More

    ಟಿಕೆಟ್ ನಿರೀಕ್ಷೆಯಲ್ಲಿ ಭರ್ಜರಿ ಪ್ರಚಾರ!

    ಟಿಕೆಟ್ ನಿರೀಕ್ಷೆಯಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದೆ. ಅತ್ತ ರಾಜಕೀಯ ಪಕ್ಷಗಳು ನಗರ ವ್ಯಾಪ್ತಿಯ ಕ್ಷೇತ್ರಗಳಿಗೆ ಬಹುತೇಕ ತಮ್ಮ ಅಭ್ಯರ್ಥಿಗಳನ್ನು ಇನ್ನೂ ಘೋಷಿಸದೆ ಅಳೆದು-ತೂಗುತ್ತಿದ್ದರೆ, ಇತ್ತ ಸಂಭವನೀಯ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ಅಧಿಕೃತ ಪ್ರಕಟಣೆಗಾಗಿ ಕಾಯದೆ, ತಮ್ಮ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
    ಚಾಮುಂಡೇಶ್ವರಿ, ನರಸಿಂಹರಾಜ, ಕೃಷ್ಣರಾಜ ಹಾಗೂ ಚಾಮರಾಜ ಪೈಕಿ ಪ್ರಾದೇಶಿಕ ಪಕ್ಷ ಜೆಡಿಎಸ್ ಎರಡು ಕ್ಷೇತ್ರಗಳಿಗೆ ಹಾಗೂ ಕಾಂಗ್ರೆಸ್ ಒಂದು ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡಿವೆ.
    ಕಾಂಗ್ರೆಸ್ ನರಸಿಂಹರಾಜ ಕ್ಷೇತ್ರಕ್ಕೆ ಶಾಸಕ ತನ್ವೀರ್ ಸೇಠ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರೆ, ಜೆಡಿಎಸ್ ಚಾಮುಂಡೇಶ್ವರಿಯಿಂದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಕೃಷ್ಣರಾಜ ಕ್ಷೇತ್ರದಿಂದ ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಅವರಿಗೆ ಟಿಕೆಟ್ ಪ್ರಕಟಿಸಿದೆ. ನಾಲ್ಕರಲ್ಲಿ ಯಾವುದೇ ಕ್ಷೇತ್ರಕ್ಕೂ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಆದರೂ, ಸಂಭವನೀಯ ಅಭ್ಯರ್ಥಿಗಳು ಟಿಕೆಟ್ ಸಿಗಬಹುದೆನ್ನುವ ನಿರೀಕ್ಷೆಯೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

    ಕೃಷ್ಣರಾಜದಲ್ಲಿ ಭರಾಟೆ ಜೋರು


    ಮೇಲ್ವರ್ಗದವರೇ ಹೆಚ್ಚಾಗಿರುವ ಕೃಷ್ಣರಾಜ ಕ್ಷೇತ್ರದಲ್ಲಿ ಸಂಭವನೀಯ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳ ಪ್ರಚಾರ ಭರಾಟೆ ಜೋರಾಗಿದೆ. ಜಾ.ದಳದಿಂದ ಕೆ.ವಿ.ಮಲ್ಲೇಶ್ ಅವರಿಗೆ ಟಿಕೆಟ್ ಘೋಷಣೆಯಾಗಿದ್ದು, ಮನೆ ಮನೆಗೆ ತೆರಳಿ ಮತ ಕೇಳುತ್ತಿದ್ದಾರೆ. ಜತೆಗೆ, ಕ್ಷೇತ್ರದಲ್ಲಿ ಪ್ರಬಲ ಸಮುದಾಯಗಳ ಸಂಘಟನೆಯಲ್ಲಿ ನಿರತರಾಗಿದ್ದಾರೆ.
    ಕೃಷ್ಣರಾಜದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಖಚಿತವಾಗದಿದ್ದರೂ ಆಕಾಂಕ್ಷಿಗಳಾದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಯುವ ಮುಖಂಡ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಎಂ.ಪ್ರದೀಪ್ ಕುಮಾರ್, ಮುಖಂಡ ಎನ್.ಎಂ.ನವೀನ್‌ಕುಮಾರ್ ಇತರರು ಒಂದು ವರ್ಷದಿಂದಲೂ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ನಾನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಬಳಿಯೇ ಇದ್ದಾರೆ.
    ಶಾಸಕ ಎಸ್.ಎ.ರಾಮದಾಸ್ ಮತ್ತೊಮ್ಮೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಒಂದು ವರ್ಷದಿಂದಲೇ ವ್ಯವಸ್ಥಿತವಾಗಿ ಚುನಾವಣೆಗೆ ತಯಾರಾಗಿದ್ದಾರೆ. ನಾನಾ ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ನಿತ್ಯ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯ ಇತರ ಆಕಾಂಕ್ಷಿಗಳಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಕೂಡ ಈ ಬಾರಿ ತಮಗೆ ಟಿಕೆಟ್ ಸಿಗುತ್ತದೆಂದು ತೆರೆಮರೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

    ಟಿಕೆಟ್ ನಿರೀಕ್ಷೆ : ಚಾಮರಾಜದಲ್ಲಿ ಪೈಪೋಟಿ

    ಚಾಮರಾಜ ಕ್ಷೇತ್ರದಲ್ಲಿ ಪ್ರಮುಖ ಮೂರೂ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಪೈಪೋಟಿಗೆ ಬಿದ್ದು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಶಾಸಕ ಎಲ್.ನಾಗೇಂದ್ರ ಮತಬೇಟೆ ನಡೆಸುತ್ತಿದ್ದಾರೆ. ಪ್ರತಿದಿನ ಒಂದೊಂದು ವಾರ್ಡ್‌ಗೆ ಭೇಟಿ ನೀಡುತ್ತಿರುವ ಅವರು ನೇರವಾಗಿ ಮತದಾರರನ್ನು ಭೇಟಿಯಾಗುತ್ತಿದ್ದಾರೆ. ಜತೆಗೆ, ಕ್ಷೇತ್ರದ ವ್ಯಾಪ್ತಿಯ ಮುಖಂಡರ ಮನೆಗಳಿಗೂ ತೆರಳಿ ತಮಗೆ ಬೆಂಬಲ ಸೂಚಿಸುವಂತೆ ಕೋರುತ್ತಿದ್ದಾರೆ. ಇನ್ನು ಬಿಜೆಪಿ ಮಾಜಿ ನಗರಾಧ್ಯಕ್ಷ ಡಾ.ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ನಂದೀಶ್ ಪ್ರೀತಂ, ಮುಖಂಡ ಜಯಪ್ರಕಾಶ್ ಕೂಡ ಆಕಾಂಕ್ಷಿಗಳಾಗಿದ್ದು, ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
    ಜೆಡಿಎಸ್‌ನಿಂದ ನಗರ ಪಾಲಿಕೆ ಸದಸ್ಯ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ಪಾಲಿಕೆ ಮಾಜಿ ಸದಸ್ಯ ಸಿ.ಮಹದೇಶ್ (ಅವ್ವ ಮಾದೇಶ), ಪಾಲಿಕೆ ಸದಸ್ಯರಾದ ಎಸ್.ಬಿ.ಎಂ.ಮಂಜು, ಭಾಗ್ಯ ಮಾದೇಶ್, ಪ್ರೇಮಾ ಶಂಕರೇಗೌಡ, ಮಾಜಿ ಮೇಯರ್ ರವಿಕುಮಾರ್ ಆಕಾಂಕ್ಷಿಗಳಾಗಿದ್ದು, ಈ ಪೈಕಿ ಕೆ.ವಿ.ಶ್ರೀಧರ್, ಎಸ್.ಬಿ.ಎಂ.ಮಂಜು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.
    ಇನ್ನು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಷಯ ಕಗ್ಗಂಟಾಗುತ್ತಿದೆ. ಪಕ್ಷದ ಟಿಕೆಟ್‌ಗಾಗಿ ಮಾಜಿ ಶಾಸಕ ವಾಸು ಹಾಗೂ ಕೆ.ಹರೀಶ್‌ಗೌಡ ನಡುವೆ ಹೆಚ್ಚು ಪೈಪೋಟಿ ಏರ್ಪಟ್ಟಿದೆ. ಇವರಿಬ್ಬರೂ ತಮ್ಮ ಬೆಂಬಲಿಗರ ಮೂಲಕ ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎಂಬುದಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಗುಂಪು ಕಟ್ಟಿಕೊಂಡು ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ.

    ಎನ್.ಆರ್.ನಲ್ಲಿ ಕಾಂಗ್ರೆಸ್‌ಗೆ ಸೆಡ್ಡು


    ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕ ತನ್ವೀರ್ ಸೇಠ್‌ಗೆ ಮತ್ತೊಮ್ಮೆ ಟಿಕೆಟ್ ಲಭಿಸಿದ್ದು, ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಎಸ್‌ಡಿಪಿಐನ (ಸೋಷಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಅಬ್ದುಲ್ ಮಜೀದ್ ಅವರು ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದಾರೆ. ಈ ಕ್ಷೇತ್ರದಲ್ಲಿ ಅಬ್ದುಲ್ಲಾ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರು ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿರುವ ಮಾಜಿ ಶಾಸಕ ಇ.ಮಾರುತಿರಾವ್ ಪವಾರ್, ಮಾಜಿ ಮೇಯರ್ ಸಂದೇಶ್‌ಸ್ವಾಮಿ, ಪಾಲಿಕೆ ಸದಸ್ಯ ಸತೀಶ್, ಮುಖಂಡ ಗಿರಿಧರ್ ತೆರೆಮರೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

    ಚಾಮುಂಡೇಶ್ವರಿಯಲ್ಲಿ ಗೆಲುವಿನ ತಂತ್ರಗಾರಿಕೆ


    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಶಾಸಕ ಜಿ.ಟಿ.ದೇವೇಗೌಡ ಗೆಲುವಿನ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಪ್ರಮುಖ ಮುಖಂಡರ ಮನೆಗಳಿಗೆ ಭೇಟಿ ನೀಡಿ ಬೆಂಬಲ ಕೇಳುತ್ತಿದ್ದಾರೆ.
    ಇತ್ತ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಕ್ಷೇತ್ರ ಪ್ರಚಾರ ನಡೆಸುತ್ತಿದ್ದಾರೆ. ಸಿದ್ದೇಗೌಡರಿಗೆ ಜಿ.ಪಂ. ಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್.ಮಾದೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಸಾಥ್ ನೀಡುತ್ತಿದ್ದಾರೆ. ಇನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷ ಅರುಣ್‌ಕುಮಾರ್ ಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್‌ಗೌಡ, ಎಸ್‌ಟಿ ಮೋರ್ಚಾ ಮಾಜಿ ಕಾರ್ಯದರ್ಶಿ ಧನಂಜಯ್, ಕ್ಷೇತ್ರದ ಮಾಜಿ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್ ಕ್ಷೇತ್ರದ ಎಲ್ಲೆಡೆ ಭರ್ಜರಿ ಓಡಾಟ ನಡೆಸುತ್ತಿದ್ದಾರೆ.

    (ವರದಿ: ಅವಿನಾಶ್ ಜೈನಹಳ್ಳಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts