More

    ಅಭ್ಯರ್ಥಿಗಳ ಬಗ್ಗೆ ಚರ್ಚೆ ಇಲ್ಲ, ಚುನಾವಣಾ ತಂತ್ರಗಾರಿಕೆ ಮಾತ್ರ ಚರ್ಚೆ: ಡಾ.ಪರಮೇಶ್ವರ

    ಬೆಂಗಳೂರು: ದೆಹಲಿಯಲ್ಲಿ ನಡೆದ ಸಭೆಯಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಚುನಾವಣಾ ತಂತ್ರಗಾರಿಕೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

    ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆದಷ್ಟು ಬೇಗ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮ ಮಾಡಿ ಪಟ್ಟಿ ಬಿಡುಗಡೆ ಮಾಡುವಂತೆ ತಿಳಿಸಿದ್ದೇವೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರದೇಶ ಚುನಾವಣಾ ಸಮಿತಿ ಸಭೆ ಕರೆದು ಇಲ್ಲಿ ತೀರ್ಮಾನ ಮಾಡಿ, ಅದನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ನೀಡುತ್ತೇವೆ ಎಂದಿದ್ದಾರೆ. ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಿ ಸಭೆ ನಡೆಸಬಹುದು ಎಂದು ತಿಳಿಸಿದರು.

    ಚುನಾವಣಾ ಜವಾಬ್ದಾರಿಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡು ನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಯಾವ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿದೆಯೋ, ಅಂತಹ ಕಡೆ ಸೋತರೆ, ಸರಿಯಾಗಿ ಕೆಲಸ ಮಾಡಿಲ್ಲ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ ಎಂದರು.

    ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಐದು ಕ್ಲಸ್ಟರ್ ಅನ್ನು ಮಾಡಿದೆ. ಮೊದಲ ಕ್ಲಸ್ಟರ್‌ನಲ್ಲಿ ಕರ್ನಾಟಕ, ತೆಲಂಗಾಣ, ಕೇರಳ ರಾಜ್ಯಗಳಿವೆ. ಮೊದಲ ಕ್ಲಸ್ಟರ್‌ನಲ್ಲಿರುವ ಎಲ್ಲ ರಾಜ್ಯಗಳ ನಾಯಕರು ಈ ಸಭೆಗೆ ಆಗಮಿಸಿದ್ದರು. ಸಭೆಯಲ್ಲಿ ಕೆಲವು ನಿರ್ಧಿಷ್ಟ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

    ಸಮನ್ವಯಕಾರರ ನೇಮಕಕ್ಕೆ ಕ್ರಮ

    ಪಂಚಾಯಿತಿ ಹಂತದಲ್ಲಿ ಸಮಿತಿಗಳ ರಚನೆ ಮಾಡುವುದು, ಪ್ರಚಾರ ಯಾವ ರೀತಿ ಕೈಗೊಳ್ಳಬೇಕು ಹಾಗೂ ಅಭ್ಯರ್ಥಿಗಳ ಆಯ್ಕೆ ನಂತರ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಬಹಳ ವ್ಯವಸ್ಥಿತವಾಗಿ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.
    ಈ ಹಿಂದೆ ಪ್ರತಿ ಕ್ಷೇತ್ರಕ್ಕೆ ಒಬ್ಬರನ್ನು ವೀಕ್ಷಕರನ್ನು ನೇಮಿಸಲಾಗುತ್ತಿತ್ತು. ಈ ಬಾರಿ, ಅದರ ಬದಲಿಗೆ ಸಮನ್ವಯಕಾರರನ್ನು ನೇಮಿಸಲಾಗಿದೆ. ವಾರ್ ರೂಮ್ ಎನ್ನುವುದನ್ನು ಕನೆಕ್ಟ್ ಸೆಂಟರ್ ಎಂದು ಬದಲಿಸಲಾಗಿದೆ. ಕನೆಕ್ಟ್ ಸೆಂಟರ್ ಮೂಲಕ ನೇರವಾಗಿ ಕೋರ್ಡಿನೇಟರ್ ಜತೆ ಸಂಪರ್ಕದಲ್ಲಿದ್ದು ಕೆಲಸ ಮಾಡಬೇಕು ಎಂದು ತಿಳಿಸಿರುವುದಾಗಿ ಹೇಳಿದರು.

    ಬಿಜೆಪಿ ಚುನಾವಣಾ ವಿಧಾನ ಬೇರೆ

    ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮತದಾರರ ಹತ್ತಿರ ಹೋಗಲು ಆಕ್ಷೇಪಣೆ ಇಲ್ಲ. ಯಾರು ಬೇಕಾದರೂ ಮತ ಕೇಳಬಹುದು. ಬಿಜೆಪಿ ಚುನಾವಣೆಯನ್ನು ಎದುರಿಸುವ ವಿಧಾನ ಹಾಗೂ ಚುನಾವಣಾ ವಿಧಾನ ಬೇರೆ ರೀತಿಯಾಗಿರುತ್ತದೆ. ಆದರೆ, ಅಂತಿಮವಾಗಿ ಮತದಾರರು ಮಾಡುವ ತೀರ್ಮಾನವನ್ನು ಯಾರು ಊಹಿಸಲು ಸಾಧ್ಯವಿಲ್ಲ ಎಂದರು.
    ಹಾವೇರಿ ಪ್ರಕರಣವನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ರಕ್ಷಣೆ ಮಾಡುವುದಿಲ್ಲ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.

    ಮುದ್ದಹನುಮೇಗೌಡ ಸೇರ್ಪಡೆ

    ಮಾಜಿ ಸಂಸದ ಮುದ್ದ ಹನುಮೇಗೌಡ ಅವರು ನನ್ನನ್ನು ಸಹ ತುಮಕೂರಿನ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಅವರು ಪಕ್ಷಕ್ಕೆ ಸೇರ್ಪಡೆಯಾಗಲು ಯಾವುದೇ ಅಭ್ಯಂತರವಿಲ್ಲ. ಈ ಬಗ್ಗೆ ಒಮ್ಮತದಿಂದ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದು, ಜಿಲ್ಲೆಯ ನಾಯಕರು ತೀರ್ಮಾನ ಮಾಡುವಂತೆ ಹೇಳಿದ್ದಾರೆ ಎಂದರು.

    ಪಕ್ಷದ ಹಿತ ಕಾಪಾಡುವುದು ಮುಖ್ಯ

    ಚುನಾವಣೆಯ ಟಿಕೆಟ್ ನೀಡಲು ಪಕ್ಷದಲ್ಲಿ ಕೆಲವು ಮಾನದಂಡಗಳಿವೆ. ಅದನ್ನು ಪಾಲಿಸಬೇಕಾಗುತ್ತದೆ. ನನಗೇ ಟಿಕೆಟ್ ಕೊಡಬೇಕೆಂದು ಕಂಡಿಶನ್ ಹಾಕಬಾರದು ಎಂಬುದನ್ನು ಅಧ್ಯಕ್ಷರು ಹೇಳಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಜಿಲ್ಲೆಯ ನಾಯಕರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಪಕ್ಷದ ಹಿತವನ್ನು ಕಾಪಾಡುವುದು ಮುಖ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts