More

    ಶರಣರು ಸಾಮಾಜಿಕ ಕ್ರಾಂತಿಯ ಹರಿಕಾರರು

    ರಾಯಚೂರು: ಸಮಾಜದಲ್ಲಿ ಬೇರು ಬಿಟ್ಟಿದ್ದ ಜಾತಿ ವ್ಯವಸ್ಥೆ ಹಾಗೂ ಹೆಣ್ಣನ್ನು ಕೀಳಾಗಿ ಕಾಣುವ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣ ಕುರಿತು ಶರಣರು ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದರು ಎಂದು ಉಪನ್ಯಾಸಕಿ ಅನ್ನಪೂರ್ಣಮ್ಮ ಮೇಟಿ ಹೇಳಿದರು.
    ನಗರದ ಮಾರುತಿ ನಗರದಲ್ಲಿನ ಗಿರಿ ಅಭಯಾಂಜಿನೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿ, ಕಾಯಕ ತತ್ತ್ವದಿಂದ ದಾಸೋಹ ತತ್ತ್ವವನ್ನು ಸಮಾಜಕ್ಕೆ ಸಾರಿದ ಮಹಾನ್ ಸಾಧಕ ಬಸವಣ್ಣನವರಾಗಿದ್ದಾರೆ ಎಂದರು.
    ವೈಜ್ಞಾನಿಕ ದಿನಗಳಲ್ಲಿ ನಾವು, ನಮ್ಮವರು ಎನ್ನುವ ಭಾವನೆಗಳು ದೂರವಾಗುತ್ತಿವೆ. ಸಂಸ್ಕಾರ ಸಂಸ್ಕೃತಿ ಮಾಯವಾಗುತ್ತಿದೆ. ಆಡಂಬರ ಜೀವನವನ್ನು ಬಿಟ್ಟು ಅಸಹಾಯಕರು, ಸಹಾಯ ಅರಸಿ ಬಂದವರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಹೇಳಿದರು.
    ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಕಮಲಕುಮಾರ ಜೈನ್ ಮಾತನಾಡಿ, ನೈತಿಕ ಜೀವನ ಸಾಗಿಸುವ ಮಾರ್ಗವನ್ನು ತೋರುವ ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಟಿವಿಯಲ್ಲಿ ಬರುವ ಧಾರಾವಾಹಿಗಳನ್ನು ನೋಡುವುದು ಬಿಟ್ಟು ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
    ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ.ಬಸವರಾಜ ಮಾತನಾಡಿ, ಕಳೆದ 29 ತಿಂಗಳಿಂದ ಅನ್ನದಾಸೋಹದ ಜತೆಗೆ ಶಿವಾನುಭವ ಗೋಷ್ಠಿ ಏರ್ಪಡಿಸುತ್ತಾ ಬರಲಾಗುತ್ತಿದೆ. ಅದಕ್ಕೆ ಬಡಾವಣೆಯ ಎಲ್ಲರ ಸಹಕಾರವೂ ಕಾರಣವಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ಧನಗೌಡ ಗಾರಲದಿನ್ನಿ, ರವೀಂದ್ರ ಜಲ್ದಾರ್, ಜಂಬಣ್ಣ ಯಕ್ಲಾಸಪುರ, ಮರಿಲಿಂಗಪ್ಪ, ರಾಮಣ್ಣ ಮ್ಯಾದಾರ್, ಬಜಾರಪ್ಪ, ಭೀಮಣ್ಣ ಗಂಗವಾರ್, ಷಣ್ಮುಖಪ್ಪ ವಲ್ಕಂದಿನ್ನಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts