More

    ಸಾಮಾಜಿಕ ಕ್ಷೇತ್ರದಲ್ಲಿ ಧರ್ಮಸ್ಥಳ ಸಂಸ್ಥೆ ಕಾರ್ಯ ಶ್ಲಾಘನೀಯ

    ಪಿರಿಯಾಪಟ್ಟಣ: ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ ಎಂದು ರಾವಂದೂರು ಮುರುಘಾ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಚಿಟ್ಟೇನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್‌ನ ಪಿರಿಯಾಪಟ್ಟಣ ಯೋಜನಾ ಕಚೇರಿಯ ಹುಣಸವಾಡಿ ವಲಯ ಹಾಗೂ ತಾಲೂಕು ಪ್ರಗತಿ ಬಂಧು ಸ್ವಸ್ವಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಧ್ಯಾನದಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ. ದೇವನೊಬ್ಬ ನಾಮ ಹಲವು ಎಂಬಂತೆ ಮನಸ್ಸಿನ ಭಾವನೆಯೇ ದೇವರು. ಮನೆಯ ಉತ್ತಮ ವಾತಾವರಣದಿಂದ ಶಾಂತಿ -ಸಮೃದ್ಧಿ ಕಾಣಬಹುದು. ದುಶ್ಚಟಗಳಿಂದ ದೂರವಿದ್ದು, ನೆಮ್ಮದಿಯ ಬದುಕು ನಡೆಸಬೇಕು ಎಂದರು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ವೀರೇಂದ್ರ ಹೆಗಡೆ ಹಾಗೂ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಹಿಳಾ ಸಬಲೀಕರಣದೊಂದಿಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಲಾಗುತ್ತಿದೆ ಎಂದರು.

    ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಎಚ್.ಡಿ.ರಾಜೇಂದ್ರ ಮಾತನಾಡಿ, ಸರ್ಕಾರೇತರ ಸಂಸ್ಥೆಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಎಂದರು.

    ಯೋಜನಾಧಿಕಾರಿ ಸುರೇಶ್ ಶೆಟ್ಟಿ ಮಾತನಾಡಿದರು. ಇದೇ ವೇಳೆ ಸಂಸ್ಥೆ ವತಿಯಿಂದ ದೊಡ್ಡಹರವೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 1.5 ಲಕ್ಷ ರೂ ಚೆಕ್, ಹಸಿರು ಇಂಧನ ಯೋಜನೆಯೆಡಿ ಫಲಾನುಭವಿಗಳಿಗೆ ಸೋಲಾರ್ ವಿತರಣೆ, ಸುರಕ್ಷಾ ಅರೋಗ್ಯ ಯೋಜನೆಯಡಿ ಆಸ್ಪತ್ರೆ ವೆಚ್ಚವಾಗಿ ಕಲಾವತಿ ಎಂಬ ಮಹಿಳೆಗೆ 20 ಸಾವಿರ ರೂ. ಚೆಕ್ ವಿತರಣೆ ಮತ್ತು ಮಣ್ಣಿನ ಕಲಾಕೃತಿ ಸಾಧನೆ ಮಾಡಿದ ಸೋಹನ್ ಗೌಡನಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.
    ಚಿಟ್ಟೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಮುಖಂಡ ಸಚ್ಚಿದಾನಂದ್, ಮಲ್ಲಿಕಾರ್ಜುನ್, ಒಕ್ಕೂಟ ಅಧ್ಯಕ್ಷರಾದ ಜಾನಕಮ್ಮ, ಶಿವಮ್ಮ, ಕುಮಾರಿ, ವಲಯ ಮೇಲ್ವಿಚಾರಕಿ ಶೀಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts