More

    ಹೈಕೋರ್ಟ್ ಆದೇಶಕ್ಕೂ ಬಗ್ಗದ ಸರ್ಕಾರ!

    ಅರವಿಂದ ಅಕ್ಲಾಪುರ ಶಿವಮೊಗ್ಗ
    ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಎನ್‌ಪಿಎಸ್(ಹೊಸ ಪಿಂಚಣಿ ಯೋಜನೆ) ವಿರುದ್ಧ ಸರ್ಕಾರಿ ನೌಕರರು ಸಿಡಿದೆದ್ದಿದ್ದಾರೆ. ಇದನ್ನು ರದ್ದುಪಡಿಸಿ ಒಪಿಎಸ್(ಹಳೆಯ ಪಿಂಚಣಿ ಯೋಜನೆ) ಜಾರಿಗೆ ತರಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ಸರ್ಕಾರದ ಲೋಪದಿಂದ ಒಪಿಎಸ್‌ನಲ್ಲಿದ್ದವರಿಗೆ ಎನ್‌ಪಿಎಸ್ ಬಿಸಿ ಮುಟ್ಟಿದೆ.

    ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿವಿಯ 1,500ಕ್ಕೂ ಹೆಚ್ಚು ನೌಕರರು 2006ಕ್ಕೂ ಮುನ್ನ ನೇಮಕವಾಗಿ ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ ಸೇರ್ಪಡೆಯಾಗಿದ್ದರು. ತರುವಾಯ ಇವರೆಲ್ಲರೂ ವಿವಿಯ ಬೇರೆ ಬೇರೆ ವಿಭಾಗಗಳಿಗೆ ನೇಮಕವಾದರು. ಇದನ್ನು ಹೊಸ ನೇಮಕಾತಿ ಎಂದು ಪರಿಗಣಿಸಿದ ಸರ್ಕಾರ ಇವರೆಲ್ಲರಿಗೂ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿತು.
    ಈ ಲೋಪ ಸರಿಪಡಿಸಿಕೊಳ್ಳಲು ಸರ್ಕಾರದ ಮೇಲೆ ಅನೇಕ ಬಾರಿ ವಿವಿ ನೌಕರರು ಒತ್ತಡ ಹೇರಿದರು. ಪ್ರತಿಭಟನೆ ನಡೆಸಿದರು. ಆದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಕಾನೂನು ಹೋರಾಟಕ್ಕಿಳಿದ ನೌಕರರಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿತು. ಇವರೆಲ್ಲರನ್ನೂ ಹಳೆಯ ಪಿಂಚಣಿ ಯೋಜನೆಯಲ್ಲೇ ಮುಂದುವರಿಸಿ ಎಂದು ಹೈಕೋರ್ಟ್ ಆದೇಶ ಮಾಡಿತು.
    2006ರ ಏ.1ರಂದು ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತು. ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲ ವಿವಿಗಳೂ ಕಡ್ಡಾಯವಾಗಿ ಇದನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿತ್ತು. ಇದು ಸಮಸ್ಯೆಯ ಮೂಲವಾಯಿತು.
    ಹಳೆಯ ಪಿಂಚಣಿಯಲ್ಲಿದ್ದ ವಿವಿಯ ಸಾವಿರಾರು ನೌಕರರು ಸೂಕ್ತ ಪ್ರಾಧಿಕಾರದ ಮೂಲಕ ವಿವಿಯ ಬೋಧಕ ಅಥವಾ ಬೋಧಕೇತರ ಹುದ್ದೆಗಳಿಗೆ ಅರ್ಹತೆಗೆ ಅನುಗುಣವಾಗಿ ಆಯ್ಕೆಯಾದರು. ಆಗ ಅವರೆಲ್ಲರನ್ನೂ ಬಲವಂತವಾಗಿ ಎನ್‌ಪಿಎಸ್ ಜಾರಿ ಮಾಡಲಾಯಿತು.
    ಏಳು ವರ್ಷಗಳ ನಂತರ ನ್ಯಾಯ:ಸರ್ಕಾರದ ಈ ನಡೆಯಿಂದ ಬೇಸತ್ತ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿವಿಯ 38 ಪ್ರಾಧ್ಯಾಪಕರು 2016ರಲ್ಲಿ ರಾಜ್ಯದ ಹೈಕೋರ್ಟ್ ಮೆಟ್ಟಿಲೇರಿದರು. (ಡಬ್ಲುೃಪಿ 1439/2016) ಸುಮಾರು ಏಳು ವರ್ಷ ಈ ಬಗ್ಗೆ ಹೈಕೋರ್ಟ್‌ನಲ್ಲಿ ವಾದ-ಪ್ರತಿವಾದ ನಡೆಯಿತು. ಪಿಂಚಣಿಯು ನೌಕರರ ಅತ್ಯಂತ ನ್ಯಾಯಯುಕ್ತ ಹಕ್ಕಾಗಿದ್ದು ಇದನ್ನು ಆಸ್ತಿ ಹಕ್ಕು ಎಂದು ಪರಿಗಣಿಸಿ ನೀಡಬೇಕು ಎಂದು ಸುಪ್ರೀಂಕೋರ್ಟ್ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿ ಹೇಮಲೇಖ ಅವರಿದ್ದ ನ್ಯಾಯಪೀಠವು ಐತಿಹಾಸಿಕ ತೀರ್ಪು ನೀಡಿತು. ಇದನ್ನು ಎರಡು ತಿಂಗಳೊಳಗೆ ಪಾಲಿಸಬೇಕು ಎಂದು ವಿವಿ ಮತ್ತು ಕರ್ನಾಟಕ ಸರ್ಕಾರಕ್ಕೆ ಆದೇಶಿಸಲಾಗಿತ್ತು.
    ಬೇರೆ ರಾಜ್ಯಗಳಲ್ಲಿ ಓಪಿಎಸ್:ದೇಶದ ಹಲವು ವಿವಿಗಳಲ್ಲಿ 2006ರ ಬಳಿಕ ಬೇರೆ ವಿಭಾಗಗಳಿಗೆ ನೇಮಕವಾದ ಹಳೆಯ ಸಿಬ್ಬಂದಿಗೆ ಒಪಿಎಸ್ ಮುಂದುವರಿಸಿದ ನಿದರ್ಶನಗಳಿವೆ. ಕೇಂದ್ರ ಸರ್ಕಾರವೇ ಈ ನಡೆ ಅನುಸರಿಸಿತ್ತು. ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳದ ವಿವಿಗಳೂ ಹಳೆಯ ನೌಕರರಿಗೆ ಒಪಿಎಸ್ ಮುಂದುವರಿಸಿತ್ತು. ಕರ್ನಾಟಕದಲ್ಲಿ ಮಾತ್ರ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ.
    ಆರ್ಥಿಕ ಇಲಾಖೆಯಿಂದ ಗೊಂದಲ:ಹೈಕೋರ್ಟ್ ನೀಡಿದ ತೀರ್ಪನ್ನು ಪಾಲಿಸುವ ನಿಟ್ಟಿನಲ್ಲಿ ಸರ್ಕಾರ ಆರ್ಥಿಕ ಇಲಾಖೆ ಅಭಿಪ್ರಾಯ ಕೋರಿತ್ತು. ಈ ವಿಷಯದಲ್ಲಿ ಗೊಂದಲದಲ್ಲಿರುವಂತೆ ಕಾಣುತ್ತಿರುವ ಆರ್ಥಿಕ ಇಲಾಖೆ, ವಿವಿಗಳು ಸ್ವಾಯತ್ತ ಸಂಸ್ಥೆಗಳಾಗಿರುವುದರಿಂದ 2006ರ ಬಳಿಕ ಅಲ್ಲಿ ವರದಿ ಮಾಡಿಕೊಂಡ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮುಂದುವರಿಸಲು ಸಾಧ್ಯವಿಲ್ಲ ಎಂದಿರುವುದು ಆಶ್ಚರ್ಯ ಮೂಡಿಸಿದೆ. ಇನ್ನೊಂದೆಡೆ ಹೈಕೋರ್ಟ್ ಆದೇಶವನ್ನು ಪಾಲಿಸಲು ಹಿಂದೇಟು ಹಾಕುತ್ತಿರುವ ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಸರ್ಕಾರಿ ನೌಕರರಿಗೆ ಒಂದು ನ್ಯಾಯ, ವಿವಿ ನೌಕರರಿಗೆ ಒಂದು ನ್ಯಾಯ ಅನುಸರಿಸುತ್ತಿರುವ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts