More

    ಮತದಾನ ಪ್ರಮಾಣ ಕನಿಷ್ಠ ಶೇ 10ರಷ್ಟು ಹೆಚ್ಚಿಸುವ ಗುರಿ

    ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾಧಿಕಾರಿ ರೇಣುಕಾ ಹೇಳಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018ರಲ್ಲಿ ನಡೆದ ಚುನಾವಣೆಯಲ್ಲಿ ಉಳಿದ ಕಡೆಗಳಲ್ಲಿ ಶೇ. 75-90ರಷ್ಟು ಮತದಾನವಾಗಿದ್ದರೆ, ದಾವಣಗೆರೆ ನಗರದಲ್ಲಿ ಶೇ. 65ರಷ್ಟು ಮಾತ್ರ ಆಗಿತ್ತು. ಆದರೆ, ಈ ಬಾರಿ ಮತದಾನ ಪ್ರಮಾಣವನ್ನು ಕನಿಷ್ಠ ಶೇ. 10ರಷ್ಟು ಹೆಚ್ಚಳ ಮಾಡುವ ಗುರಿ ಇದೆ ಎಂದು ತಿಳಿಸಿದರು.

    ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಗೃಹ, ಅಂಗವಿಕಲರು ಬಳಸಲು ರ‌್ಯಾಂಪ್, ಮತದಾರರಿಗೆ ವಿಶ್ರಾಂತಿ ಕೊಠಡಿಯಂಥ ಮೂಲಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

    ಬಿಎಲ್‌ಒಗಳು, ಅಂಗನವಾಡಿ ಕಾರ್ಯಕರ್ತೆಯರು, ಬೀಟ್ ಪೊಲೀಸರನ್ನು ಒಳಗೊಂಡ ತಂಡ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸ್ವೀಪ್ ಚಟುವಟಿಕೆಗಳ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

    ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸಂಬಂಧಿಸಿದ ನಾಮಪತ್ರಗಳನ್ನು ಮಹಾನಗರ ಪಾಲಿಕೆಯ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 10 ರಲ್ಲಿ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದ ನಾಮಪತ್ರಗಳನ್ನು ಪಾಲಿಕೆಯ ಕೊಠಡಿ ಸಂಖ್ಯೆ 3ರಲ್ಲಿ ಸ್ವೀಕರಿಸಲಾಗುವುದು. ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ರ ವರೆಗೆ ನಾಮಪತ್ರ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

    ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 2.04 ಲಕ್ಷ, ದಾವಣಗೆರೆ ಉತ್ತರದಲ್ಲಿ 2.32 ಲಕ್ಷ ಮತದಾರರಿದ್ದಾರೆ. ಸರ್ವೀಸ್ ವೋಟರ್‌ಗಳು ದಾವಣಗೆರೆ ಉತ್ತರದಲ್ಲಿ 46, ದಕ್ಷಿಣದಲ್ಲಿ 40 ಜನ ಇದ್ದಾರೆ ಎಂದು ತಿಳಿಸಿದರು.

    ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 37 ಅತಿಸೂಕ್ಷ್ಮ ಮತಗಟ್ಟೆಗಳಿದ್ದು ಅಲ್ಲಿ ವೆಬ್‌ಕಾಸ್ಟಿಂಗ್ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಕೆ.ಆರ್. ಶ್ರೀನಿವಾಸ ಹೇಳಿದರು.

    ಮತದಾರರ ಮನೆ ಮನೆಗೆ ವೋಟರ್ ಸ್ಲಿಪ್‌ಗಳನ್ನು ಹಂಚಲಾಗುವುದು, ಮತದಾನದ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

    ಸಾರ್ವಜನಿಕರು ದೂರು ಸಲ್ಲಿಸಲು ದೂರವಾಣಿ ಸಂಖ್ಯೆ: 213368 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು. ಮತದಾರರು ಹಣ, ಹೆಂಡ ಸೇರಿ ಯಾವುದೇ ಆಮಿಷಗಳಿಗೆ ಒಳಗಾಗಬಾರದು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts