More

    ಶಿಕ್ಷಣ ಇಲಾಖೆ ಅಧಿಕಾರಿಗಳಿಂದಲೇ ಶಿಕ್ಷಕಿ ತೆರೇಜ್ ಎಂ.ಸಿಕ್ವೇರಾಗೆ ಪ್ರಶಸ್ತಿ ಪ್ರದಾನ

    ಈಶ್ವರಮಂಗಲ: ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಪಾಪೆಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿತೆರೇಜ್ ಎಂ.ಸಿಕ್ವೇರ ಅವರನ್ನು ಪುತ್ತೂರಿನಲ್ಲಿ ನಡೆದಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ಹೋಗದಂತೆ ತಡೆಹಿಡಿದ ಘಟನೆಗೆ ಸಂಬಂಧಿಸಿ ಎಸ್‌ಡಿಎಂಸಿ, ಕಾಂಗ್ರೆಸ್ ಪಕ್ಷದ ಸಹ ಸಂಘಟನೆಗಳು, ಕ್ರಿಶ್ಚಿಯನ್ ಸಮುದಾಯದ ಸಂಘಟನೆಗಳಿಂದ ವ್ಯಕ್ತವಾಗಿದ್ದ ಖಂಡನೆ, ಹೋರಾಟದ ಎಚ್ಚರಿಕೆಗಳಿಂದ ಬಿಸಿ ಮುಟ್ಟಿರುವ ಮಧ್ಯೆಯೇ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಬುಧವಾರ ಮಧ್ಯಾಹ್ನ ಶಾಲೆಗೆ ತೆರಳಿ ಪ್ರಶಸ್ತಿ ಪ್ರದಾನ ಮಾಡಿದ್ದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
    ಶಿಕ್ಷಣ ಇಲಾಖೆಯ ಡಿಡಿಪಿಐ ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಮಂಗಳೂರು ಡಯಟ್ ಪ್ರಾಂಶುಪಾಲೆ ರಾಜಲಕ್ಷ್ಮಿ, ಡಯಟ್ ಉಪನ್ಯಾಸಕ ಪೀತಾಂಬರ ಮೊದಲಾದವರು ಪಾಪೆಮಜಲು ಶಾಲೆಗೆ ತೆರಳಿ ಎಸ್‌ಡಿಎಂಸಿ, ಪಾಲಕರ ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಿ ಶಿಕ್ಷಕಿ ಸೆರೆನಾಗೆ ಪ್ರಶಸ್ತಿ ಪ್ರದಾನ ಮಾಡಿ ಸೆರೆನಾ-ಹೆರಾಲ್ಡ್ ಮಾರ್ತಾ ದಂಪತಿಯನ್ನು ಅಭಿನಂದಿಸಿದರು.
    ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್‌ಕುಮಾರ್, ಪುತ್ತೂರು ಶಿಕ್ಷಣ ಸಮನ್ವಯ ಕೇಂದ್ರದ ಬಿಐಆರ್‌ಟಿ ತನುಜಾ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ, ತಾಲೂಕು ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಕಡಬ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಎಸ್‌ಡಿಎಂಸಿ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

    ಶಿಕ್ಷಣ ಇಲಾಖೆ ಅಧಿಕಾರಿಗಳೇ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಹಾಗಾಗಿ ಪ್ರಶಸ್ತಿ ವಿಚಾರದಲ್ಲಿ ಎದುರಾಗಿದ್ದ ಗೊಂದಲಗಳು ಮುಗಿದಿವೆ. ನೋವಾಗಿರುವುದು ಸಹಜ. ಆದರೆ ಅಧಿಕಾರಿಗಳೇ ಬಂದು ಪ್ರಶಸ್ತಿ ನೀಡಿರುವುದರಿಂದ ಖುಷಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಮುಂದುವರಿಸುವೆ.
    |ತೆರೇಜ್ ಎಂ.ಸಿಕ್ವೇರ
    ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತರು

    ಹೋರಾಟದ ಎಚ್ಚರಿಕೆ ನೀಡಿದ್ದ ಎಸ್‌ಡಿಎಂಸಿ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ತೆರೇಜ್ ಎಂ.ಸಿಕ್ವೇರ ಅವರನ್ನು ಪ್ರಶಸ್ತಿ ಪಡೆದುಕೊಳ್ಳಲು ಹೋಗದಂತೆ ತಡೆಯುವ ಮೂಲಕ ಅವಮಾನ ಮಾಡಲಾಗಿದೆ. ಇದು ಖಂಡನೀಯ, ಶಿಕ್ಷಕಿಗೆ ನ್ಯಾಯ ದೊರಕದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಪಾಪೆಮಜಲು ಶಾಲೆಯಲ್ಲಿ ಬೆಳಗ್ಗೆ ನಡೆದ ತುರ್ತು ಸಭೆಯಲ್ಲಿ ಎಸ್‌ಡಿಎಂಸಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
    ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಲಹಾ ಸಮಿತಿ ಸದಸ್ಯ ಅಮ್ಮಣ್ಣ ರೈ, ಎಸ್‌ಡಿಎಂಸಿ ಉಪಾಧ್ಯಕ್ಷೆ ವಿನುತಾ ಕೆ.ವಿ, ಸದಸ್ಯರಾದ ಪುಷ್ಪಲತಾ, ಇಕ್ಬಾಲ್ ಹುಸೇನ್ ಕೌಡಿಚ್ಚಾರು, ಲಲಿತಾ, ಅಪ್ಪಯ್ಯ ನಾಯ್ಕ, ನಾರಾಯಣ ನಾಯ್ಕ, ಮೀನಾಕ್ಷಿ, ಹೇಮಲತಾ ಬಿ, ಜಯಲಕ್ಷ್ಮೀ, ದೇವಪ್ಪ ನಾಯ್ಕ, ಮೋನಪ್ಪ ನಾಯ್ಕ, ಪೂರ್ಣಿಮಾ, ಭಾಗೀರಥಿ, ಮಾಜಿ ಅಧ್ಯಕ್ಷ ಧನಂಜಯ ನಾಯ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್, ಮಕ್ಕಳ ಪಾಲಕರಾದ ಜ್ಯೋತಿ, ಧನಂಜಯ ನಾಯ್ಕ, ಚಂದ್ರ ಕುತ್ಯಾಡಿ, ವಿನುತಾ ಕೆ.ವಿ, ಹೊನ್ನಪ್ಪ ನಾಯ್ಕ ಮತ್ತಿತರರು ಅಭಿಪ್ರಾಯ ಮಂಡಿಸಿದರು.
    ಮುಖ್ಯಶಿಕ್ಷಕಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗದಿದ್ದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ, ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆ ನಡೆಸುವುದು ಎಂದು ತೀರ್ಮಾನಿಸಲಾಗಿತ್ತು.
    ಅಗೌರವ ಖಂಡನೀಯ: ಪಾಪೆಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಅವರನ್ನು ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿ ಬಳಿಕ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡದೆ ಅಪಮಾನ ಮಾಡಿ ಅಗೌರವ ತೋರಿಸಿದ್ದು ಶಿಕ್ಷಕರ ಸಮುದಾಯಕ್ಕಾದ ಅಪಮಾನ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಶಿಕ್ಷಕಿಗೆ ಮಾಡಲಾದ ಅಪಮಾನ ಪ್ರಕರಣದಿಂದಾಗಿ ಶಿಕ್ಷಣ ಕ್ಷೇತ್ರದ ಬಗ್ಗೆ ನಂಬಿಕೆ, ಗೌರವವನ್ನು ಜನ ಕಳೆದುಕೊಳ್ಳುವಂತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ತಪ್ಪು ಎಸಗಿರುವ ಶಿಕ್ಷಣ ಇಲಾಖೆಯ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಶಿಕ್ಷಕಿಗೆ ಎಸಗಿರುವ ಈ ಅಪಮಾನ ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿದರು.
    ಕಾಂಗ್ರೆಸ್ ಮುಖಂಡರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ಹನೀಫ್ ಪುಣ್ಚತ್ತಾರು, ಫಾರೂಕ್ ಬಾಯಬ್ಬೆ, ಇಸಾಕ್ ಸಾಲ್ಮರ ಸುದ್ದಿಗೋಷ್ಠಿಯಲ್ಲಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts