More

    ಕೊಳತೋಡು ಗ್ರಾಮದಲ್ಲಿ ಹುಲಿ, ಕಾಡಾನೆಗಳ ಹಾವಳಿ

    ಗೋಣಿಕೊಪ್ಪ: ಹಲವು ದಿನಗಳಿಂದ ಕೊಳತೋಡು ಗ್ರಾಮದಲ್ಲಿ ಹುಲಿ ಮತ್ತು ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆಗೆ ದೂರು ನೀಡಿದರೂ ಈವರೆಗೂ ಸ್ಪಂದಿಸಿಲ್ಲ ಎಂದು ಕೊಳತೋಡು ಗ್ರಾಮಸ್ಥರು ದೂರಿದ್ದಾರೆ.

    ವನ್ಯಜೀವಿಗಳ ಉಪಟಳದಿಂದಾಗಿ ಜನ ಬೇಸತ್ತಿದ್ದಾರೆ. ಕಾಡಿನಲ್ಲಿ ಇರಬೇಕಾದ ವನ್ಯಜೀವಿಗಳು ನಾಡಿಗೆ ಬಂದು ಕೃಷಿಕರಿಗೆ ತೊಂದರೆ ನೀಡುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಗ್ರಾಮದ ಮುರುವಂಡ ಸಾವನ್ ದೂರಿದ್ದಾರೆ.

    ಹಲವು ತಿಂಗಳಿಂದ ಹುಲಿ ಗ್ರಾಮದಲ್ಲಿ ನಿರಂತರವಾಗಿ ಅಡ್ಡಾಡುತ್ತಿದೆ. ತನ್ನ ಮರಿಯೊಂದಿಗೆ ಆಗಿಂದಾಗ್ಗೆ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿರುವ ಈ ಹುಲಿಯ ಸಂಚಾರದಿಂದಾಗಿ ಗ್ರಾಮಸ್ಥರು ಭಯದಿಂದಲೇ ದಿನ ಕಳೆಯುವಂತಾಗಿದೆ. ಎರಡು ದಿನಗಳ ಹಿಂದೆ ಗ್ರಾಮದಲ್ಲಿ ಎರಡು ನಾಯಿಗಳು ಕಾಣೆಯಾಗಿದ್ದು, ಇವುಗಳು ಹುಲಿಯ ದಾಳಿಗೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ. ಹುಲಿ ಸಂಚಾರದಿಂದಾಗಿ ಕಾರ್ಮಿಕರು ಭಯಪಡುತ್ತಿದ್ದು, ತೋಟದ ಕೆಲಸಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳು ನಿತ್ಯ ಆತಂಕದಲ್ಲೇ ಶಾಲಾ-ಕಾಲೇಜುಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

    ಗ್ರಾಮದ ಸಣ್ಣ ಮತ್ತು ಅತಿ ಸಣ್ಣ ಭತ್ತ ಕೃಷಿಕರು ತಮಗಿರುವ ಅಲ್ಪ ಸ್ವಲ್ಪ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿದ್ದಾರೆ. ಇದೀಗ ಭತ್ತ ಕೊಯ್ಲಿಗೆ ಬರುತ್ತಿದ್ದಂತೆ ಗ್ರಾಮಕ್ಕೆ ಲಗ್ಗೆ ಇಡುವ ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ನುಗ್ಗಿ ಇಡೀ ಕೃಷಿಯನ್ನೇ ನಾಶಗೊಳಿಸುತ್ತಿದೆ. ಪ್ರತಿ ದಿನ ರಾತ್ರಿ ಗದ್ದೆ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ತೆರೆಗಳನ್ನು ತುಳಿದು ಧ್ವಂಸ ಮಾಡುತ್ತಿದೆ. ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ.

    ಇದೀಗ ಭತ್ತ ಕಟಾವಿಗೆ ಬಂದಿದ್ದು, ವನ್ಯಪ್ರಾಣಿಗಳಿಂದ ಬೆಳೆಗಳಿಗೆ ರಕ್ಷಣೆ ನೀಡಬೇಕಾಗಿರುವುದು ಅರಣ್ಯ ಇಲಾಖೆಯ ಹೊಣೆಗಾರಿಕೆಯಾಗಿದೆ. ಆದ್ದರಿಂದ ಹುಲಿ ಸೆರೆಗಾಗಿ ಬೋನು ಅಳವಡಿಸಿ ಅರಣ್ಯ ಇಲಾಖೆ ಗ್ರಾಮದಲ್ಲಿ ಗಸ್ತು ನಡೆಸಬೇಕು. ಗ್ರಾಮಕ್ಕೆ ಲಗ್ಗೆ ಇಡುವ ಕಾಡಾನೆಗಳನ್ನು ಕಾಡಿಗಟ್ಟಿ ಅವುಗಳು ನಾಡಿಗೆ ಬರದಂತೆ ವ್ಯವಸ್ಥೆ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರೊಡಗೂಡಿ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಾವನ್ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts