More

    ಜೀತದಿಂದ ಮುಕ್ತಗೊಳಿಸಲು ಒತ್ತಾಯ

    ಬೆಳಗಾವಿ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಾಲೀಕರ ಬಳಿ ಅನೇಕ ಜೀತದಾಳುಗಳು ಬಂಧಿಯಾಗಿದ್ದು, ಅವರನ್ನು ಬಿಡುಗಡೆಗೊಳಿಸಿ ಪರಿಹಾರ ನೀಡುವಂತೆ ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕೂಲಿಕಾರ್ಮಿಕರ ಒಕ್ಕೂಟದ ಕಾರ್ಯಕರ್ತರು ಡಿಸಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿ, ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

    ಬೈಲಹೊಂಗಲ ತಾಲೂಕಿನಲ್ಲಿ 245, ಚನ್ನಮ್ಮ ಕಿತ್ತೂರ 100, ರಾಮದುರ್ಗ 345, ಸವದತ್ತಿ 80, ಗೋಕಾಕ 90, ಚಿಕ್ಕೋಡಿ 80, ರಾಯಬಾಗ 150, ಅಥಣಿ 135 ಸೇರಿ ಒಟ್ಟು 1,225 ಜೀತದಾಳುಗಳು ಬಿಡುಗಡೆಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಜಿ ಸಲ್ಲಿಸಿದ ಜೀತದಾಳುಗಳಿಗೆ ಇನ್ನೂ ಬಿಡುಗಡೆ ಪತ್ರ ನೀಡಿಲ್ಲ ಎಂದು ದೂರಿದರು.

    ಮೂರು ವರ್ಷದ ಹಿಂದೆ 123 ಜನರನ್ನು ಜೀತದಿಂದ ಬಿಡುಗಡೆಗೊಳಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ವ್ಯಕ್ತಿಗೆ ಪರಿಹಾರ ಹಾಗೂ ಪುನರ್ವಸತಿ ನೀಡಿಲ್ಲ. ಈ ಸಂಬಂಧ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ಅರ್ಜಿ ಪರಿಶೀಲಿಸಿ, ಬಿಡುಗಡೆಗೊಳಿಸಬೇಕು. ಪ್ರತಿ ಜೀತದಾಳುವಿಗೆ ಐದು ಎಕರೆ ಜಮೀನು ನೀಡಬೇಕು. ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು.

    ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಪ್ರತಿ ಜೀತದಾಳಿಗೆ ಒದಗಿಸಬೇಕು. ಜೀತ ಜಾಗೃತ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲೇಬೇಕು ಎಂದು ಧರಣಿ ನಿರತ ಪದಾಧಿಕಾರಿಗಳು ಒತ್ತಾಯಿಸಿದರು. ಲಕ್ಕಪ್ಪ ಜಕ್ಕಣ್ಣವರ, ರುದ್ರಪ್ಪ ಮುಂದಿನಮನಿ, ಕೃಷ್ಣ ಸಾಲಿಮನಿ, ಶಿವಗಂಗಮ್ಮ ಗಡ್ಡದವರ ಹಾಗೂ ಕರ್ನಾಟಕ ಜೀತದಾಳು ಮತ್ತು ಕೃಷಿ ಕೂಲಿ ಕಾರ್ಮಿಕರ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts