More

    ದೇವತೆಯ ಸ್ವರೂಪ ಶಮೀವೃಕ್ಷ

    ಮಂಡಗದ್ದೆ ಪ್ರಕಾಶ್​ಬಾಬುಮಂಡಗದ್ದೆ ಪ್ರಕಾಶ್​ಬಾಬು
    ವೃಕ್ಷಗಳಲ್ಲಿ ಅತಿ ಶ್ರೇಷ್ಠವಾದವು- ಅರಳಿಮರ, ಔದುಂಬರ ಮರ, ತೆಂಗಿನಮರ, ಶಮೀವೃಕ್ಷ. ಈ ಶಮೀವೃಕ್ಷಕ್ಕೆ ಇನ್ನೊಂದು ಹೆಸರು ‘ಬನ್ನಿ’ ಮರ ಎಂದು. ಈ ವೃಕ್ಷವನ್ನು ದೇವತೆಯ ಸ್ವರೂಪ ಎಂದು ಪೂಜಿಸುತ್ತಾರೆ.

    ಸೃಷ್ಟಿಯ ಹಿನ್ನೆಲೆ: ಜಾರ್ವ ಎಂಬ ಮಹಾತಪಸ್ವಿ ಹಾಗೂ ಆತನ ಪತ್ನಿ ಸುಮೇಧರಿಗೆ ‘ಶಮೀಕಾ’ ಎಂಬ ಸುಂದರ ಮಗಳಿದ್ದಳು. ಮುದ್ದಾಗಿ ಬೆಳೆದ ಶಮೀಕಾಳಿಗೆ ಮದುವೆ ವಯಸ್ಸು ಬಂದಿತು. ನಂತರ ತಂದೆ-ತಾಯಿಯರು ಧೌಮ್ಯ ಋಷಿಯ ಪುತ್ರನಾದ ಮಂದಾರನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರು. ಮಂದಾರನು ಕೌಶಿಕ ಮಹರ್ಷಿಯ ಶಿಷ್ಯನಾಗಿದ್ದ. ನವದಂಪತಿ ಒಮ್ಮೆ ವಾಯುವಿಹಾರದಲ್ಲಿದ್ದಾಗ ವನದಲ್ಲಿ ಸೊಂಡಿಲುಗಳಿಂದ ಕೂಡಿದ ಭೃಶುಂಡಿ ಎಂಬ ಮುನಿಯನ್ನು ನೋಡಿದರು. ಅವರನ್ನು ನೋಡಿದ ದಂಪತಿಗೆ ನಗು ಬಂತು. ಇದನ್ನು ಗಮನಿಸಿದ ಭೃಶುಂಡಿ ಮುನಿ, ‘ನನ್ನನ್ನು ನೋಡಿ ಏತಕ್ಕಾಗಿ ಅಪಹಾಸ್ಯದ ನಗೆ ಬೀರಿದಿರಿ?’ ಎಂದು ಪ್ರಶ್ನಿಸಿದ. ಆದರೂ ಆ ದಂಪತಿ ನಗುತ್ತಲೇ ಇದ್ದರು. ಭೃಶುಂಡಿ ಮುನಿಗೆ ಕೋಪ ತಡೆಯಲಾರದೆ, ‘ನೀವಿಬ್ಬರೂ ಯಾವ ಪ್ರಾಣಿಗಳಿಗೂ ಪ್ರಯೋಜನಕ್ಕೆ ಬಾರದ ಮರಗಳಾಗಿ ಜನಿಸಿರಿ’ ಎಂದು ಶಾಪವಿತ್ತರು. ಇದನ್ನು ಕೇಳಿದ ದಂಪತಿ ಹೆದರಿ ಮುನಿಯ ಪಾದಕ್ಕೆರಗಿ ತಮ್ಮ ತಪ್ಪಿಗೆ ಕ್ಷಮೆ ಬೇಡಿದರು ಹಾಗೂ ಈ ಶಾಪವಿಮೋಚನೆ ಯಾವಾಗ ಆಗುವುದು ಎಂದು ಕೇಳಿದರು. ‘ಗಣಪತಿಯು ಪ್ರಸನ್ನವಾದಾಗ ಶಾಪವಿಮೋಚನೆ ಆಗುವುದು’ ಎಂದು ಹೇಳಿದರು.

    ಮುನಿಯ ಶಾಪದಂತೆ ಶಮೀಕಳು ಶಮೀವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗಿ ಜನಿಸಿದರು. ನವದಂಪತಿ ಮನೆಗೆ ಬಾರದೆ ಇದ್ದುದರಿಂದ ತಂದೆ-ತಾಯಿ ಹುಡುಕಿಕೊಂಡು ಕಾಡಿನೊಳಗೆ ಹೋದರು. ಅಲ್ಲಿ ಅವರು ಎರಡು ವಿಚಿತ್ರವಾದ ಮರಗಳನ್ನು ಕಂಡರು. ಅಲ್ಲಿದ್ದ ಋಷಿಯನ್ನು ಕೇಳಲು ನಡೆದ ಸಂಗತಿ ತಿಳಿಸಿದರು. ಶಾಪಗ್ರಸ್ತರಾಗಿದ್ದ ಅಳಿಯ ಮತ್ತು ಮಗಳಿಗೆ ದೂರ್ವಾಸ ಮುನಿ ಹೇಳಿಕೊಟ್ಟಿದ್ದ ಗಣೇಶನ ಮಂತ್ರವನ್ನು ಹೇಳತೊಡಗಿದರು. ಮರಗಳ ರೂಪದಲ್ಲಿದ್ದ ಅಳಿಯ ಹಾಗೂ ಮಗಳು ಶ್ರದ್ಧಾಭಕ್ತಿಯಿಂದ ಮಂತ್ರ ಜಪಿಸುತ್ತಿದ್ದಂತೆ ಗಣಪತಿಯು ದರ್ಶನವನ್ನು ಕೊಟ್ಟನು. ಅವನ ದರ್ಶನದಿಂದ ಶಾಪವಿಮೋಚನೆಯಾಯಿತು. ಮರಗಳಾಗಿದ್ದ ದಂಪತಿ ಗಣಪತಿಯ ಅನುಗ್ರಹದಿಂದ ಮತ್ತೆ ಮೊದಲಿನಂತೆ ಆದರು.

    ಹಲವು ಪ್ರಯೋಜನ: ಅರ್ಧಗಂಟೆ ಅಥವಾ ಒಂದುಗಂಟೆ ಈ ಶಮೀವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದರೆ ದೀರ್ಘವಾದ ರೋಗಗಳಿಗದ್ದರೆ ಗುಣವಾಗುವುದು. ಈ ಮರದ ಗಾಳಿಯನ್ನು ಪ್ರತಿದಿನ ಸೇವಿಸಿದರೆ ಹೃದಯಕ್ಕೆ ಸಂಬಂಧಪಟ್ಟ ತೊಂದರೆ ನಿವಾರಣೆ ಆಗುವುದು. ಶಮೀವೃಕ್ಷ ಇರುವ ಸ್ಥಳದಲ್ಲಿ ಬಾವಿಯನ್ನು ತೋಡಿಸಿದರೆ ಸಿಹಿನೀರು ಸಿಗುತ್ತದೆ. ವಾಸ್ತುದೋಷ ಇರುವ ಮನೆಯಲ್ಲಿ ಶಮೀವೃಕ್ಷದ ಎಲೆಯನ್ನು ದೇವರ ಮನೆಯಲ್ಲಿಟ್ಟರೆ ವಾಸ್ತುದೋಷ ನಿವಾರಣೆಯಾಗುವುದು. ಸಂತಾನಭಾಗ್ಯ ಇಲ್ಲದವರು ಶಮೀವೃಕ್ಷವನ್ನು ಮುಂಜಾನೆಯ ಸಮಯದಲ್ಲಿ ಪ್ರದಕ್ಷಿಣೆ ಹಾಕಿದರೆ ಸಂತಾನಭಾಗ್ಯ ದೊರೆಯುವುದು. ದೀರ್ಘವಾದ ಕೆಮ್ಮು ಇದ್ದರೆ ಈ ವೃಕ್ಷದ ಚಕ್ಕೆಯಿಂದ ಕಷಾಯವನ್ನು ಮಾಡಿ ಕುಡಿದರೆ ಗುಣಮುಖವಾಗುವುದು. ವಿವಾಹಕ್ಕೆ ತಡೆಯಾಗಿದ್ದರೆ ನಲವತ್ತೆಂಟು (48) ದಿನ ಈ ವೃಕ್ಷವನ್ನು ಪ್ರದಕ್ಷಿಣೆ ಹಾಕಬೇಕು. ಮಾಟಮಂತ್ರ ಪ್ರಯೋಗವಾಗಿದ್ದರೆ, ಈ ಮರಕ್ಕೆ ಇಪ್ಪತ್ತೊಂದು ದಿನ ಪೂಜೆ ಮಾಡಿದರೆ ಪ್ರಯೋಗದಿಂದ ಹೊರಬರಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts