More

    ಯುದ್ಧ ಕಾಂಡ ಮುಗಿದಿದೆ, ಬಾಲ ಕಾಂಡ ಆರಂಭವಾಗಿದೆ!

    ಜಗದಗಲಬಾಲರಾಮನ ಪ್ರಾಣಪ್ರತಿಷ್ಠೆಯಾಗಿದೆ, ಅವನಿಗೆ ಬಾಲಕ ರಾಮ ಅಂತ ಮರುನಾಮಕರಣವೂ ಆಗಿದೆ. ಅಂದಿನ ರಾಮಾಯಣ ಇಂದು ತುಸು ತಿರುವುಮುರುವಾಗಿ ಅರಣ್ಯ ಕಾಂಡ, ಯುದ್ಧ ಕಾಂಡ ಮೊದಲು ಮುಕ್ತಾಯವಾಗಿ ಬಾಲ ಕಾಂಡ ಈಗ ಆರಂಭವಾಗಿದೆ! ಇನ್ನಾವ ಕಾಂಡಗಳೂ ಬರುವುದು ಬೇಡ. ರಾಮ ಶತಮಾನಗಳ ಕಾಲ ಅರಣ್ಯ ಕಾಂಡ ಕಂಡಾಗಿದೆ; ನಾವೂ ದಶಕಗಳ ಕಾಲ ಧಾರ್ವಿುಕ-ರಾಜಕೀಯ-ವೈಚಾರಿಕ ಕ್ಷೇತ್ರಗಳಲ್ಲಿ, ಮಾಧ್ಯಮಗಳಲ್ಲಿ, ನ್ಯಾಯಾಲಯದಲ್ಲಿ ಯುದ್ಧ ಕಾಂಡವನ್ನು ಸಾಕು ಅನಿಸುವಷ್ಟು ಕಂಡಾಗಿದೆ.

    ಪುರಾಣಗಳ ಪ್ರಕಾರ ಅಯೋಧ್ಯೆಯಲ್ಲಿ ರಾಮಜನ್ಮಸ್ಥಾನ ಮಂದಿರವನ್ನು ನಿರ್ವಿುಸಿದವನು ಶ್ರೀರಾಮನ ಪುತ್ರ ಕುಶ. ಲವ ಪಶ್ಚಿಮಕ್ಕೆ ತೆರಳಿ ಲಾಹೋರ್ ನಗರವನ್ನು ಸ್ಥಾಪಿಸಿದ ಎಂದು ಹೇಳಲಾಗುತ್ತದೆ. ಇವೆರಡೂ ಘಟಿಸಿದ್ದು ಯಾವಾಗ ಎಂದು ಐತಿಹಾಸಿಕವಾಗಿ ಹೇಳಲಾಗುವುದಿಲ್ಲ. ಆದರೆ ಇತಿಹಾಸ ದಾಖಲಿಸಿರುವುದು ರಾಮಜನ್ಮಭೂಮಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮಂದಿರವೊಂದನ್ನು ಕ್ರಿ.ಪೂ. 5ರಲ್ಲಿ ಉಜ್ಜಯಿನಿಯ ಅರಸ ವಿಕ್ರಮಾದಿತ್ಯ ಪುನರ್ನಿರ್ವಿುಸಿದನೆಂದು.

    ಹನ್ನೊಂದನೆಯ ಶತಮಾನದ ಆದಿಯಲ್ಲಿ ಮಹಮದ್ ಘಝ್ನುವಿಯ ಸೇನೆಯೊದಿಗೆ ಭಾರತಕ್ಕೆ ಭೇಟಿ ನೀಡಿದ್ದ ಪರ್ಷಿಯನ್ (ಖೊರಾಸಾನಿ) ಇತಿಹಾಸಕಾರ ಅಲ್ ಬೆರೂನಿ ಇಲ್ಲಿನ ಜನಜೀವನವನ್ನು ಅವಲೋಕಿಸಿ, ಧಾರ್ವಿುಕತೆ ಹಾಗೂ ಇತಿಹಾಸವನ್ನು ಅಧ್ಯಯನ ಮಾಡಿ ಬರೆದ ‘ತೆಹ್ಖೀಖ್ ಮಾ ಲಿ-ಲ್ ಹಿಂದ್’ ಕೃತಿ ಆತ ದಾಖಲಿಸಿರುವ ಹಲವು ವಿಷಯಗಳಲ್ಲೊಂದು ರಾಮ ಒಬ್ಬ ಐತಿಹಾಸಿಕ ವ್ಯಕ್ತಿ ಮತ್ತು ರಾಮಾಯಣ ಐತಿಹಾಸಿಕ ಘಟನಾವಳಿಗಳ ದಾಖಲೆ ಎಂದು.

    ನಂತರ ರಾಮ ಮತ್ತು ಅಯೋಧ್ಯೆಯ ರಾಮಜನ್ಮಸ್ಥಾನ ಮಂದಿರದ ಬಗ್ಗೆ ದೊಡ್ಡದಾಗಿ ವಿವರಗಳು ದೊರೆಯುವುದು ಬಾಬರ್​ನ ಮರಿಮಗ ಜಹಾಂಗೀರ್​ನ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟಿಷ್ ವಹಿವಾಟುದಾರ ವಿಲಿಯಂ ಫಿಂಚ್​ನಿಂದ. ಮಂದಿರ ಕೆಡವಲ್ಪಟ್ಟು ಅದರ ಅವಶೇಷಗಳಿಂದಲೇ ಅಲ್ಲೊಂದು ಮಸೀದಿ ನಿರ್ವಣವಾಗಿ ಅರ್ಧ ಶತಮಾನ ಕಳೆದ ನಂತರ ಅಲ್ಲಿಗೆ ಭೇಟಿ ನೀಡಿದ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ಫಿಂಚ್, ಉಳಿದಿದ್ದ ಮಂದಿರದ ಭಾಗಗಳ ವಿವರಗಳು ಹಾಗೂ ಅಲ್ಲಿ ದಿನನಿತ್ಯವೂ ನಡೆಯುತ್ತಿದ್ದ ವಿಧಿವತ್ತಾದ ಅರ್ಚನೆಗಳ ಕುರಿತಾಗಿ ವಿವರವಾಗಿ ಬರೆದಿದ್ದಾನೆ.

    ಅಲ್ ಬೆರೂನಿ ಮತ್ತು ವಿಲಿಯಂ ಫಿಂಚ್​ರ ಭಾರತ ಭೇಟಿಗಳ ನಡುವೆ ಈ ದೇಶದಲ್ಲಿ ಅಗಾಧ ರಾಜಕೀಯ-ಧಾರ್ವಿುಕ-ಸಾಮಾಜಿಕ ಸ್ಥಿತ್ಯಂತರಗಳು ಆಗಿಹೋಗಿದ್ದವು. ಕ್ರಿ.ಶ. 1192ರಲ್ಲಿ ಎರಡನೆಯ ತರೈನ್ ಕದನದಲ್ಲಿ ಮಹಮದ್ ಘೊರಿಯ ವಿಜಯದೊಂದಿಗೆ ಉತ್ತರ ಭಾರತದಲ್ಲಿ ತುಕೋ-ಅಫ್ಘನ್ ಮುಸ್ಲಿಂ ಆಳ್ವಿಕೆ ಆರಂಭವಾಯಿತು. ಮುನ್ನೂರು ವರ್ಷಗಳ ನಂತರ ಮಧ್ಯ ಏಷ್ಯಾದ ಫರ್ಗಣಾದ ಸುಲ್ತಾನ ಜಹರುದ್ದೀಣ್ ಬಾಬರ್ ಕ್ರಿ.ಶ. 1526ರಲ್ಲಿ ಮೊದಲನೆಯ ಪಾನಿಕಟ್ ಕದನದಲ್ಲಿ ದೆಹಲಿಯ ಮುಸ್ಲಿಂ ಸುಲ್ತಾನ ಇಬ್ರಾಹಿಂ ಲೋದಿಯನ್ನೂ, ಮರುವರ್ಷ ಖನ್ವಾ ಕದನದಲ್ಲಿ ರಾಣಾ ಸಂಗಾ ನೇತೃತ್ವದ ರಜಪುತ್ ಒಕ್ಕೂಟ ಸೇನೆಯನ್ನೂ ಸೋಲಿಸಿ ಉತ್ತರ ಭಾರತದ ಮೇಲೆ ತನ್ನ ಅಧಿಪತ್ಯ ಸ್ಥಾಪಿಸಿದ ಮತ್ತು ಮೊಘಲ್ ರಾಜವಂಶಕ್ಕೆ ಅಸ್ತಿಭಾರ ಹಾಕಿದ. ಉಪಖಂಡದಲ್ಲಿ ತನ್ನೀ ಯಶಸ್ಸುಗಳ ಬಗ್ಗೆ ಹೀಗೆ ಬರೆದುಕೊಂಡ- ‘ಕಾಫಿರರು ಮತ್ತು ಹಿಂದೂಗಳ ವಿರುದ್ಧ ಹೋರಾಡಿ ಹುತಾತ್ಮನಾಗಬೇಕೆಂಬುದು ನನ್ನ ಬಯಕೆಯಾಗಿತ್ತು. ಆದರೆ ದೇವರು ನನ್ನನ್ನು ಘಾಜಿಯನ್ನಾಗಿಸಿದ’. ಘಾಜಿ ಅಂದರೆ ಇಸ್ಲಾಂಗಾಗಿ ಹೋರಾಡಿ ವಿಜಯಿಯಾದವನು. ಅಂದರೆ ಜಿಹಾದಿಯಾಗಿ ಹೋರಾಡಿ ಸತ್ತು ಸ್ವರ್ಗದಲ್ಲಿ ತನಗಾಗಿ ಕಾದಿರುವ ವೈಭೋಗಗಳನ್ನು ಅನುಭವಿಸಲು ಹೊರಟಿದ್ದ ಅವನು ಇಸ್ಲಾಂಗಾಗಿ ಹೋರಾಡಿ ವಿಜಯಿಯಾದ. ಬಳಿಕ, 1530ರಲ್ಲಿ ಆಗ್ರಾದಲ್ಲಿ ಮರಣಹೊಂದಿದ. ಹೀಗಾಗಿ ಅವನಿಗೆ ಸ್ವರ್ಗದಲ್ಲಿ ವೈಭೋಗಗಳು ಸಿಕ್ಕಿರಲಾರವು. ಆದರೆ ತನ್ನ ಮುಂದಿನ ಹಲವಾರು ತಲೆಮಾರುಗಳಿಗೆ ಭಾರತದಲ್ಲಿಯೇ ವೈಭವಪೂರ್ಣ ಬದುಕು ಕಳೆಯುವ ಅವಕಾಶವನ್ನು ಸೃಷ್ಟಿಸಿ ಹೊರಟುಹೋದ. ಆ ಹಾದಿಯಲ್ಲಿ ಅವನು ಅಪ್ಪಟ ಜಿಹಾದಿಯಂತೆ 1528ರಲ್ಲಿ ಅಯೋಧ್ಯೆಯ ರಾಮಜನ್ಮಸ್ಥಾನ ಮಂದಿರವನ್ನು ಕೆಡವಿಯಾಗಿತ್ತು.

    ಧ್ವಂಸಸೊಳಿಸಲ್ಪಟ್ಟ ಮಂದಿರದ ಸ್ಥಳದಲ್ಲೊಂದು ಮಸೀದಿಯನ್ನು ನಿರ್ವಿುಸುವಂತೆ ಸುನ್ನಿ ಬಾಬರ್ ತನ್ನ ಶಿಯಾ ಸೇನಾಧಿಕಾರಿ ಮೀರ್ ಬಾಕಿಗೆ ಆದೇಶಿಸಿದ. ಆಗ ಮಂದಿರದ ಸ್ಥಾನದಲ್ಲಿ ಎದ್ದ ಮೂರು ಮುಮ್ಮಟಗಳ ಕಟ್ಟಡ ‘ಬಾಬ್ರಿ ಮಸೀದಿ’ ಎಂದು ಹೆಸರು ಪಡೆದುಕೊಂಡಿತು. ಇಷ್ಟಾಗಿಯೂ ಅಲ್ಲಿ ಹಿಂದೂಗಳ ಪೂಜಾವಿಧಿಗಳು ಮುಂದುವರಿದವು ಎನ್ನುವುದು ವಿಲಿಯಂ ಫಿಂಚ್ ಮತ್ತಿತರರ ಬರಹಗಳಿಂದ ತಿಳಿಯುತ್ತದೆ.

    ಬಾಬರ್​ನ ಮೊಮ್ಮಗ ಅಕ್ಬರ್ ರಾಮ ಜನ್ಮಸ್ಥಾನ ಮಂದಿರಕ್ಕೆ ಐದು ಬಿಘಾ ಜಮೀನನ್ನು ಉಂಬಳಿಯಾಗಿ ನೀಡಿದ್ದ. ಮತ್ತೊಂದು ಶತಮಾನ ಉರುಳಿಹೋದ ನಂತರ, ಮೊಘಲ್ ಅರಸರ ಸೇನಾಧಿಕಾರಿಯಾಗಿದ್ದ ಜೈಪುರದ ಮಹಾರಾಜ್ ದ್ವಿತೀಯ ಜೈಸಿಂಗ್ 1717-21ರಲ್ಲಿ ಮಸೀದಿಯ ಹೊರಗೆ ಒಂದು ಚಬೂತರಾ ಅಂದರೆ ವೇದಿಕೆಯನ್ನು ನಿರ್ವಿುಸಿ, ಅಲ್ಲಿ ಬಾಲರಾಮನ ವಿಗ್ರಹದ ಆರಾಧನೆಗೆ ಹೆಚ್ಚಿನ ಅನುಕೂಲಾವಕಾಶಗಳನ್ನು ಕಲ್ಪಿಸಿದ. ಆ ದಿನಗಳಲ್ಲಿ ಮಸೀದಿ ಪ್ರಾರ್ಥನೆಗಾಗಿ ಕೇವಲ ಶುಕ್ರವಾರಗಳಂದು ತೆರೆಯಲ್ಪಡುತ್ತಿತ್ತು. ಆದರೆ ಹೊರಗಿನ ಶ್ರೀರಾಮ ಚಬೂತರಾದಲ್ಲಿ ಪೂಜಾವಿಧಿಗಳು ದಿನನಿತ್ಯವೂ ನಡೆಯುತ್ತಿದ್ದವು ಎಂಬ ಆಸಕ್ತಿಕರ ವಿವರಗಳು ಲಭ್ಯವಿವೆ.

    ‘ಶ್ರೀರಾಮಜನ್ಮಸ್ಥಾನ ಮಂದಿರವನ್ನು ಕೆಡವಿ ಅಲ್ಲಿ ಬಾಬ್ರಿ ಮಸೀದಿಯನ್ನು ನಿರ್ವಿುಸಲಾಯಿತು’ ಎನ್ನುವ ಬಗ್ಗೆ ಸ್ಪಷ್ಟ ಹಾಗೂ ಅಧಿಕೃತ ವಿವರಗಳನ್ನು ನೀಡಿದ್ದು ಬ್ರಿಟಿಷ್ ಸರ್ವೆಯರ್ ಮಾರ್ಟಿಮರ್ ಮಾರ್ಟಿನ್ 1838ರಲ್ಲಿ ನಡೆಸಿದ ಸರ್ವೆ ಮತ್ತು ನೀಡಿದ ವರದಿ. ಅಲ್ಲಿನ ಸ್ಥಂಭಗಳು ಮತ್ತು ಗೋಡೆಗಳು ಹಿಂದೂ ಮಂದಿರದ ಭಾಗಗಳಾಗಿದ್ದವು ಎಂದು ಮಾರ್ಟಿನ್ ನೀಡಿದ ವರದಿಯನ್ನು ಸ್ಥಳೀಯ ಮುಸ್ಲಿಂ ಸಮುದಾಯ ವಿರೋಧಿಸಿತು. ಆದರೆ ಅದಕ್ಕೆ ವಿರುದ್ಧವಾಗಿ, ಅದೇ ವರದಿಯನ್ನು ಆಧರಿಸಿ ಆ ಸ್ಥಳದ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸಲು ಹಿಂದೂಗಳಿಗೂ ಅವಕಾಶವಾಯಿತು. ಅದರಂತೆ ಎರಡೂ ಪಕ್ಷಗಳ ನಡುವೆ ವಿವಾದ ಏರುತ್ತ ಹೋಗಿ ಅವಧ್​ನ ಕೊನೆಯ ನವಾಬ ವಾಜಿದ್ ಶಾನ ಕಾಲದಲ್ಲಿ 1853ರಲ್ಲಿ ಅಯೋಧ್ಯೆಯಲ್ಲಿ ವ್ಯಾಪಕ ಕೋಮು ದಂಗೆಗಳು ಘಟಿಸಿದವು.

    ‘ಯುದ್ಧರಹಿತ’ ಎಂಬರ್ಥದ ಹೆಸರಿನಲ್ಲಿ ಮನು ಸ್ಥಾಪಿಸಿದ ಅಯೋಧ್ಯೆ ಹೀಗೆ ಎರಡು ಸಮುದಾಯಗಳ ನಡುವಿನ ಯುದ್ಧಭೂಮಿಯಾಯಿತು ಮತ್ತು ಮುಂದಿನ ಮೂರು ದಶಕಗಳಲ್ಲಿ ಅದು ದೀರ್ಘ ಕಾನೂನು ಸಮರದ ಆರಂಭಕ್ಕೂ ಕಾರಣವಾಯಿತು. ಅದು ಬ್ರಿಟಿಷ್ ಆಡಳಿತದುದ್ದಕ್ಕೂ ಸಾಗಿ, ಸ್ವತಂತ್ರ ಭಾರತದಲ್ಲೂ ಮುಂದುವರಿಯಿತು. ಆಗ ಅಲ್ಲಿಗೆ ಎಡಪಂಥೀಯ ಇತಿಹಾಸಕಾರರ ಪ್ರವೇಶವಾಯಿತು. ಅದರೊಂದಿಗೆ ಆಧುನಿಕ ಭಾರತೀಯ ಇತಿಹಾಸದ ದೊಡ್ಡ ದುರಂತ ಅಷ್ಟೇ ನಾಚಿಕೆಗೇಡಿನ ಅಧ್ಯಾಯವೊಂದು ಆರಂಭವಾಯಿತು.

    ಪ್ರಜಾಪ್ರಭುತ್ವ-ವಿರೋಧಿ ನಡೆಗಳಿಂದ ತನ್ನದಲ್ಲದ ಪ್ರಧಾನಮಂತ್ರಿ ಪದವಿಯನ್ನು ಕಸಿದುಕೊಂಡು ಪಟ್ಟಾಗಿ ಕೂತ ಜವಾಹರ್​ಲಾಲ್ ನೆಹರುರ ಇಂಗಿತಗಳಿಗೆ ಅನುಗುಣವಾಗಿ ಸುಳ್ಳು ಇತಿಹಾಸ ರಚಿಸಿ, ವೈಚಾರಿಕ ಚಿಂತನೆಗಳನ್ನು ಅಡ್ಡದಾರಿಗೆಳೆದು, ಆ ಕಾಂಗ್ರೆಸ್ ಪ್ರಭುತ್ವದಿಂದ ತಮ್ಮ ಐಹಿಕ ಲಾಲಸೆಗಳನ್ನು ಪೂರೈಸಿಕೊಂಡು ಆರಾಮವಾಗಿ ಬದುಕುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಎಡಪಂಥೀಯ ಇತಿಹಾಸಕಾರರಿಗೆ ರಾಮಜನ್ಮಭೂಮಿಯ ಕುರಿತಾಗಿಯೂ ದೇಶಕ್ಕೆ ಸುಳ್ಳು ಹೇಳಲು ಕಷ್ಟವೂ ಆಗಲಿಲ್ಲ, ನಾಚಿಕೆಯೂ ಆಗಲಿಲ್ಲ. ಅವರು ವರ್ಷವರ್ಷಗಳವರೆಗೆ ಮಾತಾಡಿದ, ಬರೆದ, ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ಹೇಳಿದ ಬಗೆಯನ್ನು ನೋಡಿದರೆ ತಾವು ತಪ್ಪು ಮಾಡುತ್ತಿದ್ದೇವೆ ಎಂಬ ಮನಸಾಕ್ಷಿ ಒಂದು ಕ್ಷಣವೂ ಅವರನ್ನು ಚುಚ್ಚಿದಂತೆ ಕಾಣುವುದಿಲ್ಲ. ಇವರ ಮುಂದಾಳತ್ವ ವಹಿಸಿದ್ದು ಪೊ›. ಇರ್​ಫಾನ್ ಹಬೀಬ್. ಅವರಿಗೆ ಜತೆಯಾಗಿ ನಿಂತದ್ದು ಜೆಎನ್​ಯುು ಹಿಸ್ಟೋರಿಯನ್ಸ್ ಎಂಬ ಹಣೆಪಟ್ಟಿಯೊಂದಿಗೆ ಒಗ್ಗೂಡಿದ ರಾಜಧಾನಿಯ ಪ್ರತಿಷ್ಠಿತ ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸಕಾರರ ಒಂದು ಗುಂಪು ಮತ್ತವರ ವಂಧಿಮಾಗಧರಾದ ಅವರ ಒಂದಷ್ಟು ಶಿಷ್ಯರು.

    ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯ ಸ್ಥಳದಲ್ಲಿ ಪ್ರಾಚೀನ ಹಿಂದೂ ಮಂದಿರವೊಂದು ಇದ್ದುದನ್ನು ಗಣ್ಯ ಪ್ರಾಕ್ತನಶಾಸ್ತ್ರಜ್ಞ ಡಾ. ಬಿ.ಬಿ. ಲಾಲ್ ನೇತೃತ್ವದ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್​ಐ) ಸಂಸ್ಥೆಯ ತಂಡ 1975-76ರಲ್ಲಿ ಪತ್ತೆಹಚ್ಚಿತು. ಆದರೆ ಎಡಪಂಥೀಯರಿಂದಲೇ ತುಂಬಿದ್ದ ಮುಖ್ಯ ವಾಹಿನಿ ಮಾಧ್ಯಮ ಇದನ್ನು ಜನತೆಗೆ ತಲುಪಿಸಲಿಲ್ಲ. ಆದರೆ ಪುರಾತತ್ವಶಾಸ್ತ್ರಜ್ಞ ಡಾ. ಕೆ.ಕೆ. ಮಹಮದ್ ಅವರ ವಿವರವಾದ ಮಾತುಗಳನ್ನು ಆಲಿಸಿದ ಪ್ರಜ್ಞಾವಂತ ಮುಸ್ಲಿಂ ಮುಂದಾಳುಗಳು ಎಎಸ್​ಐ ಸಂಶೋಧನಾ ತಂಡದ ಶೋಧನೆಗಳನ್ನು ಒಪ್ಪಿಕೊಂಡು ಅಯೋಧ್ಯಾದ ವಿವಾದಿತ ಕ್ಷೇತ್ರವನ್ನು ಹಿಂದೂಗಳಿಗೆ ಬಿಟ್ಟುಕೊಡಲು ತಯಾರಾದರು. ಆದರೆ ಈ ಸಕಾರಾತ್ಮಕ ನಿಲುವಿನಿಂದ ಅವರನ್ನು ವಿಮುಖಗೊಳಿಸಿದ್ದು ‘ಇತಿಹಾಸಕಾರ’ (?) ಇರ್ಫಾನ್ ಹಬೀಬ್. ಇದನ್ನವರು ಮಾಡಿದ್ದು, ‘ಉತ್ಖನನದಲ್ಲಿ ಏನೂ ಸಿಕ್ಕಿಲ್ಲ, ವಿವಾದಿತ ಸ್ಥಳದ ಮೇಲೆ ನಿಮ್ಮ ಹಕ್ಕನ್ನು ಬಿಡಬೇಡಿ’ ಎಂದು ಮುಸ್ಲಿಂ ಸಮುದಾಯದ ಮುಖಂಡರಿಗೆ ಹೇಳುವುದರ ಮೂಲಕ! ಪರಿಣಾಮವಾಗಿ ವಿವಾದಾಸ್ಪದ ಸ್ಥಳದ ಮೇಲೆ ತನ್ನ ಹಕ್ಕನ್ನು ಮಾನ್ಯ ಮಾಡುವಂತೆ ಸುನ್ನಿ ವಕ್ಛ್ ಬೋರ್ಡ್ ಅಲಹಾಬಾದ್ ಹೈಕೋರ್ಟ್​ನಲ್ಲಿ ದಾವೆ ಹೂಡಿದಾಗ ಅದರ ಪರವಾಗಿ ಎಡಪಂಥೀಯ ಇತಿಹಾಸಕಾರರು ಸುಳ್ಳು ಸಾಕ್ಷಿ ಹೇಳಿದ್ದೀಗ ಇತಿಹಾಸ. ಇರ್ಫಾನ್ ಹಬೀಬ್​ರಂಥವರ ಕ್ಯಾತೆಯಿಂದಾಗಿಯೇ ಅಲಹಾಬಾದ್ ಹೈಕೋರ್ಟ್​ನ ಆದೇಶದ ಮೇರೆಗೆ 2003-04ರಲ್ಲಿ ಎಎಸ್​ಐ ಅಯೋಧ್ಯಾದಲ್ಲಿ ಮತ್ತೊಮ್ಮೆ ಉತ್ಖನನ ಕೈಗೊಂಡಿತು. ಆಗ ಐವತ್ತೆರಡು ಸ್ಥಂಭಗಳು, ಪೂರ್ಣಕಲಶ, ಮಕರನಾಲಿ ಸೇರಿದಂತೆ ಹಿಂದೂ ಮಂದಿರಕ್ಕೆ ಸಂಬಂಧಿಸಿದ 263 ಅವಶೇಷಗಳು ಪತ್ತೆಯಾದವು. ಆದರೆ ಅಷ್ಟರಲ್ಲಾಗಲೇ ಅಯೋಧ್ಯಾವಿವಾದ ಒಂದು ರಾಷ್ಟ್ರೀಯ ಸಮಸ್ಯೆಯಾಗಿ ಹೋಗಿತ್ತು, ಅದನ್ನೊಂದು ಪ್ರತಿಷ್ಠೆಯ ವಿಷಯವನ್ನಾಗಿಸಿಕೊಂಡ ಮುಸ್ಲಿಂ ಮುಂದಾಳುಗಳು ತಮ್ಮ ನಿಲುವಿನಿಂದ ಹಿಂದೆ ಸರಿಯಲು ತಯಾರಾಗಿರಲಿಲ್ಲ, ಅಯೋಧ್ಯಾ ವಿವಾದ ದೇಶದ ಕೋಮುಸೌಹಾರ್ದವನ್ನು ನಿರ್ಣಾಯಕವಾಗಿ ಹಾಳುಗೆಡವಿಬಿಟ್ಟಿತ್ತು. ತಮ್ಮ ಈ ಕರಾಳ ಕೃತ್ಯವನ್ನು ತಮ್ಮದೇ ಎಡಪಂಥೀಯ ಮಾಧ್ಯಮದ ಸಹಕಾರದಿಂದ ಮುಚ್ಚಿಟ್ಟ ಇತಿಹಾಸಕಾರರು ತಮ್ಮ ಕುಕೃತ್ಯದಿಂದಾದ ಕೋಮುವೈಷಮ್ಯಕ್ಕೆ ಹಿಂದೂಗಳನ್ನು ಜವಾಬ್ದಾರರನ್ನಾಗಿಸಿ ತಾವು ಸುಭಗರಂತೆ ವೇಷ ಕಟ್ಟಿದರು.

    1989ರಲ್ಲೇ ವಿವಾದಿತ ಸ್ಥಳವನ್ನು ಹಿಂದೂಗಳಿಗೆ ಬಿಟ್ಟುಕೊಡಲು ತಯಾರಾಗಿದ್ದ ಮುಸ್ಲಿಂ ಸಮುದಾಯದ ಮುಂದಾಳುಗಳನ್ನು ಇರ್ಫಾನ್ ಹಬೀಬ್ ಮತ್ತವರ ‘ಕಾಕ’ ಇತಿಹಾಸಕಾರರ ಗುಂಪು ತಡೆಯದೇ ಇದ್ದಿದ್ದರೆ ಬಾಬ್ರಿ ಮಸೀದಿ ಕಾನೂನುಬಾಹಿರವಾಗಿ ಕೆಡವಲ್ಪಡುತ್ತಿರಲಿಲ್ಲ, ಮುಂಬೈ ಭಯೋತ್ಪಾದನಾ ಹಿಂಸೆಗೆ ಬಲಿಯಾಗುತ್ತಿರಲಿಲ್ಲ, ಗೋಧ್ರಾ ರೈಲು ಹತ್ಯಾಕಾಂಡ ಜರುಗುತ್ತಿರಲಿಲ್ಲ, ಗುಜರಾತ್ ಕೋಮುಹಿಂಸೆಯಲ್ಲಿ ಹೊತ್ತಿ ಉರಿಯುತ್ತಿರಲಿಲ್ಲ! ಒಟ್ಟಾರೆ, ದೇಶ ಕೋಮುವೈಷಮ್ಯದಲ್ಲಿ ಒಡೆಯುತ್ತಿರಲಿಲ್ಲ.

    ಇಷ್ಟೆಲ್ಲ ಅನಾಹುತಕ್ಕೆ ಕಾರಣರಾದ ಎಡಪಂಥೀಯ ‘ಇತಿಹಾಸಕಾರರಿಗೆ’ ಯಾವ ಶಿಕ್ಷೆಯೂ ಇಲ್ಲವೇ? ಸತ್ಯ ಅರಿತಿದ್ದೂ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ಹೇಳುವುದಕ್ಕೆ ಕಛ್ಟಿj್ಟ ಅನ್ನುತ್ತಾರೆ ಮತ್ತು ಇದು ಶಿಕ್ಷಾರ್ಹ ಅಪರಾಧ. ಆದರೆ ನಮ್ಮ ‘ಇತಿಹಾಸಕಾರರು’ ಇನ್ನೂ ನಮ್ಮ ನಡುವೆ ನಾಚಿಕೆಯಿಲ್ಲದೇ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಇರ್ಫಾನ್ ಹಬೀಬ್ ಮುಂದಾಳತ್ವದ ಇತಿಹಾಸಕಾರರು ಸೃಷ್ಟಿಸಿದ ದುರಂತ ಇತಿಹಾಸಕ್ಕೆ ತೆರೆ ಬೀಳಲು ದೇಶ ಮತ್ತೂ ಒಂದೂವರೆ ದಶಕಗಳು ಕಾಯಬೇಕಾಯಿತು. ಅಂತಿಮವಾಗಿ ಎಎಸ್​ಐ ಒದಗಿಸಿದ ಸಾಕ್ಷ ್ಯಳನ್ನು ಮತ್ತು ಪೂರಕ ಐತಿಹಾಸಿಕ ದಾಖಲೆಗಳನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್ ನವೆಂಬರ್ 9, 2019ರಂದು ಐತಿಹಾಸಿಕ ತೀರ್ಪು ನೀಡಿ ವಿವಾದಿತ ಸ್ಥಳವನ್ನು ಹಿಂದೂಗಳಿಗೆ ನೀಡಿತು ಮತ್ತು ಅಲ್ಲಿ ರಾಮಮಂದಿರದ ನಿರ್ವಣದ ಜವಾಬ್ದಾರಿಯನ್ನು ಫೆಬ್ರವರಿ 5, 2020ರಂದು ರಾಮಜನ್ಮಭೂಮಿ ಟ್ರಸ್ಟ್ ಪಡೆಯಿತು, ಅದೇ ವರ್ಷ ಆಗಸ್ಟ್ 5ರಂದು ರಾಮಮಂದಿರಕ್ಕೆ ಶಿಲಾನ್ಯಾಸವೂ ಜರುಗಿತು. ಅದರಂತೆ ಭವ್ಯ ರಾಮಂದಿರರ ನಿರ್ಮಾಣ ಆರಂಭವಾಗಿ ಈಗ ಬಾಲರಾಮನ ಪ್ರಾಣಪ್ರತಿಷ್ಠೆಯೂ ಜರುಗಿದೆ.

    ಈ ಸಂತಸದ ಸಂದರ್ಭದಲ್ಲಿ ನೋವಿನ ಸಂಗತಿಯೊಂದನ್ನು ಹೇಳದಿದ್ದರೆ ನನ್ನ ಮಾತು ಪೂರ್ಣಗೊಳ್ಳುವುದಿಲ್ಲ. ಎಎಸ್​ಐ ನಡೆಸಿದ ಉತ್ಖನನದ ಕುರಿತಾಗಿ ಬಹಿರಂಗವಾಗಿ ಮಾತಾಡಿ, ವಿವಾದಿತ ಸ್ಥಳವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಮೊದಲಿಗೆ ಹೇಳಿದವರು ಪುರಾತತ್ವಶಾಸ್ತ್ರಜ್ಞ ಡಾ. ಕೆ.ಕೆ. ಮಹಮದ್. ಅದಕ್ಕಾಗಿ ಅವರು ತಮ್ಮ ನೌಕರಿಯನ್ನೂ ಕಳೆದುಕೊಳ್ಳುವ ಸನ್ನಿವೇಶ ಉಂಟಗಿತ್ತು. ಆದರೂ ಅವರು ಸತ್ಯ ಹೇಳುವುದನ್ನು ಮುಂದುವರಿಸುತ್ತಲೇ ಹೋದರು. ವಿವಾದಿತ ಸ್ಥಳ ಮೇಲೆ ಹಿಂದೂಗಳ ಹಕ್ಕನ್ನು ನ್ಯಾಯಾಲಯ ಮಾನ್ಯ ಮಾಡಿದ್ದರಲ್ಲಿ ಮಹಮದ್​ರ ಪಾತ್ರ ಹಿರಿದು. ಅದರಿಂದಾಗಿ ಮುಸ್ಲಿಂ ಮೂಲಭೂತವಾದಿಗಳು ಅವರಿಗೆ ಜೀವ ಬೆದರಿಕೆ ಒಡ್ಡಿದರು. ಹಿಂದೂಗಳ ಪರವಾಗಿ ಸವೋಚ್ಚ ನ್ಯಾಯಾಲಯ ತೀರ್ಪು ನೀಡಿದ ತರುವಾಯ ಮಹಮದ್​ರ ಸಂಕಷ್ಟಗಳು ಹೆಚ್ಚಾಗಿ, ಅವರು ಜೀವ ಉಳಿಸಿಕೊಳ್ಳಲು ಊರೂರಿಗೆ ಅಲೆದು ಅಜ್ಞಾತವಾಸ ಅನುಭವಿಸಬೇಕಾಯಿತು. ಆಗ ಅವರ ಸಹಾಯಕ್ಕೆ ಹಿಂದೂಗಳು ಮುಂದಾಗಲಿಲ್ಲ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇನು? ಎನ್ನುವಂತೆ ವರ್ತಿಸಿದ ಹಿಂದೂ ಸಮುದಾಯದ ನಡೆ ಕ್ಷಮಾರ್ಹವಲ್ಲ.

    ‘ನನ್ನ ಕೆಲಸಗಳಿಂದ ಪ್ರಯೋಜನ ಪಡೆದವರು ನನ್ನ ಕಷ್ಟಕಾಲದಲ್ಲಿ ನನ್ನನ್ನು ಮರೆತುಬಿಟ್ಟರು’ ಎಂದು ಮಹಮದ್ ನೋವಿನಿಂದ ಹೇಳುತ್ತಾರೆ. ನಾವು ಇಷ್ಟು ಕೃತಘ್ನರಾಗಿ ಹೋದೆವಲ್ಲ ಎಂದು ನೋವಾಗುತ್ತದೆ. ಸತ್ಯಕ್ಕಾಗಿ ಅವಿಶ್ರಾಂತವಾಗಿ ದುಡಿದ ಮಹಮದ್ ಒಬ್ಬರು ಪುರುಷೋತ್ತಮ. ಮನಷ್ಯರು ಅವರನ್ನು ಮರೆತುಬಿಟ್ಟಾಗ ಶ್ರೀರಾಮ ಅವರನ್ನು ಕಾಪಾಡಿದ್ದಾನೆ. ಜೈ ಶ್ರೀರಾಮ್

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts