More

    ಮೂರು ವರ್ಷ ಕಳೆದರೂ ಸಿಗದ ಸೂರು

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ

    ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪಟ್ಟಣದಲ್ಲಿ 2018-19ರಲ್ಲಿ 343 ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 3 ವರ್ಷ ಕಳೆದರೂ ಮನೆ ಪೂರ್ಣಗೊಳ್ಳದೆ ಫಲಾನುಭವಿಗಳು ಪರದಾಡುವಂತಾಗಿದೆ.

    ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪಟ್ಟಣದ ಅಂಬೇಡ್ಕರ್ ನಗರ, ಡೋಹರಗಲ್ಲಿ, ಭಜಂತ್ರಿಓಣಿ ಮತ್ತು ಬಯ್ಯಾರ ಓಣಿಯಲ್ಲಿ 3 ವರ್ಷದ ಹಿಂದೆಯೇ ಕೊಳಗೇರಿಯಲ್ಲಿನ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಆರ್​ಸಿಸಿ ಮನೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರದ 4.90 ಲಕ್ಷ ರೂ. ಅನುದಾನದ ಜತೆಗೆ ಎಸ್​ಸಿ ಫಲಾನುಭವಿಗಳು 50 ಸಾವಿರ ರೂ. ಮತು ಇತರೆ ವರ್ಗದವರು 75 ಸಾವಿರ ರೂ. ವಂತಿಕೆ ಕೊಡಬೇಕು. ಅಲ್ಲದೆ, ಎಸ್​ಸಿ ಫಲಾನುಭವಿಗಳು ಕಾರ್ವಿುಕ ಇಲಾಖೆ ಕಾರ್ಡ್ ಹೊಂದಿದ್ದರೆ ವಂತಿಕೆ ಕೊಡಬೇಕಿಲ್ಲ. ಇತರೆ ವರ್ಗದವರು ಕಾರ್ಡ್ ಹೊಂದಿದ್ದರೂ 21,139 ರೂ. ಮಂಡಳಿ ಹೆಸರಿನಲ್ಲಿ ಡಿಡಿ ಸಲ್ಲಿಸಬೇಕಿತ್ತು. ಈ ಎಲ್ಲ ಪ್ರಕ್ರಿಯೆ ಮುಗಿಸಿದ ಮಂಡಳಿಯವರು 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ, ಕಾಮಗಾರಿ ಪ್ರಾರಂಭಿಸಿ 3 ವರ್ಷ ಕಳೆದರೂ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ್ದರಿಂದ ಫಲಾನುಭವಿಗಳಿಗೆ ಬೀದಿ ಬದಿಯ ಗುಡಿಸಲುಗಳೇ ಆಸರೆಯಾಗಿವೆ.

    ಅರ್ಧಕ್ಕೆ ನಿಂತ ಕಾಮಗಾರಿ: ಕಾಮಗಾರಿ ನಿರ್ವಣದ ಜವಾಬ್ದಾರಿ ಹೊತ್ತ ಗುತ್ತಿಗೆದಾರರು ಪ್ರಾರಂಭದಿಂದಲೂ ಕಳಪೆ ಕಬ್ಬಿಣ, ಸಿಮೆಂಟ್, ಎಂ ಸ್ಯಾಂಡ್, ಇಟ್ಟಿಗೆ, ಕಿಟಕಿ, ಬಾಗಿಲು ಬಳಸಿ ಕಟ್ಟಡ ನಿರ್ವಿುಸಿದ್ದಾರೆ. ಒಟ್ಟು 342 ಮನೆಗಳಲ್ಲಿ ಕೆಲವು ಮನೆಗಳಿಗೆ ಸ್ಲ್ಯಾಬ್ ಹಾಕಿದ್ದು ಇನ್ನು ಕೆಲವು ಮನೆಗಳು ಅರ್ಧಕ್ಕೆ ನಿಂತಿವೆ. ಯಾವುದೇ ಮನೆಗೆ ಪ್ಲಾಸ್ಟರ್ ಮಾಡಿಲ್ಲ. ಫ್ಲೋರಿಂಗ್, ಇಲೆಕ್ಟ್ರಿಕಲ್, ಪ್ಲಂಬಿಂಗ್ ಕೆಲಸ ಬಾಕಿಯಿದೆ. ಬಾಗಿಲು, ಕಿಟಕಿ ಅಳವಡಿಸಲಾಗಿಲ್ಲ.

    ಸರ್ಕಾರ ಗುಡಿಸಲು ಮುಕ್ತ ದೇಶಕ್ಕಾಗಿ ಪ್ರತಿಯೊಬ್ಬರಿಗೂ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಹಣ ನೀಡುತ್ತಿದೆ. ಆದರೆ, ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯಂದ ನಮ್ಮಂಥ ಬಡವರು ಬೀದಿಗೆ ಬೀಳುವಂತಾಗಿದೆ. 3 ವರ್ಷದಿಂದ ರಸ್ತೆ ಬದಿ ಗುಡಿಸಲು ಕಟ್ಟಿಕೊಂಡು ಕೊಳಚೆ ಮಧ್ಯೆ ವಾಸಿಸುತ್ತಿದ್ದೇವೆ. ಕೈಯಲ್ಲಿ ಬಿಡಿಗಾಸು ಇಲ್ಲದೆ ಇವತ್ತಲ್ಲ ನಾಳೆ ಮನೆ ಪೂರ್ಣಗೊಳ್ಳಬಹುದು ಎಂಬ ಆಸೆಯಿಂದ ಕಾಯುತ್ತಿದ್ದೇವೆ.

    | ಪರಶುರಾಮ ಸಾತಪುತೆ, ಚನ್ನಬಸಪ್ಪ ಅರಳಿಕಟ್ಟಿ, ಪಲಾನುಭವಿಗಳು

    ಅನುದಾನದ ಕೊರತೆ, ತಾಂತ್ರಿಕ ತೊಂದರೆ, ಕೋವಿಡ್-19 ಪರಿಣಾಮ ಸೇರಿ ಅನೇಕ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಉಳಿದ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿಕೊಡಲಾಗುವುದು.

    | ಪ್ರವೀಣ ಬಿ., ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಜ್ಯೂನಿಯರ್ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts