More

    ಸೊರಗುತ್ತಿದೆ ಸಸ್ಯೋದ್ಯಾನ

    ಶಿರಸಿ: ಅನುದಾನದ ಕೊರತೆಯಿಂದ ಪೂರ್ಣಗೊಳ್ಳದ ಸಸ್ಯೋದ್ಯಾನದಲ್ಲಿ ಪ್ರಸ್ತುತ ಇರುವ ಗಿಡ, ಮರಗಳನ್ನು ಬಾವಿ ನೀರು ಬಳಸಿಕೊಂಡು ಪೋಷಿಸುವ ಸ್ಥಿತಿ ನಿರ್ವಣವಾಗಿದೆ. ಇದರಿಂದ ಇಡೀ ವನ ಒಣಗುವ ಆತಂಕ ಕಾಡುತ್ತಿದೆ. ಘೊಷಣೆಯಾಗಿದ್ದ ವನ ಇನ್ನೂ ಪೂರ್ಣ ರೂಪದಲ್ಲಿ ನಿರ್ವಣಗೊಂಡಿಲ್ಲ. ನೀರಾವರಿ ಸೌಲಭ್ಯದ ಕೊರತೆ ಇದಕ್ಕೆ ದೊಡ್ಡ ಅಡ್ಡಿಯಾಗಿದೆ.
    ಬನವಾಸಿ ರಸ್ತೆಯ ಪಕ್ಕದಲ್ಲಿರುವ ತೆರಕನಹಳ್ಳಿ ತೋಟಗಾರಿಕೆ ಸಸ್ಯೋದ್ಯಾನ 22.5 ಎಕರೆ ಪ್ರದೇಶ ಹೊಂದಿದೆ. ಇಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನ ನಿರ್ವಿುಸಲು ಒಂಬತ್ತು ವರ್ಷಗಳ ಹಿಂದೆ ರಾಜ್ಯ ಬಜೆಟ್​ನಲ್ಲಿ ಅನುಮೋದನೆ ಸಿಕ್ಕಿತ್ತು. ಇದಕ್ಕೆ 2012ರಿಂದ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭಗೊಂಡಿತ್ತು. ತೋಟಗಾರಿಕೆ ಬೆಳೆಗಳು, ಹೂವು, ಹಣ್ಣಿನ ಗಿಡಗಳು, ಅಲಂಕಾರಿಕ ಸಸ್ಯಗಳನ್ನು ನೆಟ್ಟು ಪೋಷಿಸುವ ಜತೆಗೆ ಕಾರಂಜಿ, ಮಕ್ಕಳ ಉದ್ಯಾನ ರೂಪಿಸುವ ಯೋಜನೆಯಿತ್ತು. ನೀರಿನ ಕೃತಕ ಕೊಳವನ್ನೂ ನಿರ್ವಿುಸುವ ಪ್ರಸ್ತಾವ ಯೋಜನೆಯಲ್ಲಿತ್ತು. ಆದರೆ, ಈವರೆಗೂ ಇಲ್ಲಿ ಜನರನ್ನು ಸೆಳೆಯುವಂತಹ ಯಾವ ವ್ಯವಸ್ಥೆಯೂ ಆಗಿಲ್ಲ. ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವನ್ನೂ ನೀಡಿಲ್ಲ. ಆವರಣ ಗೋಡೆ ನಿರ್ವಿುಸಿ ಅದರೊಳಗೆ ಕೆಲ ಗಿಡ, ಮರಗಳನ್ನು ಪೋಷಿಸಲಾಗಿದೆ. ಉದ್ಯಾನಕ್ಕೆ ಅಗತ್ಯವಾದ ಹುಲ್ಲು ಹಾಸು ಮಾತ್ರ ನಿರ್ವಹಿಸಲಾಗುತ್ತಿದೆ.
    ಬಾವಿ ನೀರಿನ ಆಶ್ರಯ: ಇಲಿರುವ ಗಿಡಮರಗಳಿಗೆ ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲ. ಯೋಜನೆಯಡಿ ಇಡೀ ಉದ್ಯಾನಕ್ಕೆ ನೀರು ಕಲ್ಪಿಸಬೇಕೆಂದಿದ್ದರೂ ಅನುದಾನದ ಕೊರತೆಯಿಂದ ಯಾವ ಕಾಮಗಾರಿಯೂ ವ್ಯವಸ್ಥಿತವಾಗಿ ನಡೆದಿಲ್ಲ. ಪ್ರಸ್ತುತ ಬೇಸಿಗೆಯಾದ್ದರಿಂದ ಎಲ್ಲ ಗಿಡಮರಗಳೂ ಜೀವ ಹಿಡಿದಿಟ್ಟುಕೊಳ್ಳಲು ಹೆಣಗುವ ಸ್ಥಿತಿಯಿದೆ. ಇಲ್ಲಿನ ಸಿಬ್ಬಂದಿ ವಾರಕ್ಕೊಮ್ಮೆ ಬಾವಿ ನೀರನ್ನು ಪಂಪ್ ಮೂಲಕ ಈ ಗಿಡಗಳಿಗೆ ಹಾಕಿ ಬದುಕಿಸಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
    ಕನಸಿನ ಮಾತು: ಆರಂಭದಿಂದಲೂ ಅಗತ್ಯಕ್ಕೆ ತಕ್ಕಷ್ಟು ಅನುದಾನ ಬಿಡುಗಡೆಯಾಗಿಲ್ಲ. ಕಂತಿನ ರೂಪದಲ್ಲಿ ಹಂತ ಹಂತವಾಗಿ ಉದ್ಯಾನ ರೂಪಿಸಲು ಹಣ ನೀಡಲಾಗಿತ್ತು. ಆದರೆ, ಒಣ ಭೂಮಿಯಲ್ಲಿ ಗಿಡಗಳನ್ನು ನೆಡಲು ಅನುಕೂಲಕರ ವ್ಯವಸ್ಥೆ ಮಾಡಲು ಹೆಚ್ಚು ಹಣ ವ್ಯಯವಾಗಿದೆ. ಬಳಿಕ ಅವುಗಳ ಪೋಷಣೆಗೆ ಅಗತ್ಯದಷ್ಟು ಆರ್ಥಿಕ ಸಂಪನ್ಮೂಲ ಸಿಕ್ಕಿರಲಿಲ್ಲ. ಹೀಗಾಗಿ, ಉದ್ಯಾನ ಅಭಿವೃದ್ಧಿ ಈಗಲೂ ಕನಸಿನ ಮಾತಾಗಿ ಉಳಿದಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

    2012ರಲ್ಲಿ ಯೋಜನೆ ಅನುಷ್ಠಾನವಾದರೂ ಈವರೆಗೆ ಪೂರ್ಣಪ್ರಮಾಣದ ಕಾರ್ಯವಾಗಿಲ್ಲ. ಸದಾ ಬಾಗಿಲು ಮುಚ್ಚಿರುವ ಸ್ಥಿತಿಯಲ್ಲಿ ಉದ್ಯಾನವಿರುತ್ತದೆ. ಒಳಗಿರುವ ಗಿಡಮರಗಳಿಗೂ ಸರಿಯಾಗಿ ನೀರಿಲ್ಲದೇ ಒಣಗುತ್ತಿವೆ. ತಕ್ಷಣ ನೀರಿನ ವ್ಯವಸ್ಥೆಯಾಗಬೇಕು. ಶೀಘ್ರದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಸಸ್ಯೋದ್ಯಾನ ಕಾಮಗಾರಿ ಮುಗಿಸಬೇಕು.
    | ಜನಾರ್ದನ ಭಟ್ಟ ಸ್ಥಳೀಯ ನಿವಾಸಿ


    ಉದ್ದೇಶಿತ ಜಾಗದಲ್ಲಿ ಸಸ್ಯಗಳ ಪೋಷಣೆಗೆ ಹೆಚ್ಚು ನೀರಿನ ಅಗತ್ಯವಿದೆ. ಆದರೆ, ಅಷ್ಟು ಪ್ರಮಾಣದ ಜಲಸಂಪನ್ಮೂಲ ಅಲ್ಲಿಲ್ಲ. ಕೃಷಿ ಹೊಂಡ ನಿರ್ವಣಕ್ಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕರೊನಾ ಕಾರಣಕ್ಕೆ ಕಳೆದ ವರ್ಷ ಮಂಜೂರಾತಿ ಹಂತದಲ್ಲಿ ಅದು ಸ್ಥಗಿತಗೊಂಡಿದೆ. ಉದ್ಯಾನ ನಿರ್ಮಾಣ ಮತ್ತು ನಿರ್ವಹಣೆಗೆ ಹೆಚ್ಚಿನ ಪ್ರಮಾಣದ ನೀರು ಬೇಕು. ಅದರ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಜತೆಗೆ ಉದ್ಯಾನ ಪೂರ್ಣ ಪ್ರಮಾಣದಲ್ಲಿ ರೂಪುಗೊಳಿಸುವ ಯೋಜನೆಯ ಅನುಮೋದನೆಗೆ ಕಾಯಲಾಗುತ್ತಿದೆ.
    | ರೇಷ್ಮಾ ಗೋಕಾಕ
    ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts