More

    2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ಗುರಿ

    ರಾಮನಗರ: ಯುವ ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಶಿರಾ, ಆರ್.ಆರ್. ನಗರ ಉಪಚುನಾವಣೆಯಲ್ಲಿ ಜನರ ತೀರ್ಪನ್ನು ಸ್ವೀಕರಿಸಲೇಬೇಕು. ಆದರೆ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ನೀಡಿದ ಜನಪರ ಕಾರ್ಯಕ್ರಮಗಳ ಹೊರತಾಗಿಯೂ ಜನತೆ ಏಕೆ ಜೆಡಿಎಸ್​ಗೆ ಮನ್ನಣೆ ನೀಡಿಲ್ಲ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ಈ ಸಂಬಂಧ ಆತ್ಮಾವಲೋಕನ ನಡೆಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಎಲ್ಲ ಸೋಲುಗಳ ಹೊರತಾಗಿಯೂ ಪಕ್ಷ ಸಂಘಟಿಸಿ 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವುದು ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಯುವ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತದೆ ಎಂದು ಹೇಳಿದರು.

    ಸರಿ ಮಾಡಿಕೊಳ್ಳುತ್ತೇವೆ: ಕುಮಾರಸ್ವಾಮಿ ಅವರಿಗೆ ಸಂಪೂರ್ಣವಾಗಿ ಅಧಿಕಾರ ನಡೆಸಲು ಅವಕಾಶ ಇರಲಿಲ್ಲ, ಇದರಿಂದಾಗಿ ಕಾರ್ಯ ಕರ್ತರಿಗೆ ಹುದ್ದೆಗಳನ್ನು ನೀಡಲಾಗಲಿಲ್ಲ. ಹಾಗಾಗಿ ಕಾರ್ಯಕರ್ತರಿಗೆ ಅಸಮಾಧಾನ ಇರಬಹುದು. ಪಕ್ಷದ ವೇದಿಕೆಯಲ್ಲಿ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಕಾರ್ಯಕರ್ತರು ಎಂದಿಗೂ ನಮ್ಮ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಪಕ್ಷ ಒಳಿತು ಮಾಡಲಿದೆ ಎಂದು ನಿಖಿಲ್ ಭರವಸೆ ನೀಡಿದರು.

    ರಾಮನಗರದಿಂದಲೇ ಚಾಲನೆ: ಯುವ ಘಟಕದ ರಾಜ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆಗೆ ರಾಮನಗರದಿಂದಲೇ ಚಾಲನೆ ನೀಡಲಾಗುವುದು ಎಂದು ನಿಖಿಲ್ ಹೇಳಿದರು.

    ಹಾಸನದ ಹರದನಹಳ್ಳಿಯಿಂದ ಬಂದ ನಮ್ಮ ಕುಟುಂಬಕ್ಕೆ ರಾಮನಗರ ಎಲ್ಲವನ್ನೂ ನೀಡಿದೆ. ಕರೊನಾದಿಂದಾಗಿ ಸಂಘಟನೆಗೆ ತೊಡಕಾಗಿದ್ದು, ಶೀಘ್ರವೇ ನನ್ನ ಕಾರ್ಯ ಆರಂಭಿಸುತ್ತೇನೆ ಎಂದರು. ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸಿ ಜನರ ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದೇನೆ. ಹಾರೋಹಳ್ಳಿ ಬಳಿ ಶಿವನೇಗೌಡನದೊಡ್ಡಿಯ ಸೇತುವೆ ಕಾಮಗಾರಿ ವಿಳಂಬವಾಗಿದ್ದು, 15 ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.

    ಗುಟ್ಟು ಬಿಟ್ಟುಕೊಡಲಿಲ್ಲ: ಈ ಎಲ್ಲ ಸಿದ್ಧತೆ ಮುಂದಿನ ತಮ್ಮ ರಾಜಕೀಯ ಜೀವನಕ್ಕಾಗಿಯೇ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡ ನಿಖಿಲ್, ಪಕ್ಷವನ್ನು ಮುಂದಿನ 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟನೆ ಮಾಡುತ್ತೇನೆಯೇ ಹೊರತು ಬೇರೆ ಚಿಂತೆ ಇಲ್ಲ. ನನ್ನ ರಾಜಕೀಯ ಜೀವನ ಮಂಡ್ಯದಿಂದಲೋ ರಾಮನಗರದಿಂದಲೋ ಎನ್ನುವುದನ್ನೂ ಚಿಂತಿಸಿಲ್ಲ. ಅಲ್ಲದೆ, ವಿವಿಧ ಕಾರಣಗಳಿಗಾಗಿ ಪಕ್ಷದಿಂದ ದೂರಾಗಿರುವ ಮುಖಂಡರನ್ನು ಮರಳಿ ಕರೆತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts