More

    ಮೊದಲ ದಿನ 1,097 ವಿದ್ಯಾರ್ಥಿಗಳು ಗೈರು

    ಹಾವೇರಿ: ಕರೊನಾ ವೈರಸ್ ಹರಡುವ ಆತಂಕದ ನಡುವೆಯೇ ಗುರುವಾರದಿಂದ ಆರಂಭಗೊಂಡ ಎಸ್​ಎಸ್​ಎಲ್​ಸಿ ಪರೀಕ್ಷೆ, ಕೆಲ ಸಣ್ಣಪುಟ್ಟ ಅವಘಡಗಳನ್ನು ಬಿಟ್ಟರೆ ಜಿಲ್ಲೆಯಾದ್ಯಂತ ಶಾಂತ ಹಾಗೂ ಸುರಕ್ಷಿತವಾಗಿ ನಡೆಯಿತು.

    ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 7.30ರಿಂದಲೇ ವಿದ್ಯಾರ್ಥಿಗಳು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಥರ್ಮಲ್ ಸ್ಕ್ರೀನಿಂಗ್ ಯಂತ್ರದಿಂದ ಜ್ವರ ತಪಾಸಣೆ ಮಾಡಿಕೊಂಡರು. ಸ್ಯಾನಿಟೈಸರ್​ನಿಂದ ಕೈ ತೊಳೆದು ಮಾಸ್ಕ್ ಧರಿಸಿ ಒಂದೂವರೆ ತಾಸು ಮುಂಚೆಯೇ ಪರೀಕ್ಷಾ ಕೇಂದ್ರದೊಳಗೆ ಬಹುತೇಕ ವಿದ್ಯಾರ್ಥಿಗಳು ಹಾಜರಾಗಿದ್ದರು. ವಿದ್ಯಾರ್ಥಿಗಳಿಗೆ ಬೆಳಗ್ಗೆ 10ರವರೆಗೂ ಪರೀಕ್ಷಾ ಕೇಂದ್ರದಲ್ಲಿಯೇ ಓದಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಶಿಕ್ಷಕರು, ಹಿರಿಯ ಅಧಿಕಾರಿಗಳು ಆಗಾಗ್ಗೆ ಕೊಠಡಿಗೆ ಬಂದು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ಜಾಗ್ರತೆ ವಹಿಸಿ ನಿರ್ಭೀತಿಯಿಂದ ಪರೀಕ್ಷೆ ಬರೆಯಿರಿ ಎಂದು ಹುರುದುಂಬಿಸಿದರು.

    ಎಲ್ಲ ಪರೀಕ್ಷಾ ಕೇಂದ್ರಗಳ ಹೊರಗಡೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಹಾಕಿದ್ದ ಬಾಕ್ಸ್​ನಲ್ಲಿ ನಿಂತ ವಿದ್ಯಾರ್ಥಿಗಳು ಸಮಾಧಾನದಿಂದ ಪರೀಕ್ಷಾ ಕೊಠಡಿ ಪ್ರವೇಶಿಸಿದರು. ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿಯೇ ವಿದ್ಯಾರ್ಥಿಗಳ ಕ್ರಮ ಸಂಖ್ಯೆ ಪರಿಶೀಲಿಸಿ ನೇರವಾಗಿ ಇದೇ ಕೊಠಡಿಗೆ ಹೋಗುವಂತೆಯೂ ಶಿಕ್ಷಕರು ಗೈಡ್ ಮಾಡುತ್ತಿದ್ದರು. ಬಹುತೇಕ ಪರೀಕ್ಷಾ ಕೇಂದ್ರಗಳ ಮುಂಭಾಗದಲ್ಲಿ ಬಲೂನ್, ತಳಿರು, ತೋರಣ ಹಾಕಿ ಸಿಂಗರಿಸಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು.

    ಪರೀಕ್ಷಾ ಕೇಂದ್ರದ ಹೊರಗಡೆ ಸ್ವಲ್ಪ ಜನಜಂಗುಳಿ ಹೆಚ್ಚಿತ್ತು. ಮಕ್ಕಳ ಜೊತೆಗೆ ಪಾಲಕರು ಬಂದಿದ್ದರಿಂದ ಸಹಜವಾಗಿ ಪರಸ್ಪರ ಅಂತರವೂ ಮಾಯವಾಗಿತ್ತು. ಆದರೂ ಅಧಿಕಾರಿಗಳು ಧ್ವನಿವರ್ಧಕದ ಮೂಲಕ ಪಾಲಕರಿಗೆ ಕೇಂದ್ರದಿಂದ ದೂರದಲ್ಲಿಯೇ ಇರುವಂತೆ ಸೂಚನೆ ನೀಡುತ್ತಿದ್ದರು. ಪೊಲೀಸರು ಬ್ಯಾರಿಕೇಡ್ ಹಾಕಿ ಪರೀಕ್ಷಾ ಕೇಂದ್ರದ ಬಳಿ ಪಾಲಕರು ಬರದಂತೆ ತಡೆಯಲು ಹರಸಾಹಸಪಟ್ಟರು.

    ಜಿಲ್ಲೆಯ 75 ಪರೀಕ್ಷಾ ಕೇಂದ್ರ ಮತ್ತು 15 ಉಪಕೇಂದ್ರ ಸೇರಿ 90 ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಯಿತು. ಸೋಮವಾರ ದ್ವಿತೀಯ ಭಾಷೆ ಪರೀಕ್ಷೆಗೆ ಒಟ್ಟು 19,600 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 18,503 ವಿದ್ಯಾರ್ಥಿಗಳು ಹಾಜರಾಗಿದ್ದರು. ಓರ್ವ ಕರೊನಾ ಸೋಂಕಿತ ವಿದ್ಯಾರ್ಥಿ ಸೇರಿ ಒಟ್ಟು 1,097 ವಿದ್ಯಾರ್ಥಿಗಳು ಗೈರಾಗಿದ್ದರು. ಬ್ಯಾಡಗಿ ತಾಲೂಕು 114, ಹಾನಗಲ್ಲ 135, ಹಾವೇರಿ 285, ಹಿರೇಕೆರೂರ 173, ರಾಣೆಬೆನ್ನೂರ 184, ಸವಣೂರ 65, ಶಿಗ್ಗಾಂವಿ ತಾಲೂಕಿನ 141 ವಿದ್ಯಾರ್ಥಿಗಳು ಗೈರಾಗಿದ್ದರು.

    ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಿ ಹಲವು ವಿಶೇಷ ಕ್ರಮಗಳನ್ನು ಕೈಗೊಂಡಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಸ್ಯಾನಿಟೈಸೇಶನ್ ಮಾಡಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ತಾವೇ ಮಾಸ್ಕ್ ಹಾಗೂ ಕುಡಿಯುವ ನೀರನ್ನು ತಂದಿದ್ದರು. ಆದರೂ ಇಲಾಖೆಯಿಂದಲೂ ಒಂದೊಂದು ಮಾಸ್ಕ್​ಗಳನ್ನು ನೀಡಲಾಯಿತು.

    ಪರೀಕ್ಷಾ ಕೇಂದ್ರಗಳಿಗೆ ಜಿಪ ಸಿಇಒ ರಮೇಶ ದೇಸಾಯಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಬಿಇಒ ಎಂ.ಎಚ್. ಪಾಟೀಲ ಸೇರಿ ಅನೇಕ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಮಕ್ಕಳ ಹಿತದೃಷ್ಟಿಯಿಂದ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕಂಟೇನ್ಮೆಂಟ್ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ: ಜಿಲ್ಲೆಯಲ್ಲಿ ಒಟ್ಟು 25 ವಿದ್ಯಾರ್ಥಿಗಳು ಕಂಟೇನ್ಮೆಂಟ್ ಜೋನ್​ನಲ್ಲಿದ್ದರು. ಗುತ್ತಲದ 5, ಸವಣೂರಿನ 12, ಶಿಗ್ಗಾಂವಿಯ 8 ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು. ಇನ್ನುಳಿದಂತೆ ಯಾವುದೇ ವಿದ್ಯಾರ್ಥಿಗಳಲ್ಲಿ ಜ್ವರದ ಲಕ್ಷಣ ಕಂಡುಬರಲಿಲ್ಲ. ಕೆಲವು ಕೇಂದ್ರಗಳಲ್ಲಿ ಡೆಸ್ಕ್ ಇಬ್ಬರಂತೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದರೆ, ಕೆಲವು ಕೇಂದ್ರಗಳಲ್ಲಿ ಡೆಸ್ಕ್​ಗೆ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದರು. ಒಂದು ಕೊಠಡಿಯೊಳಗೆ 18ರಿಂದ 16 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

    ಪರೀಕ್ಷಾ ಕೇಂದ್ರಕ್ಕೆ ವಾಹನಗಳಲ್ಲಿಯೇ ಬಂದರು: ಮೊದಲೇ ನಿಗದಿಪಡಿಸಿದಂತೆ ಪರೀಕ್ಷಾ ಕೇಂದ್ರಗಳ ತನಕ ಖಾಸಗಿ ಶಾಲಾ ವಾಹನಗಳು, ಬೈಕ್, ಕಾರು, ಬಸ್​ಗಳಲ್ಲಿ ವಿದ್ಯಾರ್ಥಿಗಳು ಕರೆತಂದು ಬಿಡಲಾಯಿತು. ಈ ಸಮಯದಲ್ಲಿ ಸ್ವಲ್ಪ ಪರಸ್ಪರ ಅಂತರ ನಿಯಮಕ್ಕೆ ಸ್ವಲ್ಪ ತೊಂದರೆಯಾಗಿತ್ತು. ನಂತರ ಧ್ವನಿವರ್ಧಕದಲ್ಲಿ ಅಧಿಕಾರಿಗಳು ಪದೇಪದೇ ಸೂಚನೆ ನೀಡುತ್ತಿದ್ದರು. ಸ್ಥಳದಲ್ಲಿದ್ದ ಶಿಕ್ಷಕರು ವಿದ್ಯಾರ್ಥಿಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಎಲ್ಲವನ್ನೂ ಸರಿಪಡಿಸುತ್ತಿದ್ದರು.

    ನಕಲು ಮಾಡಿಸಲು ಯತ್ನ, ಐವರ ವಿರುದ್ಧ ದೂರು: ಜಿಲ್ಲೆಯ ಹಿರೇಕೆರೂರ ಪಟ್ಟಣದ ಸಂಗಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜ್​ನಲ್ಲಿಯ ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರದೊಳಗೆ ಅಕ್ರಮವಾಗಿ ಪ್ರವೇಶಿಸಿ ನಕಲು ಮಾಡಿಸಲು ಸಹಕರಿಸಿದ ಆರೋಪದ ಮೇಲೆ ನಾಲ್ವರು ಶಿಕ್ಷಕರು ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ಶಿಕ್ಷಕರಾದ ಜಗದೀಶ ಶಿವಪ್ಪನವರ, ಮನೋಹರ ಬಿ.ಆರ್., ಗುತ್ತೆಪ್ಪ ಬಾಳಂಬೀಡ, ಶಿವಯೋಗಿ ರಾಗಿ ವಿರುದ್ಧ ತಹಸೀಲ್ದಾರ್ ಆರ್.ಎಚ್. ಭಾಗವಾನ ದೂರು ನೀಡಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

    ಈ ಶಿಕ್ಷಕರು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದ ಮೇಲೆ ಇರಲಿಲ್ಲ. ತಹಸೀಲ್ದಾರ್ ಭೇಟಿ ನೀಡಿದ ವೇಳೆ ಕೇಂದ್ರದಿಂದ ಪರಾರಿಯಾಗಲು ಯತ್ನಿಸಿದರು. ಅವರನ್ನು ತಡೆದು ಪರಿಶೀಲಿಸಿದಾಗ ಎಸ್​ಎಸ್​ಎಲ್​ಸಿ ಪರೀಕ್ಷೆಯ ಇಂಗ್ಲಿಷ್ ಭಾಷೆಯ ಪತ್ರಿಕೆಯ ಚೀಟಿಗಳು ದೊರೆತಿವೆ. ಶಿಕ್ಷಕರನ್ನು ಪರೀಕ್ಷಾ ಕೇಂದ್ರದೊಳಗೆ ಬಿಟ್ಟುಕೊಂಡಿದ್ದರಿಂದ ನಕಲು ಮಾಡಲು ಸಹಕರಿಸಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ನಾಗರಾಜ ಸುಂಕಾಪುರ ಎಂಬುವರ ಮೇಲೆಯೂ ದೂರು ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts