More

    ಬ್ರಿಟಿಷರು ಭಾರತ ಬಿಟ್ಟಿದ್ದಕ್ಕೆ ಕಾರಣ ಸುಭಾಷ್​ಚಂದ್ರ ಬೋಸ್

    ಇಂದು ಜಯಂತಿ

    ಸುಭಾಷ್​ಚಂದ್ರಬೋಸ್ ಕುರಿತ ಸಂಶೋಧನೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವವರು ಅನುಜ್ ಧರ್. ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ವಿದ್ವಾಂಸ ವಲಯ ಅನೇಕ ವರ್ಷ ನಂಬಿಕೊಂಡು, ನಂಬಿಸಿಕೊಂಡು ಬಂದ ವಾದವನ್ನು ಹಿಮ್ಮೆಟ್ಟಿಸುವಲ್ಲಿ ಅನುಜ್ ಧರ್ ಸಂಶೋಧನೆ, ಅವರ ಮೊದಲ ಪುಸ್ತಕ ‘ಬ್ಯಾಕ್ ಫ್ರಂ ಡೆಡ್: ಇನ್​ಸೈಡ್ ದಿ ಸುಭಾಷ್ ಬೋಸ್ ಮಿಸ್ಟರಿ’ ಹಾಗೂ ನಂತರ ಬಂದ ‘ಇಂಡಿಯಾಸ್ ಬಿಗ್ಗೆಸ್ಟ್ ಕವರಪ್’ ಕೃತಿಗಳು ಸಫಲವಾದವು. ಇತ್ತೀಚೆಗಷ್ಟೆ ಸಹ ಲೇಖಕ ಚಂದ್ರಚೂಡ್ ಘೋಷ್ ಜತೆ ಸೇರಿ ‘ಕೊನಂಡ್ರಂ: ಸುಭಾಷ್ ಬೋಸ್​ಸ್ ಲೈಫ್ ಆಫ್ಟರ್ ಡೆತ್’ ಕೃತಿ ಹೊರತಂದಿದ್ದಾರೆ. ನೇತಾಜಿ ಕುರಿತು ಸರ್ಕಾರಗಳಿಗಿರುವ ಅಸಡ್ಡೆ ಹಾಗೂ ಇನ್ನಿತರೆ ವಿಚಾರಗಳ ಕುರಿತು ‘ವಿಜಯವಾಣಿ’ ಜತೆಗೆ ಅನುಜ್ ಧರ್ ಮಾತನಾಡಿದ್ದಾರೆ.

    ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್​ಚಂದ್ರ ಬೋಸ್ ಬದುಕಿದ್ದರೆ ಇವತ್ತಿಗೆ 123ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಅವರು ಮೃತಪಟ್ಟರು ಎಂದು ಸರ್ಕಾರ ಹೇಳುವ 1945ರ ಆಗಸ್ಟ್ 18ರಿಂದ 75 ವರ್ಷ ದಾಟಿದೆ. ಆದರೂ ನೇತಾಜಿ ಕುರಿತ ಪ್ರೀತಿ, ಕುತೂಹಲ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗಿಲ್ಲ.

    ಬೋಸ್ ಅವರೇ ಉತ್ತರ ಪ್ರದೇಶದಲ್ಲಿ ಅನೇಕ ವರ್ಷ ಗುಮ್​ನಾಮಿ ಬಾಬಾ ಆಗಿ ವಾಸವಿದ್ದರು ಎಂಬುದು ವಾದ. ಇದರ ಪರಿಶೀಲನೆಗೆ ನ್ಯಾಯಾಲಯದ ಆದೇಶದ ಮೇರೆಗೆ 2016ರಲ್ಲಿ ರಚಿಸಿದ್ದ ನ್ಯಾ. ವಿಷ್ಣು ಸಹಾಯ್ ಆಯೋಗದ ವರದಿ ಇತ್ತೀಚೆಗೆ ಬಹಿರಂಗಗೊಂಡಿದೆ. ಸಹಾಯ್ ಆಯೋಗದ ವರದಿ ಕಣ್ಣೊರೆಸುವ ತಂತ್ರ. ಬೋಸರ ಬಗ್ಗೆ ಏನು ಹೇಳಬೇಕೆಂಬುದನ್ನು ಸಮಿತಿ ಅಧ್ಯಕ್ಷರು ಪೂರ್ವನಿಶ್ಚಯಿಸಿಕೊಂಡಿದ್ದರು. ಆಯೋಗದ ವರದಿ ಏಕೆ ವಿಶ್ವಾಸಾರ್ಹವಲ್ಲ ಎಂಬುದಕ್ಕೆ ಉದಾಹರಣೆ ನೀಡುತ್ತೇನೆ. ಇಡೀ ವರದಿಯಲ್ಲಿ ಗುಮ್​ನಾಮಿ ಬಾಬಾ ಬಗ್ಗೆ ಇರುವುದು ಕೇವಲ 30-40 ಪುಟ ಅಷ್ಟೆ. ಉಳಿದದ್ದೆಲ್ಲ ಈ ಹಿಂದಿನ ಆಯೋಗಗಳ ವರದಿಯ ಪುನರುಚ್ಚಾರ. ಮತ್ತೊಂದು ಅಂಶವೆಂದರೆ, ನನಗೆ ಮತ್ತು ಉಳಿದ ಸಾಮಾನ್ಯ ಸಂಶೋಧಕರಿಗೆ ಸರ್ಕಾರದ ಸಹಾಯವಿಲ್ಲ, ಸೌಲಭ್ಯವಿಲ್ಲದಿದ್ದರೂ ನಾವು ಸಂಶೋಧನೆ ನಡೆಸುವ ವೇಳೆ ಗುಮ್​ನಾಮಿ ಬಾಬಾ ಹಸ್ತಾಕ್ಷರಗಳನ್ನು ಇಬ್ಬರು ಪ್ರಸಿದ್ಧ ಕೈಬರಹ ತಜ್ಞರಿಂದ ಪರೀಕ್ಷಿಸಿಕೊಂಡಿದ್ದೆವು. ಆದರೆ ಈ ಆಯೋಗ ಅಂತಹ ಯಾವುದೇ ಪ್ರಯತ್ನವನ್ನೇ ಮಾಡಿಲ್ಲ. ಇದು ಆಯೋಗದ ಹೆಸರಲ್ಲಿ ಮಾಡುತ್ತಿರುವ ಅಪಹಾಸ್ಯ. ಗುಮ್​ನಾಮಿ ಬಾಬಾರ ಡಿಎನ್​ಎ ವಿಚಾರ ಕುರಿತು ಸಾಕಷ್ಟು ವಿಚಾರಗಳಿವೆ. ಆದರೆ ಆಯೋಗ ಅದನ್ನೂ ನಿರ್ಲಕ್ಷಿಸಿದೆ. ಸಾಕ್ಷಿಗಳನ್ನು ಕರೆದು ವಿಚಾರಿಸಿಲ್ಲ. ದಾಖಲೆಗಳನ್ನು ಪರಿಶೀಲಿಸಿಲ್ಲ.

    ‘ಬುಲ್​ಬುಲ್’ ಎಂಬುವವರು ಗುಮ್​ನಾಮಿ ಬಾಬಾಗೆ ಬರೆದಿರುವ ಪತ್ರವೊಂದನ್ನು ಆಧಾರವಾಗಿಟ್ಟುಕೊಂಡು ಆಯೋಗ ವರದಿ ನೀಡಿದೆ. ಆದರೆ ಬುಲ್​ಬುಲ್ (ಸುನಿತಾ ಭಟ್ಟಾಚಾರ್ಯ) ಸ್ವತಃ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಅಂತಹ ಪತ್ರ ಬರೆದ ನೆನಪೇ ಇಲ್ಲ ಎಂದಿದ್ದಾರೆ. ಕನಿಷ್ಠ ಅವರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸುವ, ಪತ್ರವನ್ನು ಖಾತ್ರಿಪಡಿಸಿಕೊಳ್ಳುವ ಕೆಲಸವನ್ನೂ ಆಯೋಗ ಮಾಡಿಲ್ಲ. ಗುಮ್​ನಾಮಿ ಬಾಬಾ ಬಗ್ಗೆ 1987ರಲ್ಲಿ ಸಂಸತ್​ನಲ್ಲಿ ಪ್ರಶ್ನೆ ಕೇಳಲಾಗಿತ್ತು. ರಾಜೀವ್ ಗಾಂಧಿ ಸರ್ಕಾರದಲ್ಲಿ ಸಚಿವರಾಗಿದ್ದ ಪಿ. ಚಿದಂಬರಂ ಉತ್ತರಿಸಿ, ‘ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದಿದ್ದರು. 10 ವರ್ಷದ ನಂತರ ರಾಜ್ಯಸಭೆಯಲ್ಲಿ ಇದೇ ಪ್ರಶ್ನೆ ಕೇಳಿದಾಗಲೂ ಇದೇ ಉತ್ತರವನ್ನು ಸರ್ಕಾರ ನೀಡಿದೆ. ಅಧಿಕಾರಕ್ಕೆ ಬಂದ ಪಕ್ಷ ಯಾವುದೇ ಇರಲಿ, ಭಾರತದ ಎಲ್ಲ ಸರ್ಕಾರಗಳೂ ಗುಮ್​ನಾಮಿ ಬಾಬಾ ವಿಚಾರವನ್ನು ಬದಿಗೆ ಸರಿಸುತ್ತಲೇ ಬಂದಿವೆ. ಏಕೆ ಎಲ್ಲ ಸರ್ಕಾರಗಳೂ ಇದೇ ರೀತಿ ಮಾಡುತ್ತವೆ?

    ನೇತಾಜಿ ಸಾವಿನ ವಿಚಾರ ಕೆದಕಿದಾಗಲೆಲ್ಲ ಸಾರ್ವಜನಿಕವಾಗಿ ಬಿರುಸಿನ ಚರ್ಚೆಗಳು ನಡೆಯುತ್ತವೆ. ಇಂದಿಗೂ ನೇತಾಜಿ ಬಗ್ಗೆ ಮಾತನಾಡಿದರೆ ಜನ ಕೇಳುತ್ತಾರೆ, ಓದುತ್ತಾರೆ, ಪ್ರತಿಕ್ರಿಯಿಸುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ, ಪಂಜಾಬ್… ಎಲ್ಲೇ ಹೋಗಲಿ ನೇತಾಜಿ ಕುರಿತ ಕುತೂಹಲ ಸಮನಾದದ್ದು. ಸಾರ್ವಜನಿಕರಿಂದ ಈ ಮಟ್ಟಿಗಿನ ಸಮಾನ ಪ್ರೀತಿಯನ್ನು ವಿಶ್ವಾದ್ಯಂತ ಹೊಂದಿರುವ ಕೆಲವೇ ಜನರಿದ್ದಾರೆ. ಏಕೆ ಈ ರೀತಿಯ ಪ್ರತಿಕ್ರಿಯೆ, ಕುತೂಹಲ? ಏಕೆಂದರೆ, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ನೇತಾಜಿ ಸುಭಾಷ್​ಚಂದ್ರ ಬೋಸ್ ಮುಖ್ಯ ಕಾರಣ ಎಂಬುದು ಸಾಮಾನ್ಯ ಜನರಿಗೆ ಗೊತ್ತಿದೆ. ಈ ವಿಚಾರ ಸತ್ಯವೆಂದು ಸಾಬೀತಾಗಿಬಿಟ್ಟರೆ, ಸರ್ಕಾರಕ್ಕೇ ಏನು ನಷ್ಟ? ‘ಮಹಾತ್ಮ ಗಾಂಧಿ’ ಎನ್ನುವ ಬ್ರಾ್ಯಂಡ್ ಮೇಲೆ ಕೇಂದ್ರ ಸರ್ಕಾರಗಳು ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಮಾಡಿವೆ. ‘ಗಾಂಧಿಯವರ ಸತ್ಯಾಗ್ರಹ ಹಾಗೂ ಅಹಿಂಸೆಯಿಂದಲೇ ಬ್ರಿಟಿಷರು ದೇಶ ತೊರೆದರು’ ಎಂದು ಹೇಳುವುದರಿಂದ, ಭಾರತದ ಜನರ ಆಕಾಂಕ್ಷೆಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ್ಯ ನೀಡಿದರು, ಬ್ರಿಟಿಷರು ಉತ್ತಮ ನಾಗರಿಕರು ಎಂದು ತೋರಿಸಿದಂತಾಗುತ್ತದೆ. ನೂರಾರು ವರ್ಷ ನಮ್ಮನ್ನು ಆಳಿ, ಹಿಂಸಿಸಿದ್ದವರನ್ನು ಒಳ್ಳೆಯ ರೀತಿ ತೋರಿಸಲು ಈ ಪ್ರಯತ್ನಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಇಂಗ್ಲೆಂಡ್​ನ ಪಾರ್ಲಿಮೆಂಟ್  ಸ್ಕ್ವೇರ್​ನಲ್ಲಿ ಗಾಂಧೀಜಿ ಪ್ರತಿಮೆ ಸ್ಥಾಪಿಸಲಾಗಿದೆ.

    ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿ ಕೊಡುಗೆ ಇಲ್ಲ ಎಂದು ನಾನು ಹೇಳುತ್ತಿಲ್ಲ. ಇಡೀ ಚಳವಳಿ ರೂಪಿಸಿದ್ದು, ಜನರನ್ನು ಸಂಘಟಿಸಿದ್ದರಲ್ಲಿ ಗಾಂಧೀಜಿ ಪಾತ್ರ ದೊಡ್ಡದು, ಅದರಲ್ಲಿ ಎರಡು ಮಾತಿಲ್ಲ. ಆದರೆ ಬ್ರಿಟಿಷರು ಭಾರತ ಬಿಟ್ಟಿದ್ದಕ್ಕೆ ಕಾರಣ ಸುಭಾಷ್​ಚಂದ್ರಬೋಸ್. ಗಾಂಧೀಜಿ ಮತ್ತು ಗಾಂಧೀಜಿ ಬ್ರ್ಯಾಂಡ್​​ನಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಸರ್ಕಾರ ಪ್ರತಿಪಾದಿಸುತ್ತಿರುವ ಗಾಂಧಿ ಬ್ರ್ಯಾಂಡ್​ಗೆ ಯುರೋಪ್ ಹಾಗೂ ಅಮೆರಿಕದಲ್ಲಿ ಅತ್ಯುತ್ತಮ ಮಾರುಕಟ್ಟೆ ಇದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಭಾರತದ ಎಲ್ಲ ಶ್ರೀಮಂತ ವರ್ಗ, ಉನ್ನತ ಮಟ್ಟದ ಅಧಿಕಾರಿಗಳು, ವಿದೇಶಾಂಗ ಇಲಾಖೆ ಅಧಿಕಾರಿಗಳು, ಎಲ್ಲ ದೊಡ್ಡ ರಾಜಕಾರಣಿಗಳು, ಇತ್ತೀಚೆಗೆ ಕೆಲ ದೊಡ್ಡ ಪತ್ರಕರ್ತರು ಇಂಗ್ಲೆಂಡ್ ಜತೆಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಇವರಿಗೆಲ್ಲ ಆ ದೇಶದಲ್ಲಿ ಉದ್ಯಮವಿದೆ, ಅವರ ಕುಟುಂಬದ ಅನೇಕ ಸದಸ್ಯರು ಅಲ್ಲೇ ನೆಲೆಸಿದ್ದಾರೆ. ಈ ಆಡಳಿತ ವರ್ಗಕ್ಕೆ, ಗಾಂಧೀಜಿ ಬ್ರ್ಯಾಂಡ್​ನಿಂದ ಸ್ವಹಿತಾಸಕ್ತಿ ಇದೆ. ಏನಾದರೂ ನೇತಾಜಿ ಕುರಿತ ಸತ್ಯ ಹೇಳಿದರೆ ಇಡೀ ಗಾಂಧೀಜಿ ಬ್ರ್ಯಾಂಡ್ ಕುಸಿಯುತ್ತದೆ. ಯುರೋಪ್​ನಲ್ಲಿ ಸುಭಾಷ್​ಚಂದ್ರಬೋಸ್ ಬ್ರ್ಯಾಂಡ್ ಮಾರಾಟವಾಗುವುದಿಲ್ಲ. ಏಕೆಂದರೆ ಅದು ಬ್ರಿಟಿಷರನ್ನು ಕ್ರೂರಿಗಳಾಗಿ ತೋರಿಸುತ್ತದೆ.

    ಕಡತಗಳು ಇನ್ನೂ ಇವೆ

    ನೇತಾಜಿ ಕುರಿತ ಗೌಪ್ಯ ದಾಖಲೆಗಳನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂಬುದರ ಪರ ನಾವು. ನಮ್ಮೆಲ್ಲರ ಹೋರಾಟದ ಫಲವಾಗಿ ಈ ಸರ್ಕಾರ ನೇತಾಜಿ ಕುರಿತ ಅನೇಕ ಕಡತಗಳನ್ನು ಬಹಿರಂಗಗೊಳಿಸಿದೆ. ಆದರೆ ಎಲ್ಲ ಕಡತಗಳನ್ನೂ ಬಹಿರಂಗಪಡಿಸಿದ್ದೇವೆ ಎಂದು ಸರ್ಕಾರ ಹೇಳುತ್ತಿರುವುದು ಸುಳ್ಳು. ಗುಪ್ತಚರ ಇಲಾಖೆಗೆ ಸಂಬಂಧಿಸಿದ ಅನೇಕ ಕಡತಗಳು ಇನ್ನೂ ಬಾಕಿ ಇವೆ. ಭಾರತ ಸರ್ಕಾರದ ಘೋಷವಾಕ್ಯವೇ ‘ಸತ್ಯ ಮೇವ ಜಯತೇ’. ನೇತಾಜಿ ಕುರಿತು ಸರ್ಕಾರ ಸತ್ಯ ಹೇಳಬೇಕು ಅಷ್ಟೆ. ಶಾಲೆ ಪಠ್ಯಪುಸ್ತಕಗಳಲ್ಲಿ ಸರ್ಕಾರ ತನಗೆ ಇಷ್ಟ ಬಂದದ್ದನ್ನು ಬೋಧಿಸಬಹುದು. ಆದರೆ ಅದೇ ಮಗು ಬೆಳೆದ ನಂತರ ಸುದ್ದಿಪತ್ರಿಕೆಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ಸತ್ಯ ತಿಳಿಯುತ್ತದೆ. ನೀವು ಯುರೋಪಿಯನ್ ದೇಶಗಳನ್ನು ನಂಬಿಸಬಹುದು, ಆದರೆ ಭಾರತದ ಜನರಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ.

    ಬ್ರಿಟಿಷರು ಭಾರತ ಬಿಟ್ಟಿದ್ದಕ್ಕೆ ಕಾರಣ ಸುಭಾಷ್​ಚಂದ್ರ ಬೋಸ್

    | ಸಂದರ್ಶನ: ರಮೇಶ ದೊಡ್ಡಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts