ನರಗುಂದ: ಪಟ್ಟಣದ ವಿದ್ಯಾಗಿರಿ ಬಡಾವಣೆಯ ಮನೆಯೊಂದರಲ್ಲಿ 35ಕ್ಕೂ ಅಧಿಕ ನೀರು ಹಾವಿನ ಮರಿಗಳು ಕಾಣಿಸಿಕೊಂಡಿವೆ. ಇವುಗಳನ್ನು ಕಂಡು ಮನೆಯ ಮಾಲೀಕರು ಬೆಚ್ಚಿಬಿದ್ದಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಕಮಲಾಕ್ಷಿ ಕಲ್ಮೇಶ ಕುಲಕರ್ಣಿ ಎಂಬುವರ ಮನೆಯಲ್ಲಿ ಎರಡು ದಿನಗಳ ಹಿಂದೆ ಎರಡು ಹಾವಿನ ಮರಿಗಳು ಕಾಣಿಸಿಕೊಂಡಿದ್ದವು. ಅವುಗಳನ್ನು ಅಕ್ಕಪಕ್ಕದ ಮನೆಯವರ ಸಹಾಯದಿಂದ ಕಮಲಾಕ್ಷಿಯವರು ಸಾಯಿಸಿದ್ದರು. ತದನಂತರ ಶನಿವಾರ ಬೆಳಗ್ಗೆ ದೊಡ್ಡ ನೀರು ಹಾವು ಮನೆಯ ಬಾತ್ ರೂಮಿನಲ್ಲಿ ಕಾಣಿಸಿಕೊಂಡಿತ್ತು. ಆಗ ಅದನ್ನು ಸೆರೆ ಹಿಡಿಯುವಂತೆ ಉರಗ ರಕ್ಷಕ ಬಿ.ಆರ್. ಸುರೇಬಾನ ಅವರಿಗೆ ಕರೆ ಮಾಡಿದ್ದರು. ಹಾವು ಚರಂಡಿಯಲ್ಲಿ ಅಡಗಿ ಕುಳಿತಿದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ, ಭಾನುವಾರ ಮಧ್ಯಾಹ್ನ ಈ ಮನೆಯ ಪಾಟಿಗಲ್ಲು ಕೆಳಗಡೆ 35 ಕ್ಕೂ ಅಧಿಕ ನೀರು ಹಾವಿನ ಮರಿಗಳು ಕಾಣಿಸಿಕೊಂಡಿದ್ದು, ಅವುಗಳನ್ನೆಲ್ಲ ಸುರೇಬಾನ ಅವರು ರಕ್ಷಿಸಿದ್ದಾರೆ. ಒಂದೇ ಮನೆಯಲ್ಲಿ ಇಷ್ಟೊಂದು ಹಾವುಗಳನ್ನು ಕಂಡಿರುವ ಮನೆಯ ಮಾಲಕಿ ಕಮಲಾಕ್ಷಿ ಭಯಭೀತರಾಗಿದ್ದಾರೆ.
ವಿದ್ಯಾಗಿರಿ ಬಡಾವಣೆಯ ನಮ್ಮ ಮನೆ ಪಕ್ಕದಲ್ಲಿ ಖಾಲಿ ನಿವೇಶನವಿದ್ದು, ಅದರಲ್ಲಿ ಗಿಡಗಂಟಿ, ಕಸ-ಕಡ್ಡಿ, ತ್ಯಾಜ್ಯ ಸಂಗ್ರಹಗೊಂಡಿದೆ. ಹುಳುಹುಪ್ಪಡಿಗಳ ವಾಸಸ್ಥಾನ ವಾಗಿದೆ. ಈ ಕೂಡಲೆ, ಖಾಲಿ ನಿವೇಶನವನ್ನು ಪುರಸಭೆ ಅಧಿಕಾರಿಗಳು ಸ್ವಚ್ಛಗೊಳಿಸಬೇಕು.
| ಕಮಲಾಕ್ಷಿ ಕುಲಕರ್ಣಿ
ಹಾವಿನಮರಿ ಕಾಣಿಸಿಕೊಂಡ ಮನೆ ಮಾಲಕಿ