More

    ಕಂರ್ಭಿ ಕೆರೆ ಸ್ವಚ್ಛಗೊಳಿಸಿದ ಸ್ಥಳೀಯರು

    ಪ್ರಕಾಶ್ ಮಂಜೇಶ್ವರ, ಮಂಗಳೂರು

    ನಾಡಿನ ಜಲ ಮೂಲಗಳೆನಿಸಿದ ಅನೇಕ ಐತಿಹಾಸಿಕ ಕೆರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹೊತ್ತಿನಲ್ಲಿ ಉಪಯೋಗ ಶೂನ್ಯವಾಗಿದ್ದ ಜಪ್ಪಿನಮೊಗರು ಕಂರ್ಭಿಸ್ಥಾನದ ಪ್ರಾಚೀನ ವಿಶಾಲ ಕೆರೆಯನ್ನು ಸ್ಥಳೀಯರೇ ಶ್ರಮದಾನ ಮೂಲಕ ಸ್ವಚ್ಛಗೊಳಿಸಿದ್ದಾರೆ.

    ಕೆರೆ ಸ್ವಚ್ಛತೆ ಸಂದರ್ಭ ದೊರೆತ ವಿವಿಧ ಜಾತಿಯ ಮೀನು ಹಾಗೂ ಆಮೆಗಳನ್ನು ಮತ್ತದೇ ಕೆರೆಗೆ ಬಿಟ್ಟಿದ್ದಾರೆ. ಸಾರ್ವಜನಿಕರ ಪರಿಶ್ರಮದಿಂದ ಈಗ ಕೆರೆ ಸ್ವಚ್ಛಗೊಂಡಿದೆ. ಕೆಸರು, ಹುಲ್ಲುಪೊದೆ ಕಾಣುವುದಿಲ್ಲ. ಆದರೆ ಪಾಲಿಕೆ ಆಡಳಿತ ವ್ಯವಸ್ಥೆ ಶೀಘ್ರದಲ್ಲೇ ಸೂಕ್ತ ಯೋಜನೆ ಜಾರಿಗೊಳಿಸಿದರೆ ಮಾತ್ರ ಈ ಕೆರೆ ಗತ ವೈಭವಕ್ಕೆ ಮರಳಲು ಸಾಧ್ಯ.

    ಲಾಕ್‌ಡೌನ್ ಸಂದರ್ಭ ಸರ್ಕಾರದ ಆದೇಶಕ್ಕೆ ಚ್ಯುತಿ ತರದ ರೀತಿ ಆಸುಪಾಸಿನ ಮನೆಗಳ 20 ಮಂದಿಯ ತಂಡ ಸಾಮಾಜಿಕ ಅಂತರ ಕಾಪಾಡಿಕೊಂಡು ಈ ಕೆಲಸ ನಡೆಸಿದ್ದಾರೆ ಎಂದು ಊರಿನ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುತ್ತಲಿನ ಮನೆಗಳ ಶೌಚಗೃಹ, ಅಡುಗೆ ಮನೆಯ ನೀರು ಸಹಿತ ಎಲ್ಲ ವಿಧದ ತ್ಯಾಜ್ಯ ನೀರು ಹರಿದು ಈ ಕೆರೆ ಸೇರುತ್ತಿತ್ತು. ಜತೆಗೆ ಕೆಸರು, ಪೊದೆ ಆವರಿಸಿ ಕೆರೆಯೇ ನಿಷ್ಪ್ರಯೋಜಕ ಸ್ಥಿತಿಯಲ್ಲಿತ್ತು.

    ದೈವಸ್ಥಾನದ ನಂಟು: ಪುರಾಣ ಪ್ರಸಿದ್ದ ವೈದ್ಯನಾಥ ದೈವಸ್ಥಾನ ಹಾಗೂ ಅದರಿಂದ ಸುಮಾರು 150 ಮೀಟರ್ ದೂರದಲ್ಲಿರು ಕಂರ್ಭಿ ಕೆರೆಗೂ ನಿಕಟ ಸಂಬಧವಿದೆ. ದೈವಸ್ಥಾನದ ಜಾತ್ರೆಗೆ ಕೊಡಿ ಏರಿದ ಮೇಲೆ ಭಕ್ತರು ಈ ಕೆರೆಯ ನೀರಲ್ಲಿ ಮುಳುಗಿ ಸ್ನಾನ ಮುಗಿಸಿ ದೈವಸ್ಥಾನದಲ್ಲಿ ಉರುಳು ಸೇವೆ ನಡೆಸುವುದು ರೂಢಿ. ಶ್ರದ್ಧಾಳುಗಳು ಈ ಕೆರೆಯ ನೀರಿಗೆ ದೇವರ ತೀರ್ಥದ ಸ್ಥಾನ ನೀಡಿದ್ದರು.

    ಮೀನುಗಳ ಮಾರಣ ಹೋಮ: ಕೆರೆ ನೀರು ಕಲುಷಿತಗೊಂಡು ಕೆಲವು ವರ್ಷಗಳೇ ಸಂದವು. 2014ರಲ್ಲಿ ಈ ಕೆರೆಯ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಆದರೆ ಈ ಘಟನೆ ಕೂಡ ಸಂಬಂಧಪಟ್ಟವರ ಕಣ್ಣು ತೆರೆಸಲಿಲ್ಲ. ಯೋಗೀಶ್ ಭಟ್ ಶಾಸಕರಾಗಿದ್ದ ಅವಧಿಯಲ್ಲಿ ಕೆರೆಯ ಸುತ್ತ ಕಟ್ಟೆ ಕಟ್ಟುವ ಕಾಮಗಾರಿ ನಡೆದಿತ್ತು. ನಂತರ ಜೆ.ಆರ್.ಲೋಬೋ ಅವಧಿಯಲ್ಲಿ ಕಾಮಗಾರಿ ನಡೆಯಲಿದೆ ಎಂದು ಸುದ್ದಿಯಾಗಿತ್ತು. ಈಗ ಕೆರೆ ಅಭಿವೃದ್ಧಿಗೆ ಅನುದಾನ ಮಂಜೂರುಗೊಂಡಿದೆ ಎಂದು ಪಾಲಿಕೆ ಸ್ಥಳೀಯ ಸದಸ್ಯೆ ತಿಳಿಸಿದ್ದಾರೆ.

    ಲಾಕ್‌ಡೌನ್ ಸಂದರ್ಭ ಸ್ಥಳೀಯ ಯುವಜನರು, ಮಹಿಳೆಯರು, ಪುರುಷರು ಸಾಮಾಜಿಕ ಅಂತರ ಕಾಯ್ದುಕೊಂಡು ಜತೆಯಾಗಿ ಕಂರ್ಭಿಕೆರೆ ಸ್ವಚ್ಛಗೊಳಿಸಿದ್ದಾರೆ. ಪುರಾಣ ಪ್ರಸಿದ್ಧ ಈ ಕೆರೆ ಗತ ವೈಭವ ಮರಳಿ ಪಡೆಯಲು ಆಡಳಿತ ವ್ಯವಸ್ಥೆಯ ಸಹಕಾರ ಬೇಕು.
    ಚಿತ್ತರಂಜನ್ ಬೋಳಾರ್

    ಅಧ್ಯಕ್ಷರು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ

    ಕಂರ್ಭಿಕೆರೆ ಅಭಿವೃದ್ಧಿಗೆ ಶಾಸಕ ಡಿ.ವೇದವ್ಯಾಸ ಕಾಮತ್ ಪ್ರಯತ್ನದಿಂದ ಮುಡಾ ಮೂಲಕ 25 ಲಕ್ಷ ರೂ. ಮಂಜೂರಾಗಿದೆ. ಕರೊನಾ ಲಾಕ್‌ಡೌನ್ ನಿರ್ಬಂಧ ತೆರವಾದ ಕೂಡಲೇ ಕಾಮಗಾರಿ ಆರಂಭಗೊಳ್ಳುವುದು.

    ವೀಣಾ ಮಂಗಳಾ
    ಪಾಲಿಕೆಯ ಸ್ಥಳೀಯ ಸದಸ್ಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts