More

    ಆತ್ಮಸಾಕ್ಷಾತ್ಕಾರದ ಆನಂದ ವೈಭವ; ಸದ್ಗುರು ಮಧುಸೂದನ ಸಾಯಿ ಅಂಕಣ

    ಆತ್ಮಸಾಕ್ಷಾತ್ಕಾರದ ಆನಂದ ವೈಭವ; ಸದ್ಗುರು ಮಧುಸೂದನ ಸಾಯಿ ಅಂಕಣಆತ್ಮಸಾಕ್ಷಾತ್ಕಾರ ಪಡೆಯಲು ಮರಣದವರೆಗೆ ಕಾಯಬೇಕಾಗಿಲ್ಲ; ಜೀವಿಸಿರುವಾಗಲೇ ಅದನ್ನು ಸಾಧಿಸಬಹುದು. ಸಂಸ್ಕ ೃತದಲ್ಲಿ ಆತ್ಮವೆಂದರೆ ‘ತಾನು’ಎಂದರ್ಥ. ತನ್ನನ್ನು ತಾನು ತಿಳಿಯುವುದೇ ಆತ್ಮಸಾಕ್ಷಾತ್ಕಾರ; ತನ್ನಲ್ಲಿ ಇಲ್ಲದಿರುವುದನ್ನು ಹೊರಗಿನಿಂದ ಹೊಂದುವುದಲ್ಲ.

    ಆತ್ಮಸಾಕ್ಷಾತ್ಕಾರವನ್ನು ಪಡೆದು ಅಂತರಂಗ-ಬಹಿರಂಗಗಳಲ್ಲಿ ವ್ಯಾಪಿಸಿರುವ ದಿವ್ಯತ್ವವನ್ನು ಅನುಭವಿಸುವುದೇ ಸನಾತನ ಧರ್ಮದ ಕೇಂದ್ರ ಸಿದ್ಧಾಂತ. ಈಗಾಗಲೇ ನಾವು ತಿಳಿದುಕೊಂಡಂತೆ ಮಾನವ ಜೀವನದ ನಾಲ್ಕು ಉದ್ದೇಶಗಳೆಂದರೆ (ಚತುರ್ವಿಧ ಪುರುಷಾರ್ಥ) ಧರ್ಮ- ವ್ಯಕ್ತಿ ತನ್ನ ಜೀವನವನ್ನು ಧರ್ಮದ ಚೌಕಟ್ಟಿನಲ್ಲಿ ನಡೆಸುವುದು, ಅರ್ಥ- ಧರ್ಮದ ಆಧಾರದಲ್ಲಿ ಲೌಕಿಕ ಭೋಗ-ಭಾಗ್ಯಗಳನ್ನು ಸಂಪಾದಿಸುವುದು, ಕಾಮ- ಧರ್ಮದ ಮಿತಿಯಲ್ಲಿ ತನ್ನ ಆಸೆಗಳನ್ನು ಈಡೇರಿಸಿಕೊಳ್ಳುವುದು, ಮೋಕ್ಷ- ಸರ್ವತ್ರ ಇರುವ ದಿವ್ಯತ್ವದ ಅನುಭವವನ್ನು ಪಡೆದು ಜನನ-ಮರಣಗಳ ಚಕ್ರದಿಂದ ಮುಕ್ತನಾಗುವುದು. ಮೋಕ್ಷವು ಮಾನವ ಜನ್ಮದ ಚರಮ ಪುರುಷಾರ್ಥ.

    ಮೋಕ್ಷ ಸಾಧನೆಯ ಪಥದಲ್ಲಿ ಮಾನವನಿಗೆ ಅಡ್ಡಿಯಾಗುವ ಅಜ್ಞಾನದ ಕಗ್ಗಂಟು ಅಥವಾ ಹೃದಯಗ್ರಂಥಿಯ ಮೂರು ಪಾಶಗಳೆಂದರೆ ಅವಿದ್ಯೆ, ಕಾಮನೆ ಹಾಗೂ ಕರ್ಮಗಳು. ಅವಿದ್ಯೆಯೆಂದರೆ ತನ್ನ ದಿವ್ಯಸ್ವರೂಪದ ಅಜ್ಞಾನ; ಇದರಿಂದಾಗಿ ಉದ್ಭವವಾಗುವ ಹತ್ತಾರು ಲೌಕಿಕ ಆಸೆಗಳೇ ಕಾಮನೆಗಳು; ಇಂತಹ ಅನಗತ್ಯವಾದ ಕಾಮನೆಗಳ ಬೆನ್ನು ಹತ್ತಿ ಮಾಡುವ ಕಾರ್ಯಗಳೇ ಕರ್ಮ. ಈ ಮೂರೂ ಸೇರಿ ಮಾನವನು ಆತ್ಮಸಾಕ್ಷಾತ್ಕಾರ ಪಡೆಯುವ ಮಾರ್ಗದಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತವೆ. ಈ ಅಡೆತಡೆಗಳು ಮಾನವನಲ್ಲಿ ಬಹಿರಂಗದಲ್ಲಿ ಆಕರ್ಷಕವಾದ ಮಾಯಾ ಪ್ರಪಂಚ ಸೃಷ್ಟಿಸಿ, ಅವನ ದೃಷ್ಟಿಯನ್ನು ಜೀವನದ ಪರಮೋದ್ದೇಶದ ಗುರಿಯಿಂದ ವಿಚಲಿತಗೊಳಿಸುತ್ತವೆ. ಇಂತಹ ಮಾಯಾ ಪ್ರಪಂಚದ ಆಕರ್ಷಣೆಯಿಂದ ಮಾನವನನ್ನು ಪಾರು ಮಾಡುವ ಶಕ್ತಿಯಿರುವುದು ಆತ್ಮಜ್ಞಾನಿಯಾದ ಸದ್ಗುರುವಿನ ಸಾನ್ನಿಧ್ಯ-ಮಾರ್ಗದರ್ಶನಗಳಿಗೆ ಮಾತ್ರ. ಸದ್ಗುರುವಿನ ಹಾಗೂ ಸತ್-ಶಿಷ್ಯನ ಲಕ್ಷಣಗಳನ್ನು ಹಿಂದಿನ ಲೇಖನಗಳಲ್ಲಿ ನಾವು ತಿಳಿದುಕೊಂಡಿದ್ದೇವೆ.

    ಮಾನವನ ಅಂತರಂಗದಲ್ಲಿ ಹುದುಗಿರುವ ಅತ್ಯುನ್ನತ ಸಂಭಾವ್ಯ ಸಾಮರ್ಥ್ಯವೆಂದರೆ ಆತ್ಮಸಾಕ್ಷಾತ್ಕಾರ ಸಾಧಿಸುವ ಶಕ್ತಿ. ಈಗ ನಾವು ಆತ್ಮಜ್ಞಾನ ಪಡೆದು ಮುಕ್ತನಾದ ಮಾನವನ ಅಂತರಂಗದ ಸ್ಥಿತಿ ಹೇಗಿರಬಹುದು ಎಂಬುದನ್ನು ತಿಳಿದುಕೊಳ್ಳೋಣ. ಹಲವರು ಆತ್ಮಸಾಕ್ಷಾತ್ಕಾರವೆಂದರೆ, ವ್ಯಕ್ತಿ ಮರಣದ ನಂತರ ಮಾತ್ರ ಪಡೆಯುವ ಪರಮಪದವೆಂದು ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನ ಸತ್ಯದಿಂದ ಬಹು ದೂರವಾದ ಮಾತಾಗಿದೆ. ಮೊದಲು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯವೇನೆಂದರೆ, ಆತ್ಮಸಾಕ್ಷಾತ್ಕಾರ ಪಡೆಯಲು ಮರಣದವರೆಗೆ ಕಾಯಬೇಕಾಗಿಲ್ಲ; ಜೀವಿಸಿರುವಾಗಲೇ ಅದನ್ನು ಸಾಧಿಸಬಹುದು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೇಳುವುದಾದರೆ, ಆತ್ಮಸಾಕ್ಷಾತ್ಕಾರವೇ ನಮ್ಮ ಅಸ್ತಿತ್ವದ ಮೂಲಭೂತ ಸತ್ಯ. ಆತ್ಮಸಾಕ್ಷಾತ್ಕಾರವೆಂಬ ಪದಪುಂಜವೇ ಸ್ವಯಂ ವಿವರಣಾತ್ಮಕವಾಗಿದೆ. ಸಂಸ್ಕ ೃತದಲ್ಲಿ ಆತ್ಮವೆಂದರೆ ‘ತಾನು’ ಎಂಬುದೇ ಅರ್ಥ. ತನ್ನನ್ನು ತಾನು ತಿಳಿಯುವುದೇ ಆತ್ಮಸಾಕ್ಷಾತ್ಕಾರ; ತನ್ನಲ್ಲಿ ಇಲ್ಲದಿರುವುದನ್ನು ಹೊರಗಿನಿಂದ ಹೊಂದುವುದಲ್ಲ. ಇದಕ್ಕೆ ಒಂದು ನಿದರ್ಶನವೆಂದರೆ, ಒಬ್ಬ ವೃದ್ಧನಾದ ವ್ಯಕ್ತಿ ತನ್ನ ಹಣೆಯ ಮೇಲೆಯೇ ಕನ್ನಡಕ ಇಟ್ಟುಕೊಂಡು ಅದಕ್ಕಾಗಿ ಮನೆಯಲ್ಲೆಲ್ಲ ಹುಡುಕಾಡುವುದು. ಇಂತಹ ಸಂದರ್ಭದಲ್ಲಿ ಅವನ ಮೊಮ್ಮಗನು ಹಣೆಯ ಮೇಲಿರುವ ಕನ್ನಡಕವನ್ನು ತೋರಿಸಿದ ಕೂಡಲೇ ಅವನಿಗೆ ಅದರ ಅರಿವಾಗುತ್ತದೆ. ಅದರಂತೆಯೇ ಮಾನವನು ತನ್ನ ಅಂತರಂಗದಲ್ಲಿಯೇ ಇರುವ ಅಥವಾ ತಾನೇ ಆಗಿರುವ ದಿವ್ಯತ್ವವನ್ನು ಮರೆತು ಹೊರಗೆ ಎಲ್ಲೆಡೆ ಅದನ್ನು ಹುಡುಕಾಡುತ್ತಿದ್ದಾನೆ!

    ಗುರುವಿನ ಮಾರ್ಗದರ್ಶನ ಹಾಗೂ ತನ್ನ ಸಾಧನೆಯಿಂದ ಆತ್ಮಸಾಕ್ಷಾತ್ಕಾರ ಪಡೆದ ವ್ಯಕ್ತಿಯ ಅಂತರಂಗದ ಆನಂದಾನುಭೂತಿ ಹೇಗಿರುತ್ತದೆ? ಇದಕ್ಕೆ ಉತ್ತರವನ್ನು ತೈತ್ತಿರೀಯ ಉಪನಿಷತ್ತಿನ ಆನಂದವಲ್ಲಿಯಲ್ಲಿ ಕಾಣಬಹುದು. ಅವನ ಆನಂದವು ಸಕಲ ಸೃಷ್ಟಿಮೂಲವಾದ ಪರಬ್ರಹ್ಮನ ಆನಂದಕ್ಕೆ ಸರಿಸಮಾನವಾಗಿರುತ್ತದೆ. ಇಂತಹ ಅನುಭೂತಿಯನ್ನು ವರ್ಣಿಸಲು ಈ ಉಪನಿಷತ್ತು ಒಂದು ಅಸದೃಶವಾದ ಉಪಮಾನವನ್ನು ಆಶ್ರಯಿಸುತ್ತದೆ. ಒಬ್ಬ ಮಾನವನು ಯೌವ್ವನದ ಉತ್ತುಂಗದಲ್ಲಿದ್ದು, ಉತ್ತಮ ಆರೋಗ್ಯ, ಸಾಮರ್ಥ್ಯ, ಬುದ್ಧಿಮತ್ತೆ ಹಾಗೂ ದೈಹಿಕ-ಮಾನಸಿಕ ದೃಢತೆಗಳನ್ನು ಪಡೆದಿದ್ದು, ಸಕಲ ಭೂಮಂಡಲದ ಒಡೆಯನಾಗಿ ಅದರ ಸರ್ವ ಭೋಗ-ಭಾಗ್ಯಗಳನ್ನು ಅನುಭವಿಸುವಾಗ ಎಷ್ಟು ಆನಂದವನ್ನು ಪಡೆಯುತ್ತಾನೆಯೋ, ಅದನ್ನು ಒಂದು ‘ಮನುಷ್ಯಾನಂದ’ವೆಂದು ಹೇಳುತ್ತಾರೆ. ಈ ಆನಂದದ 1020 ಪಟ್ಟಿನ (ಹತ್ತನ್ನು ಹತ್ತರಿಂದ ಇಪ್ಪತ್ತು ಬಾರಿ ಗುಣಿಸುವುದು) ಆನಂದವನ್ನು ಆತ್ಮಸಾಕ್ಷಾತ್ಕಾರ ಪಡೆದವನು ಅನುಭವಿಸುತ್ತಾನೆ!

    ಕೇವಲ ಇಹಲೋಕವನ್ನೇ ನಂಬಿಕೊಂಡ ಯಾವುದೇ ಮಾನವನು ಎಂದಾದರೂ ಇಂತಹ ಒಂದು ಮನುಷ್ಯಾನಂದವನ್ನು ಅನುಭವಿಸಲು ಸಾಧ್ಯವಿದೆಯೇ? ಯಾವುದೇ ಯುವಕನು ಒಂದೇ ಸಮಯದಲ್ಲಿ ಅಂತಹ ಆರೋಗ್ಯ, ಸಾಮರ್ಥ್ಯ, ಬುದ್ಧಿಮತ್ತೆ ಹಾಗೂ ದೃಢತೆಗಳನ್ನು ಪಡೆದಿದ್ದು, ಸಕಲ ಭೂಮಂಡಲದ ಒಡೆಯನಾಗಲು ಸಾಧ್ಯವೇ? ಹೀಗಿರುವಾಗ ಯಾರಿಗೂ ಆತ್ಮಸಾಕ್ಷಾತ್ಕಾರದ ಆನಂದವನ್ನು ಊಹಿಸಲೂ ಸಾಧ್ಯವಿಲ್ಲ! ಇಂತಹ ಆತ್ಮಜ್ಞಾನಿಯನ್ನು ಉಪನಿಷತ್ತು ‘ಅಕಾಮಹತ’ನೆಂದು ಕರೆಯುತ್ತದೆ. ಅಂದರೆ ಆತನಲ್ಲಿ ಯಾವುದೇ ರೀತಿಯ ಕಾಮನೆಗಳು ಇರುವುದಿಲ್ಲ. ಆದರೆ ಈ ಲೆಕ್ಕಾಚಾರವನ್ನು ನಾವು ಅಕ್ಷರಶಃ ತೆಗೆದುಕೊಳ್ಳಬಾರದು. ಅಪಾರ ಕರುಣಾಮಯಿಗಳಾದ ಉಪನಿಷತ್ತಿನ ಋಷಿಗಳು, ಮಾನವನು ಈ ಪ್ರಪಂಚದ ಕ್ಷಣಿಕ ಸುಖ-ಭೋಗಗಳಿಗೆ ತುತ್ತಾಗದೆ, ಆತ್ಮಸಾಕ್ಷಾತ್ಕಾರದ ಆನಂದವನ್ನು ಅನುಭವಿಸಲು ಅವನಿಗೆ ಸ್ಪೂರ್ತಿಯನ್ನು ನೀಡಿ ಪ್ರೇರೇಪಿಸಲು ಈ ರೀತಿಯ ಲೆಕ್ಕಾಚಾರ ಹೇಳಿದ್ದಾರಷ್ಟೇ. ಆದರೆ ಒಂದಂತೂ ಸತ್ಯ; ಆತ್ಮಸಾಕ್ಷಾತ್ಕಾರದ ಅನಂತ ಆನಂದವು ಈ ಲೋಕದಲ್ಲಿ ಪಡೆಯುವ ಯಾವ ಭೋಗ-ಭಾಗ್ಯಗಳಿಂದಲೂ ಲಭ್ಯವಾಗುವುದಿಲ್ಲ.

    ಇಂತಹ ಮಹತ್ತರ ಆನಂದಾನುಭೂತಿಯಲ್ಲಿ ಲೀನನಾದ ವ್ಯಕ್ತಿ ಜಟಾಜೂಟಧಾರಿಯಾಗಿ, ಸಂನ್ಯಾಸಿಯ ವೇಷ ತೊಟ್ಟು, ಎಲ್ಲ ಸಾಮಾಜಿಕ ಚಟುವಟಿಕೆಯಿಂದ ದೂರವಾಗಿ, ಯಾವುದೋ ಜನಸಂಚಾರರಹಿತವಾದ ಗುಹೆಯಲ್ಲಿ ವಾಸಿಸುತ್ತಿರುತ್ತಾನೆ ಎಂಬುದು ಬಹು ಜನರ ತಪು್ಪಕಲ್ಪನೆಯಾಗಿದೆ. ಆತ್ಮಜ್ಞಾನಿ ಇಂತಹ ಜೀವನ ವಿಧಾನವನ್ನು ಆಯ್ದುಕೊಂಡರೆ ಅದು ತಪ್ಪಲ್ಲ; ಆದರೆ ಹಾಗಿರಲೇಬೇಕಾದ ಅಗತ್ಯವೂ ಇಲ್ಲ. ಆತ್ಮಜ್ಞಾನಿ ಅಪಾರ ಕರುಣಾಸಿಂಧುವಾಗಿರುವುದರಿಂದ, ಸುತ್ತಮುತ್ತಲಿನ ಮಾನವರು ದುಃಖಸಾಗರದಲ್ಲಿ ಮುಳುಗಿರುವಾಗ, ಹೇಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯ? ಇದನ್ನು ಮುಂಡಕೋಪನಿಷತ್ತು ಬಹಳ ಸುಂದರವಾಗಿ ವಿವರಿಸುತ್ತದೆ. ಸಕಲ ಜೀವರಾಶಿಗಳಲ್ಲಿ ದಿವ್ಯತ್ವವನ್ನೇ ನೋಡುತ್ತ, ಎಲ್ಲರೂ ಆ ದಿವ್ಯತ್ವದ ವಿವಿಧ ರೂಪಗಳೆಂದು ಕಾಣುವ ಆತ್ಮಜ್ಞಾನಿ ಸದಾಕಾಲ ಸರ್ವರ ಕಲ್ಯಾಣಕ್ಕಾಗಿ ಕಾರ್ಯೋನ್ಮುಖನಾಗಿರುತ್ತಾನೆ. ಆತ್ಮಾನಂದದಲ್ಲಿ ಮುಳುಗಿರುವ ಜ್ಞಾನಿ ಕರ್ಮನಿರತನಾಗಿರುವಾಗಲೂ, ಕರ್ಮಬಂಧನದಿಂದ ಮುಕ್ತನಾಗಿದ್ದು ಯಾವುದೇ ದುಃಖ ಅವನನ್ನು ಲೇಪಿಸುವುದಿಲ್ಲ. ಇದನ್ನೇ ಮುಂಡಕೋಪನಿಷತ್ತಿನಲ್ಲಿ, ‘ಆತ್ಮಕ್ರೀಡ ಆತ್ಮರತಿಃ ಕ್ರಿಯಾವಾನ್’ ಎಂದು ಹೇಳಲಾಗಿದೆ.

    ಮುಂಡಕೋಪನಿಷತ್ತು ಇನ್ನೂ ಮುಂದುವರಿದು ‘ತೇಷಾಂ ಸುಖಂ ಶಾಶ್ವತಂ ನೇತರೇಷಾಮ್, ‘ತೇಷಾಂ ಶಾಂತಿಃ ಶಾಶ್ವತೀ ನೇತರೇಷಾಮ್ ಎಂದು ಹೇಳಿದೆ. ಆತ್ಮದರ್ಶನ ಮಾಡಿದವನಿಗೆ ಮಾತ್ರ ಶಾಶ್ವತವಾದ ಸುಖ-ಶಾಂತಿಗಳು ಲಭಿಸುತ್ತವೆ; ಇತರರಿಗೆ ಅಲ್ಲವೇ ಅಲ್ಲವೆಂದು ಒತ್ತಿ ಹೇಳುತ್ತದೆ! ಆತ್ಮಜ್ಞಾನಿಯ ಹೃದಯಗ್ರಂಥಿ ಬೇಧಿಸಲ್ಪಟ್ಟು, ಅವನ ಸರ್ವ ಸಂಶಯಗಳೂ ನಾಶವಾಗಿ, ಅವನು ಕರ್ಮಬಂಧನದಿಂದ ವಿಮುಕ್ತನಾಗುತ್ತಾನೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಇಂತಹ ವ್ಯಕ್ತಿಯನ್ನು ‘ಸ್ಥಿತಪ್ರಜ್ಞ’ನೆಂದು ಕರೆದಿದ್ದಾನೆ. ಅವನು ಸದಾ ದಿವ್ಯತ್ವದ ಅರಿವಿನಿಂದ ಶೋಭಿಸುತ್ತ, ಸುಖ-ದುಃಖಗಳಲ್ಲಿ ಸಮತ್ವದ ಪ್ರತಿಮೂರ್ತಿಯಾಗಿ, ರಾಗ-ದ್ವೇಷ, ಭಯ-ಕ್ರೋಧಗಳಿಂದ ಮುಕ್ತನಾಗಿ ಬ್ರಾಹ್ಮೀ ಸ್ಥಿತಿಯ ಆನಂದದಲ್ಲಿ ನೆಲೆಗೊಳ್ಳುತ್ತಾನೆ. ಆದ್ದರಿಂದ ಆತ್ಮಾನಂದಾನುಭೂತಿಯ ಪರಮಪದವು ಮರಣದ ನಂತರ ಲಭ್ಯವಾಗುತ್ತದೆ ಎಂಬುದು ತಪು್ಪ ಗ್ರಹಿಕೆ. ಅಥವಾ ಇದು ಕೇವಲ ಸಾಧು-ಸಂನ್ಯಾಸಿಗಳಿಗೆ ಮಾತ್ರ ಸೀಮಿತವಾದ ಅನುಭವವಲ್ಲ. ಜೀವಿಸಿರುವಾಗಲೇ ಆತ್ಮಜ್ಞಾನವನ್ನು ಪಡೆದ ವ್ಯಕ್ತಿಗೆ ಒಂದು ಬಹು ಸುಂದರವಾದ ನಾಮಧೇಯವಿದೆ; ಅದುವೇ ‘ಜೀವನ್ಮುಕ್ತ’- ಜೀವಿಸಿರುವಾಗಲೇ ಎಲ್ಲ ಬಂಧನಗಳಿಂದ ಬಿಡುಗಡೆಯನ್ನು ಹೊಂದಿದವನು. ಇಂತಹ ಜೀವನ್ಮುಕ್ತನ ಲಕ್ಷಣಗಳನ್ನು ಶ್ರೀ ಆದಿ ಶಂಕರಾಚಾರ್ಯರು ವಿವೇಕಚೂಡಾಮಣಿಯ ಗ್ರಂಥದಲ್ಲಿ 426ರಿಂದ 445 ರವರೆಗೆ ಇಪ್ಪತ್ತು ಶ್ಲೋಕಗಳಲ್ಲಿ ವರ್ಣಿಸಿದ್ದಾರೆ. ಇದನ್ನೇ ಕಠೋಪನಿಷತ್ತಿನಲ್ಲಿ ಯಮದೇವನು ಬಾಲಮುಮುಕ್ಷುವಾದ ನಚಿಕೇತನಿಗೆ, ‘ಬ್ರಹ್ಮಜ್ಞಾನಿಯಾದ ವ್ಯಕ್ತಿ ಅಂತರಂಗದಲ್ಲಿನ ಎಲ್ಲ ಆಶಾ-ಪಾಶಗಳಿಂದ ವಿಮುಕ್ತನಾಗಿ ಬ್ರಹ್ಮಸ್ವರೂಪನಾಗಿಯೇ ರಾರಾಜಿಸುತ್ತಾನೆ’ ಎಂದು ಘೊಷಿಸುತ್ತಾನೆ.

    ಹೊಸದಾಗಿ ಆತ್ಮಜ್ಞಾನದ ಪಥದಲ್ಲಿ ಪ್ರವೇಶಿಸುವ ವ್ಯಕ್ತಿಗಳಿಗೆ ಒಂದು ಪ್ರಶ್ನೆ ಸಹಜವಾಗಿ ಬರಬಹುದು- ‘ಶಾಸ್ತ್ರಗಳು ನಿಯೋಜಿಸಿರುವ ಚತುರ್ವಿಧ ಪುರುಷಾರ್ಥಗಳ ಸಾಧನೆಗಾಗಿ ಮಾನವನು ಆಹಾರ-ನಿದ್ರೆ ಹಾಗೂ ಕುಟುಂಬ ಪೋಷಣೆಗಾಗಿ ಧನ ಸಂಪಾದನೆ ಮಾಡಲು ಕರ್ಮಗಳಲ್ಲಿ ತೊಡಗಲೇ ಬೇಕಲ್ಲವೇ? ಇಂತಹ ಆಸೆಗಳು ಆತ್ಮಸಾಧನೆಯ ದಾರಿಯಲ್ಲಿ ಅಡ್ಡಿಯಾಗುತ್ತವೆಯೇ?’ ಧರ್ಮದ ಚೌಕಟ್ಟಿನಲ್ಲಿ ಭಗವದರ್ಪಣ ಬುದ್ಧಿಯಿಂದ ಮಾಡುವ ಎಲ್ಲ ಕರ್ಮಗಳೂ ಮಾನವನನ್ನು ಪರಮಪದದೆಡೆಗೆ ಮುನ್ನಡೆಸುತ್ತವೆ. ಧರ್ಮಕ್ಕೆ ವಿರುದ್ಧವಾದ ಎಲ್ಲ ಕರ್ಮಗಳನ್ನು ಸಾಧಕನು ತ್ಯಜಿಸಲೇಬೇಕು. ಜೀವನ್ಮುಕ್ತನಾದವನು ಕೂಡ ತನ್ನ ದೈನಂದಿನ ಜೀವನದಲ್ಲಿ ದೇಹ ಪೋಷಣೆಗೆ ಅಗತ್ಯವಾದ ಆಹಾರ-ವಿಹಾರ-ವಿಶ್ರಾಂತಿಗಳಲ್ಲಿ ತೊಡಗುತ್ತಾನೆ. ಆದರೆ ಆತನು ಇವುಗಳನ್ನು ತನಗಾಗಿ ಮಾಡುವುದಿಲ್ಲ. ಕೇವಲ ದೈವೇಚ್ಛೆಯ ಅಭಿವ್ಯಕ್ತಿಗಾಗಿ ಅವನು ಬದುಕುತ್ತಾನೆ; ನಾಟಕದ ವೇದಿಕೆಯ ಮೇಲೆ ದಿಗ್ದರ್ಶಕನ ಆಣತಿಯ ಮೇರೆಗೆ ನಟಿಸುವ ನಟನಂತೆ, ಅಷ್ಟೆ. ಅಷ್ಟಾವಕ್ರಗೀತೆಯಲ್ಲಿ ಹೇಳಿರುವಂತೆ, ‘ಪ್ರವೃತ್ತೌ ವಾ ನಿವೃತ್ತೌ ವಾ ನೈವ ಧೀರಸ್ಯ ದುರ್ಗ್ರಹಃ, ಯದಾ ಯತ್ಕರ್ತಮಾಯಾತಿ ತತ್ಕ ೃತ್ವಾ ತಿಷ್ಠತಃ ಸುಖಮ್ ಜೀವನ್ಮುಕ್ತನಿಗೆ ಯಾವುದೇ ಕರ್ಮದಲ್ಲಿ ತೊಡಗುವುದಾಗಲೀ, ಯಾವುದೇ ಕರ್ಮದಿಂದ ಹಿಂತೆಗೆದುಕೊಳ್ಳುವುದಾಗಲೀ ಸುಲಭ ಹಾಗೂ ಸಹಜ. ಆತನು ಸದಾ ಸುಖಿಯಾಗಿದ್ದು ದೈವೇಚ್ಛೆಯಿಂದ ತನ್ನೆಡೆಗೆ ಬರುವ ಸರ್ವ ಕರ್ಮಗಳನ್ನು ಮಾಡುತ್ತ, ಸದಾ ಸುಖಿಯಾಗಿರುತ್ತಾನೆ’.

    ಸದಾ ಶಾಂತಿ-ಸಂತೋಷಗಳ ಸಾಗರದಲ್ಲಿ ತೇಲುತ್ತ, ಎಲ್ಲ ಬಂಧನಗಳಿಂದ ಮುಕ್ತನಾಗಿರುವ ಜೀವನ್ಮುಕ್ತನ ಮಹೋನ್ನತ ಸ್ಥಿತಿ ಬಹು ಅದ್ಭುತವಲ್ಲವೇ? ಸನಾತಾನಧರ್ಮದ ಪ್ರಕಾರ ಇಂತಹ ಸ್ಥಿತಿ ಪ್ರತಿ ಮಾನವನ ಜನ್ಮಸಿದ್ಧ ಹಕ್ಕು!

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts