More

    ಕ್ಷೇತ್ರದ ಜನರ ಋಣ ಮರೆಯಲಾರೆ – ಸತೀಶ ಜಾರಕಿಹೊಳಿ

    ಉಳ್ಳಾಗಡ್ಡಿ-ಖಾನಾಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ದಿನವೂ ಪ್ರಚಾರಕ್ಕೆ ಹೋಗದಿದ್ದರೂ ನನ್ನನ್ನು ಗೆಲ್ಲಿಸಿದ ಕೀರ್ತಿ ಯಮಕನಮರಡಿ ಕ್ಷೇತ್ರದ ಜನರಿಗೆ ಸಲ್ಲುತ್ತದೆ. ಅತಿ ಹಿಂದುಳಿದ ಕ್ಷೇತ್ರವಾಗಿದ್ದ ಯಮಕನಮರಡಿಯನ್ನು ರಾಜ್ಯವೇ ತಿರುಗಿ ನೋಡುವಂತೆ ಮಾಡಲಾಗಿದೆ. ಹಾಗಾಗಿ, ಮತಕ್ಷೇತ್ರದ ಜನರ ಋಣ ಮರೆಯಲಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

    ಸಮೀಪದ ಯಮಕನಮರಡಿ ಗ್ರಾಮದಲ್ಲಿರುವ ಲಿಂ.ಶ್ರೀಗುರುಸಿದ್ಧ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದೆ. ಆದರೆ, ಯಮಕನಮರಡಿ ಕ್ಷೇತ್ರದ ಜನರ ಋಣ, ಪ್ರೀತಿ ಸದಾ ನನ್ನನ್ನು ಕಾಡಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ನಾನು, ಆತ್ಮಬಲದಿಂದ ಉಪಚುನಾವಣೆಗೆ ಸಿದ್ಧವಾಗಿದ್ದೇನೆ. ಯಾವುದೇ ಜಾತಿ ಲೆಕ್ಕಾಚಾರದ ಮೇಲೆ ಚುನಾವಣೆ ನಡೆಯುವುದಿಲ್ಲ. ಇಲ್ಲಿ ವ್ಯಕ್ತಿ ಮುಖ್ಯ ಎಂದರು.

    ರಾಜ್ಯದ ಮೂಲೆ ಮೂಲೆಗಳಲ್ಲಿರುವ ಕಾರ್ಯಕರ್ತರನ್ನು ಸಂಪರ್ಕಿಸುತ್ತಿರುವ ನನಗೆ ಎಂದಿನಂತೆಯೇ ಈ ಕ್ಷೇತ್ರದ ನಂಟು ಮುಂದುವರಿಯಲಿದೆ. ಉಪ ಚುನಾವಣೆಗೆ ಅಣಿಯಾದರೂ ಯಮಕನಮರಡಿ ಕ್ಷೇತ್ರದ ಎಲ್ಲ ಕಾರ್ಯನಿರ್ವಹಿಸುತ್ತೇನೆ. ಈ ಕುರಿತು ಕ್ಷೇತ್ರದ ಜನರಲ್ಲಿ ಗೊಂದಲ ಬೇಡ. ಅಂಥ ಕಾಲ ಬಂದಾಗ ಆಲೋಚನೆ ಮಾಡೋಣ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಮಾ. 29ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಈ ಉಪಚುನಾವಣೆಯಲ್ಲೂ ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಈ ಮೂಲಕ ದೇಶಕ್ಕೆ ಹೊಸ ಸಂದೇಶ ಕಳುಹಿಸುವ ಆಸೆ ಇದೆ ಎಂದರು.

    ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಸಿದ್ದು ಸುಣಗಾರ, ಮಂಜುನಾಥ ಪಾಟೀಲ, ಇಲಿಯಾಸ್ ಇನಾಂದಾರ, ಶಹನಾಜ್ ಗಡೆಕಾಯಿ, ಮಂಜುನಾಥ ಕಾಂಬಳೆ, ಯಲ್ಲಪ್ಪ ಕೊಳೇಕರ, ಜ್ಯೋತಿ ಗವಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಬಿಸಿರೊಟ್ಟಿ, ಪಿ.ಎಚ್.ಪಾಟೀಲ, ಮಲ್ಲಪ್ಪ ಮುಗಳಿ, ದಸ್ತಗೀರ್ ಬಸ್ಸಾಪುರಿ, ಯಲ್ಲವ್ವ ಹಂಚಿನಮನಿ, ನಿಂಗನಗೌಡ ಪಾಟೀಲ ಹಾಗೂ ಜಿಪಂ, ತಾಪಂ ಸದಸ್ಯರು, ಗ್ರಾಪಂ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ ರಜಪೂತ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts