More

    ಇದೊಂದು ಇದ್ದಿದ್ದರೆ ಭಾರತ ವಿಶ್ವಕಪ್​ ಫೈನಲ್​ ಸೋಲುತ್ತಿರಲಿಲ್ಲ: ಕ್ರಿಕೆಟಿಗರ ವಿರುದ್ಧ ನಟ ಚೇತನ್ ಆಕ್ರೋಶ

    ಬೆಂಗಳೂರು: ನಿನ್ನೆ (ನ.19) ಗುಜರಾತಿನ ಅಹಮದಾಬಾದ್​ನಲ್ಲಿ ನಡೆದ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಅನುಭವಿಸಿ, ಅಸಂಖ್ಯಾತ ಭಾರತೀಯ ಅಭಿಮಾನಿಗಳ ಕನಸನ್ನು ನುಚ್ಚು ನೂರು ಮಾಡಿದೆ. ಭಾರತದ ಸೋಲಿಗೆ ನಾನಾ ಕಾರಣಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದ್ದು, ಇದರ ನಡುವೆ ನಟ ಚೇತನ್ ಅಹಿಂಸ ಕೂಡ ಭಾರತದ ಸೋಲಿಗೆ ತಮ್ಮದೇಯಾದ ಕಾರಣ ನೀಡುವ ಮೂಲಕ​ ಕ್ರಿಕೆಟ್​ನಲ್ಲೂ ಮೀಸಲಾತಿ ಬೇಕೆಂದು ಮತ್ತೆ ಧ್ವನಿ ಎತ್ತಿದ್ದಾರೆ.

    ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋಲುಂಡ ಬೆನ್ನಲ್ಲೇ ಫೇಸ್​ಬುಕ್​ ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಚೇತನ್​, ನಾನು ಮತ್ತೆ ಹೇಳುತ್ತಿದ್ದೇನೆ/ಒತ್ತಿಹೇಳುತ್ತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿಯ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ, ಭಾರತ ಈ 2023ರ ವಿಶ್ವಕಪ್ಪನ್ನು ಸುಲಭವಾಗಿ ಗೆಲ್ಲುತ್ತಿತ್ತು ಎಂದಿದ್ದಾರೆ.

    ಇಂದು ಭಾರತೀಯ ಕ್ರಿಕೆಟಿಗರು ಚೆಂಡನ್ನು ಹೊಡೆಯಬಹುದು/ಎಸೆಯಬಹುದು/ಹಿಡಿಯಬಹುದು, ಆದರೆ ಅವರು ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡುವುದಿಲ್ಲ. ಪಲ್ವಾಂಕರ್ ಬಾಲೂ ಅವರು, ಒಂದು ಶತಮಾನದ ಹಿಂದೆ ಧಾರವಾಡ ಮೂಲದ ಬೌಲಿಂಗ್ ಸೆನ್ಸೇಷನ್ ಮತ್ತು ಭಾರತದ ಮೊದಲ ದಲಿತ ಕ್ರಿಕೆಟಿಗರಾಗಿದ್ದರು. ಅವರು ಕ್ರಿಕೆಟ್ ಆಟದ ಜೊತೆಗೆ ಸಾಮಾಜಿಕ ಹೋರಾಟ ಕೂಡ ಮಾಡುತ್ತಿದ್ದರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿಚಯಸ್ಥರಾಗಿದ್ದರು. ಇಂದಿನ ಭಾರತಕ್ಕೆ ನಮ್ಮ ಸಮಾಜವನ್ನು ಕಾಳಜಿ ವಹಿಸುವ ಇಂತಹ ಕ್ರಿಕೆಟಿಗರು ನಮಗೆ ಬೇಕು. ಕೇವಲ ಹಣ ಮತ್ತು ಕೀರ್ತಿಗಾಗಿ ಹಾತೊರೆಯುವ/ಹಂಬಲಿಸುವ ಕ್ರಿಕೆಟಿಗರಲ್ಲ ಎಂದು ಮತ್ತೊಂದು ಪೋಸ್ಟ್​ನಲ್ಲಿ ಚೇತನ್​ ಭಾರತೀಯ ಕ್ರಿಕೆಟಿಗರ ವಿರುದ್ಧ ಕಿಡಿಕಾರಿದ್ದಾರೆ.

    ನಿನ್ನೆ ಆಟದ ನಡುವೆ ಪ್ಯಾಲೆಸ್ತೀನ್​ ಪರ ಬರಹವುಳ್ಳ ಟೀ-ಶರ್ಟ್ಸ್​ ಧರಿಸಿ ವ್ಯಕ್ತಿಯೊಬ್ಬ ಮೈದಾನಕ್ಕೆ ನುಗ್ಗಿದ ಘಟನೆಯ ಬಗ್ಗೆ ಮಾತನಾಡಿದ ಚೇತನ್​, ಇಂದು ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಪ್ಯಾಲೆಸ್ತೀನಿಯನ್ ನ್ಯಾಯಕ್ಕಾಗಿ ಹೋರಾಡುವ ಕಾರ್ಯಕರ್ತರೊಬ್ಬರು ಪಿಚ್ ಅನ್ನು ಪ್ರವೇಶಿಸಿದರು. ಇಸ್ರೇಲ್ ರಾಷ್ಟ್ರವು ಪ್ಯಾಲೆಸ್ತೀನಿಯನ್ನರ ಮೇಲೆ ಮಾಡುತ್ತಿರುವ ಕ್ರೂರ ಜನಾಂಗೀಯ ಶುದ್ಧೀಕರಣವನ್ನು ಯಾವುದೇ ಭಾರತೀಯ ಕ್ರಿಕೆಟಿಗನು ವಿರೋಧಿಸಿಲ್ಲ. ಈ ಶತಮಾನದಲ್ಲಿ ಒಬ್ಬನಾದರೂ ಭಾರತೀಯ ಕ್ರಿಕೆಟಿಗನು ಮಾದರಿಯಾಗಿದ್ದಾರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು.

    ಆರನೇ ವಿಶ್ವಕಪ್​ ಗೆಲುವು
    ಏಕದಿನ ವಿಶ್ವಕಪ್‌ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದು, ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರನೇ ಬಾರಿ ವಿಶ್ವಕಪ್​ ಗೆಲುವು ಸಂಭ್ರಮಿಸುತ್ತಿದೆ. 1987, 1999, 2003, 2007, 2015 ಮತ್ತು ಇದೀಗ 2023 ಅಲ್ಲಿಗೆ ಒಟ್ಟು ಆರು ಬಾರಿ ಆಸ್ಟ್ರೇಲಿಯಾ ವಿಶ್ವಕಪ್​ ಗೆದ್ದಂತಾಯಿತು. (ಏಜೆನ್ಸೀಸ್​)

    ವಿಶ್ವಕಪ್​ ಫೈನಲ್​ನಲ್ಲಿ​ ಭಾರತ ಹೀನಾಯ ಸೋಲು: ರೋಹಿತ್​ ಶರ್ಮ ಕೊಟ್ಟ ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts