More

    ರಾತ್ರಿ ಆರತಕ್ಷತೆಗೆ ಹೋದವರಿಗೆ ಬೆಳಗಾಗುವುದರೊಳಗೆ ಕಾದಿತ್ತು ಶಾಕ್

    ರಟ್ಟಿಹಳ್ಳಿ: ತಾಲೂಕಿನ ಚಪ್ಪರದಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಊಟ ಮಾಡಿದ್ದ 42 ಜನರು ವಾಂತಿ- ಭೇದಿ ಮತ್ತು ಜ್ವರದಿಂದ ಬಳಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಘಟನೆಗೆ ಕಲುಷಿತ ಆಹಾರ ಅಥವಾ ನೀರಿನ ಸೇವನೆ ಕಾರಣ ಇರಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿ ರಾಘವೇಂದ್ರ ಸ್ವಾಮಿ ತಿಳಿಸಿದ್ದಾರೆ.

    ಚಪ್ಪರದಹಳ್ಳಿ ಗ್ರಾಮದಲ್ಲಿ ಜರುಗಿದ ಆರತಕ್ಷತೆ ಸಮಾರಂಭದಲ್ಲಿ ಸೋಮವಾರ ರಾತ್ರಿ ಊಟ ಮಾಡಿದ ಗ್ರಾಮಸ್ಥರಿಗೆ ಮಂಗಳವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾಗಿದೆ.

    ಕೆಲವರಿಗೆ ವಾಂತಿ- ಭೇದಿ ಉಂಟಾದರೆ ಕೆಲವರಿಗೆ ತೀವ್ರ ಜ್ವರದ ಸಮಸ್ಯೆ ಕಂಡು ಬಂದಿದೆ. ಮಂಗಳವಾರ ರಾತ್ರಿ ಸುಮಾರು 18 ಜನರು ಚಿಕಿತ್ಸೆಗೆ ದಾಖಲಾಗಿದ್ದು, ಬುಧವಾರ ಬೆಳಗ್ಗೆ ಗ್ರಾಮದಲ್ಲಿ ಹೆಚ್ಚಿನ ಜನರಿಗೆ ಆರೋಗ್ಯದ ಸಮಸ್ಯೆ ಉಲ್ಬಣವಾಗಿ ಮತ್ತೆ 24 ಜನರು ಆಟೋ, ಟ್ರಾೃಕ್ಟರ್‌ಗಳಲ್ಲಿ ಸಾಮೂಹಿಕವಾಗಿ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.


    ಹಿರೇಕೆರೂರು-ಹಾವೇರಿಗೆ ದಾಖಲು

    ಹನುಮಂತಪ್ಪ ವೀರಭದ್ರಪ್ಪ ನಾಗವಂದ (28), ಅಶ್ವಿನಿ ನಿಂಗಪ್ಪ ರಟ್ಟಿಹಳ್ಳಿ (27), ರುಚಿತಾ ಸುರೇಶ ಬೆಳಕೇರ ( 19) ಮತ್ತು ಪ್ರಿಯಾ ಬಸವರಾಜ ಹಿತ್ತಲಮನಿ (19) ಹೆಚ್ಚಿನ ಚಿಕಿತ್ಸೆಗಾಗಿ ಹಿರೇಕೆರೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೂ ವಸಂತ ಹಿತ್ತಲಮನಿ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.


    ವೈದ್ಯರ ವಿರುದ್ದ ಆಕ್ರೋಶ

    ಮಂಗಳವಾರ ರಾತ್ರಿ ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಈ ಹಿನ್ನಲೆಯಲ್ಲಿ ರಾತ್ರಿಯೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳು ಆಗಮಿಸಿದ್ದರು. ಸ್ಥಳೀಯ ವೈದ್ಯಾಧಿಕಾರಿ ಡಾ. ಪುಷ್ಪಾ ಬಣಕಾರ ಸಮರ್ಪಕವಾಗಿ ಸ್ಪಂದಿಸಲಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಬುಧವಾರ ಬೆಳಗ್ಗೆ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.


    ಕಡ್ಡಾಯ ರಜೆಗೆ ಜಿಲ್ಲಾಧಿಕಾರಿ ಆದೇಶ

    ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ವೈದ್ಯಾಧಿಕಾರಿ ರಾಘವೇಂದ್ರ ಸ್ವಾಮಿ, ರೋಗಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು, ವೈದ್ಯಾಧಿಕಾರಿ ಡಾ. ಪುಷ್ಪಾ ಬಣಕಾರ ಅವರ ಮೇಲೆ ಹಲವು ಬಾರಿ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಅವರಿಗೆ ಸುಧಾರಿಸಿಕೊಳ್ಳುವಂತೆ ತಿಳಿಸಿದ್ದರೂ ಈವರೆಗೆ ಯಾವುದೇ ಬದಲಾವಣೆ ಕಂಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಕೂಡಲೇ ಅವರಿಗೆ ಕಡ್ಡಾಯ ರಜೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts