More

    ಆತ್ಮವಿಶ್ವಾಸ ಹೆಚ್ಚಿಸುವ ವಿಜ್ಞಾನ

    ರೋಣ: ಮಕ್ಕಳಲ್ಲಿನ ಹಿಂಜರಿಕೆಯನ್ನು ಅಳಿಸಿ, ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಪ್ರಮುಖ ಪಾತ್ರ ವಹಿಸುತ್ತದೆ. ಇದು ವಿಜ್ಞಾನ ಚಟುವಟಿಕೆಗಷ್ಟೇ ಸೀಮಿತವಾಗದೆ, ಕಲೆ, ನಾಟಕ, ನೃತ್ಯ ಸೇರಿ ಇನ್ನಿತರ ವಿಷಯಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಪ್ರಕಿಯೆಯಾಗಿದೆ ಎಂದು ಎಲ್.ಐ. ದಿಂಡೂರ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶಶಿಧರ ದಿಂಡೂರ ಹೇಳಿದರು.

    ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ಮಾತನಾಡಿ, ‘ಮೇವು ಕತ್ತರಿಸುವ ಯಂತ್ರದ ಮಾದರಿ, ಸ್ವಯಂ ಚಾಲಿತ ವಿದ್ಯುತ್ ದೀಪ ನಿರ್ವಹಣೆ, ಸಾರಿಗೆ ವ್ಯವಸ್ಥೆ ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ವಿಷಯ ವಸ್ತುವುಳ್ಳ ಮಾದರಿಗಳು ತೀರ್ಪಗಾರರನ್ನು ಆಕರ್ಷಿಸಿದವು. ಅದರಲ್ಲೂ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಇಂತಹ ರಚನಾತ್ಮಕ ಕಾರ್ಯಗಳು ಮೆಚ್ಚುವಂಥದ್ದು’ ಎಂದು ಹೇಳಿದರು.

    ‘ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವಿಭಿನ್ನ ಪ್ರದರ್ಶನ ತೋರಬೇಕೆಂಬ ಹಂಬಲ ಎದ್ದು ಕಾಣುತ್ತಿತ್ತು. ಮತ್ತಷ್ಟು ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನದ ಅಗತ್ಯವಿದೆ. ಸೂಕ್ತ ಸಮಯದಲ್ಲಿ ಸರಿಯಾದ ತರಬೇತಿ ಸಿಕ್ಕರೆ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ವಿಜ್ಞಾನಿಗಳಾಗುವ ಅವಕಾಶವಿದೆ’ ಎಂದು ಪಾಲಕರ ಪ್ರತಿನಿಧಿಯಾಗಿ ಆಗಮಿಸಿದ್ದ ಗೀತಾ ಸಂಗಮದ ತಿಳಿಸಿದರು.

    ವಿಜ್ಞಾನ ಶಿಕ್ಷಕಿಯರಾದ ಸವಿತಾ ದೊಡ್ಡಣ್ಣವರ, ಪ್ರಿಯಾ ಹವಾಲ್ದಾರ, ಗಾಯತ್ರಿ ಚಿಕ್ಕಮಠ, ಸಾವಿತ್ರಿ ದಾನಪ್ಪಗೌಡ್ರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನ ನಡೆಸಿದರು.

    ಬಹುಮಾನ ವಿಜೇತ ವಿದ್ಯಾರ್ಥಿಗಳು: ಜ್ವಾಲಾಮುಖಿ, ಭಾರತೀಯ ಕೃಷಿ ಪದ್ಧ್ದ, ನೈಸರ್ಗಿಕವಾಗಿ ನೀರಿನ ಬಳಕೆ ಕುರಿತು ಪ್ರದರ್ಶನ ನೀಡಿದ ಶಿವಮ್ಮಾ ಬಾರಕೇರಗೆ ಪ್ರಥಮ ಸ್ಥಾನ, ವ್ಯವಸಾಯಕ್ಕಾಗಿ ಪವನ ವಿದ್ಯುತ್ ಶಕ್ತಿಯ ಉತ್ಪಾದನೆಯ ಕುರಿತು ಮಾಹಿತಿ ನೀಡಿದ ಸಹನಾ ನಾಗರಾಳಗೆ ದ್ವಿತೀಯ, ಮಾನವನ ಅಸ್ಥಿಪಂಜರದ ಕುರಿತು ಪ್ರದರ್ಶನ ನೀಡಿದ ಸಹನಾ ಸಂಗಮದಗೆ ತೃತೀಯ ಸ್ಥಾನ ನೀಡಲಾಯಿತು.

    ಜನಮೆಚ್ಚುಗೆಗೆ ಪಾತ್ರ: ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಸಕ್ತರು ಸೇರಿ ವಿಜ್ಞಾನ ಚಟುವಟಿಕೆ ಅನಾವರಣಗೊಳಿಸುವ ಪ್ರಯತ್ನ ಜನಮೆಚ್ಚುಗೆಗೆ ಪಾತ್ರವಾಯಿತು. ಸುಸ್ಥಿರ ಕೃಷಿ ಪದ್ಧತಿ, ಸ್ವಚ್ಛತೆ ಮತ್ತು ಆರೋಗ್ಯ, ಸಂಪನ್ಮೂಲ ನಿರ್ವಹಣೆ, ಕೈಗಾರಿಕೆ ಅಭಿವೃದ್ಧಿ, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ, ಶೈಕ್ಷಣಿಕ ಆಟಿಕೆ ಮತ್ತು ಗಣತಿ ಮಾದರಿ ಹೀಗೆ ಆರು ವಿಭಾಗಗಳನ್ನಾಗಿ ಮಾಡಿ ಪರಿಸರ ಸಂರಕ್ಷಣೆ ಜತೆಗೆ ಲಭ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಹೇಗೆ ಅಭಿವೃದ್ಧಿ ಕಾರ್ಯ ನಡೆಸಬಹುದು ಎಂಬುದನ್ನು ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.

    ಮಕ್ಕಳಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದು ಮುಖ್ಯ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅತ್ಯಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ.

    | ಗಾಯತ್ರಿ ಸಜ್ಜನ ಕ್ಷೇತ್ರ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts