More

    ಜಿಲ್ಲೆಯಲ್ಲಿ ಸದ್ಯ ಖಾಲಿ ಇವೆ 818 ಬೆಡ್!

    ಮರಿದೇವ ಹೂಗಾರ ಹುಬ್ಬಳ್ಳಿ

    ಧಾರವಾಡ ಜಿಲ್ಲೆಯ ಯಾವುದೇ ಆಸ್ಪತ್ರೆಗಳ ದೂರವಾಣಿಗೆ ಕರೆ ಮಾಡಿದರೂ ಬೆಡ್ ಸಿಗುತ್ತಿಲ್ಲ ಎಂಬ ಆತಂಕದ ಮಾತುಗಳೇ ಎಲ್ಲೆಡೆ ಹರಿದಾಡುತ್ತಿವೆ. ಕರೊನಾ ಸೋಂಕಿತರನ್ನು ಯಾವ ಆಸ್ಪತ್ರೆಗೆ ಸೇರಿಸಬೇಕು? ಬೆಡ್ ಲಭ್ಯವಿದೆಯೋ ಇಲ್ಲವೋ ಎಂಬ ಗೊಂದಲ ಕುಟುಂಬಸ್ಥರನ್ನು ಕಾಡುತ್ತಿದೆ. ಆದರೆ, ಸದ್ಯಕ್ಕೆ ಈ ನಿಟ್ಟಿನಲ್ಲಿ ಚಿಂತೆ ಬೇಡ ಎನ್ನುತ್ತವೆ ಜಿಲ್ಲಾಡಳಿತ ನೀಡಿರುವ ಅಂಕಿ ಅಂಶಗಳು.

    ಜಿಲ್ಲಾಡಳಿತದ ಪ್ರಕಾರ ಶುಕ್ರವಾರದಂದು ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಒಟ್ಟಾರೆಯಾಗಿ ಖಾಲಿ ಇರುವ ಕೋವಿಡ್ ಬೆಡ್​ಗಳ ಸಂಖ್ಯೆ ಬರೋಬ್ಬರಿ 818.

    ಜಿಲ್ಲೆಯಲ್ಲಿ 8 ಸರ್ಕಾರಿ ಆಸ್ಪತ್ರೆ ಹಾಗೂ 31 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 280 ಐಸಿಯು ಬೆಡ್​ಗಳಿದ್ದು, ಈ ಪೈಕಿ ಶುಕ್ರವಾರದಂದು 4 ಖಾಲಿ ಇದ್ದವು. 145 ವೆಂಟಿಲೇಟರ್ ಬೆಡ್​ಗಳಿದ್ದು, ಇದರಲ್ಲಿ 7 ಖಾಲಿ ಇದ್ದವು. ಖಾಸಗಿ ಆಸ್ಪತ್ರೆಗಳಲ್ಲಿ 100 ಐಸಿಯು ಬೆಡ್ ಹಾಗೂ 45 ವೆಂಟಿಲೇಟರ್ ಬೆಡ್​ಗಳಿದ್ದು, ಇವೆಲ್ಲವೂ ಭರ್ತಿಯಾಗಿದ್ದವು. ಒಂದು ವೆಂಟಿಲೇಟರ್ ಬೆಡ್ ಮಾತ್ರ ಖಾಲಿ ಇತ್ತು.

    ಅದೆಷ್ಟೋ ರೋಗಿಗಳು ಮತ್ತವರ ಸಂಬಂಧಿಕರು ವಿವಿಧ ಆಸ್ಪತ್ರೆಗಳಿಗೆ ಕರೆ ಮಾಡಿ ಬೆಡ್ ಸವಲತ್ತು ಕೇಳುತ್ತಿದ್ದಾರೆ. ಆಸ್ಪತ್ರೆಯಿಂದ ಬೆಡ್​ಗಳು ಭರ್ತಿಯಾಗಿವೆ ಎಂಬ ಉತ್ತರ ದೊರೆಯುತ್ತಿದೆ ಎನ್ನಲಾಗುತ್ತಿದೆ. ಈ ಸಮಸ್ಯೆ ಅರಿತ ಜಿಲ್ಲಾಡಳಿತವು ಈಗ ಬೆಡ್ ಲಭ್ಯತೆ ಕುರಿತ ಮಾಹಿತಿಯನ್ನು ದಿನವೂ ಒದಗಿಸುವ ಮೂಲಕ ಸೋಂಕಿತರ ಚಿಕಿತ್ಸೆಗೆ ನೆರವಾಗಲು ಉದ್ದೇಶಿಸಿದೆ.

    ಕಿಮ್ಸ್​ನಲ್ಲಿ 78 ಬೆಡ್ ಖಾಲಿ: ಕಿಮ್ಸ್​ನಲ್ಲಿ ಕೋವಿಡ್ ರೋಗಿಗಳಿಗೆ 1000 ಬೆಡ್​ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ಸದ್ಯ 922 ಸೋಂಕಿತರನ್ನು ದಾಖಲು ಮಾಡಿಕೊಳ್ಳಲಾಗಿದೆ. ಸೂಪರ್ ಸ್ಪೆಷಾಲಿಟಿಯಲ್ಲಿ 202, ಕಾರ್ಡಿಯಾಲಜಿಯಲ್ಲಿ 61, ಮೇನ್ ಆಸ್ಪತ್ರೆಯಲ್ಲಿ 315 ಸೇರಿ ಒಟ್ಟು 578 ಸೋಂಕಿತರು ದಾಖಲಾಗಿದ್ದಾರೆ. ಇದಲ್ಲದೆ, 344 ತೀವ್ರ ಉಸಿರಾಟದ ಸಮಸ್ಯೆ ಇರುವವರನ್ನು ಕೂಡ ಇಲ್ಲಿಯೇ ದಾಖಲಿಸಿಕೊಳ್ಳಲಾಗಿದೆ.

    ಸರ್ಕಾರಿ ಆಸ್ಪತ್ರೆಯ ಬೆಡ್​ಗಳ ಸಂಖ್ಯೆ-ಭರ್ತಿ-ಖಾಲಿ (ಜಿಲ್ಲಾಡಳಿತ ನೀಡಿರುವ ಶುಕ್ರವಾರದ ಮಾಹಿತಿ. ಇದರಲ್ಲಿ ಕಾಲಕಾಲಕ್ಕೆ ಬದಲಾವಣೆ ಇದ್ದೇ ಇರುತ್ತದೆ.)

    ಕಂಟ್ರೋಲ್ ರೂಂ ನಂಬರ್: ಬೆಡ್ ಲಭ್ಯತೆಗಾಗಿ ಜಿಲ್ಲಾಡಳಿತವು ಕಂಟ್ರೋಲ್ ರೂಂ ಸ್ಥಾಪಿಸಿದೆ. ಬೆಡ್ ಅಗತ್ಯವಿದ್ದವರು ಇಲ್ಲಿನ ಮೊಬೈಲ್​ಫೋನ್ ಸಂಖ್ಯೆ 8047168111ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

    ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಬೆಡ್​ಗಳ ಸಂಖ್ಯೆ ಹೆಚ್ಚಿಸುವಂತೆ ಬೇಡಿಕೆ ಬಂದಿದೆ. ಆಕ್ಸಿಜನ್ ವಿತರಣೆಯಾದ ಬಳಿಕ ಬೆಡ್​ಗಳ ಸಂಖ್ಯೆಯನ್ನು ಜಿಲ್ಲೆಯಲ್ಲಿ ಹೆಚ್ಚಿಸಲಾಗುವುದು. ಸದ್ಯ ಈ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕೋವಿಡ್ ಅನ್ನು ಸಮರ್ಥವಾಗಿ ಎದುರಿಸಲಾಗುವುದು.

    -ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts