನಾ ವೈರಸ್‌ಗೆ ಸಂಬಂಧಿಸಿದ ಕರ್ತವ್ಯದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ತುರ್ತು ಕ್ರಮ ಕೈಗೊಳ್ಳಲಾಗುವುದು.
    | ಡಾ.ಬಿ.ಎನ್.ತುಕ್ಕಾರ ಜಿಲ್ಲಾ ಸರ್ವೇಕ್ಷಣಾಧಿಕಾರಿ, ತಂಬಾಕು ನಿಯಂತ್ರಣ ಕೋಶ, ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts