More

    ಮತದ ಲಾಭಕ್ಕಾಗಿ ಸಮಾಜ ವಿದ್ರೋಹಿಗಳಿಗೆಕಾಂಗ್ರೆಸ್ ಕುಮ್ಮಕ್ಕು: ಆರಗ ಜ್ಞಾನೇಂದ್ರ

    ಬೆಂಗಳೂರು:
    ಮತಪಡೆಯಬೇಕು ಎನ್ನುವ ಕಾರಣಕ್ಕಾಗಿ ಸಮಾಜ ವಿದ್ರೋಹಿಗಳಿಗೆ ಕುಮ್ಮಕ್ಕು ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
    ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದಲ್ಲಿ ರಾಗಿಗುಡ್ಡದ ಪ್ರಕರಣಕ್ಕೆ ಸರ್ಕಾರದ ವೈಪಲ್ಯವೇ ಕಾರಣ ಎಂದರು.
    ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಲ್ಪಸಂಖ್ಯಾತರನ್ನು ಒಲೈಕೆ ಮಾಡಿಕೊಳ್ಳಲು ಹಲವು ಗಂಭೀರ ಪ್ರಕರಣಗಳನ್ನು ಹಿಂಪಡೆಯಲು ಹೊರಟಿದ್ದಾರೆ. ಇಂಥಹ ನಿರ್ಣಯಗಳಿಂದ ಮತಾಂಧರಿಗೆ ಪ್ರೋತ್ಸಾಹ ಸಿಕ್ಕಿದಂತಲ್ಲವೇ ಎಂದು ಪ್ರಶ್ನಿಸಿದರು.
    ಮುಸ್ಲಿಮರಲ್ಲಿ ಎಲ್ಲವರೂ ಕೆಟ್ಟವರಲ್ಲ. ಹಾಗೆ ಹಿಂದೂಗಳಲ್ಲಿ ಎಲ್ಲರೂ ಒಳ್ಳೆಯವರೆಂದು ಹೇಳುವುದಿಲ್ಲ. ಆದರೆ ಹಿಂದೂ ಮತ್ತು ಮುಸ್ಲಿಮರ ನಡುವಿನ ಅಂತರ ಹೆಚ್ಚಲು ಸರ್ಕಾರದ ಧೋರಣೆಯೂ ಕಾರಣವಾಗಿದೆ ಎಂದರು.
    ರಾಗಿಗುಡ್ಡದಲ್ಲಿ ಹಿಂದೂ ಕುಟುಂಬಗಳನ್ನು ಹುಡುಕಿ ಹಲ್ಲೆ ಮಾಡಿದ್ದಾರೆ. ಹೆಣ್ಣುಮಕ್ಕಳ ಜೊತೆ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಹೊರಗೆ ಬಂದರೆ ಏನ್ಮಾಡ್ತೀವಿ ಗೊತ್ತಾ? ಎಂದು ಬೆದರಿಸಿದ್ದಾರೆ.
    ಹಿಂದೂಗಳ ವಾಹನವನ್ನಷ್ಟೇ ಹಾನಿಗೀಡು ಮಾಡಿ, ಪಕ್ಕದಲ್ಲೇ ಇದ್ದ ಮುಸ್ಲಿಮರ ವಾಹನಗಳಿಗೆ ಏನೂ ಮಾಡಿಲ್ಲ. ಇದು ಏನನ್ನು ತೋರಿಸುತ್ತದೆ? ನೀವ್ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಳಿದರು.
    ಹಿಂದೂ ಸೈನಿಕನ ಎದೆ ಮೇಲೆ ಕಾಲಿಟ್ಟು ಭರ್ಚಿಯಿಂದ ಇರಿಯುವ ಟಿಪ್ಪುವಿನ ಚಿತ್ರ, ಔರಂಗಜೇಬನ ಚಿತ್ರ ಯಾಕೆ ಹಾಕಬೇಕಿತ್ತೇ? ಈ ರೀತಿ ಪ್ರಚೋದನೆಗೆ ಆಸ್ಪದ ಕೊಡಬಾರದಿತ್ತು. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯವೂ ಇರಲಿಲ್ಲ. ಕಲ್ಲೆಸೆತದಿಂದ ಗಾಯಗೊಂಡವರು, ಅಮಾಯಕ ಹಿಂದೂಗಳನ್ನು ಕರೆದೊಯ್ದು ಕೇಸು ಹಾಕಿದ್ದಾರೆ ಎಂದರು.
    ಹಿಂದೂ ಮುಸ್ಲಿಮರು ಸೌಹಾರ್ಧಯುತವಾಗಿರಲು ಸರ್ಕಾರ ಪ್ರಯತ್ನಿಸಬೇಕಿತ್ತು. ಸ್ಥಳಕ್ಕೆ ಗೃಹ ಸಚಿವರು ತೆರಳಿ ಜನರಲ್ಲಿ ವಿಶ್ವಾಸ ಮೂಡಿಸಬೇಕಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಸರ್ಕಾರ ಪ್ರಾಮಾಣಿಕವಾಗಿ ಮಾಡಬೇಕಿತ್ತು ಎಂದರು.
    ಯಾರು ತಮ್ಮ ಚಟಕ್ಕೆ ಹಿಂದೂ ಮುಸ್ಲಿಮರ ನಡುವೆ ಗೋಡೆ ಕಟ್ಟುತ್ತಿದ್ದಾರೆಂದು ದೇಶದ ಜನರಿಗೆ ಗೊತ್ತಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಒಂದೂವರೆ ಸಾವಿರಕ್ಕಿಂತ ಹೆಚ್ಚು ಜನರು ಬಂದಿದ್ದರು. ಒಂದು ದೇವಸ್ಥಾನವನ್ನು ಜಖಂಗೊಳಿಸಿದ್ದರು. ಇಂಥ ಸಂದರ್ಭದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್ ಅಂಥ ಆರೋಪಿಗಳ ಮೇಲಿನ ಮೊಕದ್ದಮೆ ವಾಪಸ್ ಪಡೆಯಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.
    ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ನಾವೆಲ್ಲ ಶಿವಮೊಗ್ಗದ ಗಲಭೆ ಘಟನೆ ವೀಕ್ಷಿಸಿ, ವಾಸ್ತವ ತಿಳಿದುಬಂದಿದ್ದೇವೆ ಎಂದು ವಿವರಣೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts