More

    ಸರ್ಕಾರಕ್ಕೆ 5 ಕೋಟಿ ಸಸಿ ನೆಡುವ ಗುರಿ

    ನಂಜನಗೂಡು: ಹವಾಮಾನ ವೈಪರೀತ್ಯದಿಂದ ಜಾಗತಿಕ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಜೀವಸಂಕುಲಕ್ಕೆ ಆಗುವ ಸಂಚಕಾರವನ್ನು ತಪ್ಪಿಸಲು ರಾಜ್ಯದಲ್ಲಿ ಐದು ಕೋಟಿ ಸಸಿ ನೆಡುವ ಗುರಿ ಸಾಧನೆಗೆ ಸರ್ಕಾರ ಮುಂದಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಹೇಳಿದರು.

    ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಮೇಳ, ಭಜನಾ ಮೇಳ ಹಾಗೂ ದನಗಳ ಜಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಅನೇಕ ಕಡೆ ಅರಣ್ಯ ಒತ್ತುವರಿಯಾಗುತ್ತಿರುವುದರಿಂದ ವನ್ಯಜೀವಿಗಳು ನಾಡಿಗೆ ನುಸುಳುತ್ತಿವೆ. ಹೀಗಾಗಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ಕಾರ ಮುಂದಾಗಿದೆ. ಅರಣ್ಯ ಸಂರಕ್ಷಣೆ ಮಾಡಿ ಪ್ರಾಣಿ, ಪಕ್ಷಿ, ಜೀವಸಂಕುಲಕ್ಕೆ ಉತ್ತಮ ವಾತಾವರಣವನ್ನು ಕಟ್ಟಿಕೊಡುವ ಮಹತ್ತರ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಅರಣ್ಯ ಸಂಪತ್ತು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ 5 ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಅಭಿಯಾನದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

    ರಾಜ್ಯದಲ್ಲಿ ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಸರ್ಕಾರ ಮುಂದಾಗಿದೆ. ಪ್ಲಾಸ್ಟಿಕ್ ಬ್ಯಾಗ್ ಹಾಗೂ ಇನ್ನಿತರ ವಸ್ತುಗಳನ್ನು ಬಳಕೆ ಮಾಡಲು ಪ್ರತಿಯೊಬ್ಬರ ನಾಗರಿಕರು ಕೂಡ ಸ್ವಯಂ ನಿಯಂತ್ರಣಕ್ಕೆ ಮುಂದಾದಾಗ ಸರ್ಕಾರ ಆಶಯವನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಖಜಾನೆ ಖೋತಾ ಆಗುತ್ತದೆ ಎಂದು ವಿಪಕ್ಷಗಳು ಟೀಕೆ ಮಾಡಿದವು. ಆದರೆ ಐದು ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸಿಯೂ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದೆ. ಐದು ಗ್ಯಾರಂಟಿ ಯೋಜನೆಗಳಿಗೆ ಬಡವರ್ಗದ ಜನರಿಗೆ ನೆರವು ಸಿಕ್ಕಿದೆ. ಈಗಾಗಲೇ 35 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದ್ದು, ಮುಂದಿನ ವರ್ಷಕ್ಕೆ 59 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದರು.

    ಪರಂಪರೆಯ ಪ್ರತೀಕ ಜಾತ್ರೆ: ದುಶ್ಚಟಗಳಿಗೆ ದಾಸರಾಗುತ್ತಿರುವ ಯುವ ಪೀಳಿಗೆಯನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗಲು ಹಾಗೂ ನಮ್ಮ ಸಂಸ್ಕೃತಿ ಪರಂಪರೆಯ ಅರಿವನ್ನು ಮೂಡಿಸಲು ಜಾತ್ರೆಗಳು ಸಹಕಾರಿಯಾಗಿವೆ ಎಂದು ಈಶ್ವರ್ ಖಂಡ್ರೆ ಹೇಳಿದರು.

    ಗುಣಾತ್ಮಕ ಶಿಕ್ಷಣ ನೀಡುವ ಜತೆಗೆ ಭಕ್ತಿ, ಜ್ಞಾನ, ವೈರಾಗ್ಯಗಳ ಬಗ್ಗೆ ಅರಿವು ಯುವಕರಲ್ಲಿ ಬಿತ್ತುವ ಕೆಲಸವನ್ನು ಸುತ್ತೂರು ಮಠ ಮಾಡುತ್ತಿದೆ. ನಮ್ಮತನ ಎಲ್ಲೋ ಕಳೆದುಹೋಗುತ್ತಿದೆ ಎಂದು ನಾವು ಅಂದುಕೊಳ್ಳುವಾಗ ಇಂತಹ ಜಾತ್ರೆಗಳಿಂದ ನಮ್ಮ ಪರಂಪರೆ ಗಟ್ಟಿಯಾಗುವುದನ್ನು ನಾವು ಕಾಣಬಹುದಾಗಿದೆ ಎಂದರು.
    ನ್ಯಾಯಯುತ ತೆರಿಗೆಗಾಗಿ ಹೋರಾಟ: ದೇಶಕ್ಕೆ ಸ್ವಾತಂತ್ರ್ಯ ಹಾಗೂ ಒಕ್ಕೂಟ ವ್ಯವಸ್ಥೆಯೊಂದಿಗೆ ಐಕ್ಯತೆಯ ರಾಷ್ಟ್ರ ಕಟ್ಟುವಲ್ಲಿ ಕಾಂಗ್ರೆಸ್ ಹೋರಾಟ ಅಪ್ರತಿಮವಾದುದು. ಆದರೆ, ಕರ್ನಾಟಕ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಹಣವನ್ನು ಕೇಳುವ ನಿಟ್ಟಿನಲ್ಲಿ ಕಾಂಗ್ರೆಸ್ ಹೋರಾಟ ಕೈಗೊಂಡರೆ ಅದನ್ನು ಸಹಿಸದ ಕೆಲವರು ಒಕ್ಕೂಟ ವ್ಯವಸ್ಥೆಯನ್ನು ಒಡೆಯುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

    15ನೇ ಹಣಕಾಸು ಯೋಜನೆಯಡಿ 2019ರಲ್ಲಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಹಣವನ್ನು ಕೇಳಲು ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗುವಂತೆ ಆಗಲೇ ಹೇಳಿದ್ದರು. ನಾವು ಅಕಾರಕ್ಕೆ ಬಂದರೆ ಖಂಡಿತ ಕೇಳುವುದಾಗಿಯೂ ಹೇಳಿದ್ದರು. ಅಂತೆಯೆ ಕೇಂದ್ರ ಸರ್ಕಾರದಿಂದ ಬರಬೇಕಾದ ಪಾಲು ಕೇಳಲು ಹೋರಾಟ ಮಾಡಿದರೆ ಅದನ್ನು ಬೇರೆ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಇದು ಯಾವುದೇ ಚುನಾವಣಾ ಗಿಮಿಕ್ ಅಲ್ಲ ವಾಸ್ತವ ಸ್ಥಿತಿ. ಹಾಗಾಗಿ ಕಾಂಗ್ರೆಸ್ ಹೋರಾಟಕ್ಕೆ ಪ್ರತಿಯೊಬ್ಬರೂ ನೈತಿಕ ಬೆಂಬಲ ನೀಡಬೇಕು ಎಂದರು.

    ಕಾರ್ಯಕ್ರಮದಲ್ಲಿ ಭಜನಾ ಮೇಳ, ಸಾಂಸ್ಕೃತಿಕ ಮೇಳ ಹಾಗೂ ದನಗಳ ಜಾತ್ರೆಯ ವರದಿ ಮಂಡನೆ ಮಾಡಲಾಯಿತು. ಇದೇ ಸಂದರ್ಭ ಈ ಮೂರು ಮೇಳಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

    ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಮಹಾಂತ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಧ್ವಾಚಾರ್ಯ ಸಂಸ್ಥಾನ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳ ಅವರು ಆಶೀರ್ವಚನ ನೀಡಿದರು.

    ಶಾಸಕರಾದ ಪಿ.ನರೇಂದ್ರಸ್ವಾಮಿ, ದೇವೇಂದ್ರಪ್ಪ, ಎಚ್.ಎಂ.ಗಣೇಶ್‌ಪ್ರಸಾದ್ ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್, ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಗುರುದೇವ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts