More

    ಬಿಜೆಪಿ ನಡೆದು ಬಂದ ದಾರಿ ವಸ್ತುನಿಷ್ಠ ಪುಸ್ತಕ

    ಗುಳೇದಗುಡ್ಡ: ಬಿಜೆಪಿ ನಡೆದು ಬಂದ ದಾರಿ ಪುಸ್ತಕ ರಾಜಕೀಯ ಪುಸ್ತಕವಾದರೂ ಇದರಲ್ಲಿ ರಾಜಕೀಯ ಇಲ್ಲ ಎಂದು ಅಂಕಣಕಾರ ರೋಹಿತ್ ಚಕ್ರತೀರ್ಥ ಹೇಳಿದರು.

    ಪಟ್ಟಣದ ಸರಸ್ವತಿ ವಿದ್ಯಾಮಂದಿರ ಸಭಾಭವನದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ದಿ. ಕಲ್ಯಾಣರಾವ್ ಮರಳಿ ಅವರು ರಚಿಸಿದ, ಅಯೋಧ್ಯಾ ಪಬ್ಲಿಕೇಷನ್ ಪ್ರಕಟಿಸಿರುವ ಬಿಜೆಪಿ ನಡೆದು ಬಂದ ದಾರಿ ಪುಸ್ತಕ ಲೋಕಾರ್ಪಣೆ ಹಾಗೂ ಕಲ್ಯಾಣರಾವ್ ಮರಳಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪುಸ್ತಕ ಲೋಕಾರ್ಪಣೆ ಸಂದರ್ಭದಲ್ಲಿ ಕಲ್ಯಾಣರಾವ್ ಮರಳಿ ಅವರು ನಮ್ಮೊಡನೆ ಇರದೆ ಇರುವುದು ನೋವಿನ ಸಂಗತಿಯಾಗಿದೆ. ಮರಳಿ ಅವರ ಮನೆಯವರು ಕಾರ್ಯಕ್ರಮ ಮಾಡುತ್ತಿರುವುದು ಸಾರ್ಥಕ ಕೆಲಸ ಎಂದರು.

    ಹಿಂದುಗಳ ರಕ್ಷಣೆ ಉದ್ದೇಶದಿಂದಲೇ ಸ್ಥಾಪನೆಯಾದ ಜನಸಂಘ ಬಿಜೆಪಿಯಾಗಿ ಬದಲಾದರೂ ಅದೇ ಸಿದ್ಧಾಂತವನ್ನು ಹೊಂದಿದೆ. ಕಲ್ಯಾಣರಾವ್ ಮರಳಿ ಅವರು ಜನಸಂಘದಿಂದ ಪ್ರಾರಂಭವಾದ ಬಿಜೆಪಿ ಬೆಳೆದು ಬಂದ ದಾರಿಯನ್ನು ಅತ್ಯಂತ ವಸ್ತುನಿಷ್ಠವಾಗಿ ಹಿಡಿದಿಟ್ಟಿದ್ದಾರೆ ಎಂದರು.

    ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಮಾತನಾಡಿ, ಜೀವನದ ಕೊನೆಯ ತನಕ ಅತ್ಯಂತ ಸಕ್ರಿಯವಾಗಿದ್ದ ಕಲ್ಯಾಣರಾವ್ ಮರಳಿ ಅವರು, ಚಿಕ್ಕವರಿದ್ದಾಗಲೇ ಸಂಘದ ವ್ರತವನ್ನು ಪಾಲಿಸಿ, ಜೀವನದ ಪೂರ್ತಿ ಆ ವ್ರತವನ್ನು ಆಚರಿಸಿಕೊಂಡು ಬಂದರು. ನಿವೃತ್ತಿ ನಂತರ ಲೇಖನ ಕೃಷಿ ಆರಂಭಿಸಿದ ಕಲ್ಯಾಣರಾವ್ ಅವರು ಹೊಸದಿಗಂತ, ಆಸೀಮ, ವಿಕ್ರಮದಂತಹ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಇಂದು ಜಗತ್ತಿನ ದೊಡ್ಡ ಪಕ್ಷವಾಗಿರುವ ಬಿಜೆಪಿ ಹುಟ್ಟು ಬೆಳವಣಿಗೆ ಅವರು ರಚಿಸಿದ ಪುಸ್ತಕದಲ್ಲಿದೆ .ಪುಸ್ತಕ ಪುಟ್ಟದಾಗಿದ್ದರೂ ದೊಡ್ಡ ಸಂಗತಿ ಇದರಲ್ಲಿದೆ ಎಂದರು.

    ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕಲ್ಯಾಣರಾವ್ ಮರಳಿ ವೃತ್ತಿಯಿಂದ ಶಿಕ್ಷಕರು. ಆದರೆ ಅವರು ಶಾಲೆಗೆ ಮಾತ್ರ ಶಿಕ್ಷಕರಾಗಿರಲಿಲ್ಲ. ಇಡೀ ಸಮಾಜಕ್ಕೆ ಶಿಕ್ಷಕರಾಗಿದ್ದರು. ಈಗೀಗ ಪಕ್ಷಕ್ಕೆ ಬಂದಿರುವವರಿಗೆ ಬಿಜೆಪಿ ಇತಿಹಾಸ ಗೊತ್ತಿಲ್ಲ. ಪಕ್ಷದ ಇತಿಹಾಸ ಗೊತ್ತಿಲ್ಲದವರಿಗೆ ಕಲ್ಯಾಣರಾವ್ ಮರಳಿ ಅವರ ಬಿಜೆಪಿ ನಡೆದು ಬಂದ ದಾರಿ ಪುಸ್ತಕ ಮಾರ್ಗದರ್ಶಕವಾಗಿದೆ. ಮೇಲ್ಮಟ್ಟದ ನಾಯಕರಿಂದ ಹಿಡಿದು ಪಕ್ಷದ ಬೂತ್‌ಮಟ್ಟದ ನಾಯಕನಿಗೂ ಈ ಪುಸ್ತಕ ತಲುಪಬೇಕು. ಅಂದಾಗ ಮಾತ್ರ ಬಿಜೆಪಿ ಕಟ್ಟಿ ಬೆಳೆಸಿದ ಆ ಮಹಾನ್ ನಾಯಕರ, ಕಾರ್ಯಕರ್ತರ ಕಷ್ಟ ಅರಿವಾಗುತ್ತದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಕಾಶಿನಾಥ ಸ್ವಾಮಿಗಳು, ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರ ಪ್ರಾಂತ ಸದಸ್ಯ ಅರವಿಂದರಾವ್ ದೇಶಪಾಂಡೆ ಮಾತನಾಡಿದರು. ಪ್ರಸನ್ನ ಮರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಹಿರಿಯ ಪತ್ರಕರ್ತರಾದ ದು.ಗು. ಲಕ್ಷ್ಮಣ, ರೋಹಿತ್ ಚಕ್ರತೀರ್ಥ, ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರ ಪ್ರಾಂತ ಸದಸ್ಯ ಅರವಿಂದರಾವ್ ದೇಶಪಾಂಡೆ, ಸಂಪತ್‌ಕುಮಾರ ರಾಠಿ ಅವರನ್ನು ಮರಳಿ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.

    ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಪ್ರದೀಪ ಮರಳಿ, ಬಾಬಾಸಾಹೇಬ ಕುಲಕರ್ಣಿ, ಶಂಕರ ರೂಢಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಮಲ್ಲಿಕಾರ್ಜುನ ಶೀಲವಂತ, ರಾಮಣ್ಣ ಬಾರಕೇರ, ಬಸವರಾಜ ಬ್ಯಾಳಿ, ಹನುಮಂತ ಕಂದಗಲ್ಲ, ವಿವೇಕಾನಂದ ದೇವಾಂಗಮಠ, ಸಿದ್ದು ನಾಯನೇಗಲಿ, ಶಿವಕುಮಾರ ಅಚನೂರ, ಸುಧೀರ ಗುಡ್ಡದ, ಶಿವಯೋಗೆಪ್ಪ ಮುರಗೋಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts