More

    ರುದ್ರಭೂಮಿಗಾಗಿ ಜಮೀನು ಖರೀದಿಸಲು ಚಿಂತನೆ : ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಹೇಳಿಕೆ

    ಬಾದಾಮಿ: ಜಿಲ್ಲೆಯ ಪ್ರತಿ ಮಂಗಳವಾರ ಒಂದು ತಾಲೂಕಿಗೆ ಭೇಟಿ ನೀಡಿ ಕಂದಾಯ ಇಲಾಖೆಯ ಪ್ರಗತಿ ಜತೆಗೆ ವಿವಿಧ ಇಲಾಖೆಗಳ ಅಭಿವೃದ್ಧಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಹೆಚ್ಚಿನ ಪ್ರಗತಿಗಾಗಿ ತಹಸೀಲ್ದಾರ್ ಹಾಗೂ ಕಚೇರಿ ಸಿಬ್ಬಂದಿಗೆ ಸೂಕ್ತ ಸಲಹೆ, ಸೂಚನೆ ನೀಡಲಾಗಿದೆ. ಭೂಮಿ ರ‌್ಯಾಂಕಿಂಗ್‌ನಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯಕ್ಕೆ 2ನೇ ಸ್ಥಾನ ಮತ್ತು ಅಟಲ್‌ಜೀ ಜನಸ್ನೇಹಿ ಕೇಂದ್ರದ ಕಾರ್ಯ ನಿರ್ವಹಣೆಯಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.

    ಬಾದಾಮಿ ತಾಲೂಕಿನ 30 ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲದಿರುವ ಬಗ್ಗೆ ತಿಳಿದು ಬಂದಿದೆ. ಇದರಲ್ಲಿ ಕೇವಲ 3 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಲಭ್ಯವಿದೆ. ಉಳಿದ 27 ಗ್ರಾಮಗಳಲ್ಲಿ ಗ್ರಾಮಸ್ಥರ ಮನವೊಲಿಸಿ ಕಡಿಮೆ ಸರ್ಕಾರಿ ದರದಲ್ಲಿ ಜಮೀನು ಖರೀದಿಸಲು ಚಿಂತನೆ ನಡೆಸಲಾಗಿದೆ. ಗ್ರಾಮಸ್ಥರು ಇದಕ್ಕೆ ಸಹಕರಿಸಬೇಕು ಎಂದರು.

    ಬಾದಾಮಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪೂರಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಲಾಗುತ್ತಿದೆ. ಇದಕ್ಕಾಗಿಯೇ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಪಟ್ಟಣದಲ್ಲಿ ಬಸವೇಶ್ವರ ಮತ್ತು ಪುಲಿಕೇಶಿ ಮೂರ್ತಿಗಳ ಸ್ಥಾಪನೆ ಆಗಬೇಕಾಗಿದ್ದು, ಮೂರ್ತಿಗಳು ಕೂಡ ಈಗಾಗಲೇ ಸಿದ್ಧವಾಗಿವೆ. ಅವುಗಳ ಸ್ಥಾಪನೆಗೆ ಜಾಗ ನಿಗದಿಯಾಗಬೇಕಾಗಿದೆ. ರಸ್ತೆ ಮಧ್ಯೆ ಭಾಗದಲ್ಲಿ ಪ್ರತಿಷ್ಠಾಪನೆ ಮಾಡದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಸ್ಥಳೀಯ ಪುರಸಭೆ ಒಡೆತನದ ಮತ್ತು ಸರ್ಕಾರಿ ಜಾಗ ಗುರುತಿಸಲಾಗುತ್ತಿದೆ ಎಂದರು.

    ಹೃದಯ ಯೋಜನೆ ಅಡಿಯಲ್ಲಿ ಉಳಿದ 11.58 ಕೋಟಿ ರೂ. ಅನುದಾನದಲ್ಲಿ ಪುರಸಭೆ ವತಿಯಿಂದ ಈಗಾಗಲೇ 7.55 ಕೋಟಿ ರೂ. ಅನುದಾನದ ಕಾಮಗಾರಿ ಮಾಡಲಾಗಿದೆ. ಉಳಿದ 4 ಕೋಟಿ ರೂ. ಅನುದಾನಕ್ಕೂ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.

    ಉಳಿದಂತೆ ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳ ವಿವರ ನೀಡಿದ ಅವರು, ಮೇಲಿಂದ ಮೇಲೆ ಬಾದಾಮಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗುವುದು. ಚಾಲುಕ್ಯರ ನಾಡು ಐತಿಹಾಸಿಕ ಪ್ರವಾಸಿ ತಾಣದ ಸೌಂದರ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಜೆ.ಬಿ.ಮಜ್ಜಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts