More

    ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಸೊರಗುತ್ತಿದೆ ರಂಗಭೂಮಿ

    ಶಿಕಾರಿಪುರ: ಟಿವಿ, ಚಲನಚಿತ್ರ ಸೇರಿದಂತೆ ಮುಂತಾದ ಮಾಧ್ಯಮಗಳ ಭರಾಟೆಯಲ್ಲಿ ರಂಗಭೂಮಿ ದಿನೇ ದಿನೆ ಸೊರಗುತ್ತಿದೆ ಎಂದು ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಿ.ಪಾಪಯ್ಯ ಹೇಳಿದರು.

    ನಗರದ ಶ್ರೀ ರೇಣುಕಾ ಆರ್ಕೇಡ್‌ನ ರಂಗಸ್ಥಳದಲಿ ಶನಿವಾರ ಏರ್ಪಡಿಸಿದ್ದ ತಿಂಗಳ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿ, ರಂಗಭೂಮಿ ಕಲಾವಿದರ ತವರು. ದಶಕಗಳ ಹಿಂದೆ ರಂಗಭೂಮಿ ಅತ್ಯಂತ ಚೈತನ್ಯದಾಯಕವಾಗಿತ್ತು. ರಂಗಭೂಮಿ ಕಲಾವಿದರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ವೃತ್ತಿ ರಂಗಭೂಮಿ ಉಳಿಯಬೇಕು ಮತ್ತು ಬೆಳೆಯಬೇಕು. ಅಳಿದುಳಿದ ನಮ್ಮ ರಂಗಭೂಮಿ ಕಲಾವಿದರ ಬದುಕು ಕೂಡ ಹಸನಾಗಬೇಕು. ಕನ್ನಡದ ಕಲಾವಿದರು ಮತ್ತೆ ಮುಖ್ಯವಾಹಿನಿಗೆ ಬರಬೇಕು. ಇದರಿಂದ ನಾಟಕ ಕಲೆಯನ್ನು ಉಳಿಸಲು ಸಹಕಾರಿ ಆಗುತ್ತದೆ ಎಂದರು.
    ಕವಿ ದೇವನೂರು ಮಹಾದೇವರ ಸಾಮಾಜಿಕ ಕಳಕಳಿಯ ‘ಅಮಾಸ’ ನಾಟಕವನ್ನು ಕಲಾವಿದರು ಅದ್ಭುತವಾಗಿ ರಂಗಭೂಮಿ ಮೇಲೆ ತಂದಿದ್ದಾರೆ. ಪ್ರತಿ ದೃಶ್ಯ, ಸಂಭಾಷಣೆ ಅತ್ಯಂತ ಹೃದಯಂಗಮವಾಗಿದೆ. ಈ ನಾಟಕ ಸಾಮಾಜಿಕ ಚಿಂತನೆಗಳ ಸಂದೇಶವನ್ನು ಸಾರಿದೆ. ಇಂತಹ ಪ್ರಯತ್ನ ಮಾಡುತ್ತಿರುವ ಶಿಕಾರಿಪುರದ ರಂಗಜೀವಗಳು ತಂಡದ ಕಾರ್ಯ ಅಭಿನಂದನಾರ್ಹ. ಪ್ರತೀ ತಿಂಗಳು ಒಂದೊಂದು ನಾಟಕವನ್ನು ಆಯ್ದುಕೊಂಡು ಪ್ರದರ್ಶನ ನೀಡುತ್ತಿರುವದು ಮಾದರಿ ಎಂದು ಹೇಳಿದರು.
    ಕಲೆಗೆ ಒಂದು ಶಕ್ತಿ ಇದೆ. ಕಲಾವಿದರು ಸದಾ ಅಭಿನಯದ ಮೂಲಕ ಸಹೃದಯ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಕಲಾವಿದರು ಶ್ರಮಪಟ್ಟು ಹೊಸ ಹೊಸ ಪ್ರಯೋಗದ ಮೂಲಕ ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿ ಆಗುತ್ತಾರೆ. ಸಾಮಾಜಿಕ ಪರಿಣಾಮ ಬೀರುವ ನಾಟಕಗಳಿಗಿಂತ ಹಾಸ್ಯ ನಾಟಕಗಳು ಜನರನ್ನು ಹೆಚ್ಚು ಆಕರ್ಷಿಸುತ್ತವೆ. ಶಿಕಾರಿಪುರ ಕಲಾವಿದರನ್ನು ಸೃಷ್ಟಿಸುವ ಕೇಂದ್ರವಾಗುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು
    ಕಲಾ ಪೋಷಕ ಮಧುಕೇಶ್ವರ್ ಮಾತನಾಡಿ, ರಂಗಭೂಮಿ ಎನ್ನುವದು ಗಂಧರ್ವ ಲೋಕ. ರಂಗಭೂಮಿಯಿಂದ ಡಾ. ರಾಜ್‌ಕುಮಾರ್ ಸೇರಿದಂತೆ ನೂರಾರು ಕಲಾವಿದರು ಕನ್ನಡ ಚಿತ್ರರಂಗ ಪ್ರಕಾಶಿಸುವಂತೆ ಮಾಡಿದ್ದಾರೆ. ಮೊಬೈಲ್ ಹಾವಳಿಯ ಈ ಸಂದರ್ಭದಲ್ಲಿ ಸಿನಿಮಾ ಮತ್ತು ನಾಟಕಗಳು ಹಿಂದೆ ಬೀಳುತ್ತಿದ್ದು, ನಿಜವಾದ ಕಲಾವಿದರು ನಾಟಕವನ್ನು ಉಳಿಸುವ, ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ರಾಷ್ಟ್ರಮಟ್ಟದಲ್ಲಿ ಇವರ ಕಲೆ ಮೂಡಿಬರಲಿ ಎಂದು ಹೇಳಿದರು.
    ಕಲಾವಿದ ಸಿ.ಲಕ್ಷ್ಮಣ್ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ರಂಗಭೂಮಿಯ ಕಲಾವಿದರು ಇದ್ದರು. ಇಂದು ಬಹುತೇಕ ರು ನಮ್ಮೊಂದಿಗಿಲ್ಲ. ಕಲಾವಿದರು ತಾವು ನೋವುಂಡು ನೋಡುಗರಿಗೆ ಕಲೆಯ ರಸದೌತಣ ನೀಡುತ್ತಿದ್ದರು. ಶಿಕಾರಿಪುರ ನಾಡಿನಲ್ಲಿ ಹೆಚ್ಚಿನ ಶ್ರಮವಹಿಸಿ ಮಾಡುವ ನಾಟಕಗಳಿಗೆ ಪ್ರೋತ್ಸಾಹ ಕೊಡುತ್ತಾ ಬೆಳೆಸೋಣ. ಇಂದು ಹಾಕಿದ ಬೀಜ ಮುಂದೆ ಆಲದ ಮರವಾಗಿ ಬೆಳೆಯುತ್ತದೆ ಎಂದರು.
    ಸಿದ್ದೇಶ್ ಅಧ್ಯಕ್ಷತೆ ವಹಿಸಿದ್ದರು. ರಂಗ ಕಲಾವಿದ ಬಿ.ಕುಮಾರ್ ಹಿರೇಜಂಬೂರು ಅವರನ್ನು ಸನ್ಮಾನಿಸಲಾಯಿತು. ದೇವನೂರು ಮಹದೇವ ವಿರಚಿತ ಅಮಾಸ ನಾಟಕವನ್ನು ರಾಜೇಶ್ ಕುಂದರ್ ಬೈಕಾಡಿ ನಿರ್ದೇಶನ ಮಾಡಿದರು. ಮೆಟ್ರೋ ಗೈಸ್ ಡಾನ್ಸ್ ಸ್ಕೂಲ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts