More

    ಕೃಷಿ ಕೂಲಿ ಕಾರ್ಮಿಕರ ಬದುಕಿಗಿಲ್ಲ ಭದ್ರತೆ

    ಸೋಮವಾರಪೇಟೆ: ಅಸಂಘಟಿತ ಕೃಷಿ ಕೂಲಿ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದ್ದು, ಸುಡುಬಿಸಿಲು ನಮ್ಮ ಆರೋಗ್ಯ, ಆಯುಷ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಕಾರ್ಮಿಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

    ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯು ಕಾಗಡೀಕಟ್ಟೆ ಅಯ್ಯಪ್ಪ ಕಾಲನಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ನೋವನ್ನು ತೋಡಿಕೊಂಡರು.

    ದೇಶದ ಎಲ್ಲ ಪ್ರಜೆಗಳಂತೆ ನಾವು ತೆರಿಗೆ ಕಟ್ಟುತ್ತಿದ್ದೇನೆ. ಆದರೆ, ನಾವು ಕೂಲಿ ಮಾಡುವ ಸ್ಥಳದಲ್ಲಿ ಹಾವು ಕಚ್ಚಿಯೋ, ಮರಗಳು ಮುರಿದು ಬಿದ್ದರೆ ನಮಗೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಎಷ್ಟೋ ಜನರು ಮರಗಳು ತಲೆಮೇಲೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಮಾಲೀಕರು ಒಂದಷ್ಟು ಪರಿಹಾರ ಕೊಟ್ಟಿರುವುದು ಬಿಟ್ಟರೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮಳೆಗಾಲದಲ್ಲಿ ಗಾಳಿ ಮಳೆಯಲ್ಲೇ ತೋಟ, ಗದ್ದೆಗಳಲ್ಲಿ ಕೆಲಸ ಮಾಡಬೇಕು. ಚಳಿಯಿಂದ ಪ್ರಾಣ ಬಿಟ್ಟಿರೂ ಕೇಳುವವರು ಇಲ್ಲ. ಈಗಂತೂ ಬಿಸಿಲು ಭೀಕರವಾಗಿದೆ. ಕೂಲಿ ಕೆಲಸ ಮಾಡದೆ ಜೀವನ ಸಾಗಿಸಲು ಸಾಧ್ಯವಿಲ್ಲ. ಯಾರಿಗೆ ನಮ್ಮ ಕಷ್ಟವನ್ನು ಹೇಳುವುದು ಎಂದು ನೊಂದುಕೊಂಡರು.

    ಮರಕಪಾತು ಮಾಡುವಾಗ ಬಿದ್ದು, ತೀವ್ರ ಗಾಯಗೊಂಡರೆ ಸರ್ಕಾರ ನಮ್ಮ ರಕ್ಷಣೆಗೆ ಬರುವುದಿಲ್ಲ. ಹೆಣವಾದರೆ ಪರಿಹಾರವಿಲ್ಲ. ನಮ್ಮನ್ನೆ ನಂಬಿರುವ ಕುಟುಂಬವನ್ನು ಸಾಕುವುದು ಯಾರು ಎಂದು ಪ್ರಶ್ನಿಸಿದರು. ಪ್ರತಿವರ್ಷ ಮರದಿಂದ ಬಿದ್ದು, ಹಾವು ಕಡಿದು, ಮಳೆಗಾಲದಲ್ಲಿ ತಲೆಯ ಮೇಲೆ ಮರಬಿದ್ದು ಕಾರ್ಮಿಕರ ಅನೇಕ ಜೀವಗಳು ಹೋಗುತ್ತವೆ. ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೆ ಎಂದು ಪ್ರಶ್ನಿಸಿದರು.

    ಕೂಲಿ ಕಾರ್ಮಿಕರಿಗೆ ನಿವೇಶನ ಇಲ್ಲ. ಶೇ.80 ರಷ್ಟು ಕೂಲಿ ಕಾರ್ಮಿಕರಿಗೆ ಅನಕ್ಷರತೆಯಿದೆ. ಸಿಗುವ ಅಲ್ಪಸ್ವಲ್ಪ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಎಲ್ಲ ರೀತಿಯ ತೆರಿಗೆಗಳನ್ನು ಕಟ್ಟುತ್ತೇವೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕೂಲಿ ಕಾರ್ಮಿಕರಿಗೆ ಸಾಲ ಕೊಡುತ್ತಿಲ್ಲ. ಇಂತಹ ತಾರತಮ್ಯವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.

    ದುಡಿದ ಕೂಲಿಯಲ್ಲಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟುತ್ತೇವೆ. ಕಾಲನಿಯಲ್ಲಿ ಕಾರ್ಮಿಕರ ಕುಟುಂಬಗಳಿಗೆ ಮೂಲಸೌಕರ್ಯಗಳನ್ನು ನೀಡುತ್ತಿಲ್ಲ. ಬಹುತೇಕ ವಾಸದ ಮನೆಗಳು ಶಿಥಿಲಗೊಂಡಿವೆ. ಚರಂಡಿಗಳಿಲ್ಲದೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ.

    ಕಾರ್ಮಿಕರಿಗೂ ಸರ್ಕಾರಿ ಸೌಲಭ್ಯಗಳು ಸಿಗಬೇಕು. ಕೃಷಿ ಬೆಳೆಗಳ ಉತ್ಪಾದನೆಯಲ್ಲಿ ಕೃಷಿ ಕಾರ್ಮಿಕರ ಪಾಲು ದೊಡ್ಡದಿದೆ. ವಯಸ್ಸ್ಸಾದ ಕೃಷಿ ಕಾರ್ಮಿಕರಿಗೆ ಸರ್ಕಾರದಿಂದ ಪಿಂಚಣಿ ಸೌಲಭ್ಯ ಒದಗಿಸಬೇಕು. ಸರ್ಕಾರಿ ಉದ್ಯೋಗದಲ್ಲಿ ಕಾರ್ಮಿಕರ ಮಕ್ಕಳಿಗೆ ವಿಶೇಷ ಮೀಸಲಾತಿ ಕಲ್ಪಿಸಿ, ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಯೋಜನೆ ರೂಪಿಸಬೇಕು. ಸರ್ಕಾರ ಬಡ ಕಾರ್ಮಿಕರಿಗೆ ತೆರಿಗೆ ವಿಯಾಯಿತಿ ನೀಡಿದರೆ ಒಂದಷ್ಟು ಸಂಕಷ್ಟದಿಂದ ಪಾರಾಗಬಹುದು. ಬಡ ಕಾರ್ಮಿಕ ಕುಟುಂಬಕ್ಕೆ ಸರ್ಕಾರ ವಾರ್ಷಿಕ ಒಂದೂವರೆ ಲಕ್ಷ ರೂ. ಸಹಾಯಧನ ನೀಡಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts