More

    ಏಕದಿನ ಕ್ರಿಕೆಟ್‌ನಲ್ಲಿ ಶತಕವಿಲ್ಲದೆ ವರ್ಷ ಮುಗಿಸಿದ ವಿರಾಟ್ ಕೊಹ್ಲಿ!

    ಕ್ಯಾನ್‌ಬೆರಾ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದೊಂದು ದಶಕದಿಂದ ರನ್‌ಪ್ರವಾಹವನ್ನೇ ಹರಿಸಿದ್ದಾರೆ. ಈ ವೇಳೆ ಸಾಲುಸಾಲು ಶತಕಗಳನ್ನೂ ಸಿಡಿಸಿದ್ದಾರೆ. ಆದರೆ ಇತ್ತೀಚೆಗೆ ಶತಕಗಳ ಬರ ಅವರನ್ನು ಕಾಡುತ್ತಿದೆ. ಕಳೆದ 25 ಇನಿಂಗ್ಸ್‌ಗಳಿಂದ ಶತಕ ಸಿಡಿಸಲಾಗದೆ ಪರದಾಡುತ್ತಿರುವ ವಿರಾಟ್ ಕೊಹ್ಲಿ, 2020ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಒಂದೂ ಶತಕ ಸಿಡಿಸಿಲ್ಲ. ಇನ್ನು ಭಾರತಕ್ಕೆ ಈ ವರ್ಷ ಯಾವುದೇ ಏಕದಿನ ಪಂದ್ಯವಿಲ್ಲದ ಕಾರಣ ಕೊಹ್ಲಿ, ಈ ವರ್ಷವನ್ನು ಶತಕವಿಲ್ಲದೆ ಮುಗಿಸುತ್ತಿದ್ದಾರೆ.

    ವಿರಾಟ್ ಕೊಹ್ಲಿ 2008ರ ಪದಾರ್ಪಣೆಯ ವರ್ಷದ ಬಳಿಕ ಇದೇ ಮೊದಲ ಬಾರಿಗೆ ಕ್ಯಾಲೆಂಡರ್ ವರ್ಷವೊಂದರಲ್ಲಿ ಏಕದಿನ ಶತಕ ಸಿಡಿಸಲು ವಿಫಲರಾಗಿದ್ದಾರೆ. ಈ ವರ್ಷ 2 ಬಾರಿ 89 ರನ್ ಗಳಿಸಿರುವುದೇ ಅವರ ಗರಿಷ್ಠ ಗಳಿಕೆಯಾಗಿದೆ. ಆದರೆ ಕರೊನಾ ಹಾವಳಿಯಿಂದಾಗಿ ಅವರು ಕೇವಲ 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಎಂಬುದು ಗಮನಾರ್ಹ.

    ಇನ್ನು ವಿರಾಟ್ ಕೊಹ್ಲಿ ಈ ವರ್ಷ ಏಕದಿನ ಮಾತ್ರವಲ್ಲ ಯಾವುದೇ ಕ್ರಿಕೆಟ್ ಪ್ರಕಾರದಲ್ಲಿ ಶತಕ ಸಿಡಿಸಿಲ್ಲ. ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರಿನ್ನೂ 3 ಟಿ20 ಮತ್ತು 1 ಟೆಸ್ಟ್ ಪಂದ್ಯವನ್ನು ಆಡಲಿದ್ದು, ಈ ಪೈಕಿ ಶತಕ ಸಿಡಿಸುವ ಅವಕಾಶ ಅವರ ಮುಂದಿದೆ. ಇದರಲ್ಲೂ ಅವರು ವಿಫಲರಾದರೆ, 70 ಅಂತಾರಾಷ್ಟ್ರೀಯ ಕ್ರಿಕೆಟ್ ಶತಕಗಳ ಸರದಾರ ಈ ವರ್ಷ ಒಂದೂ ಶತಕವಿಲ್ಲದೆ ನಿರಾಸೆ ಅನುಭವಿಸಬೇಕಾಗುತ್ತದೆ.

    ವಿರಾಟ್ ಕೊಹ್ಲಿ ಸದ್ಯ ಸತತ 25ನೇ ಇನಿಂಗ್ಸ್‌ನಲ್ಲಿ ಶತಕ ಗಳಿಸಲು ವಿಫಲರಾಗಿದ್ದಾರೆ. ಈ ಮುನ್ನ 2014ರ ಫೆಬ್ರವರಿಯಿಂದ ಅಕ್ಟೋಬರ್ ನಡುವೆಯೂ ಸತತ 25 ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿರಲಿಲ್ಲ.

    ವಿರಾಟ್ ಕೊಹ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರನ್ನು ಹಿಂದಿಕ್ಕಿರುವ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 12 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಕೊಹ್ಲಿ ಪಂದ್ಯದಲ್ಲಿ 23 ರನ್ ಗಳಿಸಿದ ವೇಳೆ 12 ಸಾವಿರ ರನ್ ಪೂರೈಸಿದರು. ಸೀನ್ ಅಬೋಟ್ ಎಸೆದ ಪಂದ್ಯದ 13ನೇ ಓವರ್‌ನಲ್ಲಿ ಸಿಂಗಲ್ಸ್ ಕಸಿಯುವ ಮೂಲಕ ಕೊಹ್ಲಿ ಈ ಮೈಲಿಗಲ್ಲು ನೆಟ್ಟರು. ಅವರು 251ನೇ ಪಂದ್ಯದ 242ನೇ ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದಾರೆ. ಸಚಿನ್ ತೆಂಡುಲ್ಕರ್ 300 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು ಹಿಂದಿನ ದಾಖಲೆಯಾಗಿದೆ.

    60ರ ಆಸುಪಾಸಿನಲ್ಲಿ ರನ್ ಪೇರಿಸಿರುವ ಕೊಹ್ಲಿ 43 ಶತಕ ಮತ್ತು 60 ಅರ್ಧಶತಕಗಳನ್ನೂ ಬಾರಿಸಿದ್ದಾರೆ. 2008ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಪಂದ್ಯದಲ್ಲಿ 78 ಎಸೆತಗಳಲ್ಲಿ 63 ರನ್ (5 ಬೌಂಡರಿ) ಬಾರಿಸಿದ ಕೊಹ್ಲಿ ಇದೀಗ ಒಟ್ಟು 12,040 ರನ್ ಗಳಿಸಿದ್ದಾರೆ. ಕೊಹ್ಲಿ ಒಟ್ಟಾರೆ 12 ಸಾವಿರ ರನ್ ಪೂರೈಸಿದ 6ನೇ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಹಿಂದಿನ ಐವರು ಬ್ಯಾಟ್ಸ್‌ಮನ್‌ಗಳೆಂದರೆ ತೆಂಡುಲ್ಕರ್ (18,426), ಕುಮಾರ ಸಂಗಕ್ಕರ (14,234), ರಿಕಿ ಪಾಂಟಿಂಗ್ (13,704), ಸನತ್ ಜಯಸೂರ್ಯ (13,430) ಮತ್ತು ಮಹೇಲ ಜಯವರ್ಧನೆ (12,650). ಕೊಹ್ಲಿ ಕಳೆದ ಪಂದ್ಯದಲ್ಲಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 22 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದರು. ಕೊಹ್ಲಿ ಈ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 8, 9, 10, 11 ಸಾವಿರ ರನ್ ಪೂರೈಸಿದ ದಾಖಲೆಯನ್ನೂ ನಿರ್ಮಿಸಿದ್ದರು. ಪಾಂಟಿಂಗ್ 314, ಸಂಗಕ್ಕರ 336, ಜಯಸೂರ್ಯ 379 ಮತ್ತು ಜಯವರ್ಧನೆ 399 ಇನಿಂಗ್ಸ್‌ಗಳಲ್ಲಿ 12 ಸಾವಿರ ರನ್ ಪೂರೈಸಿದ್ದರು.

    ಪ್ರತಿ ವರ್ಷ ಏಕದಿನದಲ್ಲಿ ಕೊಹ್ಲಿ ಶತಕದ ಲೆಕ್ಕಾಚಾರ:
    ವರ್ಷ: ಇನಿಂಗ್ಸ್: ಶತಕ
    2008: 5: 0
    2009: 8: 1
    2010: 24: 3
    2011: 34: 4
    2012: 17: 5
    2013: 30: 4
    2014: 20: 4
    2015: 20: 2
    2016: 10: 3
    2017: 26: 6
    2018: 14: 6
    2019: 25: 5
    2020: 9: 0

    ಏಕದಿನದಲ್ಲಿ ಕೊಹ್ಲಿ ರನ್ ಗಳಿಕೆ
    ರನ್: ಇನಿಂಗ್ಸ್
    1,000: 24
    2,000: 53
    3,000: 75
    4,000: 93
    5,000: 114
    6,000: 136
    7,000: 161
    8,000: 175
    9,000: 194
    10,000: 205
    11,000: 222
    12,000: 242

    ದಿನಗೂಲಿ ನೌಕರರ ಪುತ್ರ ಈಗ ಟೀಮ್ ಇಂಡಿಯಾ ವೇಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts