More

    ವಾರಾಂತ್ಯದ ಲಾಕ್​ಡೌನ್ ಮತ್ತಷ್ಟು ಬಿಗಿ

    ಕಾರವಾರ: ಉತ್ತರ ಕನ್ನಡ ಜಿಲ್ಲಾದ್ಯಂತ ವೀಕೆಂಡ್ ಲಾಕ್​ಡೌನ್ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ತಿಳಿಸಿದರು.
    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರ, ದಾಂಡೇಲಿ ನಗರಸಭೆ, ಹಳಿಯಾಳ ಪುರಸಭೆ ವ್ಯಾಪ್ತಿಯನ್ನು ಹಾಗೂ 38 ಗ್ರಾಪಂಗಳನ್ನು ಈ ಹಿಂದೆಯೇ ಕಂಟೇನ್ಮೆಂಟ್ ವಲಯ ಎಂದು ಘೊಷಿಸಿ, ಬೆಳಗ್ಗೆ ಅಗತ್ಯ ವಸ್ತು ಖರೀದಿ, ಹೋಟೆಲ್​ನಲ್ಲಿ ಪಾರ್ಸೆಲ್ ವಿತರಣೆಯನ್ನೂ ಬಂದ್ ಮಾಡಲಾಗಿದೆ. ಹಾಲು, ದಿನಸಿ, ಮೀನು, ತರಕಾರಿ, ಹಣ್ಣುಗಳ ಮನೆ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಗುರುವಾರದಿಂದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಪಟ್ಟಣ ವ್ಯಾಪ್ತಿ ಹಾಗೂ ಹೆಚ್ಚುವರಿಯಾಗಿ 19 ಗ್ರಾಪಂಗಳನ್ನು ಕಂಟೇನ್ಮೆಂಟ್ ವಲಯ ಎಂದು ಪರಿಗಣಿಸಿದ್ದು, ಅಲ್ಲಿಯೂ ಮುಂದಿನ ಆದೇಶದವರೆಗೂ ಅದೇ ನಿಯಮ ಜಾರಿ ಮಾಡಲಾಗುವುದು. ಕಂಟೇನ್ಮೆಂಟ್ ವಲಯ ಹೊರತುಪಡಿಸಿ ಉಳಿದ ಪಟ್ಟಣ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಏ. 22 ಹಾಗೂ 23ರಂದು ಇದೇ ರೀತಿ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿರಲಿದೆ ಎಂದರು.
    ಯಾವುದೇ ಕಾರಣಕ್ಕೂ ಜನರ ಮೇಲೆ ಲಾಠಿ ಪ್ರಹಾರ ಮಾಡದಂತೆ ಸೂಚನೆ ನೀಡಲಾಗಿದೆ. ಆದರೆ, ಕಾರಣವಿಲ್ಲದೇ ಓಡಾಡುವವರ ವಿರುದ್ಧ ಕಾನೂನಿನಂತೆ ಕ್ರಮ ವಹಿಸಲಾಗುವುದು ಎಂದರು. ಎಲ್ಲ ಕಡೆ 24 ಗಂಟೆ ಚೆಕ್​ಪೋಸ್ಟ್ ತೆರೆಯಲಾಗಿದೆ. 4 ಡಿಎಸ್​ಪಿ, 12 ಇನ್ಸ್​ಪೆಕ್ಟರ್, 49 ಪಿಎಸ್​ಐ, 143 ಎಎಸ್​ಐ, 1004 ಹೆಡ್ ಕಾನ್​ಸ್ಟೇಬಲ್, 50 ಹೋಂ ಗಾರ್ಡ್, 7 ಡಿಎಆರ್ ತುಕಡಿಗಳು, 02 ಕೆಎಸ್​ಆರ್​ಪಿ ತುಕಡಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.
    253 ಪೊಲೀಸ್ ಸಿಬ್ಬಂದಿಗೆ ಸೋಂಕು: ಜಿಲ್ಲೆಯ 253 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಇದುವರೆಗೆ ಸೋಂಕು ತಗುಲಿದ್ದು, 188 ಜನ ಗುಣವಾಗಿದ್ದಾರೆ. 65 ಜನ ಹೋಂ ಐಸೋಲೇಷನ್​ನಲ್ಲಿದ್ದಾರೆ. ಪೊಲೀಸ್ ಸಿಬ್ಬಂದಿಯ ಕುಟುಂಬದ 85 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, 38 ಜನ ಗುಣವಾಗಿದ್ದಾರೆ. 47 ಜನ ಹೋಂ ಐಸೋಲೇಷನ್​ನಲ್ಲಿದ್ದಾರೆ. 1803 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವ್ಯಾಕ್ಸಿನ್ ಮೊದಲ ಹಾಗೂ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 248 ಅಧಿಕಾರಿ ಹಾಗೂ ಸಿಬ್ಬಂದಿಗೆ ಎರಡನೇ ಡೋಸ್ ಲಸಿಕೆ ಪಡೆಯುವುದು ಬಾಕಿ ಇದೆ. ಒಟ್ಟು 69 ಜನ ಇದುವರೆಗೂ ಲಸಿಕೆ ಪಡೆದಿಲ್ಲ. ಅವರಲ್ಲಿ ಹೆಚ್ಚಿನವರು ಗರ್ಭಿಣಿಯರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿದ್ದಾರೆ ಎಂದರು. ಎಲ್ಲ ಠಾಣೆಗಳಲ್ಲಿ ಪಲ್ಸ್ ಆಕ್ಸಿಮೀಟರ್ ನೀಡಲಾಗಿದೆ. ಪ್ರತಿ ದಿನ ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts