More

    ಸಮಾಜದ ಶಿಸ್ತು ಕಾಪಾಡುವಲ್ಲಿ ನ್ಯಾಯವಾದಿಗಳ ಪಾತ್ರ ಹಿರಿದು

    ಸಾಗರ: ನ್ಯಾಯಾಲಯದಲ್ಲಿ ಕಾರ್ಯಕಲಾಪಗಳನ್ನು ಕಾನೂನಾತ್ಮಕವಾಗಿ ಮುನ್ನಡೆಸಲು ಪೂರಕ ವಾತಾವರಣ ಅವಶ್ಯ ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ್ ಹೇಳಿದರು.

    ನಗರದ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಶಿಸ್ತುಬದ್ಧವಾಗಿ ಮತ್ತು ಆರೋಗ್ಯಕರವಾಗಿ ತೆಗೆದುಕೊಂಡು ಹೋಗುವಲ್ಲಿ ನ್ಯಾಯವಾದಿಗಳ ಪಾತ್ರ ಪ್ರಮುಖ ಎಂದರು.
    ಕಕ್ಷಿದಾರರಿಗೆ ನ್ಯಾಯದಾನ ಮಾಡುವ ವಕೀಲರ ದೈನಂದಿನ ಕಾರ್ಯಚಟುವಟಿಕೆಗಳನ್ನು ನಡೆಸಲು ಅಗತ್ಯವಾಗಿರುವ ಸುಸಜ್ಜಿತ ವಕೀಲರ ಭವನ ಸಾಗರದಲ್ಲಿ ನಿರ್ಮಾಣವಾಗಿದೆ. ಹೈಕೋರ್ಟ್‌ನಲ್ಲಿ ಇಲ್ಲದ ವ್ಯವಸ್ಥೆಯನ್ನು ಸಾಗರ ವಕೀಲರ ನೂತನ ಭವನದಲ್ಲಿ ಅಳವಡಿಸಿರುವುದು ಸಂತೋಷ ತಂದಿದೆ. ಸುಸಜ್ಜಿತ ಗ್ರಂಥಾಲಯ, ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಎಲ್ಲವೂ ಆಧುನಿಕವಾಗಿ ರೂಪಿಸಿದ್ದು ವಕೀಲರು ಭವನದ ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯದಲ್ಲಿಯೇ ಅತ್ಯಂತ ವ್ಯವಸ್ಥಿತವಾದ ವಕೀಲರ ಭವನ ಸಾಗರದಲ್ಲಿ ರೂಪುಗೊಂಡಿದೆ ಎಂದು ಹೇಳಿದರು.
    ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ.ಹೆಗ್ಡೆ ಮಾತನಾಡಿ, ಸಾಗರದ ವಕೀಲರ ಭವನ ಅತ್ಯಂತ ಶಿಸ್ತುಬದ್ಧವಾಗಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಪ್ರಸ್ತುತ ಹೆಚ್ಚೆಚ್ಚು ಮಹಿಳೆಯರು ಕಾನೂನು ಕ್ಷೇತ್ರ ಪ್ರವೇಶ ಮಾಡುತ್ತಿದ್ದಾರೆ. ಇಂತಹ ಭವನ ಇದ್ದರೆ ಹೆಚ್ಚು ಆಸಕ್ತಿಯಿಂದ ತಮ್ಮ ವೃತ್ತಿಯಲ್ಲಿ ತಲ್ಲೀನರಾಗಲು ಸಾಧ್ಯವಾಗುತ್ತದೆ. ರಾಜ್ಯದ ಇತಿಹಾಸದಲ್ಲಿ ವಕೀಲರ ಸಂಘಟನೆ ಸಾರ್ವಜನಿಕ ಹಿತಾಸಕ್ತಿಯ ಕೇಸ್ ಒಂದನ್ನು ದಾಖಲಿಸಿ ತನ್ಮೂಲಕ ಜಾಗವನ್ನು ಉಚಿತವಾಗಿ ಪಡೆದುಕೊಂಡ ಮೊದಲ ಉದಾಹರಣೆ ಸಾಗರ ವಕೀಲರ ಸಂಘದ್ದು. ಇಂತಹ ಸುಸಜ್ಜಿತ ವಕೀಲರ ಭವನವನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಜವಾಬ್ದಾರಿ ಸಂಘಟನೆಯದ್ದಾಗಿದೆ ಎಂದರು.
    ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಜ್ಯದಲ್ಲಿ ವಕೀಲರ ಸಂಘಕ್ಕೆ ವಿಶೇಷವಾದ ಸ್ಥಾನಮಾನವಿದೆ. ಸದಾ ಕಕ್ಷಿದಾರರ ಹಿತಕಾಯುವ ವಕೀಲರಿಗೆ ಬೇಕಾದ ಸುಸಜ್ಜಿತ ಭವನ ಸಾಗರದಲ್ಲಿ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಭದ್ರಾವತಿ ಮತ್ತು ಹೊಸನಗರ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕಿನಲ್ಲೂ ವಕೀಲರ ಭವನ ಇದೆ. ಸದ್ಯದಲ್ಲಿಯೆ ಹೊಸನಗರದಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
    ಅತಿ ಹೆಚ್ಚು ಕಾಲ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿದ ಎಂ.ಬಿ.ಪುಟ್ಟಸ್ವಾಮಿ, ಕೆ.ಎನ್.ಶ್ರೀಧರ್, ಟಿ.ಬಿ.ಮಂಜುನಾಥ ಶೆಟ್ಟಿ, ಜಯಶೀಲ ಶೆಟ್ಟಿ ಗುಲ್ವಾಡಿ, ಸಿ.ಎಲ್.ವೆಂಕಟಗಿರಿ ಅವರನ್ನು ಸನ್ಮಾನಿಸಲಾಯಿತು. ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತ್‌ಕುಮಾರ್, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಲೋಕೋಪಯೋಗಿ ಇಲಾಖೆಯ ಜಗದೀಶ್, ಎಚ್.ಬಿ. ರಮೇಶ್, ನಾಗರಾಜ್, ನ್ಯಾಯಾಧೀಶೆ ಕೆ.ಆರ್.ದೀಪಾ ಇತರರಿದ್ದರು. ಸಂತೋಷ್ ನಿರೂಪಿಸಿದರು.

    ತಿಮ್ಮಪ್ಪರನ್ನು ಹತ್ತಿರದಿಂದ ಬಲ್ಲೆ
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈಕೋರ್ಟ್ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಆರ್.ದೇವದಾಸ್ ಮಾತನಾಡಿ, ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ, ವಿಧಾಸಭಾಧ್ಯಕ್ಷರಾಗಿ, ಕಂದಾಯ ಸಚಿವರಾಗಿ ಕಾಗೋಡು ತಿಮ್ಮಪ್ಪ ಅವರು ಸಲ್ಲಿಸಿದ ಸೇವೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹಿರಿಯರ ಶ್ರಮದಿಂದ ಸುಸಜ್ಜಿತವಾದ ವಕೀಲರ ಭವನ ಸಾಗರದಲ್ಲಿ ನಿರ್ಮಾಣವಾಗಿದೆ. ವಕೀಲರು ಇದನ್ನು ವ್ಯವಸ್ಥಿತವಾಗಿ ಬಳಸಿಕೊಂಡು ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು ಎಂದರು.
    ಜಿಲ್ಲೆಯ ಹೆಗ್ಗಳಿಕೆ
    ಶಿವಮೊಗ್ಗದ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ನಾಯಕ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಥಮವಾಗಿ ನ್ಯಾಯಾಲಯ ಆರಂಭವಾದದ್ದು 150 ವರ್ಷಗಳ ಹಿಂದೆ ಆನಂದಪುರದಲ್ಲಿ. 1875ರಲ್ಲಿ ಈ ನ್ಯಾಯಾಲಯ ಆರಂಭವಾಯಿತು. ಸಾಗರ ತಾಲೂಕು ಇದರ ವ್ಯಾಪ್ತಿಯಾಗಿತ್ತು. ನಂತರದಲ್ಲಿ ಸಾಗರದಲ್ಲಿ ಕೋರ್ಟ್ ಆರಂಭವಾಯಿತು. ಸಾಗರದ ನ್ಯಾಯಾಲಯ ಹಂತ ಹಂತವಾಗಿ ಬೆಳೆದು ತನ್ನದೇ ವಿಶೇಷತೆ ಮೂಡಿಸಿದೆ. ಸಾಗರದ ವಕೀಲರ ಸಂಘ 250 ಕ್ರಿಯಾಶೀಲ ವಕೀಲರನ್ನು ಹೊಂದಿದೆ. ರಾಜ್ಯದಲ್ಲಿಯೇ ಮಾದರಿಯಾಗಿರುವ ವಕೀಲರ ಭವನ ಇಲ್ಲಿ ನಿರ್ಮಾಣವಾಗಿದ್ದು ಜಿಲ್ಲೆಯ ಹೆಗ್ಗಳಿಕೆಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts