More

    ಕುಶಾಲನಗರದಲ್ಲಿರುವ ಸೋಮೇಶ್ವರನ ಮಹಿಮೆ ಅಪಾರ

    ಕುಶಾಲನಗರ: ಆರೋಗ್ಯ ಸಮಸ್ಯೆ ಇರುವವರು ನಕ್ಷತ್ರದ ಅನುಸಾರ ಮೃತ್ಯುಂಜಯ ಹೋಮ ಮಾಡಿಸಿದರೆ ಅನುಕೂಲವಾಗುತ್ತದೆ… ನಂಬಿ ಬರುವ ಭಕ್ತರ ಆಸೆ ಈಡೇರುತ್ತಿದೆ… ಹರಕೆ ಹೊತ್ತು ಮಾಡಿಸುವ ಪೂಜೆ, ಹೋಮಗಳಿಂದ ಇಷ್ಟಾರ್ಥಗಳು ಕೈಗೂಡುತ್ತಿವೆ…


    ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ – ಹಾಸನ ರಸ್ತೆಯ ಸರ್ಕಾರಿ ಆಸ್ಪತ್ರೆ ಹಿಂಭಾಗದ ಪುಟ್ಟ ಗುಡ್ಡದ ಮೇಲಿರುವ ಶ್ರೀ ಸೋಮೇಶ್ವರ ಸನ್ನಿಧಿಯಲ್ಲಿ ಶ್ರದ್ಧೆ, ಭಕ್ತಿಯಿಂದ ಪೂಜೆ ನಡೆಸಿದರೆ ಒಳಿತು ಆಗಲಿದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದಾಗಿದೆ.


    1980ರಲ್ಲಿ ಗುಡ್ಡದ ಮೇಲೆ ಕಾಡಿನಂತೆ ಬೆಳೆದಿದ್ದ ಮರ-ಗಿಡಗಳನ್ನು ಶಿಕ್ಷಕರಾಗಿದ್ದ ಶ್ರೀಶೈಲ, ಆಯುರ್ವೇದ ವೈದ್ಯರಾಗಿದ್ದ ಡಾ.ರಾಧಾಕೃಷ್ಣ ಮತ್ತು ಪ್ರೆಸ್ ಮಾಲೀಕರಾಗಿದ್ದ ಶ್ರೀನಿವಾಸ ರಾಯರು ಸ್ವತಃ ತಾವೇ ಕಡಿದು 350 ರಿಂದ 400 ವರ್ಷಗಳ ಇತಿಹಾಸವಿರುವ ಗುಡಿಯೊಂದನ್ನು ಪತ್ತೆಹಚ್ಚಿದ್ದರು.


    ಆದರೆ ಗುಡಿಯಲ್ಲಿ ಯಾವುದೇ ದೇವರ ವಿಗ್ರಹವಿರಲಿಲ್ಲ. ಆನಂತರ ಗುಡಿಯ ಇತಿಹಾಸ ತಿಳಿಯುವ ಉದ್ದೇಶದಿಂದ ಕೇರಳದಿಂದ ಅಷ್ಟಮಂಗಲ ಪ್ರಶ್ನೆ ಹಾಕುವವರನ್ನು ಕರೆಸಿ, ಗುಡ್ಡದ ಮೇಲಿನ ಗುಡಿಯ ಇತಿಹಾಸ ತಿಳಿದುಕೊಳ್ಳಲಾಗಿತ್ತು. ಇಲ್ಲಿ ಸೋಮೇಶ್ವರ ದೇವರ ಗುಡಿ ಇತ್ತು, ಅದು ಊರಿನ ಮೂಲದೇವರು ಎಂಬುದು ತಿಳಿದುಬಂತು. ಆನಂತರ ಸೂಕ್ಷ್ಮವಾಗಿ ತಿಳಿಯುವ ಕುತೂಹಲದಿಂದ ಮತ್ತಷ್ಟು ವಿವರವಾಗಿ ಪರಿಶೀಲಿಸಿದರು. ಆಗಲೇ, ನೂರಾರು ವರ್ಷಗಳ ಹಿಂದೆ ಸಣ್ಣ ಗಲಾಟೆಯಾಗಿ ಪೂಜೆ ಮಾಡುತ್ತಿದ್ದ ಅರ್ಚಕನನ್ನು ಕೊಲೆ ಮಾಡಿ ಅಲ್ಲಿದ್ದ ಬಾವಿಗೆ ಹಾಕಿದ್ದಾರೆ. ಗುಡಿಗೆ ಸಂಬಂಧಿಸಿದ ಎಲ್ಲ ಪದಾರ್ಥಗಳನ್ನು ಬಾವಿಗೆ ಹಾಕಿರುವ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದುಬಂದ ಕಾರಣ 1982-83ರಲ್ಲಿ ವಿಶೇಷ ಹೋಮ ಹವನಗಳನ್ನು ಮಾಡಿಸಿ ದೋಷಗಳನ್ನು ನಿವಾರಣೆ ಮಾಡಿಸಲಾಗಿತ್ತು.


    ಊರಿನ ಪ್ರಮುಖರು ಸಭೆ ಸೇರಿ ಸೋಮೇಶ್ವರ ದೇಗುಲವನ್ನು ಜೀರ್ಣೋದ್ಧಾರ ಮಾಡಲು ನಿರ್ಧಾರ ಮಾಡಿ 1992ರಲ್ಲಿ ಪುರೋಹಿತರಾದ ಮಂಜಣ್ಣ ಅವರ ಮುತುವರ್ಜಿಯಿಂದ ನಂಜನಗೂಡು ಶ್ರೀ ನಂಜುಂಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರನ್ನೇ ಕರೆಯಿಸಿ ಮರುಪ್ರತಿಷ್ಠಾಪನೆ ಮಾಡಿಸಲಾಗಿತ್ತು.
    1994ರಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡರು. ಅಂದಿನಿಂದ ಇವತ್ತಿನವರೆಗೂ ಯಾವುದೇ ವಿಘ್ನಗಳು ಇಲ್ಲದೆ ಪೂಜಾ ಕೈಂಕರ್ಯಗಳು ಸಾಂಗವಾಗಿ ಜರುಗುತ್ತಿವೆ. ಪ್ರತಿ ಸೋಮವಾರ ಇಲ್ಲಿಗೆ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.


    ಸಾಡೇ ಸಾಥ್ ಶನೈಶ್ಚರನ ಪೀಡೆ ನಿವಾರಣೆಗಾಗಿ ಇಲ್ಲಿ ರುದ್ರಾಭಿಷೇಕ ಮಾಡಿಸಿ ಒಳಿತು ಕಂಡಿರುವ ಅನೇಕ ಭಕ್ತರು ಇದ್ದಾರೆ. ಉದ್ಯೋಗ, ವ್ಯವಹಾರ ತೊಂದರೆ ಇರುವವರು ಪ್ರತಿ ತಿಂಗಳು ತಮ್ಮ ನಕ್ಷತ್ರದ ದಿನಗಳಲ್ಲಿ ಬಂದು ರುದ್ರಾಭಿಷೇಕ ಮಾಡಿಸಿದರೆ ಯಶಸ್ಸು ಸಿಗುತ್ತದೆ. ಬೇಡಿಕೆ ಈಡೇರಿಸಲು ಭಕ್ತಿಯಿಂದ ನೈವೇದ್ಯ ಸಮರ್ಪಣೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡರೆ ಈಡೇರುತ್ತದೆ ಎಂದು ಭಕ್ತರು ಹೇಳುತ್ತಾರೆ.


    ಆಯುಷ್ಯ, ಆರೋಗ್ಯಕ್ಕಾಗಿ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿಗೆ ಬಂದರೆ ಮನಸ್ಸಿಗೆ ಉಲ್ಲಾಸ ಮತ್ತು ಚೈತನ್ಯ ದೊರೆಯುತ್ತದೆ ಎಂದು ಅರ್ಚಕ ಸುಬ್ರಮಣಿ ಎಸ್.ದೀಕ್ಷಿತ್ ಹೇಳುತ್ತಾರೆ.


    ಶಿವರಾತ್ರಿ ಹಬ್ಬದಂದು ಮುಂಜಾನೆ 5 ಗಂಟೆಗೆ ಅಭಿಷೇಕಗಳು ಆರಂಭವಾಗಿ ದಿನದ 24 ಗಂಟೆಯೂ ನಿರಂತರ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಆ ದಿನ ಯಾಮಾ ಪೂಜೆ, ಪ್ರದೋಷ ಪೂಜೆ ಮತ್ತು ಗಂಟೆಗೆ ಒಮ್ಮೆ ಅಭಿಷೇಕಗಳನ್ನು ನೆರವೇರಿಸಲಾಗುತ್ತದೆ. ಅಂದು ಬರುವ ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆಯ ಜವಾಬ್ದಾರಿಯನ್ನು ಕೆಲವರು ವಹಿಸಿಕೊಂಡು ಈಗಲೂ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಪ್ರತಿ ತಿಂಗಳ ತ್ರಯೋದಶಿ ದಿನ ಸಂಜೆ 5 ಗಂಟೆಗೆ ಪ್ರದೋಷ ಪೂಜೆ ಮಾಡಲಾಗುತ್ತದೆ. ಹುಣ್ಣಿಮೆ ದಿನ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ ನಡೆಯುತ್ತದೆ.


    ದೇವಾಲಯಕ್ಕೆ ಸಂಬಂಧಪಟ್ಟಂತೆ ಕೊಪ್ಪ ಸಮೀಪದಲ್ಲಿ ಸಿಡಿಲು ಮಲ್ಲಿಕಾರ್ಜುನ ಸನ್ನಿಧಾನವಿದೆ. ಅದರ ಜೀರ್ಣೋದ್ಧಾರ ಕಾರ್ಯ ಮಾಡಿಸುವ ಉದ್ದೇಶದಿಂದ ಸೋಮೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ವಿಳಂಬವಾಗುತ್ತಿದೆ. ಇತ್ತೀಚೆಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ವಿಚಾರ, ಕುಶಾಲನಗರದ ಸೋಮೇಶ್ವರ ದೇವರ ಮರು ಪ್ರತಿಷ್ಠಾಪನೆ ಆಗುವ ತನಕ ಸಿಡಿಲು ಮಲ್ಲಿಕಾರ್ಜುನ ದೇವಸ್ಥಾನದ ಕಾರ್ಯ ಪೂರ್ಣವಾಗುವುದಿಲ್ಲವೆಂದು 2012ರಲ್ಲೇ ಅಂದಾಜು 1.5 ಕೋಟಿ ರೂ. ವೆಚ್ಚದಲ್ಲಿ ಸೋಮೇಶ್ವರ ದೇವಾಲಯ ನಿರ್ಮಾಣ ಯೋಜನೆಯ ಚಿಂತನೆ ಇತ್ತು. ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗದೆ ಮುಂದಕ್ಕೆ ಹೋಗುತ್ತಿದೆ ಎಂದು ಸೋಮೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ರಾಯರು ಹೇಳುತ್ತಾರೆ.


    ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಬೃಹತ್ ಅರಳಿ ಮರದ ಬುಡದಲ್ಲಿ ನಾಗ ದೇವರು ಇದ್ದಾರೆ. ಗಣೇಶ, ಸುಬ್ರಹ್ಮಣ್ಯ ದೇವರಿಗೂ ಇಲ್ಲಿ ನಿತ್ಯಪೂಜೆ ನಡೆಯುತ್ತದೆ.

    ಸೋಮೇಶ್ವರನನ್ನು ನಂಬಿ ಬರುವ ಭಕ್ತರ ಆಸೆ ಈಡೇರುತ್ತಿದೆ. ಹರಕೆ ಹೊತ್ತು ಮಾಡಿಸುವ ಪೂಜೆ, ಹೋಮಗಳಿಂದ ಇಷ್ಟಾರ್ಥಗಳು ಕೈಗೂಡುತ್ತಿವೆ. ಭಕ್ತರ ಬೇಡಿಕೆ ಅನುಸಾರವಾಗಿ ಪೂಜಾ ಕಾರ್ಯ ಮಾಡಲಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರು ಇಲ್ಲಿ ಮೃತ್ಯುಂಜಯ ಹೋಮ ಮಾಡಿಸಿದರೆ ಖಂಡಿತ ಆರೋಗ್ಯ ವೃದ್ಧಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
    ಸುಬ್ರಮಣಿ ಎಸ್.ದೀಕ್ಷಿತ್ ಪ್ರಧಾನ ಅರ್ಚಕರು, ಸೋಮೇಶ್ವರ ದೇವಾಲಯ, ಕುಶಾಲನಗರ

    2010ರಲ್ಲಿ ಅಧ್ಯಕ್ಷನಾಗಿ ಆಯ್ಕೆಯಾದೆ. ದೊಡ್ಡ ಯೋಜನೆ ಇಟ್ಟುಕೊಂಡು ಬಂದೆ. ಇದ್ದ ಬಹುತೇಕ ಎಲ್ಲ ವಿಘ್ನಗಳನ್ನು ಪರಿಹರಿಸಿದ್ದೇವೆ. ಸದ್ಯದಲ್ಲೇ ಜೀರ್ಣೋದ್ಧಾರ ಕಾರ್ಯಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಆರಂಭಿಸುತ್ತೇವೆ. ಸೋಮೇಶ್ವರ ದೇವರು ಅತ್ಯಂತ ಶಕ್ತಿಶಾಲಿ.
    ಎಂ.ಕೆ.ದಿನೇಶ್ ಅಧ್ಯಕ್ಷರು, ಸೋಮೇಶ್ವರ ದೇವಾಲಯ ಸಮಿತಿ, ಕುಶಾಲನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts